Home / ಬಾಲ ಚಿಲುಮೆ / ಕಥೆ / ಹೇನು ಜೀವ ತೆತ್ತ ಕಥೆ

ಹೇನು ಜೀವ ತೆತ್ತ ಕಥೆ

ಒಬ್ಬಾನೊಬ್ಬ ಅರಸನಿಗೆ ಮನೋಹರವಾದ ಮಲಗುವ ಮನೆಯೊಂದಿರುವುದು. ಅಲ್ಲಿ ಸೋರೆಯ ಹೂವಿನ ಹಾಗೆ ಬೆಳ್ಳಗಿರುವ ಮೃದುವಾದ ದುಪಟಗಳನ್ನು ಹಾಸಿರುವ ಒಂದು ಹಾಸುಗೆಯಲ್ಲಿ ಮಂದವಿಸರ್ಪಿಣಿಯೆಂಬ ಕೂರೆಯೊಂದು ಸೇರಿಕೊಂಡಿರುವುದು. ಆ ಕೂರೆಯು ಆ ಅರಸನ ರಕ್ತವನ್ನು ಕುಡಿದುಕೊಂಡು ಸುಖವಾಗಿ ಬಾಳಿಕೊಂಡಿತ್ತು.

ಅಗ್ನಿಮುಖನೆಂಬ ತಿಗುಣೆಯು ಎಲ್ಲೆಲ್ಲಿಯೂ ತಿರುಗಿ ಕೊಂಡು, ಅಲ್ಲಿಗೆ ಬಂತು. ಅದನ್ನು ಕಂಡು ಕೂರೆಯು “ಅಯ್ಯಾ, ನೀನೇಕೆ ಇಲ್ಲಿಗೆ ಬಂದೆ? ಯಾರಾದರೂ ಕಾಣುವುದಕ್ಕೆ ಮುಂಚೆಯೇ ಹೊರಟು ಹೋಗು.” ಎಂದು ಹೇಳಿತು. ಅದಕ್ಕೆ‌ ಆ ತಿಗುಣೆಯು ಅಮ್ಮಾ, ಮನೆಗೆ ಬಂದವನು ಅಯೋಗ್ಯನಾದರೂ ಹೀಗೆ ಹೇಳಬಾರದು. ಯಾರೇ ಬಂದರೂ ಗೌರವಿಸುವುದು ಗೃಹಸ್ಥರ ಧರ್ಮವು. ಜೊತೆಗೆ ನಾನು ಇದುವರೆಗೆ ಅನೇಕ ಮನುಷ್ಯರ ಅನೇಕಾನೇಕ ವಿಧವಾದ ರಕ್ತಗಳನ್ನು ರುಚಿ ನೋಡಿರುವೆನು. ಶುದ್ಧವಾದ ಆಹಾರವಿಲ್ಲದೆ ಅವರ ರಕ್ತಗಳು ಖಾರ, ಕಹಿ, ಒಗರು, ಹುಳಿಯಾಗಿದ್ದುವು. ಇದುವರೆಗೆ ನಾನು ಯಾವಾಗಲೂ ಸಿಹಿ ರಕ್ತವನ್ನು ಕುಡಿದೇ ಇಲ್ಲ. ನೀನು ದೊಡ್ಡ ಮನಸ್ಸುಮಾಡಿ ಆಗಬಹುದು ಎಂದರೆ ನಾನಾವಿಧವಾದ ತಿಂಡಿ ತೀರ್ಥಗಳಿಂದ ಪುಷ್ಟನಾಗಿರುವ ಈ ನರಪ =ತಿಯ ದೇಹದಲ್ಲಿರುವ ಮಧುರ ರಕ್ತವನ್ನು ಒಂದಷ್ಟು ಕುಡಿದು ಸೌಖ್ಯ ಪಡುವೆನು. ಎಲ್ಲರೂ ಬದುಕಿರುವುದೇ ಒಂದು ಭೋಜನ ಸೌಖ್ಯಕ್ಕಾಗಿ.

ಸುಳ್ಳು ಹೇಳುವದೇಕೆ? ಕೆಟ್ಟವರ ಸೇವಿಪರದೇಕೆ?
ತನ್ನೂರ ಬಿಡಲೇಕೆ? ಎಲ್ಲವೂ ಉದರಾರ‍್ಥವಲ್ತೇ ॥ ೩೬ ॥

ನಾನು ಈಗ ಅತಿಥಿಯಾಗಿ ಮನೆಗೆ ಬಂದಿರುವೆನು. ನನಗೋ ಹಸಿವು ತಾನೇ ತಾನಾಗಿ ಪೀಡಿಸುವಷ್ಟು ಬಲವಾರುಗಿವುದು. ನೀನು ನನಗೆ ಊಟಕ್ಕಿಡಲೇಬೇಕು. ಅಲ್ಲದೆ ನೀನೊಬ್ಬಳೇ ಅರಸನ ರಕ್ತವನ್ನು ಭೋಜನ ಮಾಡುವುದು ನ್ಯಾಯವೆ?” ಎಂದು ಅನೇಕವಾಗಿ ಹೇಲಿಕೊಂಡಿತು. ಅದನ್ನು ಕೇಳಿ ಮಂದವಿಸರ್ಪಿಣಿಯು “ಎಲೈ ತಿಗುಣೆಯೆ, ನಾನು ಈ ಅರಸನಿಗೆ ಚೆನ್ನಾಗಿ ನಿದ್ದೆ ಹತ್ತುವವರೆಗೂ ಸುಮ್ಮನಿದ್ದು ಅನಂತರ ಲೂಟಿ ಮಾಡುವೆನು. “ನೀನು ಮೊದಲೇ ನಿನ್ನ ಹೆಸರಿಗೆ ತಕ್ಕಂತೆ ಅಗ್ನಿಮುಖನು. ಅಲ್ಲದೆ ಅಷ್ಟುಹೊತ್ತು ಕಾಯುವವನಲ್ಲ. ಆದರೂ ನೀನೂ ನನ್ನಂತೆ ಕಾಯುವೆಯಾದರೆ ಇರು.” ಎಂದಿತು. ತಿಗಣೆಯು “ಹಾಗೇ ಆಗಲಿ, ನಿನಗಿಂತ ಮುಂಚೆ ಅರಸನನ್ನು ಕಚ್ಚಿದರೆ ದೇವರಾಣೆ” ಎಂದು ಆಣೆಯನ್ನು ಇಟ್ಟು ಕೊಂಡಿತು.

ಇವೆರಡೂ ಹೀಗೆ ಮಾತುಗಳನ್ನು ಆಡುತ್ತಿರುವಾಗಲೇ ಅರಸು ಬಂದು ಹಾಸುಗೆಯನ್ನು ಸೇರಿದನು. ಆ ತಿಗುಣೆಗೆ ನಾಲಗೆಯ ಚಪಲವು ತಾನೇ ತಾನಾಗಿ, ಆಣೆಯನ್ನು ಮರೆತು, ನಿದ್ದೆ ಹಿಡಿಯುವುದಕ್ಕೆ ಮುಂಚೆಯೇ ಅರಸನನ್ನು ಕಚ್ಚಿಬಿಟ್ಟಿತು. ಹಿರಿಯರ ಮಾತು ಸುಳ್ಳಾದೀತೆ?

ಉಪದೇಶದಿಂ ಸ್ವಭಾವವನು ತಿದ್ದುವುದು ಅರಿದು (ಅಸಾಧ್ಯವು) ॥
ಚೆನ್ನಾಗಿ ಕುದಿಸಿದರು ನೀರು ತಣ್ಣಗಾಗುವುದು ॥ ೩೭ ॥
ಬೆಂಕಿ ತಣ್ಣಗಾದೀತು | ಚಂದ್ರಿಕೆಯು ಸುಟ್ಟೀತು ॥
ಮಾನವ ಸ್ವಭಾವವದು | ಏಗೈದು (ಏನೇ ಮಾಡಿದರು) ತಿದ್ದಲರಿದು ॥ ೩೮ ॥

ಆಗ ಆ ಅರಸನು ಸೂಚಿಯಿಂದ ತಿವಿಸಿಕೊಂಡವನಂತೆ ಥಟ್ಟನೆ ಹಾಸುಗೆಯಿಂದ ಎದ್ದನು. ಆಳುಗಳನ್ನು ಕರೆದು ಈ ದುಪ್ಪಟಯಲ್ಲಿ ಏನೋ ಸೇರಿಕೊಂಡಿದೆ ನೋಡಿ” ಎಂದನು. ಅಷ್ಟರೊಳಗಾಗಿ ತಿಗುಣೆಯು ಮಂಚದಲ್ಲಿ ಎಲ್ಲಿಯೋ ಸೇರಿಕೊಂಡಿತು. ಆಳುಗಳು ಬಂದು ದುಪ್ಪಟಿಯನ್ನು ತೆಗೆದುಕೊಂಡು ಚೆನ್ನಾಗಿ ಹುಡುಕಿ ಅಲ್ಲಿದ್ದ ಕೂರೆಯನ್ನು ಕೊಂದರು. ಹಾಗಾಗಬಾರದು. ಅದರಿಂದ ತಾವು ಸಂಜೀವಕನನ್ನು ಕೊಲ್ಲಬೇಕು. ಇಲ್ಲದಿದ್ದರೆ ಸಂಜೀವಕನಿಗೆ ತಾವು ಬಲಿಯಾಗಬೇಕು.”

ಅದನ್ನು ಕೇಳಿ ಪಿಂಗಲಕನು ಹೇಳಿದನು:- ದಮನಕ, ನೀನು ಹೇಳುವಂತೆ, ಸಂಜೀವಕನು ನನ್ನ ಮೇಲೆ ಬೀಳಬೇಕು ಎಂದಿರುವನು ಎಂಬುದಕ್ಕೆ ಸಾಕ್ಷಿಯೇನು?”

ದಮನಕನು ಹೇಳಿತು: “ನಾನೇ ಸಾಕ್ಷಿ, ನನ್ನ ಎದುರಾಗಿ ನಾಳೆಬೆಳಿಗ್ಗೆ ಪಿಂಗಲಕನನ್ನು ಕೊಲ್ಲುವೆನು ಎಂದು ಪ್ರತಿಜ್ಞೆ ಮಾಡಿತು. ಇನ್ನೂ ಸಾಕ್ಷಿಯು ಬೇಕೆಂದರೆ, ನಾಳೆ ಬೆಳಿಗ್ಗೆ ತಮ್ಮನ್ನು ಕಾಣುವುದಕ್ಕೆ ಬರುವಾಗ ಅದರ ಕಣ್ಣು ಮೊಕಗಳು ಕೆಂಪಾಗಿರುವುವು: ತುಟಿಗಳು ನಡುಗುತ್ತಿರುವುವು. ದಿನವೂ ಕುಳಿತುಕೊಳ್ಳುವ ಸ್ಥಾನದಲ್ಲಿ ಕುಳಿತುಕೊಳ್ಳುವುದಿಲ್ಲ. ತಮ್ಮನ್ನು ಕ್ರೂರ ದೃಷ್ಟಿಯಿಂದ ನೋಡುವುದು. ಇದೆಲ್ಲವನ್ನು ನೋಡಿಯಾದರೂ ಮುಂದೆ ಮಾಡಬೇಕಾದುದನ್ನು ಮಾಡಿ”

ಹೀಗೆಂದು ಹೇಳಿ ಪಿಂಗಳಕನನ್ನು ಒಪ್ಪಿಸಿ, ಅಲ್ಲಿಂದ ದಮನಕನು ಸಂಜೀವಕನ ಬಳಿಗೆ ಬಂದು ನಮಸ್ಕಾರ ಮಾಡಿತು. ಸಂಜೀವಕನು ಬಾಡಿದ ಮುಖ ಮಾಡಿಕೊಂಡು, ಮೆಲ್ಲ ಮೆಲ್ಲಗೆ ಬಂದ ಆ ದಮನಕನನ್ನು ಕಂಡು “ಮಿತ್ರ, ಬಾ. ನಿನ್ನನ್ನು ನೋಡಿ ಬಹು ಕಾಲವಾಯಿತು. ಚೆನ್ನಾಗಿರುವೆಯಾ? ಏನಾದರೂ ಆಗಬೇಕಾದ ಕಾರ್ಯವಿದೆಯೇ ಹೇಳು. ಮಾಡುವೆನು” ಎಂದಿತು.

ದಮನಕನು “ಮಿತ್ರ, ಸೇವಕರಾದವರಿಗೆ ಚೆನ್ನೇನು? ಚಾರೇನು? ಅವರ ಸಂಪತ್ತುಗಳು. ಪರಾಧೀನಗಳು. ಚಿತ್ತವು ಯಾವಾಗಲೂ ಕುದಿಯುತ್ತಿರುವುದು. ಜೀವನದಲ್ಲೂ ಅವರಿಗೆ ಬೇಸರವು. ಇದು ರಾಜಸೇವಕರ ಬಾಳು. ಅಲ್ಲದೆ ನೋಡು. ಒಂದಿಷ್ಟು ಧನಕ್ಕಾಗಿ ಸೇವೆಯನ್ನು ಒಪ್ಪಿಕೊಂಡು, ತಮ್ಮ ಶರೀರವನ್ನೇ ಮಾರಿಕೊಳ್ಳುವ ಈ ಮೂಢರನ್ನು ಕುರಿತು ಏನು ಹೇಳಲಿ

ಬದುಕಿಯುಂ ಸತ್ತವರು ಐವರೆಂ ದೊರೆವುದಾಭಾರತವು ॥
ವ್ಯಾಧಿತನು, ದರಿದ್ರನು, ಮೂರ‍್ಖನೂರ ಬಿಟ್ಟವ, ನಿತ್ಯ ಸೇವಕನು ॥೩೯॥

ಸೇವೆಯೆಂಬುದು ನಾಯಿ ಪಾಡೆಂಬ ನುಡಿಯು ನಿಜವಲ್ಲ ॥
ನಾಯಿ ತಿರುಗಿದರೆ ತನ್ಪಿಚ್ಛೆ ಬಂದಂತೆ ಸೇವಕನು ॥
ತಿರುಗಬೇಕೈಯ ತನ್ನೊಡೆಯ ನಿಚ್ಛೆಯಾದಂತೆ ॥ ೪೦ ॥

ಅಷ್ಟೇನು? ಹಸನಾಗಿ ಮಾಡಿದ ಕರಿಗಡುಬೂ ಅವನಿಗೆ ರುಚಿಸುವುದೇನು?”

ಸಂಜೀವಕನು ಕೇಳಿದನು:- “ಆಯಿತು, ಏನು ಹೇಳ ಬೇಕೆಂದಿರುವೆ?”

ದಮನಕನು ಹೇಳಿದನು:- “ಮಿತ್ರ, ಮಂತ್ರಿಗಳಾದವರು ಅರಸರ ರಹಸ್ಯವನ್ನು ಭೇದಿಸಬಾರದು. ಆದರೂ ನಾನು ನಿನ್ನ ಮೇಲಿನ ವಿಶ್ವಾಸದಿಂದ ರಹಸ್ಯವನ್ನೂ ಭೇದಿಸಬೇಕಾಗಿ ಬಂತು. ನೀನು ನನ್ನ ಮಾತಿನ ಮೇಲೆ ಅರಸನ ಬಳಿಗೆ ಬಂದವನು. ಯಾವ ನನ್ನಾದನೂ ಒಬ್ಬನನ್ನು ನಂಬಿ ಒಬ್ಬನು ಸತ್ತರೆ, ಆ ಹತ್ಯವು ಆ ನಂಬಿಕೆ ಕೊಟ್ಟವನಿಗೆ ಬರುವುದು ಎಂದು ಮನುವು ಹೇಳಿರುವನು. ಈಗ ಪಿಂಗಲಕನು ನಿನ್ನ ಮೇಲೆ ದ್ರೋಹವನ್ನು ಎಣಿಸಿರುವನು. ಇಂದು ನನ್ನ ಎದುರಾಗಿಯೇ “ನಾಳೆ ಬೆಳಿಗ್ಗೆ ಸಂಜೀವಕನನ್ನು ಸಿಗಿದು ಪರಿವಾರದವರಿಗೆಲ್ಲ ಹಾಕುವೆನು” ಎಂದು ಇನ್ನೊಬ್ಬರೊಡನೆ ಹೇಳುತ್ತಿದ್ದನು. ಆಗ ನಾನು “ಸ್ವಾಮಿ, ಇದು ಯುಕ್ತವಲ್ಲ, ಮಿತ್ರ ದ್ರೋಹ ಮಾಡಬಾರದು” ಎಂದು ಹೇಳಲು, ಕೋಪದಿಂದ, ದುಷ್ಟ, ಸಂಜೀವಕನು ಸಸ್ಯಾಹಾರಿ, ನಾವು ಮಾಂಸಾಹಾರಿಗಳು, ನಮನಮಗೆ ವೈರವು ಹುಟ್ಟುತ್ತಲೇ ಬಂದಿರುವುದು. ಶತ್ರುವನ್ನು ಹೇಗೆ ಕೊಂದರೂ ದೋಷವಿಲ್ಲ. ಸಾಮಾದಿ ಉಪಾಯಗಳು ಹುಟ್ಟಿರುವುದೆಲ್ಲ ಶತ್ರುವನ್ನು ಕೊಲ್ಲುವುದಕ್ಕೆ ತಾನೇ? ಕ್ಷತ್ರಿಯನು ಕೃತ್ಯ, ಅಕೃತ್ಯ ಎಂದು ಯೋಚಿಸುತ್ತ ಕುಳಿತಿರುವುದೇ? ಕರ್ಮದಿಂದ ಕ್ಷತ್ರಿಯನಾದ ದ್ರೋಣಪುತ್ರನ್ನು (ಅಶ್ವತ್ಥಾಮನು) ದೃಷ್ಟದ್ಯುಮ್ನನು ಮಲಗಿರುವಾಗಲೇ ಕೊಂದುದನ್ನು ಕೇಳಿಲ್ಲವೆ?” ಎಂದನು. ನಾನೂ ಆ ನಿಶ್ಚಯವನ್ನು ಕೇಳಿ, ಅಲ್ಲಿಂದ ಇಲ್ಲಿಗೆ ಬಂದೆನು. ನನಗೆ ಬರುತ್ತಿದ್ದ ವಿಶ್ವಾಸಘಾತಕ ದೋಷವು ತಪ್ಪಿತು. ರಹಸ್ಯವನ್ನು ನಿನಗೆ ಹೇಳಿರುವೆನು. ಇನ್ನು ನಿನಗೆ ತೋರಿದಂತೆ ಮಾಡು.”

ಆ ಮಾತನ್ನು ಕೇಳಿ ಸಂಜೀವಕನಿಗೆ ತಲೆಯ ಮೇಲೆ ಸಿಡಿಲು ಬಿದ್ದಂತಾಯಿತು: ಎಚ್ಚರ ತಪ್ಪಿತು. ಒಂದು ಗಳಿಗೆಯಾದ ಮೇಲೆ ಪ್ರಜ್ಞೆ ಬಂತು. ವೈರಾಗ್ಯದಿಂದ, “ಇಷ್ಟೇ ತಾನೇ? ಹಿರಿಯರು ಹೇಳಿಯೇ ಇದ್ದಾರೆ:–

ನೀಚಂಗೊಲಿವಳು ನಾರಿ | ಸ್ನೇಹವ ಕಾಣನು ಅರಸು ॥
ಕೃಪಣಗೆ ಧನ ಸೇರುವುದು | ಬೆಟ್ಟದೆ ಮಳೆಗರೆಯುವುದು ॥ ೪೧ ॥
ಅರಸಗೆ ಸಂಮತ ತಾನೆಂದು | ತಿಳಿದವ ನಿಜದಿಂ ದುರ್ಬುದ್ಧಿ ॥ ೪೨ ॥
ವನದೊಳಿರುವುದುಲೇಸು | ತಿರಿದು ತಿಂಬುದು ಲೇಸು ॥
ರೋಗ ಹಿಡಿವುದು ಲೇಸು | ಮೂಟೆ ಹೊರುವುದು ಲೇಸು ॥
ಭೂಪತಿಯನಾಶ್ರಯಿಸಿ | ಬಾಳುವುದಕ್ಕಿಂತ ॥ ೪೩ ॥

ನಾನು ಈ ಸಿಂಹದೊಡನೆ ಸ್ನೇಹ ಮಾಡಿದುದೇ ತಪ್ಪು.
ಧನದಲ್ಲಿ ಕುಲದಲ್ಲಿ ಸಮರು ಸಮರಾಗಿರಲು ॥
ಪರಿಣಯವು ಗೆಳೆತನವು ಶೋಭಿಪುದು, ಅವರಲ್ಲಿ ॥ ೪೪ ॥

ಸಮಾನ ಶೀಲ ವ್ಯಸನರಲ್ಲಿ ಮಾತ್ರ. ಸಖ್ಯ (ಶೀಲವೆಂದರೆ ನಡತೆ, ವ್ಯಸನವೆಂದರೆ ಸಾಧಿಸಬೇಕು ಎಂದಿರುವುದು ಇವೆರಡೂ ಯಾರು ಯಾರಿಗೆ ಸಮವಾಗಿದೆಯೋ ಅವರವರಿಗೇ ಸಖ್ಯವು ಎಂದರೆ ಸ್ನೇಹವು.) ಎಂಬುದನ್ನು ನಾನು ಮರೆತೆನು. ಈಗ ಹೋಗಿ ಆ ಸಿಂಹನನ್ನು ಒಲಿಸಿಕೊಳ್ಳುವುದು ಎಂಬುದೂ ಸರಿಯಲ್ಲ. ನಾನು ಕೇಳಿಕೊಂಡರೆ ತಾನೇ ಅದು ಒಲಿಯುವುದೇನು? ಕಾರಣವಿಲ್ಲದೆ ಕೋಪ ಮಾಡಿಕೊಂಡವರನ್ನು ಒಲಿಸಿಕೊಳ್ಳುವುದು ಹೇಗೆ? ಸರಿ, ಅರಸನು ನನ್ನ ಮೇಲೆ ಹೆಚ್ಚಾಗಿ ವಿಶ್ವಾಸ ಮಾಡುತ್ತಿದ್ದಾನೆಂದು ಇನ್ನು ಉಳಿದವರು ಚಾಡಿ ಹೇಳಿರಬೇಕು. ಅದರಿಂದ ನಿರ‍್ದೋಷಿಯಾದ‌ ನನ್ನಲ್ಲಿ ಆತನು ಹೀಗೆ ಕೋಪಗೊಂಡಿರುವನು. ಅದರಲ್ಲಿ ಆಶ್ಚರ್ಯವೇನು?”

ದಮನಕನು ಮತ್ತೆ ಹೇಳಿದನು:- “ಮಿತ್ರ, ಹೀಗೆ ಆಗಿದ್ದರೂ ನಿನಗೆ ಭಯವಿಲ್ಲ. ದುಷ್ಟರ ಮಾತಿನಿಂದ ಅರಸನು ಕೋಪ ಗೊಂಡಿದ್ದರೂ ನಿನ್ನ ಮಾತುಗಳನ್ನು ಕೇಳಿದರೆ ಮತ್ತೆ ಪ್ರಸನ್ನನಾಗುವನು.”

“ಮಿತ್ರ, ನೀನು ಹೇಳುವುದು ಸರಿಯಲ್ಲ. ದುರ‍್ಜನರು ದುರ‍್ಬಲರೇ ಆಗಿದ್ದರೂ ಅವರೊಡನೆ ವಾಸಮಾಡುವುದು ಯೋಗ್ಯವಲ್ಲ. ಏನಾದರೂ ಉಪಾಯಮಾಡಿ ಅವರು ಕೊಂದೇ ಕೊಲ್ಲುವರು. ಕಾಕಾದಿಗಳು ಒಂಟೆಯನ್ನು ಕೊಲ್ಲಲಿಲ್ಲವೆ? ಹಾಗಾಗುವುದು.”

ದಮನಕನು ಅದೆಂತು ಎಂದು ಕೇಳಲು ಸಂಜೀವಕನು ಹೇಳಿದನು: –
*****
ನಂಬಿ ಕೆಟ್ಟ ಒಂಟೆಯ ಕಥೆ ಓದಿ

Tagged:

Leave a Reply

Your email address will not be published. Required fields are marked *

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...