ಗರತಿ ಸಂಗವ್ವ

ಎಡಗೈಯಲ್ಲಿ ಸಿಂಬೆ, ಬಲಗೈಯಲ್ಲಿ ಕೊಡ ಹಿಡಕೊಂಡು ಸಂಗವ್ವನು ನೀರು ತರಲು ಹೊಳೆಗೆ ಹೊರಟಿದ್ದಾಳೆ. ಆ ದಾರಿಯು ಅರಮನೆಯ ಮುಂದೆ ಹಾದು ಹೋಗುವದು. ಕಿತ್ತೂರದೊರೆಯು ಅರಮನೆಯಲ್ಲಿ ಕುಳಿತಲ್ಲಿಂದಲೇ ಸಂಗಮ್ಮನನ್ನು ಕಂಡು ಎದ್ದು ಬಂದು ಕೇಳಿದನು –
“ಹತ್ತೂರು ಕೊಡುತ್ತೇನೆ, ಮುಖತೋರಿಸು.”

“ಹತ್ತೂರು ಕೊಟ್ಟರೂ ನನ್ನ ನತ್ತಿನ ಬೆಲೆಯಾಗುವುದಿಲ್ಲ.  ಅತ್ತೆಯ ಹೊಟ್ಟೆಯಲ್ಲಿ ಹುಟ್ಟಿದವನು ಪ್ರತ್ಯಕ್ಷ ಅರ್ಜುನನೇ ಆಗಿದ್ದಾನೆ. ಆತನ ಕಾಲಕೆರವಿನ ಬೆಲೆ ನಿನಗಿಲ್ಲ” ಎಂದು ಖಂಡತುಂಡವಾಗಿ ನುಡಿದಳು ಸಂಗಮ್ಮ.  ಆದರೇನು, ಹಸಿದ ಹುಲಿಯನ್ನು ಕೆಣಕಿದೆನಲ್ಲ ಎಂದು ಎದೆಗುದಿ ಉಂಟಾಗದೆ ಇರಲಿಲ್ಲ ಆಕೆಗೆ.

ಹೊಳೆಗೆ ಹೇಗೆ ಹೋದಳೋ ನೀರು ಹೇಗೆ ತುಂಬಿದಳೋ ಆಕೆಗೆ ತಿಳಿಯಲಿಲ್ಲ. ತುಂಬಿದ ಕೊಡವನ್ನು ತಲೆಯಮೇಲೆ ಹೊತ್ತುದೇ ತಡ, ಗಾಳಿವೇಗದಿಂದ ಬಂದು ಮನೆಯನ್ನು ಸೇರಿದಳು. ಹೊಟ್ಟೆಯಲ್ಲಿ ಸಾಸಿವೆಯೆಣ್ಣೆ ಕಲೆಸುತ್ತಿತ್ತು.

ಮನೆಗೆ ಬಂದು ನೀರುಕೊಡವನ್ನು ಇಳುಹಿದವಳೇ ತಲೆಕಟ್ಟಿಕೊಂಡು ಸಂಗವ್ವ ಮಲಗಿಯೇಬಿಟ್ಟಳು.

ಕೆಲಸಕ್ಕೆ ಹೋದ ಮಾವಯ್ಯನು ಮನೆಗೆ ಬಂದು, ಸಂಗವ್ವ ಮಲಗಿದ್ದನ್ನು ಕಂಡನು. ತಲೆದಿಂಬಿನ ಬಳಿ ನಿಂತುಕೊಂಡು – “ಯಾಕೆ ಸಂಗಮ್ಮ ಮಲಗಿರುವೆಯಲ್ಲ” ಎಂದನು.

“ಕೈನೋವು, ಕಾಲುನೋವು. ವಿಚಿತ್ರವಾದ ಹಲವು ನೋವು ಮಾವಯ್ಯ.  ಸಾಯುತ್ತೇನೆ, ನೋವು ತಾಳಲಾಸಲ್ಲ – ತವರವರಿಗೆ ಹೇಳಿಕಳಿಸಿರಿ” ವಿನಯದಿಂದ ಸಂಗವ್ವ ನುಡಿದಳು.

ಕೈಹಿಡಿದ ಪತಿದೇವರು ಹೊರಗಿನಿಂದ ಬಂದು ಮಂಚದ ಬಳಿ ನಿಂತು ಕೇಳುತ್ತಾನೆ – “ಯಾಕೆ, ಮಲಗಿಕೊಂಡೆ ಕೆಳದಿ ?”

ಏನು ಹೇಳಲಿ, ಸಂದುಸಂದಿನ ನೋವು. ಸೂಜಿಯೂರುವಸ್ಟು ಸಹ ಸ್ಥಳ ನೋವಿಲ್ಲದಿಲ್ಲ. ಸಾಯುತ್ತೇನೆ ನನ್ನ ದೊರೆಯೇ ಹೆಚ್ಚಿನ ನೋವು !

ಹಾದಿಬೀದಿ ಉಡುಗಿಸಿ, ಹಾಲಿನ ಚಳಿಕೊಡಿರಿ. ಹಾದಿಯಲ್ಲಿ ನಿಂತವರೆಲ್ಲ ಬದಿಗಾಗಿರಿ. ಸಂಗಮ್ಮನ ತಾಯಿ ಅಳುತ್ತ ಬರುತ್ತಿದ್ದಾಳೆ.

ತಿಪ್ಪೆಯನ್ನು ಉಡುಗಿಸಿರಿ, ತುಪ್ಪದ ಚಳಿಕೊಡಿರಿ. ತಿಪ್ಪೆಯೊಳಗಿನ ಮಂದಿಯೆಲ್ಲ ಬದಿಗಾಗಿರಿ. ಸಂಗಮ್ಮನ ತಂದೆ ಅಳುತ್ತ ಬರುತ್ತಿದ್ದಾನೆ.

ಸಂಜ್ಞೆಯಿಂದ ತಾಯಿತಂದೆಗಳನ್ನು ಹತ್ತಿರಕ್ಕೆ ಕರೆದು ಕಿವಿಯಲ್ಲಿ ಹೇಳಿದಳು – ತಾನು ಹೇಳಬೇಕಾದುದನ್ನು. ಆ ಜೀವಬಿಟ್ಟು ಮೃತ್ಯುವನ್ನು ಗೆದ್ದಳು. ಮುಗಿಲ ದಾರಿಯಲ್ಲಿ ನಿಂತು ಕಿತ್ತೂರದೊರೆಯನ್ನು ಈಡಾಡಿದಳು.

ತಲೆಯಲ್ಲಿ ಚಂಡುಹೂವಿನ ದಂಡೆಯಿಂದ ಶೋಭಿಸುತ್ತಿರುವ ಸಂಗಮ್ಮನನ್ನು ಬಾಳೆಯ ಬನದಲ್ಲಿ ಬಯತಿರಿಸಿದರು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಾರೋ ಯಾರೋ ಅಲಿ ಪಾದಕ್ಕೆರಗಿ
Next post ನಿನ್ನ ಹೂಬನದಲ್ಲಿ ಮಾಲಿ ಮಾಡಿಕೊ ನನ್ನ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…