ಎದೆ ವೀಣೆ ಮಿಡಿದಿರಲು ತೇಲುವುದು ಇಳೆಯೆಲ್ಲ
ಸೊಗಕೊಯ್ದು ಸುಧೆಯುಣಿಪ ರಾಗದಲ್ಲಿ
ರಾಗದಾ ಆಳದಿಂ ಚಿಮ್ಮುತಿಹೆ ಕಳೆಯೆಲ್ಲ
ಮುಳುಗಿಪುದು ಕಣ್ಮನವ ಭಾವದಲ್ಲಿ
ಹುಟ್ಟುವುದು ಹೊಸ ರಾಜ್ಯ ನಾನಲ್ಲಿಯಧಿರಾಜ
ಭಾವವೇ ನಲ್‌ರಾಣಿ ವಾಣಿ ಮಾತೆ
ಲೇಖನಿಯು ತಾಮಂತ್ರಿ ಪಟ್ಟವಣೆ ಗಿರಿರಾಜ
ಶುಕಪಿಕಗಳುಲಿವೆನ್ನ ನುತಿಪ ಗೀತೆ
ಹೊಸ ರಾಜ್ಯ ಹೊಸ ನಾಡು ನವ ಜೀವದಾ ಬೀಡು
ರಸಿಕರ್ಷಿ ತಾನಿಲ್ಲಿ ತಪಗೈಯುತಿಹನು
ಕಳಹಂಸ ಹರಿಣಗಳು ಶುಕ ಪಿಕಗಳೇ ನೋಡು
ಪ್ರಜೆಗಳಾಗಿಹರಿಲ್ಲಿ ಹೇಳಲೇನು?
ಇಳೆಯೆನ್ನ ಅರಮನೆಯು ಸೊಕ್ಕಿರ್ದ ಗಿರಿ ಕಂಬ
ಹೊಳೆ ಮುತ್ತ ಪವಣಿಸಿದ ನೀಲ ಮಾಡ
ಪಚ್ಚನೆಯ ಹಸಿರೆಲ್ಲ ಹಾಸಿರಲು ಮನೆತುಂಬ
ತೋರಣವ ಕಟ್ಟುವವು ಮಿಂಚು ಮೋಡ
ಮೃದುತೆರೆಯ ತಲ್ಪದಲಿ ಮಲಗಿರಲು ತಂಗಾಳಿ
ರವಿಕಿರಣ ಬಳ್ಳಿಯಲಿ ಪರ್ಯಂಕವ
ತೂಗುತ್ತ ಹಾಡುವುದು ಜಲಕನ್ಯೆ ಮೈತಾಳಿ
ತೋರುವುದು ಸುಖ-ಸ್ವಪ್ನ ಸಾಮ್ರಾಜ್ಯವ
ಭಾವ ತಾವರೆ ನಗಲು ಭೃಂಗದೊಲು ಹಾರುವೆನು
ಹರುಷದಲಿ ಹಾಡುತ್ತ ಪ್ರೇಮ ಗೀತೆ
ನಲ್ಲೆಯಾ ಹೊಂಗೆನ್ನೆ ಪತ್ರದಲಿ ಬರೆಯುವೆನು
‘ಮುತ್ತಿ’ನಾ ಅಕ್ಕರತೆ ನಾನು ಸೋತೆ
ಸಾರಥಿಯೆ ಕಾಲನಿರೆ ಬ್ರಹ್ಮಾಂಡ ರಥವೆನಗೆ
ಹಗಲಿರುಳೆ ಆ ರಥಕೆ ಬದಿಯ ಚಕ್ರ
ರವಿ ಶಶಿಯು ರಥವೆಳೆವ ಜೋಡಶ್ವ ತಾವಾಗೆ
ಹೆದರಿವುದು ತಾನೆಂತು ಬಿದಿಯ ಚಕ್ರ?
ನವಸಿರಿಯ ರಥವೇರಿ ಬಿದಿಯನ್ನೆ ಬೆದರಿಸುತ
ಮಳೆಬಿಲ್ಲ ಠಂಕಾರ ಗೈಯಲಾನು
ಹನಿಯಂಬು ಚಿಮ್ಮಿರಲು ಸೊದೆವರ್ಷ ಸುರಿಯುತ್ತ
ತುಂಬುವುದೊ ಭೂ ನಾಕ ನರಕವನ್ನು
ನಿಚ್ಚವೂ ಸುರನೃತ್ಯ ಅಮೃತದ ಸೊಗದೂಟ
ಕುಣಿಸುವುದೊ ಕಾಮಿನಿಯ ಕಣ್ಣ ಕೂಟ
ಮಳೆಬಿಲ್ಲ ಸಪ್ತರತಿ ಕಮ್ಮಲರ ಕುಣಿದಾಟ
ಕಳವಳದ ಸುಳಿವಿರದ ಕವಿಯ ಮಾಟ
ಎಲ್ಲೆಲ್ಲು ಮುದದುಂಬೆ ಕವಿಕಾವ್ಯ ಸಾಮ್ರಾಜ್ಯ
ಜನಕೆಲ್ಲ ನವಜೀವ ತುಂಬದೇನು?
ನಲ್ಭಾವ ರಾಣಿ ಮಾವಾಣಿಯರದೀ ರಾಜ್ಯ
ಅವರಾಳ್ಕೆ ಬಾಳ್ಪೂಣ್ಕೆ ಸಲಿಸದೇನು?
*****









