ನನ್ನ ಪ್ರೇಮದ ರಂಗಿ,
ನೀನು ಬಾಡದ ಹೂವು;
ನಿನ್ನ ಹಾಸದ ಭಂಗಿ-
ಯಿಂದ ನಿಲುವುದು ನೋವು.
ಹತ್ತು ವರುಷದ ಹಿಂದೆ
ನಾ ನಿನ್ನ ಕೈ ಹಿಡಿದೆ;
ಅಂದಿನಿಂದಲು ಇಂದೆ
ಪ್ರೇಮರಸವನೆ ಕುಡಿದೆ.
ನನಗೆ ನಿನ್ನದೆ ಹುಚ್ಚು
ದಿನದಿನಕ್ಕೆ ಹೆಚ್ಚುವುದು,
ಕಮಲದಂತೆಯೆ ಮೆಚ್ಚು
ಅರಳರಳಿ ಮುಚ್ಚುವುದು.
ಮುಚ್ಚಿ ಅರಳಲು, ಮತ್ತೆ
ಹೆಚ್ಚು ತಿಳಿತಿಳಿಯಾಯ್ತು,
ಝರಿ ಹರಿದು ತುಸು ಬತ್ತೆ
ಇದ್ದ ಮಲಿನವು ಹೋಯ್ತು.
ನಾವಿಬ್ಬರೂ ಜೋಡಿ
ಪಾರಿವಾಳದ ಜಾತಿ,
ಖಗದಂಪತಿಯ ನೋಡಿ
ನಾವು ಕಲಿತೆವು ಪ್ರೀತಿ
ನನ್ನ ಒಲುಮೆಯು ರೆಕ್ಕೆ
ನೀನು ಹಾರುವದಕ್ಕೆ;
ಹಾರಾಡಿ ನೀ ನಕ್ಕೆ
ಹೃದಯಗಗನದಿ ಚುಕ್ಕೆ.
ಪ್ರೇಮವೊಂದೇ ಜಗದ
ಮೂಲ ತತ್ವದ ನೀತಿ
ನನ್ನ ರಂಗಿಯ ಮೊಗದ
ಮಂದಹಾಸದ ರೀತಿ.
ನನ್ನ ಪ್ರೇಮದ ರಂಗಿ,
ನೀನು ಬಾಡದ ಹೂವು,
ನಿನ್ನ ಹಾಸದ ಭಂಗಿ-
ಯಿಂದ ನಿಲುವುದು ನೋವು.
*****









