ನನ್ನ ಅಖಂಡ ಪ್ರೀತಿಯನು
ನಿನ್ನ ಬೆಳ್ಳಿ ತಕ್ಕಡಿಯಲ್ಲಿಟ್ಟು
ತೂಗಬೇಡ ಮುಮ್ತಾಜ್
ದೌಲತ್ತಿನ ಆಸರೆಯಿಂದ
ನಿನ್ನ ಜಹಾಂಪನಾಹ್
ನಿನಗೊಂದು ಭವ್ಯ ಇಮಾರತ್ತು ಕಟ್ಟಿಸಿ
ಅದರಲ್ಲಿ ನಿನ್ನ ಗೋರಿ ಮಾಡಿರಬಹುದು.
ಆದರೆ ನನ್ನ ಪ್ರಿಯತಮನ
ಹೃದಯದಲೇ ಕಟ್ಟಿಸಿದ
ಭಾವ ತುಂಬಿದ ಭವ್ಯ ಇಮಾರತ್ತಿಗೆ
ನಿನ್ನ ಅಮೃತ ಶಿಲೆಗಳು
ಸಾಟಿಯಾಗಲಾರವು ಮುಮ್ತಾಜ್
ಪ್ರಿಯ ಮುಮ್ತಾಜ್
ನಿನ್ನ ಸುಂದರ ವದನದ ಮೇಲೆ
ಒಮ್ಮೆ ಕಣ್ಣಾಡಿಸಿ ನೋಡು
ಅಲ್ಲಿ ನಿನ್ನ ಜಹಾಂಪನಾರ
ಶಾಹಿ ದರ್‍ಪದ ಮೊಹರುಗಳು ಕಂಡಾವು
ಯಮುನೆಯ ತೀರದಲ್ಲೊಮ್ಮೆ
ನಿಂತು ಕಣ್ಣುಬಿಟ್ಟು ಸುತ್ತಲೂ
ನೋಡು ಮುಮ್ತಾಜ್
ಅಲ್ಲಿ ನಿನಗೆ ತಿಳಿಜಲದ ಯಮುನೆ
ಶಹೀದಾದ ವೀರ ಸೈನಿಕರ ರಕ್ತದಿಂದ
ಕೆಂಪುದಾದ ಕಂಡೀತು!
ಸುಂದರ ತಾಜಮಹಲೇ
ನಿನ್ನ ಹಕೀಕತ್ತು ಏನೆಂದು
ಎಲ್ಲರಿಗೂ ಗೊತ್ತು
ನಿನ್ನ ಪ್ರೇಮ ಸ್ಮಾರಕದ
ಮುಸುಕಿನ ಮರೆಯಲ್ಲಿ
ನಿಟ್ಟುಸಿರಿಟ್ಟ ಬೇಗಂಗಳೆಷ್ಟೋ?
ತಲೆದಿಂಬಿನಲಿ ಇಂಗಿ ಹೋದ
ಅವರ ಬಿಸಿ ಕಂಬನಿಗಳೆಷ್ಟೋ?
ಉಕ್ಕಿದ ಹರೆಯ ಬಚ್ಚಿಡಲು
ಬಿಕ್ಕಿದ ಜನಾನಾಗಳೆಷ್ಟೋ?
ನಿನ್ನ ಅಡಿಪಾಯದಡಿಯಲ್ಲಿ
ಜಜ್ಜಿ ಹೋಗಿರುವ ಅವಶೇಷಗಳು
ಅಮೃತ ಶಿಲೆಗಳಲ್ಲಿ ಸಿಲುಕಿ
ನಲುಗಿ ಹೋಗಿರುವ
ಬಡ ಶಿಲ್ಪಿಗಳ ಆಕ್ರಂಧನಗಳೆಷ್ಟೋ?
ಅವರ ನಿಟ್ಟುಸಿರಿನ ಶಬ್ದ
ಇಂದಿಗೂ ಭವ್ಯ ತಾಜಮಹಲಿನ
ಮೀನಾರುಗಳಲ್ಲಿ ಪ್ರತಿಧ್ವನಿಸುತ್ತದೆ.
ಗೋರಿಗಳಲ್ಲಿ ಗುನುಗುಟ್ಟುತ್ತದೆ
ನಿನ್ನ ಬಾದಶಹನ ಹೃದಯದಲಿ
ನಿನೊಬ್ಬಳೇನೂ ಅಲ್ಲ ಮುಮ್ತಾಜ್
ತುಂಬಿದ ಜನಾನಾಗಳುಂಟು
ಮುಜರಾಗಳಲ್ಲಿ ಮುಳುಗುವ
ಗೆಜ್ಜೆಯ ನಾದದಲಿ ಮೈಮರೆವ
ಬಡವರ ರಕ್ತ ಹೀರುವ
ಅನೇಕ ಖೂನಿ ಹಕೀಕತ್ತುಗಳಿಂದ
ಸುತ್ತುವರಿದ ನಿನ್ನ ಬಾದಶಹನ
ತಾಜಮಹಲು ಪ್ರೀತಿಯ ಪ್ರತೀಕ
ಹೇಗಾದೀತು ಹೇಳು ಮುಮ್ತಾಜ್
*****