ಹೊತ್ತಿಳಿವು, ಸಂಜೆಬೆಳ್ಳಿ
ನನ್ನ ಕರೆದೊಂದು ಕೂಗು!
ಇಲ್ಲದಿರಲೇನೇನು ಬಂದರಿನ ನರಳಾಟ,
ನಾ ಕಡಲ ಸೇರುವಾಗ;
ಹೊರಳಿ ನಿದ್ದೆವೊಲಿರಲಿ, ಮೊರೆಯದೆಯೆ, ನೊರೆಯದೆಯೆ
ತುಂಬುದೆರೆಯುಬ್ಬು ಹೊನಲು,
ಕರೆಯಿಲ್ಲದಾಳದಿಂದೆದ್ದು ಹೊರಬಿದ್ದುದದು
ಮರಳಿ ಮನೆಗೆಯ್ದುವಾಗ!
ಕಣ್ಣುಬ್ಬು , ಸಂಜೆಗಂಟೆ,
ಆ ಬಳಿಕ ಕಗ್ಗತ್ತಲೆ!
ಇಲ್ಲದಿರಲೇನೇನು ಕಳುಹುವರ ಕೊರಗಾಟ,
ನಾ ಹಡಗನೇರುವಾಗ;
ಈ ನಮ್ಮ ಹೊತ್ತು ಕಡೆ ಗಡಿಯಿಂದ ಬಲುದೂರ
ಹೊನಲೆನ್ನ ಕೊಂಡೊಯ್ದರೂ,
ನನ್ನ ತಾರಕನ ಮುಖ ಕಾಣುವುದ ನಂಬಿಹೆನು
ಬಂದರನು ದಾಟಿದಾಗ.
*****
TENNYSON : Crossing the bar






