ಜೀವದ ಗೆಳತಿಯರೆ ಗುಟ್ಟಿನ ಮಾತೊಂದ ಕೇಳುವೆ
ಪಡಿನುಡಿ ಪೇಳುವಿರಾ? ||ಪಲ್ಲ||
ಜೀವಕಾಂತನು ಯಾವ ಏಕಾಂತದೊಳಗೆ ತಾ
ಪವಡಿಪನೆಂಬುದನರುಹುವಿರಾ?
ಎಂದು ಬಂದೀ ಕೈಯ ಪಿಡಿವನೆಂಬುದನಾರು
ಬಲ್ಲಿರಿ ದಯವಿಟ್ಟು ಉಸಿರುವಿರಾ? ||೧||
ಪತಿದೇವರಾಯನ ಜೊತೆಗೆ ಬಾಳುವೆ ಮಾಳ್ಪ
ಅತಿ ಸಂಭ್ರಮವುಳ್ಳ ನೀರೆಗೆ
ಹೃದಯಮಂಗಲ ಸೂತ್ರಧಾರಿಯೆ ಇರದಿರೆ
ಧಾರೆಯನೆರೆವುದು ಯಾರಿಗೆ ? ||೨||
ಅರ್ಯಸಂಕುಲಕೆ ಸಂಮತವಾಗಿ ತೋಣವ ಬ್ರಾಹ್ಮವಿವಾಹಕೆ
ಸಿದ್ಧಳು ಇರುವೆ!
ದೇವಕೋಟಿಪ್ರಿಯವಾದ ಗಾಂಧರ್ವವಿವಾಹವಾದರು ಸರಿ
ಸಿದ್ಧಳೆ ಇರುವೆ! ||೩||
ಯಾವ ವಿವಾಹದಿ ಜೀವಮೋಹನ ಬಂದು
ಕೈಪಿಡಿಯಲೆಂದು ಈ ಜೀವವು ಆರ್ತಾ!
ಜೀವಪ್ರವಾಹವು ಸ್ನೇಹಸಾಗರನಲ್ಲಿ
ಬೆರೆತ ಮುಹೂರ್ತವೆ ಮುಹೂರ್ತಾ! ||೪||
ಆರ್ಯಪುತ್ರನ ಪಾದಸೇವೆಯ ಸೌಭಾಗ್ಯ
ಎಂದಿಗೀ ಜೀವಕ್ಕೆ ದೊರೆಯುವದು?
ಕಾರ್ಯವಾವುದು ಸಖಿ ಆರ್ಯನೆ ಬರದಿರೆ
ಕೊರಕೊರಗಿ ಜೀವವ ತೊರೆಯುವುದು! ||೫||
*****








