ಒಂದಾನೊಂದು ವನದಲ್ಲಿ ಭಾಸುರಕನೆಂಬ ಸಿಂಹವೊಂದಿತ್ತು. ಅದಕ್ಕೆ ಮದವು ಬಂದು ದಿನ ದಿನವೂ ಸಿಕ್ಕಿಸಿಕ್ಕಿದ ಮೃಗಗಳನ್ನೆಲ್ಲಾ ಕೊಲ್ಲುತ್ತಾ ಬಂತು. ಆಗ ಕಾಡಿನಲ್ಲಿದ್ದ ಜಿಂಕೆ ಹಂದಿ ಎಮ್ಮೆ ಮೊಲ ಮೊದಲಾಗಿ ಎಲ್ಲಾ ಪ್ರಾಣಿಗಳೂ ಒಂದು ಗೂಡಿ, ಆ ಸಿಂಹದ ಬಳಿಗೆ ಹೋದುವು. “ಸ್ವಾಮಿಯೇ, ನಿತ್ಯವೂ, ಹೀಗೆ ಅನ್ಯಾಯವಾಗಿ ವಧೆ ಮಾಡಿದರೆ ನಿನಗೇನು ಲಾಭ? ನಿನಗೆ ಊಟಕ್ಕೆ ಒಂದು ಮೃಗವು ಸಾಕು. ಅದರಿಂದ ನಮ್ಮೊಡನೆ ಒಂದು ನಿಬಂಧವನ್ನು ಮಾಡಿಕೊ. ಇವೊತ್ತಿನಿಂದ ನಿನಗೆ ಊಟದ ಹೊತ್ತಿಗೆ ಸರಿಯಾಗಿ ಯಾವುದಾದರೂ ಒಂದು ಮೃಗವನ್ನು ಸರ್ತಿ ಪ್ರಕಾರ ಕಳುಹಿಸಿಕೊಡುವೆವು. ಇದರಿಂದ ನಿನಗೂ ಬೇಟೆಯ ಕಷ್ಟ ತಪ್ಪುವುದು. ನಮಗೆ ಅನೇಕರು ಸಾಯುವುದು ತಪ್ಪುವುದು. ಇದು ರಾಜ ಧರ್ಮಕ್ಕೂ ಅನುಸಾರ ವಾಗಿರುವುದು. ಕೇಳಿಲ್ಲವೇ?
ಅರಸಾದವನು ರಾಜ್ಯವನ್ನು ರಸಾಯನವನ್ನು ಒಂದೇಸಲ ನುಂಗದೆ ಚಪ್ಪರಿಸುವಂತೆ, ಮೆಲ್ಲ ಮೆಲ್ಲಗೆ ಉಪಭೋಗಿಸುತ್ತಿರಬೇಕು. ಹಾಗಿದ್ದರೆ, ಆ ಬುದ್ದಿವಂತನಿಗೆ ರಾಜ್ಯಲಕ್ಷ್ಮಿಯು ಬೇಕಾದುದನ್ನು ಕೊಡುವಳು. ಕಡೆದು ಕಡೆದು ಅರಣಿಯಿಂದ ಅಗ್ನಿಯನ್ನು ಪಡೆದು ಕೊಳ್ಳುವಂತೆ ಭೂಮಿಯನ್ನೂ ಪಾಲಿಸುತ್ತ ಪಾಲಿಸುತ್ತ ತನಗೆ ಬೇಕಾದುದನ್ನು ಪಡೆದುಕೊಳ್ಳಬೇಕು. ಪ್ರಜೆಗಳನ್ನು ನ್ಯಾಯವಾಗಿ ಪಾಲಿಸಿದರೆ ಸ್ವರ್ಗವು ಸಿಕ್ಕುವುದು. ಅನ್ಯಾಯಮಾಡಿ ಪ್ರಜೆಗಳನ್ನು ಪೀಡಿಸಿದರೆ ಧರ್ಮವು ನಾಶವಾಗುವುದು. ಪಾಪವೂ ಅಪ ಕೀರ್ತಿಯೂ ತಪ್ಪದೆ ಬರುವುವು. ಗೋಪನು ಹಸುವನ್ನು ತಿಂಡಿಗಳನು ಕೊಟ್ಟು ಕಾಪಾಡಿ ಹಾಲನ್ನು ಕರೆದು ಕೊಳ್ಳುವಂತೆ ದೇಶವನ್ನು ಕಾಪಾಡಿ ಅರಸು ತನಗೆ ಬರಬೇಕಾದುದನ್ನು ತೆಗೆದುಕೊಳ್ಳಬೇಕು. ಹಾಗಿಲ್ಲದೆ ಮೇಕೆಯನ್ನು ಕೊಂದು ತಿಂದಂತೆ ಮಾಡಿದರೆ ಏನು ಫಲವಾದೀತು? ಫಲವನ್ನು ಪಡೆಯಬೇಕೆಂಬ ಅರಸು ಪ್ರಯತ್ನ ಮಾಡಿ ದಾನ ಮಾನಗಳೆಂಬ ನೀರನ್ನು ಹೊಯ್ದು, ತೋಟಗಾರನು ಗಿಡಗಳನ್ನು ಕಾಪಾಡುವಂತೆ ಭೂಮಿಯನ್ನು ಕಾಪಾಡಬೇಕು. ಅರಸು ಎಂಬ ದೀಪವು ತನ್ನ ಶುಭಗುಣಗಳೆಂಬ ದಾರಗಳನ್ನು ಪ್ರಜೆಗಳಲ್ಲಿ ಹರಡಿ, ಅವರಲ್ಲಿರುವ ಸ್ನೇಹವನ್ನು ವಿಶ್ವಾಸದಿಂದ ಎಳೆದುಕೊಳ್ಳಬೇಕು. ಮೊಳಕೆಯನ್ನು ಕಾಪಾಡಿದರೆ ಅದು ಮರವಾಗಿ ಕಾಲದಲ್ಲಿ ಹಣ್ಣು ಕೊಡುವುದಲ್ಲವೆ? ಹಾಗೆ ಲೋಕವನ್ನು ಅನುಗ್ರಹ ಮಾಡುವ ಅರಸುಗಳು ತಾವೂ ಬೆಳೆಯುವರು. ಅದರಿಂದ ನಮ್ಮ ಮಾತನ್ನು ನಡೆಸಿಕೊಡಬೇಕು.” ಎಂದು ಪ್ರಾರ್ಥಿಸಿಕೊಂಡುವು.
ಆ ಪ್ರಜೆಗಳ ಮಾತನ್ನು ಕೇಳಿ ಭಾಸುರಕನು:- ನೀವು ಹೇಳಿದುದು ಸರಿ. ಆದರೆ, ಯಾವುದಾದರೊಂದು ದಿನ ನೀವು ಮೃಗವನ್ನು ಕಳುಹಿಸುವುದು ತಪ್ಪಿದರೆ ಎಲ್ಲರನ್ನೂ ಹೊಡೆದು ಹಾಕುವೆನು.” ಎಂದು ಅವರೂಡನೆ ನಿಬಂಧನವನ್ನು ಮಾಡಿಕೊಂಡು ಅವರನ್ನೆಲ್ಲ ಕಳುಹಿಸಿಕೊಟ್ಟತು. ಅಂದಿನಿಂದ ಪ್ರತಿದಿನವೂ ಕ್ರಮವಾಗಿ ಒಂದೊಂದು ಮೃಗವು ಸಿಂಹದ ಊಟಕ್ಕೆ ಬರುವುದು. ಮಿಕ್ಕ ಮೃಗಗಳು ನಿರ್ಭಯವಾಗಿ ಅರಣ್ಯದಲ್ಲಿ ತಿರುಗಿಕೊಂಡಿದ್ದುವು.
ಒಂದು ಸಲ ಮೊಲವು ಬರಬೇಕಾಗಿ ಬಂತು. ಎಲ್ಲರೂ ಮೊಲವು ಹೋಗಬೇಕು ಎಂದುವು. ಅದಕ್ಕೆ ಇಷ್ಟವಿಲ್ಲದಿದ್ದರೂ ಯತ್ನವಿಲ್ಲದೆ ಮೆಲ್ಲ ಮೆಲ್ಲಗೆ ಬರುತ್ತ, ಎನಾದರೂ ಮಾಡಿ ಈ ಸಿಂಹವನ್ನು ಮುಗಿಸಬೇಕು ಎಂದು ಒಂದು ಉಪಾಯವನ್ನು ಚಿಂತಿಸಿತು. ಹಾಗೆ ಮೆಲ್ಲಗೆ ತೂಕಡಿಸುತ್ತ ಬರುವುದರಲ್ಲಿ ಸಿಂಹದ ಊಟದ ವೇಳೆಯು ಕಳೆದು ಹೋಯಿತು. ಆದರೂ, ಅದು ಅವಸರ ಪಡದೆ ಬರುತ್ತಿರುವಾಗ ದಾರಿಯಲ್ಲಿ ಒಂದು ಭಾವಿಯು ಸಿಕ್ಕಿತು, ಅದರಲ್ಲಿ ಬೊಗ್ಗಿ ನೋಡಿದರೆ ಅದರ ಪ್ರತಿಬಿಂಬವು ಕಾಣಿಸಿತು. ಅದನ್ನು ನೋಡಿ “ಆಹಾ! ಇದೇ ಸರಿಯಾದ ಉಪಾಯ. ಭಾಸುರಕನನ್ನು ರೇಗಿಸಿ, ಈ ಭಾವಿಗೆ ಹಾಕುವಂತೆ ಮಾಡುವೆನು.” ಎಂದು ಮಾಡಬೇಕಾದುದೆಲ್ಲವನ್ನೂ ಗೊತ್ತುಮಾಡಿಕೊಂಡು ಭಾಸುರಕನ ಬಳಿಗೆ ಸಂಜೆ ವೇಳೆಗೆ ಬಂತು. ಸಿಂಹವು ಹಸುವಿನಿಂದ ರೇಗಿ ಕಟವಾಯಿಗಳನ್ನು ಸವರಿಕೊಳ್ಳುತ್ತಾ ರೇಗಿ ರೇಗಿ ಬೀಳುತ್ತಿತ್ತು. “ಎಲೆ,ಮೊಲವೆ, ಮೊದಲಯದಾಗಿ ನೀನು ಅಲ್ಪನು. ನನ್ನ ಹೊಟ್ಟೆಗೆ ನಿನ್ನನ್ನು ತಿಂದರೆ ಸಾಲದು. ಎರಡನೆಯದಾಗಿ ನೀನು ಇಷ್ಟು ಹೊತ್ತು ಮಾಡಿಕೊಂಡು ಬಂದಿರುವೆ. ಈ ಅಪರಾಧಕ್ಕಾಗಿ, ನಿನ್ನನ್ನು ಮೊದಲು ಸಂಹಾರಮಾಡಿ, ನಾಳೆ ಬೆಳಗಿನೂಟಕ್ಕೆ ಮಿಕ್ಕ ಮೃಗಗಳನ್ನೆಲ್ಲಾ ಕೊಲ್ಲುವೆನು” ಎಂದು ಹಾರಾಡಿತು.
ಮೊಲವು ವಿನಯವಾಗಿ ಹೇಳಿತು:- ಸ್ವಾಮಿ, ಅಪರಾಧವು ನನ್ನದಲ್ಲ. ಮೃಗಗಳದೂ ಆಲ್ಲ. ಕಾರಣವನ್ನು ಆಲಿಸಬೇಕು. ಮೃಗಗಳು ನಾನು ಸಣ್ಣದೇಹದವನು ಎಂದು ಒಟ್ಟು ಐದು ಮೊಲಗಳನ್ನು ಕಳುಹಿಸಿಕೊಟ್ಟರು. ದಾರಿಯಲ್ಲಿ ಬರುವಾಗ ಇನ್ನೊಂದು ಸಿಂಹವು ಅಡ್ಡಗಟ್ಟಿ “ಲೋ, ಎಲ್ಲಿಗೆ ಹೊರಟರುವಿರಿ? ನಿಮ್ಮ ದೇವರನ್ನು ಸ್ಮರಿಸಿ” ಎಂದಿತು. “ನಾವು ಕಾಡಿನ ಮೃಗಗಳು ಮಾಡಿ ಕೊಂಡಿರುವ ನಿಬಂಧನದಂತೆ ನಮ್ಮ ಅರಸ ಭಾಸುರಕನ ಊಟಕ್ಕೆ ಹೋಗುತ್ತಿರುವೆವು.” ಎಂದು ನಾನು ಹೇಳಿದೆನು. ಅದಕೆ ಅದು “ಈ ಕಾಡೆಲ್ಲ ನನ್ನದು ನಿಮ್ಮ ಮೃಗಗಳು ಇನ್ನು ಮೇಲೆ ನನ್ನೊಡನೆ ನಿಬಂಧನ ಮಾಡಿಕೊಳ್ಳಬೇಕು. ಆ ಭಾಸುರಕನು ಕಳ್ಳ, ಅವನೇ ಅರಸನಾಗಿದ್ದರೆ, ಇಲ್ಲಿ ನಾಲ್ಕು ಮೊಲಗಳಿರಲಿ. ನೀನು ಹೋಗಿ ಅವನನ್ನು ಬೇಗ ಕರೆದು ಕೊಂಡು ಬಾ. ನಮ್ಮಿಬ್ಬರಿಗೂ ಯುದ್ದವಾಗಿ ಗದ್ದವನು ರಾಜನಾಗಿ ನಿಮ್ಮೆಲ್ಲರನ್ನೂ ತಿನ್ನಲಿ” ಎಂದು ಅರ್ಭಟಿಸಿತು. ನಾನು ಅದರಂತೆ ತಮ್ಮ ಬಳಿಗೆ ಬಂದರುವೆನು. ಅದರಿಂದ ಹೊತ್ತಾಯಿತು. ಇನ್ನು ಮುಂದೆ ತಮಗೆ ತೋರಿದಂತೆ ಮಾಡಬಹುದು” ಎಂದಿತು. ಭಾಸುರಕನು “ಹಾಗೇನು? ಮೊದಲು ಆ ಕಳ್ಳನನ್ನು ತೋರಿಸು. ನಡೆ. ನನ್ನ ಕೋಪವನ್ನು ಅವನ ಮೇಲೆ ತೋರಿಸುವೆನು.” ಎಂದು ಗರ್ಜಿಸಿತು.
ಮೊಲವು ಹೇಳಿತು: “ಮಹಾಸ್ಟಾಮಿ, ಆ ಕಳ್ಳನು ದುರ್ಗ ಮಧ್ಯದಲ್ಲಿರುವನು. ದುರ್ಗದಿಂದ ಈಚೆಗೆ ಬಂದು ನಮ್ಮನ್ನು ಹಿಡಿದನು. ಈಗ ಮತ್ತೆ ದುರ್ಗದಲ್ಲಿರುವನು. ಆದರಿಂದ ಅವನನ್ನು ಹಿಡಿಯುವುದು ಸುಲಭವಲ್ಲ?” ಎನ್ನಲು, ಭಾಸುರಕನು ರೇಗಿ ಹೇಳಿತು: “ಅವನು ದುರ್ಗದಲ್ಲೇ ಇರಲಿ, ನೀನು ನನಗೆ ಆ ದುರ್ಗವನ್ನೇ ತೋರಿಸು. ಶತ್ರುವನ್ನೂ ರೋಗವನ್ನೂ ಹುಟ್ಟುತ್ತಿದ್ದ ಹಾಗೆಯೇ ಮಟ್ಟಹಾಕಬೇಕು. ಬೆಳೆಯಲು ಬಿಟ್ಟರೆ ನಮ್ಮನ್ನೇ ತಿಂದೀತು”
ಮೊಲವು ಇನ್ನೂ ರೇಗಿಸಬೇಕೆಂದು “ಪ್ರಭು, ಅವನು ಬಲ ವಂತನಂತೆ ಕಾಣಿಸುತ್ತಾನೆ. ಶತ್ರುವಿನ ಸಾಮರ್ಥ್ಯವನ್ನು ತಿಳಿಯದೆ ಹೋಗವುದೇ” ಎಂದಿತು. ಭಾಸುರಕನು ಇನ್ನೂ ರೇಗಿ “ನಿನಗೇಕೆ ಅದೆಲ್ಲ? ದುರ್ಗವನ್ನು ತೋರಿಸು ನಡೆ” ಎಂದು ನುಗ್ಗಿತು. ಮೊಲವು “ಹಾಗಾದರೆ ಸ್ವಾಮಿಯ ಚಿತ್ತಾ” ಎಂದು ಮುಂದೆ ನಡೆಯಿತು. ಕರೆದುಕೊಂಡು ಹೋಗಿ ಆ ಬಾವಿಯನ್ನು ತೋರಿಸಿ, “ದೇವ. ಇದೇ ಶತ್ರುವಿನ ದುರ್ಗ. ಆ ಕಳ್ಳನು ಇದರಲ್ಲಿ ಅವಿತಿರುವನು?” ಎಂದಿತು. ಆ ಮೂರ್ಖ ಸಿಂಹವು ಬಾವಿಯಲ್ಲಿ ಬಗ್ಗಿ ನೋಡಿ, ಅದರಲ್ಲಿ ಕಂಡ ತನ್ನ ಪ್ರತಿಬಿಂಬನನ್ನು ಶತ್ರು ಸಿಂಹವೆಂದುಕೊಂಡು ತಾನು ಗರ್ಜಿಸಿತು. ಆ ಗರ್ಜನವು ಬಾವಿಯಿಂದ ಮೊಳಗಿ ಬರಲು, ಅದು ಶತ್ರುವಿನ ಪ್ರತಿ ಗರ್ಜನವೆಂದುಕೊಂಡು ಶತ್ರುವಿನಮೇಲೆ ಹಾರುವೆನೆಂದು ಹಾರಿ ನೀರಿನಲ್ಲಿ ಬಿದ್ದು ಪ್ರಾಣಬಿಟ್ಟಿತು. ಅದರಿಂದ ಬುದ್ದಿಯಿದ್ದವನೇ ಬಲಶಾಲಿಯೆಂದು ನಾನು ಹೇಳಿದುದು. ಅದರಿಂದ ನೀನು ಒಪ್ಪಿದರೆ ಹೋಗಿ ಅವರ ಮೈತ್ರಿಯನ್ನು ಒಡೆಯುವೆನು” ಎಂದಿತು.
ಕರಟಕನು “ಹಾಗಾದರೆ ಹೋಗು. ನಿನಗೆ ಒಳ್ಳೆಯದಾಗಲಿ” ಎಂದು ಆಶೀರ್ವಾದ ಮಾಡಿ ಕಳುಹಿಸಿಕೊಟ್ಟಿತು.
ದಮನಕನು ಹೋಗಿ ಸಂಜೀವಕನು ಇಲ್ಲದ ಸಮಯವನ್ನು ನೋಡಿ ಪಿಂಗಲಕನ ಬಳಿಗೆ ಹೋಗಿ ನಮಸ್ಕಾರ ಮಾಡಿ ನಿಂತು ಕೊಂಡಿತು. ಪಿಂಗಲಕನು “ಏನಯ್ಯಾ, ಬಹುದಿನದಿಂದ ಕಾಣಲಿಲ್ಲ?” ಎನ್ನಲು, ನರಿಯು “ದೇವ, ನಮ್ಮಿಂದ ತಮಗೆ ಆಗಬೇಕಾದ ಕಾರ್ಯವು ಯಾವುದೂ ಇಲ್ಲ. ಅದರಿಂದ ನಾನು ಬರಲಿಲ್ಲ ಆದರೆ ರಾಜಕಾರ್ಯವು ಕೆಡುವುದಲ್ಲಾ ಎಂದು ಹೊಟ್ಟೆಯುರಿಯಿತು. ಅದಕ್ಕಾಗಿ ನಾನೇ ತಮ್ಮ ಬಳಿಗೆ ಬಂದೆನು” ಕೇಳಿಲ್ಲವೆ?
ಪ್ರಿಯವಪ್ರಿಯವಿದು ಎನ್ನದೆ । ಶುಭವಶುಭವಿದೆಂದೆನ್ನದೆ ॥
ಕೇಳದೆ ಇರೆಯುಂ ತನ್ನ । ಹಿತವಂ ನುಡಿವುದೆ ಧರ್ಮ॥ ಎಂದಿತು
ಅದು ಏನೋ ಹೇಳಬೇಕೆಂದು ಬಂದಿರುವುದನ್ನು ತಿಳಿದು ಸಿಂಹವು: “ಏನು ಹೇಳಬೇಕೆಂದಿರುವೆಯೋ ಹೇಳು. ಎಂದು ಧೈರ್ಯಗೊಟ್ಟಿತು. ನರಿಯು ಧೈರ್ಯವಾಗಿ: “ದೇವ, ಸಂಜೀವಕನು ಮಹಾ ಪಾದಗಳಿಗೆ ದ್ರೋಹವನ್ನು ಎಣಿಸಿರುವನು. ನಾನು ಅವನ ವಿಶ್ವಾಸಪಾತ್ರನು. ನನ್ನನ್ನು ಏಕಾಂತದಲ್ಲಿ ಕರೆದು, ದಮನಕ, ನಿಮ್ಮ ಅರಸು ಪಿಂಗಲಕನ ಗುಟ್ಟೆಲ್ಲ ತಿಳಿಯಿತು. ಅದರಿಂದ ಅವನನ್ನು ವಧಿಸಿ, ನಾನೇ ಮೃಗರಾಜನಾಗುವೆನು. ನೀನೇ ಮಂತ್ರಿಯು ಎಂದಿತು” ಎಂದು ಹೇಳಿತು.
ಪಿಂಗಲಕನು ವಜ್ರಾಯುಧದ ಏಟಿನಂತೆ ಕಠೋರವಾದ ಆ ಮಾತುಗಳನ್ನು ಕೇಳಿ ಏನು ಉತ್ತರ ಕೊಡಬೇಕೆಂದು ತೋರದೆ ಮೊಂಕಾಗಿ ಕುಳಿತುಬಿಟ್ಟಿತು. ದಮನಕನು ಹೇಳಿತು: “ಸ್ವಾಮಿ ತಾವು ಸಂಜೀವಕನ ಮೇಲೆ ಅಭಿಮಾನವಿಟ್ಟು ಮಂತ್ರಿಯನ್ನು ಮಾಡಿದಿರಿ ಅವನೇ ತಮ್ಮನ್ನು ಕೊಲ್ಲುವನು. ಕೇಳಿಲ್ಲವೆ? ಅರಸು ರಾಜ್ಯವಾಳುವುದರಲ್ಲಿ ಒಬ್ಬನನ್ನೇ ಕೇಳಿ ಮಾಡುವುದಾದರೆ, ಆ ಮಂತ್ರಿಗೆ ತನ್ನನ್ನು ಬಿಟ್ಟರೆ ಇನ್ನಿಲ್ಲ ಎನ್ನಿಸಿ, ಅವನಿಗೆ ತಾನು ಆಳು ಎನ್ನುವುದು ಮರೆತು ಹೋಗುವುದು. ಅವನಿಗೆ ಸ್ವತಂತ್ರನಾಗುವ ಆಸೆಯು ಹುಟ್ಟುವುದು. ಆ ಆಸೆಯಿಂದ ಅವನು ಅರಸನ ಪ್ರಾಣಕ್ಕೆ ಸಂಚಕಾರ ತರುವನು. ಅಲ್ಲವೇನೋ ನೋಡಿ.”
ಆ ವೇಳೆಗೆ ಪಿಂಗಲಕನಿಗೆ ಮತ್ತೆ ಚೈತನ್ಯವು ತೋರಿತು. ಹೇಳಿದನು: -“ಸಂಜೀವಕನು ನನಗೆ ಪ್ರಾಣ ಸಮಾನನಾದ ಭೃತ್ಯನು. ಅವನು ನನ್ನ ಮೇಲೆ ಕತ್ತಿ ಕಟ್ಟುವನೇ?”
“ದೇವ, ಭೃತ್ಯನೋ ಅಭೃತ್ಯನೋ, ಆ ವಿಚಾರವಿರಲಿ. ಕೇಳಿಲ್ಲವೆ? ಅರಸನ ಐಶ್ವರ್ಯವನ್ನು ಕಂಡು ಬಾಯಿ ಬಾಯಿಬಿಡದವರೂ ಉಂಟೆ? ಅದನ್ನು ಹಿಯುವುದಕ್ಕೆ ಕೈಲಾಗದ ದುರ್ಬಲರು ಅರಸನನ್ನೇ ಸೇವಿಸುವರು. ಅಷ್ಟೆ!”
“ನೀನು ಇಷ್ಟು ಹೇಳಿದರೂ, ದಮನಕ, ಅವನ ಮೇಲೆ ನನ್ನ ಮನಸ್ಸು ಕೋಪಗೊಳ್ಳದಿರುವುದು. ರೋಗವಿದ್ದರೂ ದೇಹವು ಯಾರಿಗೆ ಬೇಡವಾಗುವುದು? ಹಾಗೆಯೇ ದುಷ್ಟನೆಂದು ಹೇಳುತ್ತಿದ್ದರೂ ಸಂಜೀವಕನು ನನಗೆ ಪ್ರಿಯನೇ ಆಗಿರುವನು.”
“ಅದರಿಂದಲೇ ಈ ದೋಷವು. ಕೇಳಿಲ್ಲವೆ?
ಅರಸನು ಕಣ್ಣಿಂ ನೋಡಲು ಸಾಕು ॥
ಸಿರಿಯೊಲಿವಳಲಾ ಕುಲವಂ ಗಣಿಸದೆ ॥ ೩೧ ॥
ಜೊತೆಗೆ ಸ್ವಾಮಿಯು ಸಂಜೀವಕನಲ್ಲಿ ಯಾರಲ್ಲಿಯೂ ಇಲ್ಲದ ಯಾವ ಗುಣ ವಿಶೇಷವನ್ನು ಕಂಡು ಹತ್ತಿರದಲ್ಲಿ ಇಟ್ಟುಕೊಂಡಿರಿ. ತಾವು ‘ಇದು ದೊಡ್ಡ ಆಕಾರವುಳ್ಳುದು; ಶತ್ರುಗಳನ್ನು ಗೆಲ್ಲುವುದರಲ್ಲಿ ಸಹಾಯವಾಗುವುದು’ ಎಂದುಕೊಂಡಿದ್ದರೆ, ಇದು ಹುಲ್ಲು ತಿನ್ನುವ ಪ್ರಾಣಿ, ತಮಗೆ ಇರುವ ಶತ್ರುಗಳು ಮಾಂಸ ಭೋಜನರು. ಅವರ ಮೇಲೆ ಈ ಎತ್ತು ಹಾಯಲಾರದು. ಅದರಿಂದ ಇದನ್ನು ಮೊದಲು ಕೊಲ್ಲೋಣವಾಗಲಿ.”
ಪಿಂಗಲಕನು ಒಪ್ಪಲಿಲ್ಲ ಹೇಳಿತು:-
ಮೊದಲು ಗುಣವಂತನೆನೆ ಸಭೆಯಲ್ಲಿ ಹೊಗಳಿ ॥
ಮತ್ತೆ ದೋಷವನೆತ್ತಿ ನುಡಿಯುವುದು ತರವೆ?
ಹಿಂದೆ ಆಡಿದ ಮಾತು ಭಂಗವಾಗುವುದು ॥ ೩೨ ॥
ಅಲ್ಲದೆ, ನೀನೇ ಇವರಿಗೆ ನನ್ನಿಂದ ಅಭಯ ಪ್ರದಾನ ಮಾಡಿಸಿರುವೆಯಲ್ಲವೆ? ಹೀಗಿರಲು ನಾನೇ ಕೊಲ್ಲುವುದೆಂತು? ಸಂಜೀವಕನು ಸರ್ವಪ್ರಕಾರದಿಂದಲೂ ನಮಗೆ ಸ್ನೇಹಿತನೇ! ಅವನ ಮೇಲೆ ನಮಗೆ ಕೊಂಚವೂ ಕೋಪನಿಲ್ಲ. ಅವನು ದ್ರೋಹಿಯೇ ಆದರೂ ನಾನು ಅವನಿಗೆ ವಿರೋಧವನ್ನು ಮಾಡುವುದಿಲ್ಲ.”
ದಮನಕನು ಮತ್ತೆ ಒತ್ತಿ ಹೇಳಿದನು: “ದೇವ, ದ್ರೋಹಿಯೆಂದು ತಿಳಿದ ಮೇಲೂ ಸುಮ್ಮನಿರುವುದೂ ಕ್ಷಮಿಸುವುದೂ ರಾಜ ಧರ್ಮವಲ್ಲ. ಕೇಳಿಲ್ಲವೆ?
ಅರ್ಥದಲಿ ಸಾಮರ್ಥ್ಯದಲಿ ಸರಿಗೆ ಸರಿಯಾಗಿ ॥
ಮರ್ಮಗಳ ಭೇದಿಸುತ ಬಯಸಿ ರಾಜ್ಯಾರ್ಥವನು ॥
ಕಾರ್ಯಪರನಾಗಿರುವ ಭೃತ್ಯನನು ಭೇದಿಸದಿರೆ ॥
ಭೂಪತಿಯು ಸಾವನಪ್ಪುವನು ತಾನಾಗಿ ॥ ೩೩ ॥
ಅಲ್ಲದೆ ಇನ್ನೂ ಒಂದು ಅಂಶವುಂಟು. ತಾವು ಇವನ ಸ್ನೇಹಕ್ಕಾಗಿ ರಾಜ ಧರ್ಮವನ್ನೆಲ್ಲ ತ್ಯಾಜಿಸುತ್ತಿರುವಿರಿ. ರಾಜ ಧರ್ಮವನ್ನು ತಾವು ಬಿಟ್ಟಿರಿ ಎಂದು ತಮ್ಮ ಪರಿಜನರೆಲ್ಲರೂ ತಮ್ಮನ್ನು ಬಿಡುತ್ತಿರುವರು. ತಾವೂ ತಮ್ಮ ಪರಿವಾರದವರಾದ ನಾವೂ ಮಾಂಸ ಭೋಜನರು. ಸಂಜೀವಕನು ತೃಣ (ಹುಲ್ಲು) ಭೋಜನನು. ತಾವೂ ಸಂಜೀವಕನಂತೆ ಯಾರನ್ನೂ ವಧಿಸುವುದಿಲ್ಲ ಎಂದು, ವ್ರತವನ್ನು ತೊಟ್ಟರೆ ತಮ್ಮ ಪರಿವಾರದವರ ಹೊಟ್ಟೆಗೇನು ಗತಿ? ಹೊಟ್ಟೆಗಿಲ್ಲದೆಯೂ ಇವರೆಲ್ಲ ತಮ್ಮನ್ನು ಸೇವಿಸುವರೋ? ಹಾಗೂ ತಾವು ನಾಶ ವಾಗುವಿರಿ. ಅಂತೂ ಇವನ ಸಹವಾಸದಿಂದ ತಮಗೆ ಭೇಟೆಯಲ್ಲಿದ್ದ ಮನಸ್ಸು ಹೋಯಿತು.
ದುಷ್ಟರ ಜೊತೆಯೊಳು ಸಜ್ಜನ ದುರ್ಜನನಾಗುವನು ॥
ಕೌರವ ಸಂಗದೆ ಭೀಷ್ಮನು ಕದ್ದನು ಗೋವುಗಳ ॥ ೩೪ ॥
ಅದರಿಂದಲೇ ಸಜ್ಜನರು ನೀಚ ಸಂಗವನ್ನು ಬಿಡು ಎನ್ನುವರು. ಕೇಳಲ್ಲವೆ?
ಅರಿಯದೆ ಕುಲಶೀಲಂಗಳ ಕೊಡಬಾರದು ಆಶ್ರಯವ ॥
ಮಂದವಿಸರ್ಪಿಣಿ ತಿಗುಣೆಯ ತಪ್ಪಿಗೆ ತೆತ್ತಿತು ಜೀವ ॥ ೩೫ ॥
ಪಿಂಗಲಕನು ಆದೆಂತು ಎನಲು ದಮನಕನು ಹೇಳಿತು:-
*****
ಹೇನು ಜೀವ ತೆತ್ತ ಕಥೆ ಓದಿ









