Home / ಬಾಲ ಚಿಲುಮೆ / ಕಥೆ / ಸಂಜೀವಕನ ಕಥೆ

ಸಂಜೀವಕನ ಕಥೆ

ಒಡೆಯುವುದು

ಒಡೆಯುವುದು ಎಂಬ ನಾಲ್ಕನೆಯ ತಂತ್ರವಿದು. ಅದರಲ್ಲಿ ಮೊದಲ ಶ್ಲೋಕವಿದು:-
ಅರ್ಥ
ಗೆಳೆತನ ಬೆಳೆಯಲು ಬಲವಾಗಿ ॥
ಬಸವಕೆ ಸಿಂಹಕೆ ಬನದಲ್ಲಿ ॥
ಹೊಟ್ಟೆಯುರಿದು ನರಿಗದ ಕಂಡು ॥
ಸೊಟ್ಟ ತನದೂಳದ ಕೆಡಸೀತು ॥ ೧ ॥

ಆ ಕಥೆಯು ಹೀಗೆ:-

ಸಂಜೀವಕನ ಕಥೆ

ದಕ್ಷಿಣ ದೇಶದಲ್ಲಿ ಮಹಿಲಾರೋಪ್ಯ ಎಂಬ ಒಂದು ನಗರವಿರುವುದು. (ಅದು ಇಂದ್ರನ ಅಮರಾವತಿಯನ್ನು ಮೀರುವ ವೈಭವವುಳ್ಳದು. ಹಿಮಾಲಯದಂತೆ ಹತ್ತುವುದಕ್ಕೆ ಅಸಾಧ್ಯವಾದ ಕೋಟೆಯು ಅದನ್ನು ಬಳಸಿರುವುದು. ಅದರ ಸುತ್ತಲೂ ಸಮುದ್ರದಂತಹ ಕಂದಕವಿರುವುದು. ಅದನ್ನು ದೂರದಿಂದ ನೋಡಿದರೆ ಪರಶಿವನ ಕೈಲಾಸಪರ್ವತವೋ ಎನ್ನುವಂತಿತ್ತು.) ಅಲ್ಲಿ ವರ್ಧಮಾನಕನೆಂಬ ಒಬ್ಬ ವೈಶ್ಯನಿದ್ದನು. ಆತನು ಧರ್ಮದಿಂದ ವ್ಯಾಪಾರ ಮಾಡಿ ಬೇಕಾದ ಹಾಗೆ ಧನವನ್ನು ಸಂಪಾದಿಸಿದ್ದನು. ಒಂದು ದಿನ ಆತನು ಹಾಸುಗೆಯಲ್ಲಿ ಮಲಗಿರುವಾಗ ಒಂದು ಯೋಚನೆಯು ಬಂತು: ನನಗೆ ಬೇಕಾದಷ್ಟು ಧನವಿದೆ. ಆದರೂ ಇನ್ನೂ ಹಣವನ್ನು ಸಂಪಾದಿಸುವ ಯೋಚನೆಯನ್ನು ಮಾಡಲೇಬೇಕು.

(ಹಣವು ಎಷ್ಟೇ ಇದ್ದರೂ ವೆಚ್ಚಮಾಡುತ್ತಿದ್ದರೆ ಭರಣಿಯೊಳಗಿನ ಕಾಡಿಗೆಯಂತೆ ಮುಗಿದು ಹೋಗುವುದು. ಕೊಂಚ ಕೊಂಚವಾದರೂ ಸೇರಿಸುತ್ತಿದ್ದರೆ ಹುತ್ತವು ಬೆಳೆಯುವ ಹಾಗೆ ಬೆಳೆಯುವುದು- ಆದರಿಂದ ಸಂಪಾದನೆಯು ನಡೆಯುತ್ತಲೇ ಇರಬೇಕು. ಹಣವು ಬರುತ್ತಲೇ ಇರಬೇಕು. ಬಂದುದನ್ನು ಭದ್ರವಾಗಿಡಲೇ ಬೇಕು. ಅವಕಾಶ ದೊರತಾಗ ಅದನ್ನು ಮತ್ತೆ ಬಳಸಬೇಕು. ಹಿರಿಯರೂ ಹಾಗೆಯೇ ಹೇಳುತ್ತಾರೆ.)

ಪಳಗಿದಾನೆಯು ಕಾಡಿನಾನೆಯು ಹಿಡಿವುದು ॥
ಬಳಸಿ ಹಣವನು ಹಾಗೆ ಲಾಭವ ಹಿಡಿದಿಡು ॥
ಬಳಸದಿದ್ದರೆ ಹಣವೆ ಬಂಧನ ತಿಳಿದಿರು ॥
ತುಂಬಿ ಇಟ್ಟರೆ ಪರರ ಪಾಲೆಂದರಿತಿರು ॥ ೨ ॥

ಹಣವು ಗೆಲ್ಲದ ಕಾರ್ಯವಿಲ್ಲ | ಹಣವನದರಿಂ ಸಾಧಿಸಯ್ಯ |
ನೂರು ಯತ್ನವ ಮಾಡಿ ಮಾಡಿ | ಜಾಣ ಹೊನ್ನನು ಪಡೆಯಲಯ್ಯ ॥೩॥

ಹಣವು ಇದ್ದರೆ ಮಿತ್ರವರ್ಗ | ಹಣವು ಇದ್ದರೆ ಬಂಧು ಬಳಗ ॥
ಹಣವು ಇದ್ದರೆ ಅವನೆ ಧೀರ | ಹಣವು ಇದ್ದರೆ ಅವನೆ ಜಾಣ ॥ ೪ ॥

ವಿದ್ಯೆ ಇರಲೇಂ ದಾನ ವಿರಲೇಂ |
ಸ್ಥೈರ್ಯವಿರಲೇಂ ಶಿಲ್ಪವಿರಲೇಂ ॥
ಕಲೆಯು ಇರಲೇಂ ಹಣವನೊಂದನೆ|
ತಿರುಪದವರೂ ಹಾಡಿ ಹೊಗಳುವರು ॥ ೫ ॥

ಹಣವಂತಗೆ ಹಗೆಯೂ ಆಗುವ ನೆಂಟ ॥
ಬಡವಗೆ ಲೋಕದಿ ಹಗೆಯಾಗುವ ನೆಂಟ ॥ ೬ ॥

ಬೆಳೆದು ನಿಂತರೆ ಧನವು ಬಹುವಾಗಿ |
ಕಾರ್ಯವೆಲ್ಲವು ಫಲಿಸಿ ಬಹುದೈ ॥
ಬೆಟ್ಟಿದಿಂದಿಳಿಬರುವ ನದಿಯಂತೆ ॥ ೭ ॥

ಅಪೂಜ್ಯರನು ಪೂಜಿಸುವರೇಕೆ?
ಅಗಮ್ಯನನು ಸೇರುವುದದೇಕೆ?
ಅವಂದ್ಯನನು ವಂದಿಸುವರೇಕೆ?
ಅದೆ ನೋಡು ಧನದ ಮಹಿಮೆ ॥ ೮ ॥

ಹೊಟ್ಟೆಗಾದರೆ ಬೆಳೆವ ವಿಂದ್ರಿಯವರ್ಗ
ವಿತ್ತವಿದ್ದರೆ ಫಲಿಸುವುವು ಕಾರ್ಯವರ್ಗ ॥
ಅದರಿಂದ ಧನವೆ ನಿಜ ಸಾಧನದ ಸ್ವರ್ಗ ॥ ೯ ॥

ಬದುಕಿ ಬಾಳುವ ಜೀವ ಹಣಕಾಗಿ |
ನಿಲ್ಲುವುದು ಮಸಣಕ್ಕು ಹೋಗಿ ॥
ಪಡೆದ ತಂದೆಗೆ ಹಣವಿಲ್ಲವಾಗೆ |
ಮಗನು ಓಡುವನು ದೂರವಾಗಿ ॥ ೧೦ ॥

ಕೈ ಕಾಲು ಉಡುಗಿರುವ ಮುದುಕ ಮುದುಕನಲ್ಲ॥
ಹಣವಿಲ್ಲದಾತುರಣ ಮುದುಕನಲ್ಲದಲ್ಲ ॥। ೧೧ ॥

ಇಂತಹ ಹಣವು ಮನುಷ್ಯನಿಗೆ ಆರು ಹಾದಿಗಳಲ್ಲಿ ದೊರೆಯುವುದು. ಭಿಕ್ಷೆಯಿಂದ, ಅರಸುಗಳನ್ನು ಸೇವಿಸುವುದರಿಂದ, ಬೇಸಾಯ ಮಾಡುವುದರಿಂದ, ವಿದ್ಯೆಯನ್ನು ಕಲಿಯುವುದರಿಂದ, ಬಡ್ಡಿಗೆ ಕೊಡುವುದರಿಂದ, ವ್ಯಾಪಾರಗಳನ್ನು ಮಾಡುವುದರಿಂದ. ಇವೆಲ್ಲದರಲ್ಲಿ ವ್ಯಾಪಾರದಿಂದ ಪೌರವವೂ ಬರುವುದು: ಹಣವೂ ಸಿಕ್ಕುವುದು ಅದರಿಂದಲೇ ಬಲ್ಲವರು ಹೀಗೆನ್ನುವರು:-

ಭಿಕ್ಷಕ್ಕೆ ಬರುವವರು ಬಹಳ ಮಂದಿ: ದೊರೆಯು ನಮಗೆ ಬೇಕಾದುದನ್ನು ಕೊಡುವುದಿಲ್ಲ. ಬಡ್ಡಿಗೆ ಕೊಟ್ಟರೆ ಇನ್ನೊಬ್ಬರ ಕೈಗೆ ಹೋದ ಗಂಟು ಹಿಂತಿರುಗುವುದು ಸಂಶಯ. ಬೇಸಾಯವು ಬಹಳ ಕಷ್ಟ. ಗುರುವನ್ನು ಸೇವಿಸಿ ವಿದ್ಯೆಯನ್ನು ಪಡೆಯುವುದು ಸುಲಭವಲ್ಲ. ಅದರಿಂದ ವ್ಯಾಪಾರವೇ ಸರಿ. ಅದರಲ್ಲಿಯೂ ಮಿಕ್ಕ ಎಲ್ಲ ವ್ಯಾಪಾರಗಳಿಗಿಂತ ಎರಡು ಮೂರರಷ್ಟು ಲಾಭವನ್ನು ಕೊಡುವ ದೇಶಾಂತರ ವ್ಯಾಪಾರವೇ ಸರಿ.”

ಹೀಗೆಂದು ಗೊತ್ತು ಮಾಡಿಕೊಂಡು, ಆ ವ್ಯಾಪಾರಿಯು ದೇಶಾಂತರ ವ್ಯಾಪಾರಕ್ಕೆ ಬೇಕಾದ ಸರಕುಗಳನ್ನೆಲ್ಲ ತಂದು ತುಂಬಿಟ್ಟು ಕೊಂಡನು. ಶುಭವಾದ ದಿನದಲ್ಲಿ ಶುಭವಾದ ಲಗ್ನದಲ್ಲಿ ಗುರು ಹಿರಿಯರ ಅಪ್ಪಣೆ ಪಡೆದು ಸರಕನ್ನು ಗಾಡಿಗಳಲ್ಲಿ ತುಂಬಿಕೊಂಡು ಹೊರಟನು. ಆತ ಕುಳಿತುಕೊಳ್ಳುವ ಗಾಡಿಗೆ ಅವರ ಮನೆಯಲ್ಲಿಯೇ ಹುಟ್ಟಿದ್ದ ಸಂಜೀವಕ ನಂದನಕ ಎಂಬ ಎರಡು ಸೊಗಸಾದ ಎತ್ತುಗಳನ್ನು ಕಟ್ಟಿದ್ದರು.

ವ್ಯಾಪಾರಿಗಳೆಲ್ಲ ಒಟ್ಟು ಸೇರಿ ಹೊರಟರು. ಅವರೆಲ್ಲರೂ ಅಷ್ಟುದಿನ ಪ್ರಯಾಣ ಮಾಡಿದ ಮೇಲೆ ದಾರಿಯಲ್ಲಿ ಒಂದು ಭಾರಿಯ ಕಾಡು ಸಿಕ್ಕಿತು. ಆ ಕಾಡು ಒಂದು ದೊಡ್ಡ ಬೆಟ್ಟದ ಮಗ್ಗುಲಲ್ಲಿತ್ತು. ಅಲ್ಲಿ ಬೆಟ್ಟದಿಂದ ಝರಝರನೆ ಇಳಿಯುವ ಹಳ್ಳಗಳು ಅಲ್ಲಲ್ಲಿ ನಿಂತು ಕೆಸರಾಗಿತ್ತು. ಅಂತಹ ಕೆಸರುಗಳನ್ನು ದಾಟುವಾಗ ಸಂಜೀವಕನೆಂಬ ಎತ್ತಿನ ಕಾಲು ಹೂತುಕೊಂಡು ಮುರಿದು ಹೋಗಿ ಬಿದ್ದು ಹೋಯಿತು.

ಸಾಹುಕಾರನು ತನ್ನ ಎತ್ತು ಹೀಗಾಯಿತಲ್ಲ ಎಂದು ಮರುಗಿ ಅಲ್ಲಿಯೇ ಎರಡು ಮೂರು ದಿನ ನಿಂತು ಆ ಎತ್ತಿಗೆ ಉಪಚಾರ ಮಾಡಿದನು. ಆದರೂ ಅದಕೆ, ಗುಣವಾಗಲಿಲ್ಲ. ಮಿಕ್ಕ ವರ್ತಕರೆಲ್ಲರೂ “ಈ ಕಾಡಿನಲ್ಲಿ ಹುಲಿ, ಚಿರತೆ, ಸಿಂಹ, ಆನೆ, ಮೊದಲಾದವು ಬೇಕಾದಹಾಗೆ ಇರುವುದು. ಅದರಿಂದ ಇಲ್ಲಿ ಇರುವುದು ಸರಿಯಲ್ಲ” ಎನ್ನಲು, ಸಾಹುಕಾರನು. ಅಹುದು ಎಂದು ಸಂಜೀವಕನ ಉಪಚಾರಕ್ಕೆ ಕೆಲವರು ಆಳುಗಳನ್ನು ಇಟ್ಟು, ಹುಲ್ಲು ಹುರುಳಿ ಬೇಕಾದ ಹಾಗೆ ಕೊಟ್ಟು, ತಾನು ಮುಂದಕ್ಕೆ ಹೊರಟನು. ಆ ಆಳುಗಳು ಒಂದು ದಿನ ಅಲ್ಲಿ ಇದ್ದು, ಕಾಡಿನಲ್ಲಿ ಇರುವುದಕ್ಕೆ ಹೆದರಿ, ಆ ಸಂಜೀವಕನನ್ನು ಅಲ್ಲಿಯೇ ಬಿಟ್ಟು ಹೊರಟು ಹೋದರು.

ಸಂಜೀವಕನು ಸಾಯಲಿಲ್ಲ. ಪಚ್ಚೆಯ ಮಣಿಯ ದಳಗಳಂತೆ ಇದ್ದ ಹಸುರಾದ ಹುಲ್ಲನು ಮೆಯ್ದು, ಬೆಟ್ಟದಿಂದ ಬರುವ ನೀರನ್ನು ಕುಡಿದು ಬದುಕಿಕೊಂಡಿತು. ಕಾಲಿನ ಮೂಳೆಯೂ ಕೂಡಿಕೊಂಡಿತು. ಎದ್ದು ಓಡಾಡುವಂತಾಯಿತು. ಅದಕ್ಕೆ ಮೈ ಬಲಿತು ಪರಮೇಶ್ವರನ ನಂದಿಯಂತೆ ಆಯಿತು. ಆ ಹಿಳಿಲೋ! ಆ ಮೈಯ್ಯೋ! ಒಂದು ಮದ್ದಾನೆಯ ಹಾಗಾಗಿ, ಓಡಾಡುವ ಬಂಡೆಯೋ ಎಂಬಂತೆ ತಿರುಗುತ್ತ, ಹುತ್ತಗಳನ್ನು ಕೊಂಬಿನಿಂದ ತಿವಿದೆಸೆಯುತ್ತಾ ಆ ಕಾಡಿಗೆ ಒಡೆಯನೋ ಎಂಬಂತೆ ಇತ್ತು. ಅದರಿಂದಲೇ ತಿಳಿದವರು ಹೇಳುವುದು.

ಕಾಯದಿದ್ದರೆ ದೈವ ಕಾವುದು | ಕಾವಲಿದ್ದರೆ ದೈವ ಕೊಲ್ವುದು |
ಕಾಡಲಿದ್ದದ ಬಾಳ ಬದುಕಲು | ಮನೆಯಲಿದ್ದವ ಮಿತ್ತು ತುತ್ತಾದ ॥೧೨॥
*****

Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...