ಸಂಕಟ ಬಂದಾಗ ವೆಂಕಟರಮಣ ಅನ್ನೋ ಗಾದೆ ಓಲ್ಡಾತು. ಕಾಲಂ ಕೂಡ ಮಾರಿಪೋಚಿ. ಕಾಲಕ್ಕೆ ತಕ್ಕ ಆಟ, ಆಟಕ್ಕೆ ತಕ್ಕ ವೇಷ ಕಣ್ರಿ ಈಗ. ಸಂಕಟ ಅಟಕಾಯಿಸಿಕ್ಯಂಡಾಗ ವೆಂಕಟರಮಣಂತಾವ ಹೋಗಿ ಗುಂಡು ಹೊಡಸ್ಕೊಂಡು ಬರೋದು ಶುದ್ಧ ಓಲ್ಡ್ ರಿಚುಯಲ್ಸ್ ಆತು. ಈಗ “ಸಂಕಟ ಬಂದಾಗ ಕುಕ್ಕೆ ಸುಬ್ರಮಣ್ಯ” ಅಂಬೋ ಗಾದೆ ಲೇಟೆಸ್ಟ್ ಆಗೇತಿ. ಇದು ಈಗಿನ ರಿಚೆಸ್ಟ್ ಮಂದಿಯ ನ್ಯೂ ಟೇಸ್ಟು. ಕಷ್ಟ ಬಂದಾಗ ಶ್ರೀ ಸಾಮಾನ್ಯ ಪುರೋಹಿತರ್ತಾವ ಹೋಗಿ ತಾಯತ ಹಾಕಿಸ್ಕ್ಲ ಅಂತಾನೆ. ಸಣ್ಣ ಪುಟ್ಟ ಮಾಂತ್ರಿಕ ಸನ್ಯಾಸಿಗೆ ಅಡ್ಡಬಿದ್ದು ತೆಲಿಮ್ಯಾಗೆ ನಿಂಬೆ ಹಣ್ಣು ಕುಯಿಸ್ಕಂಡು ಬೇವಿನ ಸೊಪ್ಪಿನ ಏಟೂ ತಿಂತವೆ. ಉರುಳು ಸೇವೆ ಬಾಯಿ ಬೀಗ ಕೆಂಡ ತುಳಿಯೋ ಸೇವೆ ಏನೇನೋ ಮೂಢ ನಂಬಿಕೆಗಳ ದಾಸರಾಗ್ತವೆ. ಆದರೆ ಮಾಜ್ಞಾನಿಗಳಾದ ಪೋಲಿಟಿಶಿಯನ್ಸು ಸಿನಿಮಾ ಸ್ಟಾರ್ಸು ಆಟಕೋರ ಧಾಂಡಿಗರು ತಮ್ಮ ಕಳಪೆ ಆಟ, ನಟನೆ, ಸೋಲುಗಳಿಗೆ ಹೆದರಿ ಹೆತ್ಲಾಂಡಿಗಳಾಗಿ ತಿರುಪತಿ, ಶಬರಿಮಲೆ, ಮಂತ್ರಾಲಯ, ಧರ್ಮಸ್ಥಳ, ಕೊಲ್ಲೂರು ರೌಂಡ್ ಹೊಡಿತಿದ್ದೋರು ಸಡನ್ ಆಗಿ ರೂಟ್ ಚೇಂಜ್ ಮಾಡಿ ದರಿದ್ರ ರಸ್ತೆಯನ್ನೂ ಕೇರ್ ಮಾಡ್ಡೆ ಕುಕ್ಕೆ ಕಡೆ ಡೈವರ್ಟ್ ಆಗ್ತಾವ್ರೆ. ಹಿಂದೆಲ್ಲಾ ತಿರುಪತಿಗೆ ಹೋಗಿ
ತಿಮ್ಮಪ್ಪನ ದರುಶನಕ್ಕೆ ‘ಕ್ಕೂ’ ನಿಲ್ಲುತ್ತಿದ್ದ ನಟರುಂಟು. ಅದ್ರಾಗೆ ನಮ್ಮ ರಾಜಣ್ಣ, ವಿಷ್ಣು ಕೂಡ ಹಾಜರಾಗಿದ್ದುಂಟು. ವಿಷ್ಣುವಂತೂ ಪ್ರತಿ ವರ್ಷ ತಮ್ಮ ಅಳಿದುಳಿದ ಕೇಶವನ್ನು ಸಮರ್ಪಿಸಲಿಕತ್ತಾರ್ರಿ. ರಾಜಣ್ಣನ್ದಂತು ಗುರುಸಾಮಿ ನಂಬಿಯಾರ್ ನೇತೃತ್ವದಾಗೆ ತಮ್ಮ ಆಪ್ತರ ಸಮೇತ ಅದೇಟು ಸಲ ಶಬರಿಮಲೆ ಹತ್ತಿ ಇಳಿದಾರೋ ಆಯ್ಯಪ್ಪಸಾಮಿನೇ ಬಲ್ಲ. ಎಂ.ಜಿ.ಆರ್., ಜಯಲಲಿತ, ಯೇಸುದಾಸ್, ಇಳಯ ರಾಜರಂತಪ ಪಕ್ಕದ ಸ್ಟೇಟ್ ಸ್ಟಾರ‍್ಗಳು ಕೊಲ್ಲೂರಿಗೆ ಗಂಟು ಬಿದ್ದವರೆಯಾ. ಮೊನ್ನೆ ಮೈಸೂರಿಗೆ ಓಡಿ ಬಂದ ಜಯಲಲಿತ ಚಾಮುಂಡೇಶ್ವರಿ ದರ್ಶನ ಮಾಡಿ ಅದೇನು ಹರಕೆ ಹೊತ್ತರೋ ಕರುಣಾನಿಧಿನೇ ಬಲ್ಲ. ಜಯಲಲ್ತ ಅಪಜಯಕ್ಕೀಡಾಗಿ ಗಜಲಲಿತಳಾಗಿ ಮಾತ್ರ ಉಳ್ಕಂಡ್ಳು. ಆಮಿತಾಥಬ್ನಂತಹ ಬಿಗ್ ‘ಬಿ’ ತಿರುಪತಿಗೆ ಬಂದು ‘ಸಲಾಂ ತಿಮ್ಮಪ್ಪಾ ಸಾಬ್’ ಅಂದಿದ್ದುಂಟು. ಇದೆಲ್ಲಾ ಮನಸ್ಸಿನ ಸಮಾಧಾನಕ್ಕೆ ಅಂತ ಸಬೂಬು ಹೇಳಿದರೂವೆ ಸೋಲಿನ ಭಯ, ಅಪಕೀರ್ತಿಯ ಅಂಜಿಕೆ, ಬರಬೇಕಾಗಿರುವ ಆಮದಾನಿ ಕಡಿಮೆ
ಆಯ್ತಲ್ಲ ಅಂಬೋ ದುರಾಸೆ. ಅನಾರೋಗ್ಯದ ಭೀತಿಯ ‘ಷಾಡೋ’ ಅವರ ಮೇಲೆ ಬಿದ್ದ ಪರಿಣಾಮವೇ ಪುಣ್ಯಕ್ಷೇತ್ರಗಳ ಪಯಣಕ್ಕೆ ಒರಿಜಿನಲ್ ರೀಜನ್ ಕಣ್ಸಾಮಿ ಒಟ್ನಾಗೆ ಸಹಸ್ರಾರು ರೂಪಾಯಿ ಬ್ರಾಂಬ್ರ ಜೋಳಿಗೆಗೆ ಸುರಿದು ಅವರ ಪಾದಗಳಿಗೆ ಡೈ ಹೊಡೆಯೋ ಇವುಗಳ ತೆಲಿಯಾಗೇನಾತೋ ವಿ.ಎಸ್.ನಾಯಕನೇ ಬಲ್ಲ.
ಮೊನ್ನೆನಾಗ ಕಿರಿಕಿಟ್ನಾಗೆ ‘ಡಿಂ’ ಹೊಡಿತಿರೋ ನಮ್ಮ ಸಚಿನ್ನು ಕುಕ್ಕೆಗೆ ಓಡಿ ಬರೋಕ್ಕಿಂತ ಮುಂಚೆ ಹಿಂದಿ ಫಿಲಂ ಸ್ಟಾರ್ ರಾಚ್ ಕಪೂರ್ ಫ್ಯಾಮಿಲಿಯೇ ಕುಕ್ಕೆಗೆ ದೌಡಾಯಿಸಿ ಬಂತು. ರಣಧೀರಕಪೂರ ರಿಷಿಕಪೂರ ಬಬಿತಾ ನೀತುಸಿಂಗ್ ಎಲ್ಲಾ ಕುಕ್ಕೆ ಸೇರ್ಕೊಂಡು ಸರ್ಪ ಸಂಸ್ಕಾರ ಮಾಡೊಸಿದ್ದೇ ತಡ ಕುಕ್ಕೆ ನ್ಯಾಶನಲ್ ಲೆವೆಲ್ ನಾಗೆ ಫೇಮಸ್ಸಾತು. ಕಪೂರ್ ಫ್ಯಾಮಿಲಿ ಆರ್ಟಿಸ್ಟ್ ಗಳೆಲ್ಲಾ ಈಗ ಓಲ್ಡ್ ಫೆಲೋಸು. ಇವರೆಲ್ಲಾ ಏಟು ಸಲ ಕುಕ್ಕೆಗೆ ಬಂದ್ರೂ ರೊಕ್ಕ ಮಾಡಲ್ಲ. ಮಾರ್ಕೆಟ್ ವಾಲ್ಯೂ ಕುದುರೋಲ್ಲ ಬಿಡ್ರಿ. ವಿ.ಎಸ್.ನಾಯಕನೆಂಬ ಏಜೆಂಟನಿಗೂ ಅದು ಗೊತ್ತು. ಆದರೆ ಆತನ ಹೊಟ್ಟೆಪಾಡು ನೆಡೀಬೇಕಲ್ಲ. ಈವಯ್ಯ ಫಿಲಿಪ್ಸ್ ಕಂಪನಿ ದೊಡ್ಡ
ಹುದ್ದೆನಾಗೆ ಇದ್ದೋನು. ದಿಢೀರ್ ಅಂತ ದೈವಭಕ್ತನಾಗಿ ಕೆಲಸಕ್ಕೆ ರೆಸಿಗ್ನೇಶನ್ ಒಗೆದು ಕುಕ್ಕೆ ಸುಬ್ರಮಣ್ಯನಿಗೆ ಅಟಾಚಾಗೋದ. ‘ಆಶ್ರಯ ಶೇಷನಾಗ್’ ಲಾಡ್ಜ್ ಕಟ್ಟಿಸಿದ. ಗಿರಾಕಿಗಳ ಮ್ಯಾಲೆ ತನ್ನ ಆಧ್ಯಾತ್ಮ ಬಲೆ ಬೀಸಿದ. ಸೋತು ಸುಣ್ಣವಾಗಿದ್ದ ಸಿರಿವಂತ ಕೀರ್ತಿವಂತ ಪರಾಕ್ರಮಿಗಳೆಲ್ಲಾ ನಾಯಕನ ಪಾದಾರವಿಂದಗಳಿಗೆ ಶರಣಾಗುವ ಮೂಲಕ ಕುಕ್ಕೆ ಕಡೆ ಜರ್ನಿ ಶುರು ಹಚ್ಕಂಡ್ರು. ಮೆದಲೆ ನಮ್ಮ ಸಚಿನ್ನೋ ಫಾರಮ್ಮು ಚಾರಮ್ಮು ಎಲ್ಡನೂ ಕಲ್ಕೊಂಡ ಹೈ. ನವಂಬರ್ ೨೦೦೪ ರಿಂದ ೨೫ ಒನ್ ಡೇ ಮ್ಯಾಚ್ನಾಗೆ ಬಾರಿಸಿದ್ದು ಎಲ್ಡು ಶತಕ ಮೂರು ಅರ್ಧ. ಈ ಮ್ಯಾಚ್‍ಗಳ ಪೈಕಿ ಹನ್ನೊಂದ್ರಾಗೆ ಏಳು ಹನ್ನೊಂದು ದಾಟದೆ ಹೋದ ಹೊಯ್ದಾಟ. ೨೦೦೫ ದಿಂದೀಚ್ಗೆ ೧೨ ಟೆಸ್ಟ್‍ನಾಗೆ ೧೮ ಇನ್ನಿಂಗ್ಸ್‍ಗೆ ಗಳಿಸಿದ್ದು ಅರ್ಡಿನರಿ ಒಂದು ಶತಕ, ಮೂರು ಅರ್ಧ. ೨೦೦೬ನಾಗೆ ಆರು ಟೆಸ್ಟ್‍ನಾಗ್ಳ ಒಟ್ಟು ರನ್ ಗಳ ಮೊತ್ತ ಸಿಂಪ್ಲಿ ೩೪ ರನ್ಸ್. ಹಿಂಗಾಗಿ ಗಂಗೂಲಿ ಹಂಗೆ ತಾನೂ ಎಲ್ಲಿ ಕಿರಿಕೆಟ್ ಫೀಲಲ್ಡ್‍ನಿಂದ್ಲೆ ಅಬಾಲಿಶ್ ಆಗಿ ಬಿಡ್ತಿನೋ ಅಂಬೋ ಗಾಬರಿ. ಇದರ ಜೊತೆನಾಗೆ ಇಂಗ್ಲೆಂಡು ವಿರುದ್ಧದ ಬಾಂಬೆ ಮ್ಯಾಚ್‍ನಾಗಾದ ಇನ್‍ಸಲ್ಟು ಪ್ಲಸ್ ಬ್ಯಾಕ್ ಪೆಯಿನ್ ಟೆನಿಸ್ ಎಲ್ಬೋ ಪ್ರಾಬ್ಲಮ್ಮೆ. ಹೆಲ್ತ್ ಕಂಡೀಷನ್ನಾಗೇ ಇಲ್ಲದ ಮ್ಯಾಗೆ ೩೨ ದಾಟಿದ ಸಚಿನ್ಗೆ ತನ್ನ ಬ್ಯಾಟಿನಿಂದ ಬಾಲು ಚಚ್ಚುವ ಹೋಪ್ಸೇ ಹೊಂಟೋಗಿದ್ದೆ ಕುಕ್ಕೆಗೆ ಬಂದು ಬೋಲ್ಡ್ ಆಗಿದ್ದು ಕಣ್ರಿ. ವಿ.ಎಸ್. ನಾಯಕ್ ಅಂಡ್ ಪುರೋಹಿತರ ಗ್ಯಾಂಗ್ಸ್ ಜಮಾಯಿಸಿ, ಸಚಿನ್ ಕೈನಾಗ್ಳ ಬ್ಯಾಟ್ ಕಿತ್ಕೊಂಡು ಉದ್ಧರಣೆ ಕೊಟ್ಟು ಬೆರಳಿಗೆ ದರ್ಬೆಸುತ್ತಿ ಪ್ಯಾಂಟು ಶಲ್ಟು ಬಿಚ್ಚಿಸಿ ಅಡ್ಡ ಪಂಚೆ ಉಡುಸಿ, ರೇಷ್ಮೆ ಉತ್ತರೀಯ ಹೊದ್ದಿಸಿ ಸಚಿನ್‍ನ ಗಂಟು ಬೋಳಿಸಿದ, ಈ ಜನ ಸರ್ಪ ಸಂಸ್ಕಾರ ನಾಗ ಪ್ರತಿಷ್ಠೆ ಆಶ್ಲೇಷ ಬಲಿ ಬ್ರಹ್ಮಚಾರಿ ಪಟುಗಳ ಆರಾಧನೆ ಸತ್ ಸಂಕಲ್ಪ ಎಕ್ಸೆಟ್ರಾ, ಎಕ್ಸೆಟ್ರಾ ಪೂಜೆಗಳನ್ನು ಮಾಡಿಸಿದರು. ಸಚಿನ್ ಸತಿ ಡಾ. ಅಂಜಲಿ ಅಣ್ಣ ನಿತಿನ್, ಆತ್ತಿಗೆ ಮೀನ ಸೋದರ ಆಜಿತ್ ಸೋದರಿ ಸವಿತಾ ಸಮೇತ ಪೂಜೆಗೈದು ಸಹಸ್ರಾರು ರೂಪೈಗಳನ್ನು ಬಾಂಬ್ರ ಜೋಳಿಗೆಗೆ ಸುರಿದು ಮತ್ತೆ ರನ್ ಗಳ ಸುರಿಮಳೆ ಗರೆಯುತ್ತೇನೆಂದು ಮುಂಬೈಗೆ ಹೊಂಟ. ಇಂತಿಪ್ಪ ಕಿರಿಕೆಟ್ ಕಲಿಗೆ ಮಠಾಧಿಪತಿ ವಿದ್ಯಾಪ್ರಸನ್ನ ತೀರ್ಥ ಒಂದು ಮಿಳ್ಳೆ ತೀರ್ಥ ಕೊಟ್ಟು ಶಾಲು ಹೊದಿಸಿ ಅಕ್ಷತೆ ನೀಡಿ ‘ದಿಗ್ವಿಜಯೀಭವ’ ಅಂತ ಹರಸಿದ್ದಷ್ಟೇ ಲಾಭವೇನೋ. ಫಲಿತಾಂಸ ಕಾದು ನೋಡಬೇಕಾಗೇತ್ರಿ. ನೆಕ್ಸ್ಟಡೇನೆ ರಪ್ಪಂತ ಎಳೆನಿಂಬೆ ರಾಬಿನ್ ಉತ್ತಪ್ಪನೂ ಬಂದ. ಆಮ್ಯಾಗೆ ಶ್ರೀಶಾಂತನೂ ಬಂದು ಸರ್ಪದೋಷ ಪರಿಹಾರ ಮಾಡ್ಕೊಂಡು ಹೋದ್ವು. ನಮ್ಮ ನಾಗರಹಾವು ವಿಷ್ಣು ಪತ್ನಿ ಸಮೇತ ಇಳ್ಕಂಡು ನಾಗರ ಹೆಡೆನಾ ಸ್ವಾಮಿ ಕೈನಾಗಿಕ್ಕಿ ಹೋದ್ದು ಸುದ್ಧಿಯಾತು. ಇವರಾಟೇ ಅಲ್ಲ ಇಲ್ಲಿಗೆ ಜೂಹಿಚಾವ್ಲಾ ಬಂದವ್ಳೆ ತರ್ಲೆ ರಾಜ್ಯಕಾರ್ಣಿ ಸುಬ್ರಮಣ್ಯಸ್ವಾಮಿ, ಮಹಾರಾಷ್ಟ್ರದ ಶಿಂಧೆ. ನಮ್ಮ ಎಸ್.ಎಂ. ಕೃಷ್ಣ, ಡಬರಿ ಮೋರೆ ಧರ್ಮಸಿಂಗೂ ಬಂದು ಹೋಗ್ಯಾರ್ರಿ.
ಆಮೇಲೆ ಅವರೆಲ್ಲಾ ಏನೇನು ಗತಿ ಆಗವರೆ ಅಂಬೋದ್ನ ನಾನ್ ಹೇಳಂಗಿಲ್ಲ. ನಿಮ್ಗೇ ಗೊತ್ತೈತೇಳ್ರಿ. ಪಿ.ಎಸ್. ನಾಯಕ್ ಒಬ್ಬನೇ ಕುಕ್ಕೆ ಏಚೆಂಟಲ್ರಪಾ. ಈವಯ್ಯನಿಗೂ ರೈವಲರ್ಸ್ ಅವರೆ. ದ್ವಾರಕನಾಥ್, ಉಡುಪ, ಚಂದ್ರಸೇಕರಸಾಮಿ ಎಕ್ಸೆಟ್ರಾ, ಎಕ್ಸೆಟ್ರಾ, ಈಗ ಕುಕ್ಕೆ ಮಠದತಾವ ಒಂದು ಬೋರ್ಡ್ ಹಾಕಿ ಇಂತಿಂಥ ಪೂಜೆಗೆ ಇಂತಿಷ್ಟು ರೇಟು ಅಂತ ಫಿಕ್ಸ್, ಮಾಡೋರಂತೆ. ಜೊತೆನಾಗೆ ಸಿನಿಮಾ ಸ್ಟಾರು ಕಿರಿಕೆಟ್ ನ ಧಾಂಡಿಗರು, ಫೋಲಿಟಿಶಿಯನ್ಸಗಳ ಆಟೋಗ್ರಾಪ್ ಬೇಕಂದರೆ ಇಂತಿಷ್ಟು ರೇಟು. ಅವರ ದರ್ಶನಕ್ಕೆ ಇಷ್ಟು. ಅವರೊಡನೆ ಎಲ್ಡು ಮಾತು, ಒಂದು ಫೋಟೋಕ್ಕೆ ಇಷ್ಟು ಆಂತ ರೇಟ್ ಫಿಕ್ಸ್ ಮಾಡವರಂತೆ. ತನ್ನ ಲಾಡ್ಜ್‍ನಾಗೇ ಉಳ್ಕೊಂಬೇಕು ಅನ್ನೋ ಕರಾರು ಮಾಡಿದ ವಿ.ಎಸ್. ನಾಯಕ ಇದ್ನೆಲ್ಲಾ ಪ್ಯಾಕೇಜ್ ಡೀಲ್ ಫಿಕ್ಸ್ ಮಾಡಾನಂತ್ರಿ. ಬೋಳಿಸಿಕೊಳ್ಳಲಿಕ್ಕಂದೇ ಬರೋರು ಇರೋವರ್ಗೂ ಬೋಳಿಸೋರು ಇದ್ದೇ ಇರ್ತಾರ್ ಬಿಡ್ರಿ. ಏನೋ ಅಪ್ಪಾ ಅವರವರ ನಂಬಿಕೆ ಅಂತ ನೀವಂದ್ರೆ ನಂದೇನು ಅಬುಜಕ್ಶನ್ ಇಲ್ರಿ. ಒಟ್ನಾಗೆ ಫಾರ್ಮ್ ಕಳ್ಕೊಂಡು ಚಾರಂ ಇಲ್ದಂಗಾಗಿರೋ ಸಚಿನ್ ಮೊದಲಿನಂಗೆ ಫಾರ್ಮ್ ಗೆ ಮರಳಿ ಸಕತ್ತಾಗಿ ಮಿಂಚಲಿ ಅಂಬೋದೇ ನಮ್ಮೆಲ್ಲರ ಆಶಾ ಅಂಬೋದು ಸುಳ್ಳಲ್ರಿ.
*****
(ದಿ. ೦೧-೦೬-೨೦೦೬)