ಅಯ್ಯ, ಈ ಮಹಾಘನವ ಕಾಂಬುದಕ್ಕೆ,
ಹಸಿವು ಕೆಡಬೇಕು. ತೃಷೆಯಡಗಬೇಕು.
ವ್ಯಸನ ನಿಲ್ಲಬೇಕು. ನಿದ್ರೆ ಹರಿಯಬೇಕು.
ಜೀವ ಬುದ್ಧಿ ಹಿಂಗಬೇಕು.
ಮನ ಪವನ ಬಿಂದು ಒಡಗೂಡಬೇಕು.
ಚಿತ್ತ ಒತ್ತಟ್ಟಿಗೆ ಹೋಗದಿರಬೇಕು.
ಹೊತ್ತು ಹೊತ್ತಿಗೆ ಎತ್ತರವನೇರಿ,
ಬೆಚ್ಚು ಬೇರಿಲ್ಲದೆ ಲಿಂಗದೊಳಗೆ
ಅಚ್ಚೊತ್ತಿದಂತೆ ಬೆರೆದರೆ,
ಕತ್ತಲೆ ಹರಿಯುವದು. ಮರವೆ ಹಿಂಗುವದು,
ನಿದ್ರೆ ಹರಿಯುವದು, ಹಸಿವು ಕೆಡುವುದು,
ತೃಷೆಯಡಗುವದು, ವ್ಯಸನ ನಿಲ್ಲುವುದು.
ಇವೆಲ್ಲವನು ಹಿಂಗಿಸಿ ತಾ ಲಿಂಗ
ವ್ಯಸನಿಯಾಗಬಲ್ಲರೆ ಮುಂದೆ ಮಹಾ ಮಂಗಳದ
ಬೆಳಗು ಕಾಣಿಪುದೆಂದರು
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ