ಲಕ್ಷ ಲಕ್ಷ ಯೋನಿಗಳಲ್ಲಿ ತೇಲಿ
ಬಂದೆಯಾ ಭುವಿಗೆ ಮಾನವಾ
ಅತ್ಯಮುಲ್ಯದ ಈ ದೇಹವ ಪಡೆದು
ಆಗ ಬೇಡ ನೀನೆಂದು ದಾನವಾ
ಬರುವಾಗ ಬಂದೆ ದೇಹದೊಂದಿಗೆ
ಹೋಗುವಾಗ ಶರೀರವು ಬಾರದು
ಹೊನ್ನು ಸಂಪತ್ತು ಸಂಚಯಿಸಿದ್ದು
ನಿನ್ನ ಸಾವಿಗೆ ಅದು ಅಡ್ಡಬಾರದು
ಬಂಧು ಬಾಂಧವರು ಆತ್ಮೀಯರೆ!
ಅವರ ತಮ್ಮ ಸುಖಕ್ಕೆ ಕಾದಿಹರು
ನೀನು ಸತ್ತ ಕ್ಷಣದ ಒಳಗೆ
ನಿನ್ನ ತನುವಿಗೆ ಬೆಂಕಿ ಇಡುವರು
ಸಂತೆ ಇದು ಜಗ ಬಣ್ಣದ ಬದುಕು
ಜಾತ್ರೆ ಮುಗಿದರಾಯ್ತು ಇಲ್ಲವಾಗ್ವುದು
ಕರ್‍ಮಧರ್‍ಮಗಳ ಗಂಟುಮೂಟೆಯ
ಹೊತ್ತು ಧರಿಸು, ಇಲ್ಲವೆನ್ನಲಾಗದು
ಕಾಲ ಮಿಂಚಿಲ್ಲ ಮನವು ನಿನ್ನದು ಈಗ
ದುಡಿಸಿಕೊ ದೇವ ಮಾರ್‍ಗದಿ ನಡೆಸಿಕೊ
ನಿನ್ನ ಬುತ್ತಿಯ ಗಂಟಲಿ ಪುಣ್ಯವೇ ಇರಲಿ
ಮಾಣಿಕ್ಯವಿಠಲನಾಗಿ ನಿನ್ನ ದುಡಿಸಿಕೊ
*****