“ತಿಣಕದಿರು ಸುಖದ ಸಂಪಾದನೆಗೆ -ಒಂದಿನಿಸು
ನಗೆ, ಇನಿಸು ದುಃಖ ವಿಸ್ಮೃತಿ, ಇನಿಸು ಲೋಕಾನು-
ಭವವು, ರಸಿಕತೆ ಇನಿಸು, ತಾಳ್ಮೆಯಿರೆ ಇನಿಸಾನು;
ಹಲಸು ಕಾತಂತೆ ರಸಭಾವ ರೋಮಾಂಚಿತಸು.
ಹಸು ಕರುವಿನೆಡೆಗೆ ಕೆಚ್ಚಲುದೊರೆದು ಬರುವಂತೆ,
ಅಂಬೆಗರೆಯಲು ಕರುಳು, ಆನಂದ ತೊರೆಯುವದು,
ಹರಿಯುವದು, ಮೇರೆವರೆಯುವದು, ಹೃದಯದೊಳು ವಿಧು
ಬಿಂಬ ತುಂಬುವದು. ಬರಿದೇಕೆ ಭ್ರಾಂತಿಯ ಚಿಂತೆ?”
ಸುಖ ಸುಲಭ, ಅದರ ಹದ ದುರ್‍ಲಭವು ಎನುವ ರೀ-
ತಿಯು ರಮ್ಯ! ನಗೆ ಪಾರಿಜಾತ ಸುಕುಮಾರ ಸುಮ,
ಕಲ್ಲೊಳಕ್ಕರ ದುಃಖ; ಲೋಕಾನುಭವ ದರೀ-
ಕುಹರಗರ್‍ಜನೆ; ರಸಿಕಲಹರಿಯದು ಡಂಭ ಸಮ
ಸರಣಿ; ತಾಳ್ಮೆಯು ಕಪ್ಪೆ ತೂಕ; ಯೋಗವು ಹರೀ-
ಚ್ಛೆಯು; ಸುಖವು ಭ್ರಮವು; ಈ ಮನದ ಪಾಕವೆ ವಿಷಮ.
*****