ಪ್ರೌಢ ರಸಿಕ ಜನರುಗಳಿರಾ,
ಪ್ರಾಥಮಿಕ ಪಠ್ಯ ಪುಸ್ತಕದಲ್ಲಿ ಎಡಗೈಯ ಬಿನ್ನಹಪತ್ರವನ್ನು ನೀವು ಓದಿರುವಿರಷ್ಟೇ. ನಾನು (ಬಲಗೈ) ಆಲಸಿಯಾಗಿದ್ದೇನೆಂದೂ ಎಡಗೈಯ ಸಹಾಯವಿಲ್ಲದೆ ಯಾವ ಕೆಲಸವೂ ನನ್ನಿಂದ ಆಗುವದಿಲ್ಲೆಂದೂ ನಮ್ಮ ಹಿರಿಯರು ಪಕ್ಷಪಾತದಿಂದ ನನಗೆ ವಿದ್ಯೆ ಕಲಿಸುತ್ತಾರೆಂದೂ ಮತ್ತು ಎಡಗೈಗೆ ಕಲಿಸುವದಿಲ್ಲೆಂದೂ ಇನ್ನೂ ಅನೇಕ ಆಕ್ಷೇಪಾರ್ಹ ಸಂಗತಿಗಳನ್ನು ಎಡಗೈಯು ತನ್ನ ಬಿನ್ನಹಪತ್ರದಲ್ಲಿ ಬರೆದಿದೆ. ಚಿಕ್ಕಮಕ್ಕಳ ಪಠ್ಯ ಪುಸ್ತ್ರದಲ್ಲಿ ಈ ಪತ್ರವನ್ನು ಬರೆದು ನನ್ನ ವಿಷಯವಾಗಿ ವಿಪರೀತ ಕಲ್ಪನೆಗಳನ್ನು ಬಾಲಕರ ಮನಸ್ಸಿನಲ್ಲಿ ಹುಟ್ಟಿಸುವದು ಹೆಚ್ಚಾಗಿ ತಿರಸ್ಕರಣೀಯವಿದೆ.
* * * *
ನಿಜವಾಗಿ ವಿಚಾರಿಸಿದರೆ ಎಡಗೈಯೇ ಆಲಸಿ ಇದೆ, ಕೆಲಸ ಮಾಡಲು ಯಾವಾಗಲೂ ಹಿಂಜರಿಯುತ್ತದೆ. ಏನಾದರೂ ಬರೆಯ ಹೇಳಿದರೆ ಅಂಕ ಡೊಂಕಾಗಿ ಬರೆದು ತನ್ನನ್ನು ತಾನೇ ಅಯೋಗ್ಯ ಮತ್ತು ಅಸಮರ್ಥ ಎಂದು ಸಿದ್ಧ ಮಾಡಿ ಕೊಡುತ್ತದೆ. ನಾನು ಕೆಲಸ ಮಾಡುವಾಗ ನನಗೆ ಸಹಾಯ ಮಾಡಿದಂತೆ ಮಾತ್ರ ನಟಿಸುತ್ತದೆ. ಆದರೆ ಅದು ಕೇವಲ ಮೈಗಳ್ಳತನದ ಸಹಾಯ. ಬರೆಯುವವನು ನಾನು ಬಾರಿಸುವವನೂ ನಾನು. ಹೊರುವವನು ನಾನು ತರುವವನು ನಾನು ಇಡುವವನು ನಾನು. ಅರ್ಥಾತ್ ಎಲ್ಲ ಕೆಲಸ ಮಾಡಿ ದಣಿಯುವವನು ನಾನು. ನನಗೆ ಅಲ್ಪ ಸ್ವಲ್ಪ ಸಹಾಯ ಮಾಡಿದಂತೆ ನಟಿಸಿ ಸುಖರೂಪವಾಗಿ ಜೀವಿಸುವದು ಎಡಗೈಯು!
* * * *
ನಮ್ಮ ಹಿರಿಯರ ಮೇಲೆ ಪಕ್ಷಪಾತದ ಆರೋಪವನ್ನಿಟ್ಟಿದೆ. ಇದು ಸರ್ವಥಾ ತಪ್ಪು, ನನ್ನಂತೆ ಅದನ್ನೂ ಪೋಷಿಸುತ್ತಾರೆ. ಅರಿವೆ ತೊಡಿಸುತ್ತಾರೆ, ಯಾವ ತರಹದ ಭೇದಭಾವ ಮಾಡುವದಿಲ್ಲ. ಆದರೆ ನನ್ನ ಜಾಣತನ ಮತ್ತು ಕೆಲಸ ಇವುಗಳ ಮೂಲಕ ನನ್ನ ಮೇಲೆ ಹೆಚ್ಚು ಲಕ್ಷವಿಡುವದು ಸ್ವಾಭಾವಿಕ. ಇದರಿಂದ ಎಡಗೈಯನ್ನು ದುರ್ಲಕ್ಷಿಸುತ್ತಾರೆಂದು ಅನ್ನಲಾರೆ. ಹಿರಿಯರ ಮೇಲಿಟ್ಟ ಈ ಆರೋಪವು ಕೇವಲ ಎಡಗೈಯ ಹೊಟ್ಟೆ ಕಿಚ್ಚಿನ ಮೂಲಕವಿದೆ.
* * * *
ಚಿಕ್ಕಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮವಾಗುತ್ತದೆಂಬುದು ಸುಳ್ಳಲ್ಲ. ಎಡಗೈಯು ಬಿನ್ನಹ ಪತ್ರ ಬರೆದನಂತರ ಹೊಸ ಪೀಳಿಗೆಯಲ್ಲಿ ನನ್ನ ವಿಷಯವಾಗಿ ಆದರವು ಕಡಿಮೆಯಾದಂತೆ ಕಾಣುತ್ತದೆ. ಇಷ್ಟೇ ಅಲ್ಲ, ಜನರಲ್ಲಿ ನನಗಿಂತ ಎಡಗೈಯ ಸಲುವಾಗಿ ಹೆಚ್ಚು ಕಳಕಳಿ ಉತ್ಪನ್ನವಾಗಿದೆ. ಉದಾಹರಣಾರ್ಥವಾಗಿ ಎಡಗೈಯಲ್ಲಿ ಬೆಳ್ಳಿ-ಬಂಗಾರದ ವಾಚುಗಳನ್ನು ಕಟ್ಟುವರು. ಉಂಗುರವನ್ನೂ ಎಡಗೈ ಬೆರಳಿನಲ್ಲಿಯೇ ಇಡುವರು. ಸ್ಕೌಟ ಹುಡುಗರೂ ಗರ್ಲಗಾಯಿಡ ಹುಡಿಗೆಯರೂ ಎಡಗೈಯಿಂದ ಹಸ್ತಾಂದೋಲನ (Shake-hand) ಮಾಡುತ್ತಾರೆ. ಸುವಾಸನೆಯುಳ್ಳ ಬಣ್ಣದ ಕೈವಸ್ತ್ರಗಳನ್ನು ಎಡಗೈಯ ತೋಳಿನಲ್ಲಿ ಎದ್ದು ಕಾಣುವಂತೆ ಇಡುತ್ತಾರೆ. ಇಷ್ಟೆಲ್ಲ ಆಡಂಬರ ಎಡಗೈಯದು.
* * * *
ಊರಲ್ಲಿ ಪ್ಲೇಗು ಬೇನೆಯು ಪಸರಿಸಿದರೆ ಕೂಡಲೆ ಎಡಗೈಗೆ ಮೈಲಿ ಚುಚ್ಚಿ ಅದನ್ನು ಉಳಿಸಲು ಪ್ರಯತ್ನಿಸುತ್ತಾರೆ. ನಾನು ಎಷ್ಟು ಕಷ್ಟ ಸಹಿಸಿದರೂ ನನ್ನ ಸಲುವಾಗಿ ಯಾರೂ ಕಾಳಜಿ ಮಾಡುವದಿಲ್ಲ. ದಾರಿಯಲ್ಲಿ ಮೋಟರ್, ಚಕ್ಕಡಿ, ಸೈಕಲ್ಲು ಮೊದಲಾದ ವಾಹನಗಳು ಎಡಭಾಗದಿಂದಲೇ ಹೋಗಬೇಕೆಂದು ನಿಯಮ ಮಾಡಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಎಡ ಭಾಗದವರು (Leftists) ಮಾತ್ರ ಪ್ರಾಗತಿಕ ಪಕ್ಷದವರೆಂದು ಎಣಿಸಲ್ಪಡುತ್ತಾರೆ. ಕಲಿತ ಸ್ತ್ರೀಯರು ಎಡಗೈಯಲ್ಲಿ ಒಂದಾದರೂ ಚೆಂದವಾದ ಬಳೆಯನ್ನು ಇಡುತ್ತಾರೆ. ಬಲಗೈಯಲ್ಲಿ ಕ್ವಚಿತ್.
* * * *
ವಾಚಕರು ಸಾರಾಸಾರ ವಿಚಾರ ಮಾಡಿ ನಮ್ಮಿರ್ವರಲ್ಲಿ ಯಾವನು ಕೆಲಸ ಮಾಡುವವನು ಮತ್ತು ಯಾವನು ಮೈಗಳ್ಳನು ? ಯಾವನು ಜಾಣನು ಮತ್ತು ಯಾವನು ಮೂಢನು ? ಯಾವನು ಆದರ ಮರ್ಯಾದೆಗೆ ಪಾತ್ರನು ಮತ್ತು ಯಾವನು ಅಯೋಗ್ಯನು? ಎಂಬದನ್ನು ಅಂತಃಕರಣಪೂರ್ವಕವಾಗಿಯೂ ನಿಷ್ಪಕ್ಷಪಾತದಿಂದಲೂ ವಿಚಾರಿಸಿ ನಿರ್ಣಯ ಕೊಡುವರೆಂದು ನಂಬಿದ,
ತಮ್ಮ ಆಜ್ಞಾಧಾರಕ ಸೇವಕ
ಬಲಗೈ
*****








