ತಾಳೆಯ ಹೂಹುಡಿ ಬಣ್ಣದ ಜೊನ್ನವು
ಇರುಳೊಳು ಹರಡುತಿದೆ-ತಮ
ತಿಳಿಯಿತು ಎನ್ನುತಿದೆ.
ಅರಿಲಿನ ಕಿರುಕಿರು ದೋಣಿಗಳಾಗಸ-
ದೆದೆಯೊಳು ತೇಲುತಿವೆ-ನಗು-
ವಮರರ ತೋರುತಿವೆ.
ಮುಗಿಲ ತೀರದೊಳು ರಾಜನೌಕೆಯಹ
ಕರೆಯನು ಬಿಟ್ಟಿತಿಗೋ-ಮುದ-
ಕೆಂದೆಯೆ ಸಾಗಿತಿಗೋ.
ಕನಸಿನ ಬನದೊಳು ಭಾವದ ಪಾತರ-
ಗಿತ್ತಿಗಳೆದ್ದಿಹವು-ನನ-
ಮನವನು ಕದ್ದಿಹವು.
ಕರಣದ ದುಂಬಿಯ ದೆಸೆದೆಸೆಗೋಡಿಸಿ
ಚಣಕಳಿವೀ ಜೆಲುವಿನ ಹುರುಳ
ನುಡಿಗಳ ಜೇನಿನ ಗೂಡೊಳು ತುಂಬಿಸ-
ಲೆಳಸಿಹನೆನ್ನಯ ಕವಿ ಮರುಳ.
*****








