ಹಠಾತ್ತನೆರಗಿತು ಹಕ್ಕಿ; ಬಲಿಷ್ಠ ರೆಕ್ಕೆಯ ಬಿಚ್ಚಿ
ಬಡಿವ ಪಟಪಟಸದ್ದು. ಬೆಚ್ಚಿದ ಹುಡುಗಿಯನ್ನ
ಕೊಕ್ಕಿಂದ ಹಿಡಿದೆತ್ತಿ, ಮುದ್ದಿಸಿತು ಅಸಹಾಯ ಎದೆಗೆ ಎದೆಯನೊತ್ತಿ
ಸವರುತ್ತ ಅವಳ ತೊಡೆಬೆತ್ತಲೆಯ ಕಪ್ಪಾದ ಜಾಲಪಾದ.
ಗರಿತೆರೆದ ಇಂಥ ಅದ್ಭುತವ ಸಡಲುತ್ತಿರುವ
ತೊಡೆಯಿಂದ ಹೊರಗೆ ತಳ್ಳುವುದು ಹೇಗೆ ?
ಹಂಸತೂಲದ ತೆಕ್ಕೆಯೊಳಗೆ ಸಿಕ್ಕಿರುವ ಮೈ
ಮಿಡಿಯದಿರುವುದು ಹೇಗೆ ಬೆರಗುಕವಿಸಿದ ಎದೆಯ ಬಡಿತಗಳಿಗೆ ?
ತೊಡೆ ಕಂಪಿಸಿದ ಗಳಿಗೆ ಸೃಷ್ಟಿಯಾಯಿತೊ ಹೇಗೆ
ಬಿರಿಬಿಟ್ಟ ಗೋಡೆ, ಉರಿಬಿದ್ದ ಛಾವಣಿ, ಕೋಟೆ,
ಬಲಿಹೋದ ರಾಜ ಅಗಮೆಮ್ನನ್?
ಕಾವು ತೀರಿದ ಹಕ್ಕಿಕೊಕ್ಕು ಕಳಚುವ ಮುಂಚೆ,
ದಿವದ ಪಶುಬಿಗಿತಕ್ಕೆ ಒಳಪಟ್ಟ ಕ್ಷಣದಲ್ಲೆ,
ದತ್ತವಾಯಿತೊ ಹೇಗೆ ಶಕ್ತಿ ಜೊತೆ ಜ್ಞಾನವೂ ಶುಕ್ತಿಯೊಳಗೆ?
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್
ಸ್ಯೂಸ್ (ಗ್ರೀಕ್ ಪುರಾಣದ ಪ್ರಕಾರ) ದೇವತೆಗಳ ರಾಜ. ಅವನು ಹಂಸದ ರೂಪದಲ್ಲಿ ಬಂದು ಮರ್‍ತ್ಯಕನ್ನಿಕೆಯಾದ ಲೀಡಾಳ ಮೇಲೆ ಎರಗಿ ಅವಳನ್ನು ಬಲಾತ್ಕಾರವಾಗಿ ಭೋಗಿಸುತ್ತಾನೆ. ಈ ಕೂಟದಿಂದ, ಹುಟ್ಟಿದ ಇಬ್ಬರು ಹೆಣ್ಣುಮಕ್ಕಳು ಹೆಲೆನ್ ಮತ್ತು ಕ್ಲೈಟಮ್ನೆಸ್ಟ್ರಾ. ಹೆಲೆನ್ ಗಂಡನನ್ನು ಬಿಟ್ಟು ಪ್ಯಾರಿಸ್ ಜೊತೆ ಟ್ರಾಯ್‌ಗೆ ಓಡಿಹೋಗುತ್ತಾಳೆ. ಅವಳ ಸಲುವಾಗಿ ಗ್ರೀಕ್ ಮತ್ತು ಟ್ರೋಜನ್ನರ ನಡುವೆ ಘೋರಯುದ್ಧ ನಡೆದು ಟ್ರಾಯ್‌ನಗರ ಉರಿದುಹೋಗುತ್ತದೆ. ಕ್ಲೈಟಮ್ನೆಸ್ಟ್ರಾ ಗಂಡನಾದ ಅಗ್‌ಮಮ್ನನ್ ಯುದ್ಧಕ್ಕೆ ಹೋದಾಗ ಬೇರೆ ಸಂಬಂಧ ಬೆಳೆಸಿ, ಗಂಡ ಹಿಂತಿರುಗಿ ಬಂದಾಗ ಮೋಸದಿಂದ ಕೊಲ್ಲಿಸುತ್ತಾಳೆ. ದೇವಮೂಲದ್ದೇ ಆದರೂ ಸ್ಯೂಸನ ಕಾಮ ಪರಾಪೇಕ್ಷೆಯನ್ನು ಲೆಕ್ಕಿಸದ್ದು; ಹಿಂಸಾತ್ಮಕವಾದದ್ದು; ಕೇವಲ ಸ್ವಾರ್ಥನಿಷ್ಠವಾದದ್ದು. ಧರ್‍ಮವಿರುದ್ಧವಾದ ಇಂಥ ಕಾಮದಿಂದ ಜನಿಸಿದ ಸಂತಾನ ಲೋಕಮಾರಕವಾದ ಹೊಸ ಅನಾಹುತಗಳಿಗೆ ದಾರಿಮಾಡಿದ್ದನ್ನು ಕವನ ಸೂಚಿಸುವಂತಿದೆ. ಏಟ್ಸನ ಚಿತ್ರಕಶಕ್ತಿಗೆ ಸೊಗಸಾದ ನಿದರ್‍ಶನ ಈ ಪದ್ಯ.