ಹುಟ್ಟಿತು
ಕವನ ಹುಟ್ಟಿತೂ
ಕವನ ಹುಟ್ಟಿತೂ ಕೇಳಾ
ಎಲ್ಲಿಂದಲೋ ಹೇಗೋ ಏನೋ
ಹಾರಿಬಂದ ಕನಸಿನ ಬೊಟ್ಟು
ಮೈಯೊಳಗೆ ನೆಟ್ಟು
ನೆತ್ತಿಯಿಂದ ಹೆಬ್ಬೆರಳ
ತುದಿಯೊರೆಗೂ
ಬಯಕೆ ಬಾಯ್ತೆರೆದಾ ಬಸುರು.
ದಿನದಿನಕು ಕಣ್‌ಮೂಗು ಮೂಡಿ
ಮೈಕೈ ತುಂಬಿ ಹಾಡಿ
ಒಳಗೇ ಬಲಿಯುತಾ
ಕನಸಿನ ಜೀವಭಾವ
ದಿನತುಂಬಿ ಬಂದು
ಏನೋ ನೋವು ಎದೆಯಲ್ಲಿ ನಿಂದು
ಎಂದು ಬರುವುದೋ
ಎಂತು ಬರುವುದೋ
ಬಾರದೇ ಉಳಿವುದೋ
ಯಾವ ರೂಪವೋ
ಹಂಬಲಿಸಿ ಕಾದುಕೂತ
ಕಸೂತಿ ಕನಸವಸ್ತ್ರ
ಕಾಯುವಿಕೆಯ ಅನಂತತೆಯಲ್ಲೇ
ಅಮೂರ್ತ ಕನಸು ಪಕ್ವಗೊಂಡು
ಮೂರ್ತ ಶರೀರದ ಕೈಹಿಡಿದು
ಹೊರಬಿದ್ದ ಗಳಿಗೆ ಕನಸು ನನಸಾಯಿತು
ಹನಿಯು ಸಾಗರವಾಯಿತು
ಭಾವವೊಂದು ಕವನವಾಯಿತು
*****