೧
ಕಣ್ಣಿನಲ್ಲಿ ಕಣ್ಣು ಬೆರೆಯೆ
ಹಣ್ಣಿನಲ್ಲಿ ಜೇನು ಸುರಿಯೆ
ಬಣ್ಣದಲ್ಲಿ ಭಾವ ಬಿರಿಯ –
ಲೆನಿತು ಸುಂದರ?
ತುಂಬಿ ಬಂದ ಹೃದಯ ನುಡಿಯ-
ಲೆನಿತು-ಬಂಧುರ?
೨
ಅರಳಿದಲರು ನಗೆಸೂಸಿರೆ
ತಿರೆಯ ಸೊಗಸು ತೂಗುತಲಿರೆ
ಕರುಳದನಿಯು ಕರೆಯುತಲಿರೆ-
ಲೆನಿತು ಸುಂದರ?
ಜೀವ ಹಾವ ಭಾವ ಮಾಡ –
ಲೆನಿತು ಬಂಧುರ?
೩
ನಗೆ ಬಾಳಿನ ದಿವ್ಯ ದೀಪ
ಸೊಗಕೆ ಪ್ರೀತಿ- ಸಲಿಲ ಕೂಪ
ಬಗೆಗೆ ಭಾಗ್ಯ ಪುರುಷ ರೂಪ
ವೆನಿತು ಸುಂದರ?
ಅಂತರಂಗದಳತೆ ತಿಳಿಯ-
ಲೆನಿತು ಬಂಧುರ?
೪
ಒಲಿದ ಹೆಣ್ಣು ತಾನೆ ಬರಲು
ಲಲಿತ ಕವನ ಕೊನ ರೊಡೆಯಲು
ನೆಲಸಲು ಸಿರಿ ಹಾತೊರೆಯಲು
ಎನಿತು ಸುಂದರ?
ಹಕ್ಕಿಯಂತೆ ಹಾಡೆ ಕವಿಯು
ಎನಿತು ಬಂಧುರ?
೫
ಸಂಗೀತದ ಭೃಂಗಮೊರೆಯೆ
ಬಂಗಾರದ ಬಳ್ಳಿ ತೊನೆಯೆ
ಸಿಂಗಾರದ ಶಿಲ್ಪಿನಲಿಯ
ಲೆರಿತು ಸುಂದರ?
ಬಿಸವನಮರ್ದುಗೈವ ಲೀಲೆ
ಎನಿತು ಬಂಧುರ?
೬
ಚೆಲುವು ಪೂರ್ಣಚಂದ್ರನಂತೆ
ಗೆಲುವು ಮಹಾ ಯೋಗಿಯಂತೆ
ಒಲವು ವಂದ್ಯೆ ಗಂಗೆಯಂತೆ
ಇರಲು ಸುಂದರ!
ಆಸೆ ಸೂಸಿ ಹರಿಯುತಿರಲು
ಎನಿತು ಬಂಧುರ?
೭
ಜ್ಞಾನ ಪ್ರಭಾ ದೀಪ್ತಿ ಬೆಳಗೆ
ಮೌನ ಮಂತ್ರ ಮನದಿ ತೊಳಗೆ
ಭಾನು ಕೀರ್ತಿಯಾಗಿ ಮಿನುಗ-
ಲೆನಿತು ಸುಂದರ?
ತಿಳಿವಿನ ಜಲ ಜೀವ ತಳೆಯ
ಲೆಳಿತು ಬಂಧುರ?
* * *
ಬಂದುರತೆಯೆ ಸುಮಧುರ
ಸುಮಧುರತೆಯೆ ಬಂಧುರ!
*****
ಬೆಂಗಳೂರು : ೧೯೪೩

















