ಎಂದೂ ಅವ್ವ ನಾನು ಶಾಲೆಗೆ ಸರಿಯಾಗಿ ಹೋಗುತ್ತಿದ್ದೆನೋ… ಇಲ್ಲವೋ, ಹೇಗೆ ಓದ್ತಾ ಇದ್ದೀನೀಂತಾ ಎಂದೂ ವಿಚಾರಿಸಿದ್ದು ನೆನಪಿಲ್ಲ. ಹಗಲಿಡೀ ಅಥವಾ ರಾತ್ರಿಯಿಡೀ ಆಸ್ಪತ್ರೆಯಲ್ಲಿ ದುಡಿದು ನೆನಪಿಲ್ಲ. ಹಗಲಿಡೀ ಅಥವಾ ರಾತ್ರಿಯಿಡೀ ಆಸ್ಪತ್ರೆಯಲ್ಲಿ ದುಡಿದು ಸುಸ್ತಾಗಿ ಬರುತ್ತಿದ್ದ ಅವ್ವ ಊಟ ಮಾಡಿ ಮಲಗಿಬಿಡುತ್ತಿದ್ದಳು. ಮನೆಯ ಜನರ ಹೊಟ್ಟೆ ತುಂಬಿಸುವುದೇ ತನ್ನ ಧರ್‍ಮವೆಂದು ತಿಳಿದುಕೊಂಡಿದ್ದ ಅವ್ವನಿಗೆ ಶಿಕ್ಷಣದ ಮಹತ್ವದ ಬಗ್ಗೆ ತಿಳಿದಿತ್ತು. ಅಳುತ್ತಿದ್ದರೂ ಎಲ್ಲರನ್ನು ಶಾಲೆಗೆ ಕಳುಹಿಸುತ್ತಿದ್ದಳು.
ನಾನು ನಾಲ್ಕನೆಯ ತರಗತಿಯಲ್ಲಿ ಪಾಸಾಗಿ ಐದನೆಯ ತರಗತಿಗೆ ಹೊರಟು ನಿಂತಾಗ ಅತ್ಯಂತ ಸಂಭ್ರಮಪಟ್ಟಿದ್ದೆ. ಯಾವುದೋ ದೊಡ್ಡ ಕಾರ್‍ಯ ಮಾಡಿದವಳಂತೆ ಹೆಮ್ಮೆಯಿಂದ ಬೀಗಿದ್ದೆ. ನಾನು ಇನ್ನು ಮೇಲೆ ಗಂಭೀರವಾಗಿ ದೊಡ್ಡವಳಂತೆ ಇರಬೇಕೆಂದು ತೀರ್‍ಮಾನಿಸಿದ್ದೆ. ಸಂಜೆ ಶಾಲೆಯಿಂದ ಬರುವಾಗ ಹೂಗಿಡಗಳು ತುಂಬಿದ ಮನೆ, ದೇವಸ್ಥಾನಗಳು ಕಂಡರೆ ಅಲ್ಲಿನ ಹೂಗಳು, ಅರಳುತ್ತಿರುವ ಮೊಗ್ಗುಗಳನ್ನು ಕಿತ್ತು ತರುತ್ತಿದ್ದೆ. ದೊಡ್ಡ ಪಾತ್ರೆಯೊಂದರಲ್ಲಿ ನೀರು ತುಂಬಿಸಿಟ್ಟು ಅದರೊಳಗೆ ತಂದಿದ್ದ ಮೊಗ್ಗುಗಳನ್ನು ಹೂಗಳನ್ನು ಹಾಕುತ್ತಿದ್ದೆ. ಬೆಳಿಗ್ಗೆ ನೋಡಿದಾಗ ಎಲ್ಲಾ ಮೊಗ್ಗುಗಳು ಹೂವಾಗಿ ಅರಳಿ ಪಾತ್ರೆಯಲ್ಲಿದ್ದ ನೀರು ಕಾಣದ ಹಾಗೆ ತುಂಬಿರುತ್ತಿದ್ದವು. ಎಲ್ಲಾ ಹೂಗಳನ್ನು ಕಟ್ಟಿ ಮಾಲೆ ಮಾಡಿ, ನನ್ನ ಗುಂಗುರು ಕೂದಲಿನ ಎರಡು ಮೋಟು ಜಡೆಗಳ ಮೇಲೆ ಸುತ್ತಿಕೊಳ್ಳುತ್ತಿದ್ದೆ. ನಾನೂ ಕೂಡಾ ಆ ಹೂಗಳಂತೆ ಸುಂದರವಾಗಿ ಕಾಣುತ್ತಿದ್ದೇನೆಂಬ ಭ್ರಮೆ!
ಹೀಗೆ ಅಲಂಕರಿಸಿಕೊಂಡು ಶಾಲೆಗೆ ಬರುತ್ತಿದ್ದರೆ ಸೀನಿಯರ್ ವಿದ್ಯಾರ್‍ಥಿನಿಯರು, “ನೋಡು… ತೇರು ಬಂತು…” – ಎಂದು ನನ್ನನ್ನು ಕಂಡು ಛೇಡಿಸುತ್ತಿದ್ದರು. ನಾನು ಕಿವಿಗೆ ಹಾಕಿಕೊಂಡರೂ ಮನಸ್ಸಿಗೆ ತಂದುಕೊಳ್ಳುತ್ತಿರಲಿಲ್ಲ.
ನಾನು ಓದುತ್ತಿದ್ದುದು ಸರ್‍ಕಾರಿ ಹೆಣ್ಣು ಮಕ್ಕಳ ಶಾಲೆ. ಅಲ್ಲಿಗೆ ಹೆಚ್ಚಾಗಿ ಬರುತ್ತಿದ್ದವರಲ್ಲಿ ಕೆಳ ಮಧ್ಯಮ ವರ್‍ಗ, ನಮ್ಮಂತಹ ಬಡವರೂ ಅಲ್ಲದೇ ಶ್ರೀಮಂತರ ಮನೆಯ ಮಕ್ಕಳೂ ಬರುತ್ತಿದ್ದರು. ಯೂನಿಫಾರಂ ಹಾಕುವಂತಿರಲಿಲ್ಲ… ಅಂತಹ ಶಾಲೆಗಳು ಆಗ ಅಷ್ಟಾಗಿರಲಿಲ್ಲ. ಹಾಗಿದ್ದಿದ್ದರೆ, ಶ್ರೀಮಂತರು, ಬಡವರು ಅಂತ ಬಟ್ಟೆಯಿಂದ ಅಳೆಯಲಾಗುತ್ತಿರಲಿಲ್ಲ. ನನ್ನ ಸಹಪಾಠಿಗಳು ನಮ್ಮನ್ನು ನೋಡಿ ನಗುತ್ತಿರಲಿಲ್ಲ.
“ಯಾಕ್ ನೀನು ಲಂಗದೊಳಗ ಪೆಟ್ಟಿಕೋಟ್ ಹಾಕ್ಹಂಗಿಲ್ಲೇನು?”- ಸಹಪಾಠಿಯೊಬ್ಬಳು ಅಂದು ಕೇಳಿದ್ದಳು.
“ಅದ್ಯಾಕ ಬೇಕು? ಈ ಲಂಗಾನೇ ಸಾಕಲ್ವಾ?”-ನಾನು ಸ್ವಾಭಾವಿಕವಾಗಿ ಯೆಂಬಂತೆ ಕೇಳಿದ್ದೆ.
“ಇರೋದು… ನೀನು ಕಿಟಕಿ ಮೇಲೆ ಹತ್ತಿ ನಿಂತಿಲ್ಲ. ಆಗ ಗಾಳಿ ಬೀಸಿ ಬಂದಾಗ ನಿನ್ ಲಂಗ ಹಾರಿ ಮೇಲಕ್ಕೇರಿತ್ತು. ಆಗ ಎಲ್ಲಾ ಕಂಡಿತು ಕಣೆ”- ಕಿಸಕ್ಕನೆ ನಕ್ಕು ಹೇಳಿದ್ದಳು. ನಗು ತಡೆಹಿಡಿಯುವಂತೆ ತನ್ನ ಕೈಯನ್ನು ಬಾಯಿಗೆ ಅಡ್ಡ ಹಿಡಿದು ನಗು ತಡೆಯುವ ಪ್ರಯತ್ನ ಮಾಡಿದ್ದಳು.
ಅಪಮಾನದಿಂದ ನನ್ನ ಮುಖ ಬಣ್ಣ ಕಳೆದುಕೊಂಡಿತ್ತು. ಆದರೂ ಆ ವಯಸ್ಸಿನಲ್ಲೂ ಬಿಡದ ‘ಅಹಂ…’ ಮೇಲುಗೈ ಪಡೆದುಕೊಂಡಿತ್ತು.
“ನೋಡ್ಕೊ…ಹೋಗೇ…”-ಎಂದು ಉಡಾಫೆ ಮಾಡಿ ನಿರ್‍ಲಕ್ಷ್ಯ ತೋರಿದ್ದರೂ, ಅಪಮಾನ, ಕೀಳರಿಮೆ ಎದೆಯನ್ನು ಸುಡುತ್ತಿತ್ತು. ಇವುಗಳೆಲ್ಲದಕ್ಕಿಂತಲೂ ನನ್ನನ್ನು ಕುಗ್ಗುವಂತೆ ಮಾಡುತ್ತಿದ್ದುದೆಂದರೆ ನನ್ನ ದೇಹಕ್ಕಂಟಿಕೊಂಡೇ ಹುಟ್ಟಿದ ನನ್ನ ಕಪ್ಪು ಬಣ್ಣ… ದಿನಗಳು ಕಳೆದ ಹಾಗೆ ‘ಸುಂದರ…’ ಎಂದು ಕರೆಯಿಸಿಕೊಳ್ಳಲು ‘ಬಿಳಿ ಬಣ್ಣ…’ ಎಂದು ತಿಳಿಯಿತು.
“ಕಪ್ಪು ಬಣ್ಣದವರು ಹುಟ್ಟಲೇಬಾರದು” ಎಂಬ ತೀರ್‍ಮಾನಕ್ಕೆ ಬಂದಿದ್ದೆ. ಆದರೆ ನಾನಾಗಲೇ ಹುಟ್ಟಿಯಾಗಿತ್ತು. ಇದರಿಂದ ನನ್ನನ್ನು ಕುಗ್ಗುವಂತೆ ದಿನೇ ದಿನೇ ಮಾಡಲು ಯಶಸ್ವಿಯಾಗಿತ್ತು.
ಮನೆಯಲ್ಲೂ ಪಕ್ಷಪಾತ ಮಾಡುತ್ತಿದ್ದಾರೆಂದೇ ನನಗೆ ಭಾಸವಾಗತೊಡಗಿತ್ತು.
“ನಿನ್ ಬಣ್ಣಕ್ಕೆ ಈ ಬಣ್ಣದ ಫ್ರಾಕ್‌ಗಳು ಸರಿಯಾಗಿರೋಲ್ಲ. ನಿನ್ ಕರೀ ಸೊಣ್ಕಲು ಕಾಲ್ ಎದ್ದು ಕಾಣ್ತೈತೆ. ಕಾಲ್ಗಳು, ಪಾದಗಳವರೆ ಈ ಲಂಗಗಳನ್ನು ಹಾಕ್ಕೊ….”
ಅಲ್ಲಿಗೆ ನನ್ನ ಫ್ರಾಕ್‌ಗಳನ್ನು ತೊಡುವ ಕನಸು ಮುರಿದುಬಿದ್ದಿತ್ತು! ಅವ್ವನ ತರಹಾನೇ ಗೌರವ ವರ್‍ಣದ ನನ್ನ ತಂಗಿ ಗುಂಡು ಗುಂಡಾಗಿದ್ದಳು. ಭಯಸ್ತೆ, ಸಂಪನ್ನೆ ಹೆಚ್ಚು ಯಾರೊಂದಿಗೂ ನನ್ನ ಹಾಗೆ ಕಾಲು ಕೆರೆದು ಜಗಳವಾಡಿದವಳೇ ಅಲ್ಲ. ಇನ್ನು ಹುಡುಗರೊಂದಿಗೆ ಆಟವನ್ನು ಆಡಿದವಳಲ್ಲ. ಅಡಿಗೆ ಮಾಡುವಂತಹ ಮಣ್ಣಿನ ಕುಡಿಕೆಗಳು, ಗೊಂಬೆಗಳೊಡನೆ ಆಡುತ್ತಿದ್ದಳು. ಯಾರೆ ಮನೆಗೆ ಬಂದರೂ ಮುದ್ದು ಮಾಡದೇ ಇರುತ್ತಿರಲಿಲ್ಲ. ಅಂತಹ ಮುದ್ದು ಮಗುವಾಗಿದ್ದಳು. ಯಾವಾಗಲೂ ಅವ್ವನ ಸೆರಗು ಹಿಡಿದೇ ಓಡಾಡುತ್ತಿದ್ದಳು. ಇಲ್ಲವೇ ಅವ್ವನ ತೊಡೆಯ ಮೇಲೆ ಮಲಗಿರುತ್ತಿದ್ದಳು. ಅವ್ವ ಮನೆಯಲ್ಲಿ ಇದ್ದಷ್ಟೂ ಹೊತ್ತು ಅವ್ವನ ಹಿಂದೆ, ಮುಂದೆ ಜೊತೆಯಾಗಿರುತ್ತಿದ್ದಳು. ಆಗೆಲ್ಲಾ ನನ್ನ ಹೊಟ್ಟೆಗೆ ಕಿಚ್ಚು ಹತ್ತಿದಂತಾಗುತ್ತಿತ್ತು. ಜೊತೆಗೆ, ಅಹಂ… ಹಠವೂ ಜಾಸ್ತಿಯಿತ್ತು.
ಮನೆಯವರನ್ನು, ಮನೆಗೆ ಬಂದವರನ್ನು ನನ್ನತ್ತ ನೋಡಲೆಂದು, ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೆ. ಬಂದವರ ಮುಂದೆ ಹೋಗಿ ನಿಲ್ಲುತ್ತಿದ್ದೆ. ಅವ್ವ ಕಣ್ಣು ಸನ್ನೆಯಿಂದ ನನ್ನನ್ನು ಹೋಗುವಂತೆ ಸೂಚಿಸಿದರೂ ತಿಳಿಯದವಳಂತೆ ನಿಂತೇ ಇರುತ್ತಿದ್ದೆ. ಅಷ್ಟರಲ್ಲಿ ನನ್ನ ಸಣ್ಣವ್ವಾ ಮತ್ಯಾವುದೋ ಕೆಲಸಕ್ಕೆಂದು ಒಳಗೆ ಕರೆಯುತ್ತಿದ್ದಳು. ನಾನು ಕೆರಳಿ ಬಿಡುತ್ತಿದ್ದೆ. ಸಣ್ಣವ್ವ ಕರೆಯುತ್ತಿದ್ದರೂ ನಾನು ಅಲ್ಲಿಂದ ಹೋಗಲು ತಯಾರಿರಲಿಲ್ಲ. ಅವ್ವಾ, ಗದರಿ ಕಳುಹಿಸಲು ಪ್ರಯತ್ನಿಸಿದಳು. ನಾನು ಸೀದಾ ಹೊರಗೆ ಹೋಗಿ ಮಣ್ಣಿನ ಮೇಲೆ ಬಿದ್ದು ಹೊರಳಾಡಿ ಅಳುತ್ತಾ ಎಲ್ಲರ ಗಮನ ನನ್ನತ್ತ ಸೆಳೆದುಕೊಳ್ಳಲು ಪ್ರಯತ್ನಿಸಿದ್ದೆ. ಬಂದವರ ಗಮನ ಸೆಳೆಯುವುದಿರಲಿ, ಅವರು ಹೋದ ನಂತರ ಅವ್ವನಿಂದ ಕೋಲು ಮುರಿಯುವವರೆಗೂ ಹೊಡೆತ ತಿನ್ನಬೇಕಾಯಿತು. ಅವ್ವ ನನಗೆ ಹೊಡೆಯುತ್ತಿರುವಾಗ ಯಾರಾದರೂ ತಪ್ಪಿಸಲು ಬಂದರೆ ಅವ್ವನ ಸಿಟ್ಟು ಮತ್ತು ಹೆಚ್ಚಾಗುತ್ತಿತ್ತು.
“ನಿಮ್ಮಪ್ಪ ಸಾಯೋ ಬದಲು ನಾನೇ ಸತ್ತಿದ್ರೆ ಎಷ್ಟೋ ಪಾಡಾಗಿರ್‍ತಿತ್ತು…” ಅವ್ವ ನೋವಿನಿಂದ ಹೇಳುತ್ತಿದ್ದಳು. ನನಗೆ ಹೊಡೆದುದ್ದಕ್ಕಿಂತ ಹೆಚ್ಚಾಗಿ ಹೊಡೆದ ನೋವು ಆಕೆಗೇ ಹೆಚ್ಚಾಗಿರುತ್ತಿತ್ತು.
“ಮತ್ತೆಂದೂ ನಿನ್ನ ಮೈ ಮುಟ್ಟಂಗಿಲ್ಲ. ಏಳು ಉಣ್ಣು…” ಅವ್ವ ತನ್ನ ಪ್ರಯತ್ನ ಮೀರಿ ನನ್ನನ್ನು ಸಾಂತಸ್ವಿಗೊಳಿಸಲು ಯತ್ನಿಸುತ್ತಿದ್ದಳು. ಅತ್ತು ಅತ್ತು ಕಣ್ಣು ತಿಕ್ಕಿಕೊಂಡು ಕೆಂಪು ಮಾಡಿಕೊಂಡುದುದರಿಂದಲೋ ಅಥವಾ ಬಳಲಿಕೆಯಿಂದಲೋ ನಿದ್ದೆ ಆವರಿಸಿ ಬಂದಿತ್ತು. ಮುದುರಿ ಮಲಗಿಕೊಳ್ಳಲು ಯತ್ನಿಸಿದ್ದೆ.
“ಹೀಂಗೆ ಉಪ್ಪಾಸ ಮಕ್ಕೋ ಬಾರ್‍ದು…”
“……..”
“ನಿದ್ರಿ ಬಂತೇನು?”
“ಹೂಂ…”
ಅವ್ವ ತನ್ನ ತೋಳುಗಳಿಂದ ಎತ್ತಿಕೊಂಡು, ಮಕ್ಕಳೆಲ್ಲಾ ಸಾಲಾಗಿ ಮಲಗುತ್ತಿದ್ದ ಚಾಪೆಯ ಮೇಲೆ ಮಲಗಿಸಿ ಹೊದಿಕೆ ಹೊದಿಸುತ್ತಿದ್ದಳು. ಹೀಗೆ, ಅವ್ವನ ಸಾಮೀಪ್ಯ ಪ್ರೀತಿಯ ಅಪ್ಪುಗೆ, ನಯ-ನುಡಿಗಳಿಗಾಗಿ ಹಂಬಲಿಸುತ್ತಿದ್ದೆ. ಆದರೆ ಅವ್ವ, ನಮ್ಮನ್ನೆಲ್ಲಾ ಪ್ರೀತಿ ಮಾಡುತ್ತಿದ್ದಳು. ಆದರೆ ಮುದ್ದು ಮಾಡುತ್ತಿರಲಿಲ್ಲ. ಅತ್ಯಂತ ಎಚ್ಚರಿಕೆ ಎಷ್ಟು ಬೇಕೋ ಅಷ್ಟು ಶಿಸ್ತಿನಿಂದ ಬೆಳೆಸುತ್ತಿದ್ದಳು. ಪ್ರಾಣಿಗಳನ್ನು ಸಾಕುವಂತೆ, ತಂದು ಹಾಕಿ ತಿಂದು ಬೆಳೆಯುವ ರೀತಿ ಸಾಕುತ್ತಿರಲಿಲ್ಲ. ತನ್ನ ಬದುಕಿನ ಒತ್ತಡ ನೋವುಗಳಿಂದ ಮೊದಲಿದ್ದ ಮೃದುತ್ವವನ್ನು ಕಳೆದುಕೊಂಡಿದ್ದಳೋ ಏನೋ? ಅವ್ವ… ಮನೆಯಲ್ಲಿರುವಾಗಲೆಲ್ಲಾ “ಗಪ್… ಚುಪ್…” ಆಗಿರುತ್ತಿದ್ದೆವು. ತಂದೆಯಿಲ್ಲದ ಹೆಣ್ಣು ಮಕ್ಕಳನ್ನು ಹೇಗೆಲ್ಲಾ ಬೆಳೆಯಿಸಬೇಕೆಂದುಕೊಂಡಿದ್ದಳೋ ಹಾಗೆಯೇ, ಆ ನಿಟ್ಟಿನಲ್ಲಿಯೇ ಯಾವಾಗಲೂ ಯೋಚಿಸುತ್ತಿದ್ದಳು… “ಅವ್ವಾ… ಒಳ್ಳೇ ಪೋಲಿಸ್ ಥರಾನೆ” ಎಂದು ಬೆನ್ನ ಹಿಂದೆ ಮೆಲ್ಲಗೆ ಮಾತನಾಡಿಕೊಳ್ಳುತ್ತಿದ್ದೆವು. ಯಾವಾಗಲೂ ಗಂಭೀರ ಮುಖವಾಡ ಧರಿಸಿರುತ್ತಿದ್ದಳು. ನಕ್ಕು ಮುಖದಲ್ಲಿ ಬದಲಾವಣೆ ಕಂಡರೆ ಎಲ್ಲಿ ನಾವೆಲ್ಲಾ ‘ಸಲಿಗೆ’ ತೆಗೆದುಕೊಂಡು ಬಿಡುತ್ತೇವೋ ಎಂದು ಜಾಗರೂಕತೆಯಿಂದ ಅಜ್ಜನನ್ನು ಬಿಟ್ಟು ಉಳಿದ ಎಲ್ಲರೊಂದಿಗೂ ಅವ್ವ distance Maintain ಮಾಡಿಕೊಂಡಿರುತ್ತಿದ್ದಳು.
ಯಾವುದಾದರೂ ಕಾರಣ ಜ್ವರ, ಕೆಮ್ಮಿನಂತಹ ಕೆಮ್ಮು ಬಂದಾಗ ಅವ್ವನ ಸಾಮೀಪ್ಯ ನನಗೆ ಸಿಗುತ್ತಿತ್ತು. ಆದರೆ ನನ್ನ ತಂಗಿ ಮಾತ್ರ ಅವ್ವನಿಗಂಟಿಕೊಂಡೇ ಇರುತ್ತಿದ್ದಳು. ಯಾವಾಗಲೂ ಅವಳಿಗೆ ನನ್ನ ಹಾಗೆ ಕಾಯಿಲೆಯ ನೆಪವಿರುತ್ತಿರಲಿಲ್ಲ. ಜ್ವರ ಬಂದರೆ ನನ್ನನ್ನು ಹತ್ತಿರ ಕರೆದು, ಹಣೆಗೆ ತಣ್ಣೀರು ಬಟ್ಟೆ ತಟ್ಟುತ್ತಿದ್ದಳು. ಆಗೆಲ್ಲಾ ನನ್ನ ತಲೆ ಅವ್ವನ ತೊಡೆಯ ಮೇಲಿರುತ್ತಿತ್ತು. ನನ್ನ ತಂಗಿ ದೂರ ಕುಳಿತುಕೊಳ್ಳುತ್ತಿದ್ದಳು. ಅಪ್ಯಾಯಮಾನವಾಗುತ್ತಿತ್ತು. ಒಲೆಯಲ್ಲಿದ್ದ ಬೂದಿಯನ್ನು ನನ್ನಪ್ಪಿಕೊಂಡು ಕಿವಿಗಳಿಗೆ, ತಿಕ್ಕುತ್ತಾ,
“ನೋಡು, ಜ್ವರ ಬಂದಿದ್ದಕ್ಕೆ ಕಿವಿಗಳು ಹೆಂಗ್ ಸೆಟ್‌ಗೊಂಡಿವೆ” ಎನ್ನುತ್ತಾ ಅಪ್ಪಿಕೊಂಡು ಕಿವಿಗಳನ್ನೆಳೆದು ಲಟಿಕೆ ತೆಗೆಯುತ್ತಿದ್ದಳು. ನೋವಾದರೂ ಸಹಿಸಿಕೊಳ್ಳುತ್ತಿದ್ದೆ. ಏಕೆಂದರೆ ಅವ್ವ ನನ್ನನ್ನು ಎದೆಗಪ್ಪಿಕೊಂಡು ಸಂತೈಸುತ್ತಿದ್ದಳು. ಊಟದ ಬದಲು ಬಿಸಿ ಗಂಜಿಯನ್ನು ಕುಡಿಸುತ್ತಿದ್ದಳು. ಆಗೆಲ್ಲಾ ಎಂಥಾ ಸುಖವಿರುತ್ತಿತ್ತು!
ತಿಂಗಳಿಡೀ ಜ್ವರ ಇರಬಾರದೆ? ಎಂದುಕೊಳ್ಳುತ್ತಿದೆ. ನನಗೆ ಮಾತ್ರೆಗಳನ್ನು ತಂದು ನುಂಗುವಂತೆ ಹೇಳುವಾಗ ಅವ್ವ ಮೃದುವಾಗಿರುತ್ತಿದ್ದಳು. ಅವಳ ಪ್ರೀತಿ, ಕಕ್ಕುಲತೆ, ಚಿಕಿತ್ಸೆಯಿಂದ ಬೇಗನೇ ಜ್ವರ ವಾಸಿಯಾಗಿಬಿಡುತ್ತಿತ್ತು. ಜ್ವರವೊಂದನ್ನು ಬಿಟ್ಟರೆ ಯಾವುದೇ ಕಾಯಿಲೆಗಳು ನನ್ನನ್ನು ಕಾಡಿದ ನೆನಪಿಲ್ಲ. ಅವೂ ನನಗೆ ಶತ್ರುಗಳಾಗಿ ಬಿಟ್ಟಿದ್ದವು.
*****