ಒಬ್ಬ ಒಕ್ಕಲಿಗನಿಗೆ ತಿಮ್ಮಣ್ಣನೆಂಬ ಒಬ್ಬ ಮಗ. ಬಿಂಬಾಲಿ ಎಂಬ ಮಗಳು ಇದ್ದರು. ಆ ಅಣ್ಣತಂಗಿಯರು ತಮ್ಮ ತೋಟದಲ್ಲಿ ಗೊಂಡೆ ಹೂವಿನ ಗಿಡಗಳನ್ನು ಎರಡು ಸಾಲಿನಲ್ಲಿ ಬೆಳೆಸಿದ್ದರು. ಅಣ್ಣನು ನೆಟ್ಟಗಿಡಗಳಲ್ಲಿ ಹೆಣ್ಣು ಹೂಗಳು, ತಂಗಿಯು ನೆಟ್ಟ ಗಿಡಗಳಲ್ಲಿ ಗಂಡು ಹೂಗಳೂ ಅರಳಿದವು. ಹೆಣ್ಣು ಹೂವುಗಳೇ ಸು೦ದರವಾಗಿರುವುದರಿ೦ದ ಅವುಗಳನ್ನೇ ಹೆಚ್ಚಾಗಿ ಮುಡಿಯುವರು.
ತನ್ನ ಗಿಡದೊಳಗಿನ ಗೊಂಡೆಹೂಗಳನ್ನು ಮುಡಿದವಳನ್ನೇ ತಾನು ಮದುವೆಯಾಗುವೆನೆಂದು ತಿಮ್ಮಣ್ಣನ ಹೂಣಿಕೆ. ತಿಮ್ಮಣ್ಣನು ಗಾಳ ತೆಗೆದುಕೊಂಡು ಮೀನು ಹಿಡಿಯಲು ಹೊಳೆಗೆ ಹೋದಾಗ ಬಿಂಬಾಲಿಯು, ಅಣ್ಣನ ಗೊಂಡೆಗಳನ್ನು ಹರಿದು, ದಂಡೆಕಟ್ಟಿ ಮುಡಿಯಬೇಕೆಂದು ಹೊಳೆಯ ಮೇಲ್ಭಾಗದಲ್ಲಿಳಿದು ಮಿಂದಳು. ತಲೆಗೂದಲನ್ನು ತಿಕ್ಕಿ ತೊಳೆಯುವಾಗ ಒಂದೆರಡು ಎಳೆಗಳು ನೀರಲ್ಲಿ ಹರಿದುಹೋಗಿ, ತಿಮ್ಮಣ್ಣನ ಗಾಳಕ್ಕೆ ಸಿಕ್ಕಿದವು. ಆ ಕೂದಲೆಳೆಗಳನು ತೆಗೆದುಕೊಂಡು ನೋಡಿದರೆ ಅವು ನೀಳವಾಗಿದ್ದವು ; ಚಿನ್ನದಂತೆ ತಳತಳಿಸುತ್ತಿದ್ದವು. ಈ ಚಿನ್ನದ ಕೂದಲಿನವಳು ತನ್ನ ಮಡದಿಯಾಗಬೇಕೆಂದು ಇನ್ನೊಂದು ಪ್ರತಿಜ್ಞೆ ಮಾಡಿದನು.
ಮೀನು ಹಿಡಿದುಕೊಂಡು ತಿಮ್ಮಣ್ಣನು ಮನೆಗೆ ಬರುವಷ್ಣರಲ್ಲಿ ಬಿ೦ಬಾಲಿಯು, ಅಣ್ಣನು ನೆಟ್ಟ ಗಿಡಗಳೂಳಗಿನ ಗೊಂಡೆ ಹೂಗಳಿಂದ ದಂಡೆಕಟ್ಟಿಟ್ಟು, ಅದನ್ನು ಮುಡಿಯಬೇಕೆಂದು ತಲೆಗೆ ಎಣ್ಣಿ ಸವರಿ ಬಾಚಿಕೊಳ್ಳುತ್ತಿದ್ದಳು. ಅದನ್ನು ಕಂಡು ತಿಮ್ಮಣ್ಣ ನೇರವಾಗಿ ತಾಯ ಬಳಿಗೆ ಹೋದನು.
ಅಣ್ಣನ ಪ್ರತಿಜ್ಞೆ ತನಗೆ ಗೊತ್ತಿದ್ದರೂ. ಆತನ ಪ್ರತಿಜ್ಞೆ ತನಗೆ ಬಾಧಕವಲ್ಲ ಎಂದು ಭಾವಿಸಿಯೇ ಪ್ರೀತಿಯ ಗೊಂಡೆಹೂಗಳನ್ನು ಬಿಂಬಾಲಿ ಕೊಯ್ದಿದ್ದಳು.
“ಅವ್ವಾ, ನನ್ನ ಗೊಂಡೆಗಿಡದ ಹೂಗಳನ್ನು ಕೊಯ್ದವರಾರು?” ಎಂದು ಕೇಳಿದನು ತಿಮ್ಮಣ್ಣ. “ಮತ್ತಾರೊ ಕೊಯ್ದಿಲ್ಲ. ನಿನ್ನ ತಂಗಿ ನಾಲ್ಕು ಹೂ ಕೊಯ್ದು ದಂಡೆಕಟ್ಟಿಕೊಂಡಿದ್ದಾಳೆ” ಎಂದಳು ತಾಯಿ.
“ನಾನು ಮಾಡಿದ ಪ್ರತಿಜ್ಞೆ ಬಿಂಬಾಲಿಗೆ ಗೊತ್ತಿದೆ. ಆದ್ದರಿಂದ ಆಕೆ ನನ್ನನ್ನು ಮದುವೆಯಾಗಲು ಸಿದ್ಧಳಾಗಬೇಕು.”
“ಏನೂ ಅರಿಯದ ಹುಡಿಗೆ.. ಹೂಗಳಾಶೆಯಿಂದ ಎರಡು ಹೂ ಕೊಯ್ದರೆ, ತಂಗಿಯನ್ನು ಮದುವೆ ಆಗುವೆಯಾ? ಏನಾದರೂ ಮಾತಾಡಬೇಡ” ಎಂದು ತಾಯಿ ತಿಳಿಹೇಳಿದಳು.
ತಿಮ್ಮಣ್ಣ ಬಿ೦ಬಾಲಿಯ ಬಳಿಗೆ ಹೋಗಿ ಆಕೆ ಬಾಚಿಕೊಳ್ಳುವಾಗ ಉದುರಿದ ಕೂದಲನ್ನೆತ್ತಿ ನೋಡಿದರೆ ಹೊಳೆಯಲ್ಲಿ ಸಿಕ್ಕ ಕೂದಲು ಈಕೆಯದೇ ಎಂದು ಮನೆವರಿಕೆಯಾಯಿತು. “ಅವಳೇ ತನ್ನ ಹೆಂಡತಿಯಾಗಬೇಕೆಂಬ ದೇವಸಂಕಲ್ಪವಿದೆ” ಎಂದು ಬಗೆದು, ತನ್ನ ಕೋಣೆಗೆ ಹೋಗಿ ಮುಸುಕೆಳೆದುಕೊಂಡು ಮಲಗಿದನು. ಊಟಕ್ಕೆ ಬರಲಿಲ್ಲವೆಂದು ತಾಯಿ ಹೋಗಿ ಆತನ ಮುಸುಕೆತ್ತಿ ಅವನನ್ನು ಊಟಕ್ಕೆ ಕರೆದಳು.
“ಅವ್ವಾ ನನ್ನ ಎರಡು ಪ್ರತಿಜ್ಞೆಗಳು ಪೂರಯಿಸಬೇಕಾದರೆ, ನಾನು ತಂಗಿಯನ್ನು ಮದುವೆಯಾಗಲೇಬೇಕು ಅವಳೊಡನೆ ನೀನು ನನ್ನ ಮದುವೆಮಾಡುವವರೆಗೆ ನಾನು ಬಾಯಲ್ಲಿ ತುತ್ತಿಡುವುದಿಲ್ಲ. ಕೈಯಲ್ಲಿ ಕೆಲಸ ಗೈಯುವುದಿಲ್ಲ. ಜೀವವಿಟ್ಟುಕೊಳ್ಳುವದಿಲ್ಲ” ಎಂದಾಗ. ಅವನ ತಂದೆ ಬಂದು ಬುದ್ಧಿ ಹೇಳಿದನು. ಕೇಳಲಿಲ್ಲ.
ತಾಯಿತಂದೆಗಳು ವಿಚಾರಿಸಿ ಒಂದು ನಿರ್ಧಾರಕ್ಕೆ ಬಂದರು. “ಇದ್ದೊಬ್ಬ ಮಗ ನಮ್ಮ ಕಣ್ಣ ಮುಂದೆ ಬದುಕಿದರೆ ಸಾಕು. ತಂಗಿಯ ಸಂಗಡವೇ ಮದುವೆ ಮಾಡಿದರಾಯಿತು” ಎಂದು ಹಂದರು ಹಸಿಜಗಲಿ ಹಾಕಿದರು. ಮದುವೆಯ ಸಲಕರಣೆಗಳನ್ನು ಅಣಿಗೊಳಿಸಿದರು. ಅಡಿಗೆಯ ಸಿದ್ಧತೆ ನಡೆಯಿತು.
“ಬಿಂಬಾಲೀ, ಈ ಅಕ್ಕಿ ತೊಳೆದುಕೊಂಡು ಬಾ” ಎಂದು ತಾಯಿ ಹೇಳಲು, ಆಕೆ ಅಕ್ಕಿಯ ಬುಟ್ಟಿಯನ್ನೆತ್ತಿಕೊಂಡು ಬಾವಿಯ ಕಟ್ಟೆಗೆ ಹೋದಳು. ಅಲ್ಲಿ ಕುಳಿತ ಕಾಗೆ – “ಬಿಂಬಾಲೀ ಬಿಂಬಾಲೀ, ನನಗೆರಡು ಕಾಳು ಒಗೆ. ನಾನೊಂದು ಕತೆ ಹೇಳುತ್ತೇನೆ” ಎನ್ನಲು ಬಿಂಬಾಲಿ ಒಗೆದ ಹಿಡಿ ಅಕ್ಕಿಕಾಳು ತಿಂದು ಕಾಗೆ ಕೇಳಿತು – “ಬಿಂಬಾಲಿ, ನೀನು ನಿನ್ನಣ್ಣನನ್ನು ಮದುವೆ ಆಗುವೆಯಾ?” ಬಿಂಬಾಲಿಗೆ ಸಿಟ್ಟು ಬಂತು. ಅವ್ವನ ಬಳಿಗೆ ಹೋಗಿ ಕಾಗೆಯ ಬಗ್ಗೆ ದೂರು ಹೇಳಿದಳು. “ಕಾಗೆ ಸಾಯಲಿ. ಅದು ಹಾಗೇ ಅಂದುಕೊಳ್ಳಲೊಲ್ಲದೇಕೆ, ಸುಮ್ಮನಿರು” ಎಂದಳು ತಾಯಿ.
ಅಡಿಗೆ ಮನೆಗೆ ಹೋಗಿ ಬಿಂಬಾಲಿ ತೆಂಗು ಒಡೆದು ಹಸಿಕೊಬ್ಬರಿಯನ್ನು ಹೆರೆಸತೊಡಗಿದಳು. ಅತ್ತಿಂದ ಒಂದು ಬೆಕ್ಕು ಬಂದು – “ಬಿಂಬಾಲೀ, ನನಗಿಷ್ಟು ಹೆರೆಕೊಬ್ಬರಿ ಕೂಡು. ನಾನೊಂದು ಕಥೆ ಹೇಳುತ್ತೇನೆಂದು” ಅನ್ನಲು, ಕೊಟ್ಟ ಹೆರೆ ಕೊಬ್ಬರಿ ತಿಂದು – “ಬಿಂಬಾಲೀ, ನೀನು ನಿನ್ನಣ್ಣನನ್ನೇ ಮದುವೆಯಾಗುವೆಯಾ?” ಎಂದು ಕೇಳಿತು. ಬಿಂಬಾಲಿಗೆ ಸಿಟ್ಟುಬಂತು ಅವ್ವನ ಬಳಿಗೆ ಹೋಗಿ ಬೆಕ್ಕಿನ ಬಗ್ಗೆ ದೂರು ಹೇಳಿದಳು. “ಬೆಕ್ಕು ಸಾಯಲಿ. ಅದು ಹಾಗೇ ಅಂದುಕೊಳ್ಳಲೊಲ್ಲದೇಕೆ. ಸುಮನಿರು” ಎ೦ದಳು ತಾಯಿ.
ಅಡಿಗೆ-ಅಂಬಲಿ ಆಯಿತು. ಜಳಕಕ್ಕೆ ನೀರು ಕಾಯ್ದವು. ಒಬ್ಬ ಭಿಕ್ಷುಕಿ ಬಂದು – “ಬಿಂಬಾಲೀ, ಮುಷ್ಟಿ ಕಾಳು ಭಿಕ್ಷೆ ಹಾಕು. ನಾನೊಂದು ಕಥೆ ಹೇಳುತ್ತೇನೆ” ಅನ್ನಲು, ಬಿಂಬಾಲಿ ಅವಳಿಗೆ ಹಿಡಿ ಅಕ್ಕಿ ಹಾಕಲು ಆ ಭಿಕ್ಷುಕಿ ಕೇಳಿದಳು – “ಬಿಂಬಾಲೀ, ನಾನೊಂದು ಸುದ್ದಿ ಕೇಳಿದ್ದೇನೆ. ನೀನು ನಿನ್ನಣ್ಣನನ್ನೇ ಮದುವೆಯಾಗುವೆಯಾ?” ಬಿಂಬಾಲಿಗೆ ತಲೆಕೀಸರಿಟ್ಟು ಅವ್ವನ ಬಳಿಗೆ ಹೋಗಿ, ಭಿಕ್ಷುಕಿಯ ಬಗ್ಗೆ ದೂರು ಹೇಳಿದಳು. “ಮುದುಕಿಸಾಯಲಿ, ಅಂದುಕೊಳ್ಳುವವರು ಅಂದುಕೊಳ್ಳಲಿ..ನೀನು ಸುಮ್ಮನಿರು” ಎಂದಳು ತಾಯಿ.
ಮನೆಯ ಮುಂದೆ ಹಾಕಿದ ಹಂದರ, ಹಸೆ ಜಗಲಿ, ಅಡಿಗೆ-ಬಿಡಿಗೆ ಇವುಗಳನ್ನೆಲ್ಲ ಕಂಡು ಬಿಂಬಾಲಿಗೆ ಅರ್ಥವಾಯಿತು. ಮುಡಿಕಟ್ಟಿಕೊಂಡಳು. ಗೊಂಡೆ ಹೂವಿನ ದಂಡೆಯನ್ನು ಮುಡಿದುಕೊಂಡಳು. ಯಾರಿಗೂ ತಿಳಿಯದಂತೆ ಮನೆಯಿ೦ದ ಹೊರ ಬಿದ್ದು ದೂರದಲ್ಲಿರುವ ಒಂದು ಅಶ್ವತ್ಥ ವೃಕ್ಷವನ್ನೇರಿ ಕುಳಿತುಬಿಟ್ಟಳು.
ಬಿಂಬಾಲಿಯ ಮದುವೆ ಮಾಡಿಸಲು ಭಟ್ಟರು ಬಂದರು. ವಿಧಿವಿಧಾನಗಳು ಮೊದಲಾದವು. ಹೆಣ್ಣನ್ನು ಸಿಂಗರಿಸಿಕೊಂಡು ಹೊರತರಬೇಕೆಂದರೆ ಬಿಂಬಾಲಿಯೆಲ್ಲಿ? ಮನೆ ಹಿತ್ತಿಲ ಮೊದಲುಮಾಡಿ, ಊರ ಕೆರೆ ಬಾವಿ ಹುಡುಕಲು ಜನರನ್ನು ಕಳಿಸಿದರು.
ಅಶ್ವತ್ಥಮರದ ನೆರಳಲ್ಲಿ ಕುಳಿತ ತಿರುಪೆಯವನನ್ನು ನೋಡದೆ, ಬಿಂಬಾಲಿ ಮರದ ಮೇಲಿಂದಲೇ ಪಿಚಕ್ಕನೆ ಉಗುಳಿದಳು. ಅದು ಅವನ ಮೈಮೇಲೆ ಬೀಳಲು ಮುಖವೆತ್ತಿ – “ಮೋಡವಿಲ್ಲ, ಮುಗಿಲಿಲ್ಲ ನೀರೆಲ್ಲಿಯದು ?” ಎಂದು ಮೇಲೆ ನೋಡುವಷ್ಟರಲ್ಲಿ ಬಿಂಬಾಲಿ ಕಾಣಿಸಿದಳು. ಬಿಂಬಾಲಿಯ ಮನೆಯವರು ಆಕೆಯನ್ನು ಹುಡುಕುತ್ತಿದ್ದುದು, ಆಕೆಯ ಮದುವೆಯ ಸಿದ್ಧತೆ ನಡೆದದ್ದೂ ಅವನಿಗೆ ತಿಳಿದಿತ್ತು. ಆಕೆ ತನ್ನ ಮೇಲೆ ಉಗುಳಿದಳೆಂಬ ಸಿಟ್ಟಿನಿಂದ ಅವಳ ಮನೆಗೆ ಹೋಗಿ – “ಅವ್ವಾ, ನಿಮ್ಮ ಮಗಳನ್ನು ತೋರಿಸಿಕೊಡುತ್ತೇನೆ. ನನಗೆ ಎರಡು ಮುಷ್ಟಿ ಅನ್ನ ಹಾಕಿರಿ” ಎಂದು ತನ್ನ ಜೋಳಿಗೆಯನ್ನು ಮುಂದೊಡ್ಡಿದನು. ಮನೆಯವರು ಎರಡಕ್ಕೆ ನಾಲ್ಕು ಮುಷ್ಟಿ ಅಕ್ಕಿ ಹಾಕಿ, ನನ್ನ ಮಗಳನ್ನು ತೋರಿಸೆನ್ನಲು, ಅವನು ಅವರನ್ನು ಅಶ್ವತ್ಥಮರದ ಬಳಿಗೆ ಕರೆತಂದು ಬಿಂಬಾಲಿಯನ್ನು ತೋರಿಸಿದನು. ಮರದ ಮೇಲೆ ಕುಳಿತಿದ್ದ ಬಿಂಬಾಲಿಯನ್ನು ಕಂಡು ತಾಯಿ ಕರೆದಳು –
“ಬಿಂಬಾಲಿ ಬಿಂಬಾಲಿ ಕಾದ ನೀರು ಕಬ್ಬಿಣವಾಯ್ತು
ತೇದ ಅರಿಸಿನ ಗೊಬ್ಬರವಾಯ್ತು
ಹಂಡೆನೀರು ಕಾದವೊ ಮಡ್ಕೆಲನ್ನ ಬೆಂದವೋ.
ಮೀಯೋಕೆ ಬಾರೆ ಬಿಂಬಾಲಿ.”
ಬಿಂಬಾಲಿ ಅಲ್ಲಿಂದಲೇ ಹೇಳಿದೆಳು –
“ಆವಾಗೀನ ಕಾಲದಲ್ಲಿ ಅವ್ವ ಎಂದು ಕರೆದಿದ್ದೆ
ಈವಾಗಿನ ಕಾಲದಲ್ಲಿ ಅತ್ತೆಯೆಂದು ಕರೆಯಲಾರೆ.
ಪಾಪದ ಮೊಕ ತೋರಲಾರೆ, ಬರಲಾರೆ, ಬರಲಾರೆ.”
ತಾಯಿ ಹಿಂದಿರುಗಿ ಹೋದಳು. ತಂದೆ ಬಂದು ಕರೆದನು –
“ಬಿಂಬಾಲಿ ಬಿಂಬಾಲಿ ಕಾದ ನೀರು ಕಬ್ಬಿಣವಾಯ್ತು
ತೇದ ಅರಿಸಿನ ಗೊಬ್ಬರವಾಯ್ತು
ಹಂಡೆನೀರು ಕಾದವೊ ಮಡ್ಕೆಲನ್ನ ಬೆಂದವೊ.
ಮೀಯೋಕೆ ಬಾರೆ ಬಿಂಬಾಲಿ.”
ಮರದ ಮೇಲಿಂದಲೇ ಬಿಂಬಾಲಿ ಪಡಿನುಡಿದಳು –
“ಆವಾಗೀನ ಕಾಲದಲ್ಲಿ ಅಪ್ಪ ಎಂದು ಕರೆದಿದ್ದೆ
ಈವಾಗಿನ ಕಾಲದಲ್ಲಿ ಮಾವನೆಂದು ಕರೆಯಲಾರೆ.
ಪಾಪದ ಮೊಕ ತೋರಲಾರೆ, ಬರಲಾರೆ, ಬರಲಾರೆ.”
ತಂದೆ ಹೋದನು. ಅಣ್ಣ ಬಂದು, ಮೊದಲು ತಾಯ ತಂದೆ ಕರೆದಂತೆ –
“ಮೀಯಲ್ಕೆ ಬಾರೇ ಬಿಂಬಾಲಿ” ಎಂದು ಕರೆದನು. ಅವನಿಗೂ ಮರದ ಮೇಲಿಂದಲೇ ಉತ್ತರ ನೀಡಿದಳು-
“ಆವಾಗೀನ ಕಾಲದಲ್ಲಿ ಅಣ್ಣ ಎಂದು ಕರೆದಿದ್ದೆ
ಈವಾಗಿನ ಕಾಲದಲ್ಲಿ ಪುರುಷ ಕರೆಯಲಾರೆ.
ಪಾಪದ ಮೊಕ ತೋರಲಾರೆ, ಬರಲಾರೆ, ಬರಲಾರೆ.”
ಅಣ್ಣನು ಸಿಟ್ಟಿನಿಂದ ಮನೆಗೆ ಹೋಗಿ ಕೊಡಲಿ ತಂದು ಮರಕಡೆಯಲು ಅನುವಾದನು. ಬಿಂಬಾಲಿ ಸೂರ್ಯನನ್ನು ಪ್ರಾರ್ಥಿಸಿದಳು – “ಸ್ವಾಮೀ, ನನಗೊಂದು ನೂಲಿನುಂಡೆಯನ್ನು ಬಿಡು.” ಆಕಾಶದಿಂದ ನೂಲಿನುಂಡೆ ಬರಲು ನೂಲು ಹಿಡಿದು ಆಕೆ ಸೂರ್ಯಲೋಕಕ್ಕೆ ಹೋದಳು. ಅಲ್ಲಿ ಅವನು ಆಕೆಯನ್ನು ಲಗ್ನವಾದನು.
ಬಿಂಬಾಲಿ ಬಸುರಿಯಾಗಿ ನವಮಾಸ ತುಂಬಿ ಸೂರ್ಯದೇವನಂಥ ಮಗನನ್ನು ಹಡೆದು ಸುಖದಿಂದ ಇರತೊಡಗಿದಳು. ಒಂದು ದಿನ ಪತಿ, ಇದ್ದಕ್ಕಿದ್ದ ಹಾಗೆ -“ಬಿಂಬಾಲಿ, ನನ್ನ ತಲೆಗೂದಲು ಬಿಡಿಸಿನೋಡು. ತಲೆಯೇಕೆ ತುರಿಸುತ್ತದೆ” ಎಂದನು.
ಪತಿಯ ತಲೆಗೂದಲನ್ನು ಬಿಡಿಸಿನೋಡುತ್ತಿರುವಾಗ ಬಿಂಬಾಲಿಗೆ ತನ್ನ ತಾಯಿಯ ನೆನಪಾಯಿತು. ಚಿಕ್ಕಂದಿನಲ್ಲಿ ತಾಯಿಯ ತಲೆಸೋಸಿ ನೋಡಿದ್ದಳು. ದುಃಖದಿಂದ ಕಣ್ಣು ತು೦ಬಿ ನಾಲ್ಕು ಹನಿ ಉದುರಿದವು. ಅವು ಪತಿಯ ಮೇಲೆ ಬೀಳಲು – “ಮೋಡವಿಲ್ಲ ಮಳೆಯಿಲ್ಲ, ಇದೆಲ್ಲಿಯ ನೀರು” ಎಂದು ಕತ್ತೆತ್ತಿ ನೋಡಿದರೆ ಬಿಂಬಾಲಿ ಅಳುತ್ತಿದ್ದಾಳೆ. ಅಳುವ ಕಾರಣವೇನೆಂದು ಕೇಳಲು ಆಕೆ ಹೇಳಿದೆಳು – “ನನ್ನ ತಾಯಿಯ ಹಂಬಲವಾಯ್ತ. ಕಣ್ಣೀರು ಬಂತು.”
“ಹಾಗಾದರೆ ನಿನ್ನನ್ನು ಇಂದೇ ಕೆಳಗಿನ ಲೋಕಕ್ಕೆ ಕಳಿಸುತ್ತೇನೆ. ಮಗುವನ್ನು ಕರೆದುಕೊಂಡು ತಾಯಿತಂದೆಗಳ ಬಳಿಗೆ ಹೋಗಿ ಬಾ” ಎಂದು ಸೂರ್ಯದೇವನು ನೂಲುಂಡೆಯ ಏಣಿಯನ್ನು ಬಿಟ್ಟನು. ಬಿಂಬಾಲಿ ನಾಣ್ಯದ ಚೀಲ ತೆಗೆದುಕೊಂಡು ನೂಲೇಣಿಯಿಂದ ಮಧ್ಯರಾತ್ರಿಯ ಹೊತ್ತಿಗೆ ತವರು ಮನೆಯ ಅಂಗಳದಲ್ಲಿ ಇಳಿದಳು. ಮನೆಯ ಬಾಗಿಲು ಮುಚ್ಚಿತ್ತು. ಬಿಂಬಾಲಿ ಕರೆದಳು –
“ಓ ಅಪ್ಪಾ, ಓ ಅವ್ವ, ಗೆಜ್ಜೆಕಾಲ ಮೊಮ್ಮಗ ಬಂದ
ಗಿಲ್‍ಗಿಲ್ ನುಡಿಸ್ತನಿಂದ. ಓ ಅಪ್ಪ ಅಮ್ಮ ಬನ್ನಿ-“
ಸೂರ್ಯದೇವನು ಮಾಯದ ನಿದ್ರೆ ಕಳಿಸಿ, ಅವರು ಎಚ್ಚರಿಲ್ಲದಂತೆ ಮಾಡಿದ್ದರಿಂದ ಅವರಾರೂ ಏಳಲಿಲ್ಲ; ಕದ ತೆರೆಯಲಿಲ್ಲ.
“ಓ ಅಣ್ಣ ನನ್ನಣ್ಣ ಗೆಜ್ಜೆಕಾಲ ಅಳಿಯ ಬಂದ
ಗಿಲ್‍ಗಿಲ್ ನುಡಿಸ್ತನಿಂದ ಓ ಅಣ್ಣ ಕದ ತೆಗೆಯೋ”
ಅಣ್ಣನೂ ಬರಲಿಲ್ಲ. ಅಂಗಳದಲ್ಲಿ ಬತ್ತ ಕುಟ್ಟುವ ಒರಳಲ್ಲಿ ತಾನು ತಂದ ಹೊನ್ನ ನಾಣ್ಯಗಳನ್ನು ಚೆಲ್ಲಿ, ಮುಂದೆ ನಡೆದು ನೆರೆಮನೆಯ ಅಜ್ಜಿಯನ್ನು ಕರೆದಳು –
“ಆಚೆಮನೆ ಅಜ್ಜಮ್ಮ ಗಜ್ಜೆ ಕಾಲ ಮೊಮ್ಮಗ ಬಂದ
ಗಿಲ್‍ಗಿಲ್ ನುಡಿಸ್ತನಿಂದ, ಓ ಅಜ್ಜಿ ಎದ್ದು ಬಾರೆ.”
ಆಚೆಮನೆಯ ಅಜ್ಜಿ ಎಚ್ಚರಾಗಲು ಎದ್ದು ಬಂದು ಆಕೆ ಬಿಂಬಾಲಿಯನ್ನು ನೋಡಿದಳು. “ದೇವರೇ, ಬಿಂಬಾಲಿ ತವರು ಮನೆಯ ಹಂಬಲದಿಂದ ಬಂದಿದ್ದಾಳೆ. ಒಬ್ಬರಿಗೂ ಎಚ್ಚರಿಲ್ಲ” ಎಂದು ಬಾಗಿಲುದೂಡಿ ಒಳಗೆ ಹೋದಳು. ಹೆಪ್ಪು ಹಾಕಿದ ಮೊಸರನ್ನೇ ತಂದು ಬಿಂಬಾಲಿಗೆ ಕುಡಿಯಲು ಕೊಟ್ಟಳು. ಮಗುವನ್ನೆತ್ತಿಕೊಂಡು ಅವನ ಕೈಯಲ್ಲಿ ದುಡ್ಡು ಕೊಟ್ಟು ಅವನನ್ನು ಕಟ್ಟಾಡಿಸಿದಳು. ಬಿಂಬಾಲಿ ತನ್ನ ಕಥೆಯನ್ನೆಲ್ಲ ಅಜ್ಜಿಗೆ ಹೇಳಿ ತಂದೆ-ತಾಯಿ-ಅಣ್ಣಂದಿರನ್ನು ನೋಡಿಕೊಂಡು ಮರಳಿದಳು.
ನೂಲಿನೇಣಿ ಮತ್ತೆ ಇಳಿದು ಬಂದಿತು. ಬಿಂಬಾಲಿ ಮಗನ ಕಾಲಗೆಜ್ಜಿಗಳೆರಡನ್ನೂ ತೆಗೆದು ಬಾಗಿಲ ಬಳಿ ಇಟ್ಟು – “ಅಜ್ಜೀ ನಾನಿನ್ನು ಬರುತ್ತೇನೆ” ಎಂದವಳೇ ಏಣಿ ಹತ್ತಿ ಸೂರ್ಯಲೋಕಕ್ಕೆ ಹೋದಳು.
ಬೆಳಗಾದ ಮೇಲೆ ಬಿಂಬಾಲಿಯ ತಾಯಿ-ತಂದೆ-ಅಣ್ಣಂದಿರಿಗೆ ಎಚ್ಚರಾಗಲು, ಬಾಗಿಲಲ್ಲಿ ಹುಡುಗರ ಎರಡು ಕಾಲುಗೆಜ್ಜೆಗಳನ್ನು ನೋಡಿದರು. ಒರಳಿನಲ್ಲಿ ನಾಣ್ಯ ರಾಸಿ ತುಂಬಿದ್ದನ್ನು ನೋಡಿ – “ಇವು ಇಲ್ಲಿ ಹೇಗೆ ಬ೦ದವು” ಎಂದು ಒಬ್ಬರನ್ನೊಬ್ಬರು ಕೇಳಿದರು. ಅಷ್ಟರಲ್ಲಿ ನೆರೆಮನೆಯ ಅಜ್ಜಿ ಬಂದು ಮಧ್ಯರಾತ್ರಿಯ ಸುಮಾರಿಗೆ ಬಿಂಬಾಲಿ ಮಗನೊಡನೆ ಸೂರ್ಯಲೋಕದಿಂದ ನೂಲೇಣಿಯಲ್ಲಿಳಿದು ಬಂದಿದ್ದಳು. ಎಷ್ಟು ಕರೆದರೂ ನಿಮಗೆಚ್ಚರಾಗಲಿಲ್ಲ. ಅವಳ ಮಗ ಗೆಜ್ಜಿ ಕಾಲ ಕುಣಿಸುವ ಶಬ್ದ ಕೇಳಲಿಲ್ಲ. ಅವಳು ನನ್ನನ್ನು ಕರೆಯಲು ನನಗೆಚ್ಚರವಾಯಿತು. ಓಡಿ ಬಂದು ಅವಳಿಗೆ ಹೆಪ್ಪು ಹಾಕಿದ ಹಾಲು ಕೊಟ್ಟೆನು. ಮೊಮ್ಮಗನನ್ನು ಎತ್ತಿಕೊಂಡು ಆಡಿಸಿದೆನು. ಚಿನ್ನದ ನಾಣ್ಯಗಳನ್ನು ಅವಳೇ ಒರಳಿನಲ್ಲಿ ಸುರುವಿದಳು. ಹುಡುಗನ ಕಾಲುಗೆಜ್ಜೆಗಳನ್ನು ತಾನು ಬಂದ ಗುರುತಿಗಾಗಿ ಬಿಂಬಾಲಿ ಬಿಟ್ಟು ಹೋಗಿದ್ದಾಳೆ – ಎಂದಳು.
ತಂದೆತಾಯಿಗಳು ತಮ್ಮ ಅದೃಷ್ಟವನ್ನು ನೆನೆದು ದುಃಖಿಸಿದರು. ಬಿ೦ಬಾಲಿಯು ಸೂರ್ಯಲೋಕಕ್ಕೆ ಹೋಗಿ ಅವನನ್ನು ಮದುವೆಯಾಗಿ, ಮಗನನ್ನು ಪಡೆದು ಸುಖವಾಗಿದ್ದಾಳೆ ಎನ್ನುವುದಾದರೂ ಅವಳಿಲ್ಲಿ ಬಂದು ಹೋದದ್ದರಿಂದ ತಿಳಿಯಿತು – ಎಂದು ಕಣ್ಣೀರು ಸುರಿಸಿದರು.
ಬೆಳಗು ಮುಂಜಾವಿನಲ್ಲಿ ಹಕ್ಕಿಗಳೆದ್ದು ಚಿಲಿಪಿಲಿಮಾಡುವಾಗ ಇಂದಿಗೂ ಬಿಂಬಾಲಿಯ ಮಗನ ಗೆಜ್ಜೆಕಾಲುಗಳ ಗಿಲಗಿಲ ಶಬ್ದವನ್ನು ನಾವು ಕೇಳಬಹುದು.
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು