
ಚೆಲುವು ಚೆಲ್ಲುವ ತೊರೆಯ ಕರೆಗಳ,
ಎಂತು ಮೆರೆವಿರೊ ಅರಳುತ!
ಎಂತು ಕೆಲವಿರೊ ಹಕ್ಕಿಗಳಿರಾ,
ಹಲುಬುತಿಹೆನೇ ನರಳುತ!
ಮರದ ಪೊದೆಯಲಿ ಹಾಡಿ, ಹಕ್ಕಿಯೆ,
ಕೊರೆದು ಹೃದಯವ ಬಿರಿಸುವೆ;
ತೊರೆದ ವಂಚಕನೋಲಿಸಿ ನಂಬಿಸಿ
ನಲಿದ ದಿನಗಳ ನೆನಸುವೆ!
ನಿನ್ನ ಗೆಳೆಯನ-ಕೂಡಿ ಹಾಡುವೆ,
ನನ್ನ ಹೃದಯವ ಬಿರಿಸುವೆ;
ಹೀಗೆ ಕೂಡಿದೆ, ಹೀಗೆ ಹಾಡಿದೆ,
ಆಗ, ಈ ಗತಿಯರಿಯದೆ!
ಬಳ್ಳಿಗಳು ಹೆಣೆವುದನು ತೋರುತ
ನಲ್ಲನೊಡನಿಲ್ಲಲೆದೆನೇ!
ತಮ್ಮ ಪ್ರೇಮಕೆ ಹಕ್ಕಿ ನಲಿದರೆ,
ನಮ್ಮ ಪ್ರೇಮಕೆ ನಲಿದೆನೇ!
ಒಲಿದು, ನಲಿದು, ಗುಲಾಬಿಯೊಂದನು
ಮುಳ್ಳುಗಿಡದಲಿ ಕೊಯ್ದೆನೇ;
ಕಳ್ಳ, ಕುಸುಮವ ಕದ್ದು, ಕುಟುಕುವ
ಮುಳ್ಳನೆನ್ನಲಿ ಬಿಟ್ಟನೇ!
*****
BURNS : Bonnie Doon














