ಒಂದು ಕಾಡಿನಲ್ಲಿ ಒಂದಾನೊಂದು ಸರೋವರವಿರುವುದು. ಅಲ್ಲಿ ಅನೇಕ ಜಾತಿಯ ಮೀನುಗಳುಂಟು. ಅದೇ ಸರೋವರದಲ್ಲಿ ಒಂದು ಕೊಕ್ಕರೆಯು ಮನೆ ಮಾಡಿಕೊಂಡಿರುವುದು. ಅದಕ್ಕೆ ಮುಪ್ಪು ಬಂತು. ಮೀನು ಹಿಡಿಯುವುದಕ್ಕೂ ಕೈಯಲ್ಲಾಗದು ಎನ್ನಿಸಿತು. ಆಗ ಆ ಸರಸ್ಸಿನ ತೀರದಲ್ಲಿ ಕಣ್ಣೀರು ಸುರಿಸಿಕೊಂಡು ದೊಡ್ಡದಾಗಿ ಅಳುತ್ತ ನಿಂತುಕೊಂಡಿತು. ಆಗ ಆ ಸರಸ್ಸಿನಲ್ಲಿದ್ದ ಏಡಿಯೊಂದು ಅಲ್ಲಿಗೆ ಬಂದು “ಮಾವ, ಇದೇನಿದು? ಊಟದ ಯೋಚನೆಯನ್ನೇ ಬಿಟ್ಟು ಅಳುತ್ತ ನಿಂತಿರುವೆಯಲ್ಲ?” ಎಂದು ಕೇಳಿತು.
ಕೊಕ್ಕರೆಯು, “ಅಪ್ಪಾ, ಏನು ಹೇಳಲಿ? ನಾನು ಇನ್ನು ಮೇಲೆ ಮೀನು ತಿನ್ನುವುದಿಲ್ಲ ನಾನು ಉಪವಾಸ ಮಾಡಿ ಪ್ರಾಣ ಬಿಡಬೇಕು ಎಂದು ಗೊತ್ತು ಮಾಡಿಕೊಂಡಿರುವೆನು” ಎಂದಿತು. ಏಡಿಗೆ ಆಶ್ಚರ್ಯವಾಗಿ ಮಾವ, ಇದೇನು ಇಂತಹ ವೈರಾಗ್ಯಕ್ಕೆ ಕಾರಣವೇನು?” ಎಂದು ಕೇಳಿತು. ಕೊಕ್ಕರೆಯು, “ಮಗು, ನಾನು ಇದೇ ಸರಸ್ಸಿನಲ್ಲಿ ಹುಟ್ಟಿ ಬೆಳೆದವನು. ಹನ್ನೆರಡು ವರ್ಷದ ಅನಾವೃಷ್ಟಿ, (ವೃಷ್ಟಿ = ಮಳೆ. ಅದಿಲ್ಲದೆ ಹೋಗುವುದು ಅನಾವೃಷ್ಟಿ.) ಯೋಗವು ಬಂದಿರುವುದಂತೆ!” ಎಂದು ಅತ್ತಿತು.
“ನಿನಗೆ ಯಾರು ಹೇಳಿದರು ಮಾವ?”
“ಜೋಯಿಸರಿಂದ ಈಗ ತಾನೇ ತಿಳಿಯಿತು. ಈ ಸರೋವರವೋ ಕೊಂಚ ನೀರುಳ್ಳುದು. ಬೇಗ ಒಣಗಿ ಹೋಗುವುದು. ಇದು ಒಣಗಿ ಹೋದರೆ, ಯಾರೊಡನೆ ಬೆಳೆದನೋ, ಯಾರೊಡನೆ ಆಟವಾಡಿದನೋ, ಅವರೆಲ್ಲರೂ ನಾಶವಾಗಿ ಹೋಗುವರು. ಅವರೆಲ್ಲರ ಸಾವನ್ನು ನಾನು ನೋಡಲಾರೆ. ಅದರಿಂದ ಅವರು ಸಾಯುವುದಕ್ಕೆ ಮುಂಚೆ ನಾನೇ ಸಾಯುವೆನು. ಈಗಾಗಲೇ ಕೊಂಚ ನೀರಿರುವ ಕಡೆಯಿದ್ದ ಜಲಚರಗಳು ಹೆಚ್ಚು ನೀರು ಇರುವ ಕಡೆಗೆ ಹೋಗುತ್ತಿವೆ. ಇಲ್ಲಿಯವೋ ನಿಶ್ಚಿಂತೆಯಾಗಿವೆ. ಅದನ್ನು ಕಂಡು ನನಗೆ ಅಳು ಬರುತ್ತಿದೆ.”
ಏಡಿಯು ಹೋಗಿ ಈ ಸುದ್ದಿಯನ್ನು ಮಿಕ್ಕ ಪ್ರಾಣಿಗಳಿಗೆಲ್ಲ ಹೇಳಿತು. ಅದ ಕೇಳಿ ಎಲ್ಲರಿಗೂ ಹೆದರಿಕೆಯಾಯಿತು. ಮೀನು, ಆಮೆ, ಮೊದಲಾದವೆಲ್ಲ ಕೊಕ್ಕರೆಯ ಹತ್ತಿರಕ್ಕೆ ಹೋಗಿ “ಮಾವ, ಏನಾದರೂ ಉಪಾಯ ಮಾಡು ನಮ್ಮನ್ನು ಕಾಪಾಡು” ಎಂದು ಕೇಳಿಕೊಂಡುವು. ಕೊಕ್ಕರೆಯು, “ಇಲ್ಲಿಗೆ ಸ್ಪಲ್ಪ ದೂರದಲ್ಲಿ ಇನ್ನೊಂದು ಸರೋವರವಿದೆ. ಅಲ್ಲಿ ಕಮಲಗಳು ಕೂಡ ಬೆಳೆದಿವೆ. ಅಲ್ಲಿ ನೀರು ಬೇಕಾದಷ್ಟು ಇದೆ. ಇಪ್ಪತ್ತನಾಲ್ಕು ವರ್ಷ ಮಳೆಯು ಬರದಿದ್ದರೂ ಅದು ಒಣಗುವ ಹಾಗಿಲ್ಲ. ಯಾರಾದರೂ ನನ್ನ ಬೆನ್ನಿನ ಮೇಲೆ ಕುಳಿತುಕೊಂಡರೆ” ನಾನು ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗುವೆನು.” ಎಂದಿತು.
ಅದರ ಮಾತನ್ನು ನಂಬಿ ಮೀನುಗಳು ತಾನು ಮುಂದು ತಾನು ಮುಂದು ಎಂದು ಬಂದು ಅದರ ಮೇಲೆ ಹತ್ತಿ ಕೊಂಡುವು. ಆ ಕಳ್ಳನು ಅವುಗಳನ್ನು ಹೊತ್ತುಕೊಂಡು ಹೋಗಿ ಒಂದು ಬಂಡೆಯ ಮೇಲೆ ಹಾಕಿಕೊಂಡು ತಿಂದು ತೇಗಿ, ಹಿಂತಿರುಗಿ ಬಂದು ಮಿಕ್ಕ ಮೀನುಗಳಿಗೆ ಅವೆಲ್ಲ ಅಲ್ಲಿ ಹಾಗಿರುವುವು: ಹೀಗಿರುವುವು” ಎಂದು ಕಥೆಗಳನ್ನು ಹೇಳುತ್ತಾ ಕಾಲ ಕಳೆಯುತ್ತಿತ್ತು.
ಒಂದು ದಿನ ಏಡಿಯು ಬಂದು “ಮಾವ, ನೀನು ಮೊದಲು ಮಾತಾಡಿದುದು ನನ್ನೊಡನೆ, ಆದರೂ ನನ್ನನ್ನು ಬಿಟ್ಟು ಮಿಕ್ಕೆಲ್ಲರನ್ನೂ ಕರೆದುಕೊಂಡು ಹೋಗುತ್ತಿರುವೆಯಲ್ಲ ಅದೇನು? ಇವೊತ್ತು ನನ್ನನ್ನು ಕರೆದುಕೊಂಡು ಹೋಗು.” ಎಂದಿತು. ಅದನ್ನು ಕೇಳಿ ಕೊಕ್ಕರೆಯು- ನನಗೂ ಮೀನುಗಳನ್ನು ತಿಂದು ಸಾಕಾಗಿ ಹೋಗಿದೆ. ಇರಲಿ. ಇವೊತ್ತು ಈ ಏಡಿಯನ್ನು ನೆಂಜಿಕೊಳ್ಳೋಣ” ಎಂದು, ಅದನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಆ ಬಂಡೆ ಮೇಲಕ್ಕೆ ಹೋಯಿತು.
ಬಂಡೆಯನ್ನು ದೂರದಿಂದಲೇ ನೋಡಿ ಆ ಏಡಿಯು ಅದರ ಮೇಲೆ ಬಿದ್ದಿರುವ ಮೀನಿನ ಮೂಳೆಗಳ ಗುಡ್ಡೆಯನ್ನು ನೋಡಿ, “ಮಾವ, ಇನ್ನೂ ಎಷ್ಟು ದೂರ ಹೋಗಬೇಕು? ನನ್ನ ಭಾರದಿಂದ ನಿನಗೆ ಬಹಳ ಆಯಾಸನಾಗಿದೆಯೇನೋ” ಎಂದು ಒಳ್ಳೆಯ ಮಾತಿನಿಂದಲೇ ಕೇಳಿತು. ಕೊಕ್ಕರೆಯು ಏಡಿಯೆಷ್ಟಾಗಲಿ ನೀರಿನ ಪ್ರಾಣಿ, ನೆಲದ ಮೇಲೆ ಏನು ಮಾಡೀತು. ಎಂದು ಉದಾಸೀನತೆಯಿಂದ, “ಇದೇ ನನ್ನ ಜೀವನದ ಉಪಾಯ. ನೀನೂ ನಿನ್ನ ಇಷ್ಟ ದೇವತೆಯನ್ನು ಸ್ಮರಿಸಿಕೊ. ನಿನಗೆ ಕೊನೆಯ ಕಾಲವು ಬಂತು. ಈ ಬಂಡೆಯ ಮೇಲೆ ನಿನ್ನನ್ನು ಇಟ್ಟುಕೊಂಡು ತಿನ್ನುವೆನು” ಎಂದು ಜಂಭವಾಗಿ ಹೇಳಿತು.
ಕೂಡಲೇ ಆ ಏಡಿಯು ತನ್ನ ಕೊಂಡಿಗಳಿಂದ ಆ ಕೊಕ್ಕರೆಯ ಕತ್ತನ್ನು ಹಿಡಿಯಿತು. ಕಡಿದು ತುಂಡು ಮಾಡಿ ಅದನ್ನು ಸಾಯಿಸಿತು.
ಅದರಿಂದ ಹೇಳಿದೆನು: ಉಪಾಯ ಮಾಡಿದರೂ ಕೊಕ್ಕರೆಯ ಹಾಗಾಗಬಾರದು “ಎಂದು”
ಕಾಗೆಗಳು ಕೇಳಿದುವು:- “ಮಿತ್ರ, ಆ ಕೆಟ್ಟ ಹಾವನ್ನು ಕೊಲ್ಲುವ ಉಪಾಯವನ್ನು ಹೇಳು”? ಎಂದು.”
ನರಿಯು ಹೇಳಿತು: ಯಾವುದಾದರೊಂದು ಊರಿಗೆ ಹೋಗಿ, ಅಲ್ಲಿ ಯಾರದಾದರೂ ಒಂದು ಒಡವೆಯನ್ನು ಹಾರಿಸಿಕೊಂಡು, ಆ ಒಡವೆಯನ್ನು ಕಾಣುವ ಹಾಗೆ ತಂದು, ಆ ಹಾವಿನ ಪೊಟರೆಯಲ್ಲಿ ಹಾಕಿ ಬಿಡಿ. ಅವರು ಒಡವೆಗಾಗಿ ಆ ಹಾವನ್ನು ಕೊಲ್ಲುವರು.”
ಕಾಗೆಗಳು ಹಾಗೆಯೇ ಹುಡುಕಿಕೊಂಡು ಹೋದುವು. ಒಂದು ಕೊಳದಲ್ಲಿ ಹೆಂಗುಸರು ತಮ್ಮ ಒಡವೆಗಳ ದಡದಲ್ಲಿಟ್ಟು ನೀರಿನಲ್ಲಿಳಿದು ಸ್ನಾನವನ್ನು ಮಾಡುತ್ತಿದರು. ಆ ಒಡವೆಗಳಲ್ಲಿ ಒಂದು ಚಿನ್ನದ ಸರವನ್ನು ಒಂದು ಕಾಗೆಯು ಕಚ್ಚಿಕೊಂಡು ಹಾರಿತು. ಇನ್ನೊಂದು ಕಾಗೆಯು ಕೂಗಿತು. ಕಾವಲಿನವರು ದೊಣ್ಣೆ ತೆಗೆದುಕೊಂಡು ಅದರ ಹಿಂದೆ ಓಡಿದರು. ಕಾಗೆಯು ಆ ಸರವನ್ನು ಅವರು ನೋಡುತ್ತಿದ್ದ ಹಾಗೇ ತಂದು ಹಾವಿನ ಪೊಟರೆಯಲ್ಲಿ ಹಾಕಿತು. ಕಾವಲುಗಾರರು ಆ ಸರವನ್ನು ತೆಗೆದುಕೊಳ್ಳಲು ಹೋದರು, ಹಾವು ಭುಸ್ಸೆಂದು ಮೇಲಕ್ಕೆ ಎದ್ದಿತು. ಅವರು ಅದನ್ನು ಕೊಂದು ಒಡವೆಯನ್ನು ತೆಗೆದುಕೊಂಡು ಹೋದರು. ಕಾಗೆಗಳಿಗೆ ನೆಮ್ಮದಿಯಾಯಿತು.
ಅದರಿಂದ ಬುದ್ಧಿವಂತರಿಗೆ ಅಸಾಧ್ಯವಾದುದೇ ಇಲ್ಲ. ಬುದ್ದಿಯಿರುವವನಿಗೆ ಬಲವೇ ಹೊರತು ಬುದ್ಧಿಯಿಲ್ಲದವನಿಗೆ ಬಲವೆಲ್ಲಿ ಬಂತು? ಮದದಿಂದ ಕೊಬ್ಬಿದ ಸಿಂಹವನ್ನು ಮೊಲವು ಕೊಲ್ಲಲಿಲ್ಲವೆ?”
“ಹಾಗೆಂದರೇನು?” ದಮನಕನು ಹೇಳಿತು.
*****
ಸಿಂಹವನ್ನು ಕೊಂದ ಮೊಲದ ಕಥೆ ಓದಿ









