ಜ್ಯೋತಿಗಳ ಸಾಸಿರವನೊಳಕೊಂಡ ನಭದಲ್ಲಿ
ನೂರು ಸೂರ್‍ಯರ ನಡುವೆ ನಿಂತು ಮಿನುಗುವ ತಾರೆ!
ನಿನ್ನ ಕಿರುವೆಳಕ ದೊರೆವೆತ್ತಿಹೆನು, ಮೈದೋರೆ
ನಿನ್ನ ಸುಂದರ ದೀಪ್ತಿ ನನ್ನ ಜೀವಿತದಲ್ಲಿ
ನಿಸ್ಸೀಮ ನಿರವೇದ್ಯವನ್ನರಿವರಿಹರೆಲ್ಲಿ
ಭೂತಲದಿ? ನನಗಿಲ್ಲ ಎಣ್ದೆಸೆಗಳಲಿ ಸೂರೆ-
ಯಾಗುತಿರುವಗ್ಗಳಿಕೆ ಎಳೆತನವ ನೀ ಬೀರೆ,
ನಿನ್ನ ಹಿರಿತನಕೊಪ್ಪಿ ಒಸೆದಿಹೆನು ನಿನ್ನಲ್ಲಿ
ರೋಹಿಣಿಯೆ! ಹೊಳೆಹೊಳವ ನಿನ್ನ ರತ್ನ ಕಿರೀಟ-
ದೊಂದು ಹರಳೊಳು ಮೂಡಬಹುದು ವಿಶ್ವದ ಗುಟ್ಟು,
ನೂರು ಸೂರ್‍ಯರ ಪ್ರಭಯ ಪ್ರತಿಬಿಂಬ, ಚಲುವತಿಯ
ಸಾಮ್ರಾಜ್ಯ! ಜನರೆಲ್ಲ ಕಂಡು ನಿನ್ನೀ ಮಾಟ-
ವನ್ನು ನುಡಿಯುವರಾಗ : “ರೋಹಿಣಿಯ ಹೊಸ ಹುಟ್ಟು
ಕಿರಿದಲ್ಲ. ಅದು ಮೂಡಿಸಿದೆ ಚಿರಂತನ ಕಥಯ!”
*****