Home / ಬಾಲ ಚಿಲುಮೆ / ಕಥೆ / ಸ್ವಯಂಕೃತಾಪರಾಧದ ಕಥೆ

ಸ್ವಯಂಕೃತಾಪರಾಧದ ಕಥೆ

ಒಂದು ನಿರ್ಜನ ಪ್ರದೇಶದಲ್ಲಿ ಒಂದು ಮಠವಿತ್ತು. ಅಲ್ಲಿ ದೇವಶರ್ಮನೆಂಬ ಸನ್ಯಾಸಿಯಿದ್ದನು. ಆತನಿಗೆ ಅನೇಕರು ದಕ್ಷಿಣೆಗಳನ್ನು ಕೊಡುವರು. ಬಟ್ಟೆಬರೆಗಳನ್ನು ಕೊಡುವರು. ಅದೆಲ್ಲವೂ ಸೇರಿ ಕೊಂಚ ಆಸ್ತಿಯಾಯಿತು. ಅದು ಬರುಬರುತ್ತ ಬೆಳೆಯಿತು. ಅದೆಲ್ಲವನ್ನೂ ಮಾರಿ ಚಿನ್ನವನ್ನು ಮಾಡಿ ಅದನ್ನು ಯಾರನ್ನೂ ನಂಬದೆ ಎಲ್ಲಿಯೂ ಇಡದೆ, ‘ಕಂಕುಳಲ್ಲಿಯೇ ಇಟ್ಟು ಕೊಂಡು ತಿರುಗುತ್ತಿದ್ದನು. ಕೇಳಿಲ್ಲವೆ?

ಹಣವನಾರ್ಜಿಸೆ ದುಃಖ | ಹಣವ ರಕ್ಷಿಸೆ ದುಃಖ ॥
ಹಣವು ದೊರೆಯಲು ದುಃಖ | ಹಣವು ಕಳೆಯಲು ದುಃಖ ॥
ಹಣದ ಜೊತೆ ಜೊತೆಯಲೇ | ದುಃಖ ಬೆರೆದಿರುವುದೈಯ ॥ ೨೯ ॥

ಆವೂರಿನಲ್ಲಿ ಆಸಾಢಭೂತಿಯೆಂಬ ಒಬ್ಬ ಕಳ್ಳನಿದ್ದನು. ಅವನಿಗೆ ಇನ್ನೊಬ್ಬರ ದುಡ್ಡನ್ನು ಹಾರಿಸುವುದೇ ಕಸಬು. ಅವನು ದೇವಶರ್ಮನ ಕಂಕುಳಲ್ಲಿದ್ದ ಗಂಟನ್ನು ಕಂಡು ಇದನ್ನು ಹಾರಿಸವುದು ಹೇಗೆ? ಎಂದು ಯೋಚಿಸಿದನು. “ಮಠಕ್ಕೆ ಕನ್ನ ಹಾಕುವುದೆಂದರೆ ಕಲ್ಲಿನ ಕಟ್ಟಡ. ಅದರಿಂದ ಸಾಧ್ಯವಿಲ್ಲ. ಗೋಡೆಗಳು ಎತ್ತರವಾಗಿರುವುದರಿಂದ ಹತ್ತಿ ಇಳಿಯುವುದಕ್ಕೆ ಆಗುವುದಿಲ್ಲ. ಅದರಿಂದ ಇವನನ್ನೇ ಒಳ್ಳೆಯ ಮಾತುಗಳಾಡಿ ವಂಚಿಸಿ ಗಂಟ ಹೊಡೆಯಬೇಕು. ಅದಕ್ಕೆ ನಾನು ಇವನ ಶಿಷ್ಯನಾಗಬೇಕು. ಆಗ ಇವನು ನನ್ನನ್ನು ನಂಬುವನು. ಕೇಳಿಲ್ಲವೆ:-

ಆಸೆಯಿಲ್ಲದವನಧಿಕಾರಿಯಲ್ಲ ॥
ಕಾಮಿಯಲ್ಲದವ ಸಿಂಗಾರವೊಲ್ಲ ॥
ಓದಿ ತಿಳಿಯದವ ಪ್ರಿಯವಕ್ತ (ಮಾತಾಡುವವನು) ನಲ್ಲ ॥
ಇದ್ದಂತೆ ನುಡಿಯೆ ವಂಚಕನೆ ಅಲ್ಲ ॥೩೦ ॥

ಹೀಗೆಂದು ನಿಶ್ಚಯಿಸಿಕೊಂಡು ದೇವಶರ್ಮನ ಬಳಿಗೆ ಹೋಗಿ “ಓಂ ನಮಶ್ಶಿವಾಯ” ಎಂದು ಸಾಸ್ಟಾಂಗವಾಗಿ ನಮಸ್ಕಾರ ಮಾಡಿ ಕೈ ಮುಗಿದುಕೊಂಡು “ಭಗವನ್‌, ನನ್ನನ್ನು ಕಾಪಾಡಬೇಕು. ಈ ಸಂಸಾರವು ಸಾರವಿಲ್ಲದ್ದು. ಯೌವನವು” ಬೆಟ್ಟದ ನದಿಯಂತೆ ಓಡುವುದು. ಹುಲ್ಲಿನ ಬೆಂಕಿಯಂತೆ ಜೀವನವು ಕ್ಷಣಿಕವು. ಶರತ್ಕಾಲದ ಮೋಡಗಳ ನೆರಳಿನಂತೆ ಭೋಗಗಳು ಅಶಾಶ್ವತವು. ಪುತ್ರ, ಮಿತ್ರ, ಕಲತ್ರ, ಭೃತ್ಯರ ಸಂಬಂಧವು ಕನಸಿನಂತೆ ಸುಳ್ಳಾದದ್ದು. ಇದನ್ನು ನಾನು ಚೆನ್ನಾಗಿ ಅರಿತಿರುವೆನು. ಆದರೂ ಇದನ್ನು ದಾಟಲಾರೆನು: ಅವರಿಂದ ಇವನ್ನು ದಾಟುವ ಉಪಾಯವನ್ನು ಹೇಳಿ ಕೊಟ್ಟು ನನ್ನನ್ನು ಕಾಪಾಡಬೇಕು” ಎಂದು ಮತ್ತೆ ನಮಸ್ಕಾರ ಮಾಡಿದನು.

ದೇವಶರ‍್ಮನು ಅದನ್ನು ಕೇಳಿ “ವತ್ಸ, ಈ ಚಿಕ್ಕ ವಯಸ್ಸಿನಲ್ಲಿಯೇ ನಿನಗೆ ಇಷ್ಟು ವೈರಾಗ್ಯ ಬಂದಿದೆಯಾಗಿ ನೀನು ಧನ್ಯನು. ವಯಸ್ಸು ಕಳೆಯುವುದಕ್ಕಿಂತ ಮುಂಚೆ ಬರುವ ವೈರಾಗ್ಯವೇ ವೈರಾಗ್ಯ. ನೀನು ಹೇಳುತ್ತಿರುವ ಈ ಷಡಕ್ಷರ ಮಂತ್ರವನ್ನು ಚೆನ್ನಾಗಿ ಅಭ್ಯಾಸ ಮಾಡು. ಈ ಓಂ ನಮಶ್ಶಿವಾಯ ಮಂತ್ರದಿಂದಲೇ ಪೂಜೆ ಮಾಡು. ನೀನು ಉದ್ದಾರವಾಗುವೆ” ಎಂದನು. “ಭಗವನ್‌, ಹಾಗಾದರೆ ನನಗೆ ದೀಕ್ಷೆಯನ್ನು ಕೊಡಬೇಕು” ಎನ್ನಲು, ದೇವಶರ್ಮನು “ಆದೀತು ಅದರೆ ನೀನು ರಾತ್ರಿಯಲ್ಲಿ ಮಠದೊಳಕ್ಕೆ ಬರಕೂಡದು. ಮಠದ ಬಾಗಿಲಲ್ಲಿ ಒಂದು ಗುಡಿಸಲು ಮಾಡಿಕೊಂಡು ಇರಬೇಕು” ಎಂದನು. ಆಷಾಢಭೂತಿಯು ಅದಕ್ಕೆ ಒಪ್ಪಲು ಆ ಸನ್ಯಾಸಿಯು ಅವನನ್ನು ಶಿಷ್ಯನನ್ನಾಗಿ ಪರಿಗ್ರಹಸಿದನು.

ಶಿಷ್ಯನು ಗುರುವಿಗೆ ಕೈಕಾಲು ಒತ್ತವುದು ಮುಂತಾದ ಕೆಲಸವನ್ನು ಮಾಡುವನು. ಆದರೂ ಗುರುವು ಯಾವಾಗಲೂ ಕಂಕುಳಿನ ಗಂಟನ್ನು ಮಾತ್ರ ಕೆಳಗಿಡನು. ಹೀಗೆಯೇ ಕೆಲವುಕಾಲ ಕಳೆಯಿತು, ಆಷಾಡಭೂತಿಗಂತೂ ಒಂದೇ ಯೋಚನೆ, “ಇವನೇನು ಮಾಡಿದರೂ ನನ್ನನ್ನು ನಂಬಲಿಲ್ಲ. ಹಗಲಿನಲ್ಲಿಯೇ ಶಸ್ತ್ರದಿಂದ ಹೊಡೆಯಲೇ, ವಿಷವನ್ನು ಕೊಡಲೇ, ತಿವಿದು ಹಾಕಲೇ? ಏನು ಮಾಡಲಿ?” ಎಂದು ಚಿಂತಿಸುತ್ತಲೇ ಇದ್ದನು.

ಅಷ್ಟರಲ್ಲಿ ಆ ಸನ್ಯಾಸಿಯ ಶಿಷ್ಯನೊಬ್ಬನು ಗುರುವನ್ನು ತಮ್ಮ ಮನೆಗೆ ಕರೆಯಲು ಬಂದನು. ಗುರುವೂ ಒಪ್ಪಿದನು. ಹೊಸ ಶಿಷ್ಯನನ್ನು ಕರೆದುಕೊಂಡು ಹೊರಟನು. ದಾರಿಯಲ್ಲಿ ಒಂದು ನದಿಯು ಸಿಕ್ಕಿತು. ಆಗ ಸನ್ಯಾಸಿಯು ಕೈ ಕಾಲು ತೊಳೆದುಕೊಳ್ಳಬೇಕೆಂದು, ತನ್ನ ಗಂಟನ್ನು ತನ್ನ ಕಾವಿಯ ಬಟ್ಟೆಗಳಲ್ಲಿ ಸುತ್ತಿ ಅದನ್ನು ಆಷಾಡ ಭೂತಿಯ ಕೈಗೆ ಕೊಟ್ಟು, “ನಾನು ಕೈಕಾಲು ತೊಳೆದುಕೊಂಡು ಬರುವವರೆಗೂ ಇದನ್ನು ಭದ್ರವಾಗಿ ಕಾಪಾಡಿಕೊಂಡಿರು” ಎಂದು ಹೇಳಿ ಹೋದನು. ಈತನು ಅತ್ತಹೋಗುತ್ತಿದ್ದ ಹಾಗೆಯೇ ಆಷಾಡ ಭೂತಿಯು ಆ ಗಂಟನ್ನು ಹೊತ್ತುಕೊಂಡು ಓಡಿದನು.

ಇತ್ತ ಸನ್ಯಾಸಿಯು ಶೌಚಕ್ಕೆ ಹೋಗಿದ್ದ ಕಡೆ ಒಂದು ಕುರಿಯ ಹಿಂಡು ಮೇಯುತ್ತಿತ್ತು. ಆ ಹಿಂಡಿನಲ್ಲಿದ್ದ ಎರಡು ಟಗರುಗಳು ಒಂದಕ್ಕೊಂದು ಹೊಡೆದಾಡಲು ಮೊದಲು ಮಾಡಿದುವು. ಅವು ಎರಡೂ ಒಂದಕ್ಕೊಂದು ಢಕ್ಕಾ ಮುಕ್ಕಿ ಹೊಡೆಯಲು ಎರಡರ ತಲೆಯೂ ಒಡೆದು ರಕ್ತವು ಸೋರುವುದು. ಆದರೂ ಆ ಟಗರುಗಳು ಬಿಡವು. ಸಮೀಪದಲ್ಲಿ ಪೊದರಿನಲ್ಲಿದ್ದ `ನರಿಯೊಂದು ಆ ಬಿಸಿ ರಕ್ತವನ್ನು ಕಂಡು ಅದನ್ನು ನೆಕ್ಕುವುದಕ್ಕೆಂದು ಓಡಿ ಬಂತು. ಆ ವೇಳೆಗೆ ಎರಡು ಟಗರುಗಳೂ ಬಂದು ಢೀ ಹೊಡೆಯಲು ಅವುಗಳ ನಡುವೆ ಸಿಕ್ಕಿ ಅದು ಸತ್ತಿತು. ಇದು ಇಷ್ಟೂ ನೋಡಿಕೊಂಡು ಈ ನರಿಯು ಸ್ವಯಂಕೃತಾಪರಾಧದಿಂದ ಎಂದರೆ ತಾನೇ ಮಾಡಿಕೊಂಡ ಪಾಪದಿಂದ ಹತವಾಯಿತು ಎಂದು ಹಿಂತಿರುಗಿ ಬಂದರೆ ಆಷಾಡಭೂತಿಯು ಇರಲಿಲ್ಲ. ಏನೋ ಆಗಿರಬೇಕೆಂದು ಸಂದೇಹಪಟ್ಟು ಬೇಗ ಕೆ ಕೈಕಾಲು ತೊಳೆದುಕೊಂಡು ಎಷ್ಟು ಹುಡುಕಿದರೂ ಆಷಾಡಭೂತಿಯು ಸಿಕ್ಕಲಿಲ್ಲ. ಆಗ ಹಣೆಹಣೆಯನ್ನು ಚಚ್ಚಿ ಕೊಂಡು ಈ ನರಿಯಂತೆ ನಾನೂ ಸ್ವಯಂಕೃತಾಪರಾಧದಿಂದಲೇ ಮೋಸಹೋದೆನು ಎಂದು ಅತ್ತನು. ಹಾಗೆಯೇ ನಾನು ಈಗ ಸ್ವಯಂಕೃತಾಪರಾಧದಿಂದಲೇ ಈ ದಿಶೆಗೆ ಬಂದೆನು.”

ಕರಟಕನು ಕೇಳಿದನು: “ಆಯಿತು. ಈ ಸಂಕಟದಲ್ಲಿ ನಮ್ಮ ಗತಿಯೇನು? ನಾವೇನು ಮಾಡಬೇಕು?”

ದಮ:- “ಇಂತಹ ಸಂಕಟದಲ್ಲೂ ನನ್ನ ಬುದ್ಧಿಯು ಮೊಂಕಾಗಿಲ್ಲ. ನೋಡು ನನ್ನ ಬುದ್ಧಿಯನ್ನು. ಈ ಸಂಜೀವಕನನ್ನು ಪಿಂಗಲಕನಿಂದ ಅಗಲಿಸುವೆನು. ಕೇಳಿಲ್ಲವೆ? ಬಿಲ್ಲೆಸದ ಬಾಣ ಕೊಲ್ಲುವುದೊ ಇಲ್ಲವೋ ಹೇಳಲಾಗುವುದಿಲ್ಲ, ಆದರೆ ಬುದ್ಧಿಯಿಂದ ಹೊಡೆಯಲು ದೇಶವು ನಾಯಕನೊಡನೆಧ್ವಂಸವಾಗಿ ಹೋಗುವುದು. ಅದರಿಂದ ನಾನು ಮಾಯೆಯನ್ನು ಹೂಡುವೆನು. ಗುಟ್ಟಾಗಿ ಈ ಇಬ್ಬರನ್ನೂ ಒಡೆಯುವೆನು. “ಆಯಿತು ನಿನ್ನ ಮಾಯಾ ಪ್ರಪಂಚವು ಪಿಂಗಲಕನಿಗೋ ಸಂಜೀವಕನಿಗೋ ತಿಳಿದರೆ ಕೇಡು ತಪ್ಪದು,”

“ಅಣ್ಣ, ನಿನಗೇಕೆ ಸಂದೇಹ? ಬುದ್ಧಿವಂತರು ಆಪತ್ಕಾಲದಲ್ಲಿ ಬುದ್ಧಿಯನ್ನು ಉಪಯೋಗಿಸಬೇಕು. ಪ್ರಯತ್ನ ಮಾಡದಿರುವುದೆ? ಒಂದಾನೊಂದು ಕಾಲದಲ್ಲಿಯಾದರೂ ಬುದ್ಧಿಯು ಘಣಾಕ್ಷರ ನ್ಯಾಯದಿಂದ (ನೀರಿನಲ್ಲಿ ತಳದಲ್ಲಿಯೇ ತಿರುಗುವ ಹುಳು ವುಂಟು, ಅದು ತಿರುಗುವಾಗ ನೆಲದ ಮೇಲೆ ಕಡ್ಡಿಯಿಂದ ಗೆರೆಯೆಳೆದಂತಾಗುವುದು. ಒಂದೊಂದು ವೇಳೆ ಆ ಗೆರೆಗಳು ಅಕ್ಷರದಂತೆ ಕಾಣಿಸುವುನು. ಅದು ಘಣಾಕ್ಷರ. ಅದರಂತೆ ಎಂಬರ್ತದಲ್ಲಿ ನ್ಯಾಯ.), ಎಲ್ಲರಿಗಿಂತ ಮೇಲಾಗಿ ಸಾಮ್ರಾಜ್ಯವನ್ನು ಪಡೆಯುವುದು. ದೈವವು ವಿಮುಖವಾಗಿ (ಎಂದರೆ ಬೇರೆ ಕಡೆಗೆ ತಿರುಗಿಕೊಂಡು) ಇದ್ದರೂ ಧೈರ್ಯವನ್ನು ಬಿಡಬಾರದು. ಧೈರ್ಯವೇ ಒಂದೊಂದು ವೇಳೆ ಬದುಕಿಸುವುದು. ಸಮುದ್ರ ಮಧ್ಯದಲ್ಲಿ ಹಡಗು ಒಡೆದು ಹೋದಾಗ, ಯಾತ್ರಿಕನಿಗೆ ಧೈರ್ಯವಾದರೂ ಇದ್ದರೆ ಏನಾದರೂ ಮಾಡಿ ಬದುಕಬಹುದು. ಅದರಂತೆ, ಈಗ ನಾನು ಅವರಿಬ್ಬರಿಗೂ ಅರ್ಥವಾಗದಂತೆ, ಇಬ್ಬರಿಗೂ ಜಗಳ ತಂದಿಡುವೆನು.”

“ನೀನು ಹೇಳುವಂತೆಯೇ ನೀನು ಮಾಡಬಲ್ಲೆ ಎಂಬ ನಂಬಿಕೆಯು ನನಗಿದ್ದರೂ, ದಮನಕ, ನನಗೆ ಏಕೋ ದೊಡ್ಡ ದಿಗಿಲಾಗುತ್ತಿರುವುದು. ಏಕೆ ಎನ್ನುವಿಯಾ? ನೋಡು, ಸಂಜೀವಕನು ಬುದ್ಧಿವಂತನು. ಪಿಂಗಲಕನು ಭಯಂಕರನು ನೀನು ಬುದ್ಧಿ ವಂತನೇ ಆಗಿದ್ದರೂ ಅವರಿಬ್ಬರನ್ನೂ ನಿಜವಾಗಿ ಒಡೆಯಬಲ್ಲೆಯಾ ಎಂದು ನನಗೆ ಸಂದೇಹವಾಗುತ್ತಿರುವುದು.

“ಅಣ್ಣ, ನಾನು ಒಡೆಯಬಲ್ಲೆನು. ಉಪಾಯದಿಂದ ಸಾಧ್ಯವಾದುದು ಪರಾಕ್ರಮದಿಂದ ಸಾಧ್ಯವಾಗದು. ಕಾಗೆಯು ಚಿನ್ನದ ಸರದಿಂದ ಹಾವನ್ನು ಕೊಲ್ಲಲಿಲ್ಲವೆ?”
“ಅದು ಹೇಗೆ?”
“ಕೇಳು”
*****
ಕಾಗೆಯು ಹಾವನ್ನು ಕೊಂದ ಕಥೆ ಓದಿ

Tagged:

Leave a Reply

Your email address will not be published. Required fields are marked *

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...