ಪ್ರಿಯ ಸಖಿ,
ಜಿ.ಎಸ್. ಶಿವರುದ್ರಪ್ಪನವರ ಕವನದ ಕೆಲ ಸಾಲುಗಳು ನೆನಪಾಗುತ್ತಿದೆ.
ಪ್ರಶ್ನೆಯಿಲ್ಲದ ಬದುಕೊಂದು
ಬದುಕೆ ?
ನನಗಿಲ್ಲ ಪೂರ್ಣ ವಿರಾಮವನ್ನರಸಿ
ನಡೆಯುವ ಬಯಕೆ,
ಈ ಪ್ರಶ್ನೆಯ ಕೆಳಗೆ ಮಡಿಸಿರುವ
ಸಂಶಯದ ನೆರಳ
ಬಿಚ್ಚಿ ನಡೆಯುವುದು ನನಗಿಷ್ಟ
ಎಷ್ಟು ಸೊಗಸಾದ ಸಾಲುಗಳಲ್ಲವೇ ? ನಿಜಕ್ಕೂ ಪ್ರಶ್ನೆಯಿಲ್ಲದ ಬದುಕು ಬದುಕೆ? ಉತ್ತರಗಳಿಲ್ಲದೆಯೂ ಬದುಕಬಹುದು. ಆದರೆ ನಿರಂತರ ಪ್ರಶ್ನೆ ಮಾಡುವ ಮನಸ್ಸು ನಮ್ಮಲ್ಲಿರಬೇಕು. ಪ್ರಶ್ನೆಗಳಿಗೆ ಉತ್ತರ ಸಿಗಲಿ ಬಿಡಲಿ, ಉತ್ತರಗಳನ್ನು ಹುಡುಕುವ ಪ್ರಶ್ನೆಗಳನ್ನು ಕೆದಕುತ್ತಾ ಸಾಗುವ ದಿಟ್ಟತನ ನಮಗೆ ಬೇಕು.
ನಮ್ಮಲ್ಲಿ ಎಷ್ಟೊಂದು ಜನರಿಗೆ ಯಾವುದಕ್ಕೂ ಪುರಸೊತ್ತಿಲ್ಲ. ಆಂಗ್ಲ ಕವಿಯೊಬ್ಬ ಹೇಳುತ್ತಾನೆ, Take time to live. Because the world has so much to give…ಬದುಕಲು ಸಮಯ ಮಾಡಿಕೋ ಏಕೆಂದರೆ ನಿನಗಾಗಿ ನೀಡಲು ಈ ಜಗತ್ತಿಗೆ ಬಹಳಷ್ಟಿದೆ. ನಮ್ಮದೇ ಕಷ್ಟ, ದುಃಖ ಸಮಸ್ಯೆಗಳ ಜಾಲದಲ್ಲಿ ಸುತ್ತಿಕೊಂಡಿರುವ ನಮಗೆ,
ಹೃದಯ ತೆರೆದು ಹೀಗೆ ಬದುಕಲು, ಜಗತ್ತಿನ ಆಗು-ಹೋಗುಗಳಿಗೆ ಸ್ಪಂದಿಸಲು ಸಮಯವಿದೆಯೇ? ಅಥವಾ ಆಸಕ್ತಿಯಿದೆಯೇ?
ಒಬ್ಬ ವ್ಯಕ್ತಿ ನಿಜಕ್ಕೂ ಬದುಕಿದ್ದಾನೆಂದು ತಿಳಿಯುವುದೇ ಅವನಲ್ಲಿರುವ ಅದಮ್ಯ ಕುತೂಹಲದಿಂದ. ಎಲ್ಲವನ್ನೂ ಒಳಗೊಂಡ ಬದುಕನ್ನು ತಿಳಿಯಬೇಕೆಂದು ಪ್ರಶ್ನೆ ಮೇಲೆ ಪ್ರಶ್ನೆ ಹಾಕುವ ವ್ಯಕ್ತಿ, ಉತ್ತರಗಳನ್ನು ಅರಸುವ ವ್ಯಕ್ತಿ ಸದಾಕಾಲ ಜೀವಂತವಾಗಿರುತ್ತಾನೆ.
ಇಲ್ಲದಿದ್ದವನು ಬದುಕಿದ್ದೂ ಸತ್ತಂತೆ!
ಪ್ರಿಯ ಸಖಿ, ನಾವೂ ಬದುಕಲು ಒಂದಿಷ್ಟು ಸಮಯ ಮಾಡಿಕೊಳ್ಳೋಣ. ಜಗತ್ತು ನಮಗಾಗಿ ನೀಡಲು ಕಾದಿರುವ ಎಲ್ಲವನ್ನೂ ಆಸ್ವಾದಿಸೋಣ. ಪ್ರಶ್ನೆಗಳೂ ನಮ್ಮನ್ನು ಕಾಡಲಿ. ಉತ್ತರಗಳಿಗಾಗಿ ಹುಡುಕಾಡೋಣ. ಎಲ್ಲಕ್ಕೂ ಮೊದಲು ಹೃದಯ ತೆರೆದು ಬದುಕಲು ಪ್ರಯತ್ನಿಸೋಣ. ನೀನೇನನ್ನುತ್ತೀ ಸಖಿ? ಸಮಯ ಮೀರುತ್ತಿದೆ ಇನ್ನು ಬರಲೆ?
*****