ಒಂದು ಪರ್ವತದ ತಪ್ಪಲು. ಅಲ್ಲಿ ಒಂದು ಸುಂದರ ತಪೋವನ. ಅಲ್ಲಿ ನೆಲೆಯಾಗಿದ್ದ ಗುರುವಿನ ಬಳಿ ಎರಡು ಮಹಾಮೂರ್ಖರ ಗುಂಪು ವಿದ್ಯೆ ಕಲಿಯಲು ಬರುತಿತ್ತು. ಅವರಲ್ಲಿ ಸ್ವಾರ್ಥ, ಈರ್ಷೆ ತುಂಬಿಕೊಂಡಿತ್ತು. ಎರಡು ಗುಂಪುಗಳು ಒಂದೇ ದಾರಿಯಲ್ಲಿ ಬಂದರು. ಹೆಜ್ಜೆ ಹೆಜ್ಜೆಯಲ್ಲಿ ಘರ್ಷಣೆ ಮಾಡುತ್ತಿದ್ದರು. ಹಾದಿಯಲ್ಲಿ ಬರುವಾಗ ವೃಕ್ಷವನ್ನು ಕಂಡರೆ, ಇದು ಇಬ್ಬರದೂ ಸಮ ಪಾಲೆಂದು ಕತ್ತರಿಸಿ ಭಾಗ ಮಾಡುತ್ತಿದ್ದರು. ಹೂಗಳನ್ನು ಬಳ್ಳಿಗಳನ್ನು ಹರಿದು ಹಂಚಿಕೊಳ್ಳುತ್ತಿದ್ದರು. ನಲಿದಾಡುವ ನವಿಲುಗಳನ್ನು ಹಿಡಿದು ರಕ್ಕೆ ಪುಕ್ಕಗಳನ್ನು, ಕಿತ್ತಿ ಹಂಚಿಕೊಳ್ಳುತ್ತಿದ್ದರು. ಹಾಡುವಹಕ್ಕಿಯ ಕೊರಳನ್ನು ಹಿಚುಕಿ, ನನ್ನದು ರಕ್ಕೆ, ನಿನ್ನದು ಪುಕ್ಕ ಎಂದು ಜಗಳವಾಡುತ್ತಿದ್ದರು. ಬೆಟ್ಟದ ಕಲ್ಲು ಗುಡ್ಡಗಳನ್ನು ಎಣಿಸಿಗುಣಿಸಿ ಭಾಗಮಾಡುತ್ತಿದ್ದರು. ಇಂತಹ ಜಗಳ ಗಂಟ ಗುಂಪಿನ ಶಿಷ್ಯರ ನಡುವೆ ಗುರುಗಳು ಬಂದು “ಹೀಗೆ ಏಕೆ ಕಾದಾಡುತ್ತೀರಿ?”
“ಎಲಾ! ಶಿಷ್ಯರೇ ಇಲ್ಲಿ ಬನ್ನಿ. ಹೇಳಿ.”
“ಆಕಾಶ ಯಾರದು?”
ಶಿಷ್ಯರೆಲ್ಲ ಒಂದು ಧ್ವನಿಯಲ್ಲಿ ಉತ್ತರಿಸಿದರು.
“ಎಲ್ಲರದೂ”
“ಭೂಮಿ ಯಾರದು?”
“ಎಲ್ಲರದೂ”
“ಜಲಪಾತ, ನದಿ, ಸಾಗರ ಯಾರದು?”
“ಎಲ್ಲರದೂ”
“ನಕ್ಷತ್ರ, ಸೂರ್ಯ, ಚಂದ್ರ ಯಾರದು?”
“ಎಲ್ಲರದೂ”
“ನೀರು, ಗಾಳಿ, ಬೆಳಕೂ ಯಾರದು?”
“ಎಲ್ಲರದೂ”
“ಗುರು, ದೈವ, ಜಗತ್ತು ಯಾರದು?”
“ಎಲ್ಲರದೂ”
“ಇಂದಿನ ಪಾಠವಾಯಿತು ನಾಳೆ ಬನ್ನಿ” ಎಂದರು ಗುರುಗಳು.
ಎಲ್ಲರೂ ಮರುದಿನ ಬರುವಾಗ ಏಟು ಪೆಟ್ಟುಗಳನ್ನು ತಿಂದು ರಕ್ತ ಸೋರುತ್ತಾ ನಿಂತರು. ಶಿಷ್ಯರ ತಂಡವನ್ನು ನೋಡಿ ಏನಾಯಿತೆಂದು ಗುರುಗಳು ಕೇಳಿದರು.
“ನೆನ್ನೆ ರಾತ್ರಿ ಕೊಳದಲ್ಲಿ, ಚಂದ್ರನಂತೆ ಕಾಣುವ ಬಂಗಾರದ ನಾಣ್ಯಕ್ಕಾಗಿ ನಾವೆಲ್ಲ ಹೋರಾಡಿದವು. ಪರಿಣಾಮವಾಗಿ ನಮ್ಮ ಸ್ಥಿತಿ ಹೀಗಿದೆ” ಎಂದರು.
“ನಿಮ್ಮ ಶಿಷ್ಯ ವೃತ್ತಿಗೆ ಇಂದೇ ನಿವೃತ್ತಿ.” ಎಂದು ಮೂರ್ಖ ಶಿಷ್ಯರನ್ನು ತಪೋವನದಿಂದ ಆಚೆ ಗಡಿಪಾರು ಮಾಡಿದರು.
*****