ಕುಣಿಯುತಿಹಳು ಬನದ ರಾಣಿ
ಜಗವ ಮರುಳುಗೊಳಿಸುತ
ಎತ್ತ ನೋಡೆ ಹಸಿರುವಾಣಿ
ದಿವ್ಯ ಸೊಬಗ ತುಂಬುತ
ಮಂದ ಪವನ ಕೊರಲ ತಾನ
ಇಳೆಯ ಗೂಡ ಗುಂಜನ
ದುಂಬಿ ಹಾಡೆ ತುಂಬಿ ಬಾನ
ಎದೆಗೆ ಅಮೃತ ಸೇಚನ
ಫಲಂ ತೀವಿ ಮನಂಬುಗುವ
ಮರದ ನೆಳಲ ಸೊಬಗಲಿ
ಮಲಗಿ ಹರಿಗೆ ದಿಟ್ಟಿಸೆ ಪಥವ
ಇದುವೆ ಸಗ್ಗ ಇಹದಲಿ
ಎಳೆಯ ತಳಿರೆ ಕೊರಳಿನಿಂದ
ಅಡಗಿ ನುಡಿಯೆ ಕೋಕಿಲ
ತನ್ನ ಇನಿಯ ಗಾನದಿಂದ
ಸೋಂಕಿತೆದೆಯ ದೇಗುಲ
ಬೆಳ್ಳಿ ನೊರೆಯ ತೂರ್ವ ತೊರೆಯ
ದಿವ್ಯರಾಗ ಮಂಜುಳ
ರಸಾಕಾಂಕ್ಷಿ ರಸಿಕ ಋಷಿಯ,
ಭವ್ಯ ನಿಧಿಯು ಈ ಸ್ಥಳ
ತೇಲುತಿರುವ ಮೇಘ ಮಾಲೆ
ಇದುವೆ ಶಿವನ ನಿಲಯವೆಂದು
ಅರಸುತಿಹುದು ಗಿರಿಯ ಮೇಲೆ
ಶಿವನ ಶಿರದಿ ಮೆರೆಯಲೆಂದು
ಜೀವದೆರಡು ಪಥಗಳನ್ನು
ತೋರುವುದೀ ಕಾನನ
ಉಚ್ಚ ನೀಚ ಭಾವಗಳನು
ಅರಿಯಲೆಮ್ಮ ತನು-ಮನ
ನೀಲ ಗಗನ ಚುಂಬಿಸಿರುವ
ಗಿರಿಯೆ ಮನದ ರಾಜಸ
ಅರಿಯ ದಾಳ ತುಂಬಿ ಹರಿವ
ದರಿಯೆ ಎದೆಯ ತಾಮಸ
ಶಾಂತಿಯಮರ ಸಖದ ಸೃಷ್ಟಿ
ದಿವ್ಯ ಸೌಧವೀವನ
ಕವಿಗೆ ನೀಡೆ ದಿವ್ಯದೃಷ್ಟಿ
ನಿತ್ಯಮೀ ತಪೋವನ!
*****









