ಶಬ್ದ ಸಾಗರವುಕ್ಕಿಬರುತಲಿದೆ, ಓ, ತಮ್ಮ,
ನಿನ್ನತುಲ ಕೀರ್ತಿಯನು ವರ್ಣಿಸಲು ಮುನ್ನುಗ್ಗಿ!
ಮುನ್ನಗೈದಾ ಸುಕೃತಕಿಂದು ಫಲ ದೊರಕಿದುದು
ಕನ್ನಡದ ನಾಡಗುಡಿ ತಲೆಯೆತ್ತಿ ಮೆರೆವಂತೆ
ಚೆನ್ನ, ನಿನ್ನಾತಪದ ಸಿದ್ಧಿ ಸಾಧಿಸುವಂತೆ
ವರ್ಣನಾತೀತ ಯಶ ಪಾದ ರೇಣುವಿನಂತೆ
ಪೂರ್ಣ ಪಾವನ ಪ್ರೇಮದಾವರಣವನು ಹೊತ್ತು
ಪುಣ್ಯ ಪುರುಷನ ದಿವ್ಯ ಭವ್ಯಾತ್ಮನುಸಿರಲ್ಲಿ
ಗಣ್ಯಗುರುವಿನ ಪಾದ ಪದ್ಮ ಸೌರಭದಲ್ಲಿ
ಮಿಂದು ಬಂದಿದೆ ಚೆಂದ ಚೆಂದಿರನ ಚೆಲುವಿನೊಲು!
ಕವಿಯ ಮನಕೂ ಮೀರಿ, ಭಾವ ಬುಗ್ಗೆಯ ತೂರಿ
ಭುವಿಯಿಂದ ಬ್ರಹ್ಮಾಂಡಕರೆನಿಮಿಷದಲಿ ಹಾರಿ
ಬಾಗಿಲಿಗೆ ಬಂತಿಯೋ ಭಾಗ್ಯನಿಧಿ ನಿನಗಾಗಿ
ಯೋಗಮಿದು “ಗುರುರಾಜ”* ಕಾದಿತ್ತು ಬಲಮಾಗಿ!
*****
ಬೆಂಗಳೂರು : ೧೯೪೩
* ೧೯೪೩ನೇ ಇಸವಿಯಲ್ಲಿ ಬೊಂಬಾಯಿ ವಿಶವಿದ್ಯಾಲಯದ ಮ್ಯಾಟ್ರಿಕ್ಕುಲೇಷನ್ ಪರೀಕ್ಷೆಗೆ ಕುಳಿತ ೨೭,೧೧೪ ಜನ ವಿದ್ಯಾರ್ಥಿಗಳಲ್ಲಿ ನನ್ನ ತಮ್ಮ ಚಿ। ಗುರುರಾಜ ಮೊತ್ತಮೊದಲಿಗನಾಗಿ ತೇರ್ಗಡೆಯಾದ ಅಪೂರ್ವ ಯಶಸ್ಸಿನ ವಾರ್ತೆ ಕೇಳಿ ಬರೆದುದು.








