ದಾನವಹೃತ ಮೇದಿನಿಯಂ
ದಂಷ್ಟಾಗ್ರದೊಳಿರಿಸಿ,
ಭೂದಾರಂ ಪಾತಾಳವ-
ನುಳಿದೆದ್ದನೋ ಎನಿಸಿ,
ದೂರದಿಗಂತದೊಳೊಪ್ಪಿದೆ-
ರವಿ ಮಂಡಿತ ಶೃಂಗಂ,
ನೀಲಾಚಲಮುದ್ದೀಪಿತ
ಪೂರ್ವೋದಧಿಸಂಗಂ.
ಕನ್ನೆಯ ನಿದ್ದೆಯು ಸಡಿಲಲು
ಮುತ್ತಿಟ್ಟನೋ ಧೀರಂ!
ಹೊಲ್ಲಳ ಶಾಪಂ ತೊಲಗಿತೊ
ಬಹುಗಾಢ ಗಭೀರಂ!
ಚಿನ್ಮುಖವಾಯಿತೊ ಲೋಕಂ,
ಉಕ್ಕುಕ್ಕಿತೊ ಹರ್ಷಂ!
ಸೋಜಿಗಮೇನೆಸಗಿಹುದೊ
ಇನಕರ ಸಂಸ್ಪರ್ಶಂ!
ಮಿಸುಮಿಸುಗಿದೆ ಪಸುರ್ಮುಡಿಯೊಳು
ಮಂಜಿನ ಹರಳುಹನಿ;
ಪಿಸುಮಾತೊಲು ದೆಸೆ ದೆಸೆಯೊಳು
ಹಬ್ಬಿದೆ ಎಲೆಯ ದನಿ;
ಚಿಲಿಪಿಲಿ ಹಾಡಿಗೆ ಗುಬ್ಬಿಯ
ಥಕ ಥೋಂ ಧಿಕ್ಕಿಟ್ಟಿ;
ಏನೀಕ್ಷಿಸಲಿಂತರಳಿದೆ
ತಾವರೆ ಹೂದಿಟ್ಟಿ!
ದಿನ ದಿನದಂತಲ್ಲೀ ದಿನ-
ನವಸುಂದರಮೆಲ್ಲಂ;
ಹೊಸ ಸೃಷ್ಟಿಯ ಕನಸೊಂದನು
ಬಗೆಗೊಂಡನೊ ನಲ್ಲಂ-
ಈ ಖಗವೀ ಮೃಗವೇ ನಗ-
ವೀ ವನ ಕಂದರವಂ,
ಮಂಜುಳನಾದಿನಿ ಧುನಿಯಂ,
ಸ್ವರ್ಣಾರುಣ ನಭವಂ.
ಪಗಲಂ ಈ ಚೆಂಬೆಳಕೊಲು –
ಆವುದೊ ಅನುರಾಗಂ,
ಎಲರಂ ಈ ಸೌರಭದೊಲು-
ಆವುದೊ ಅನುಭೋಗಂ,
ಬಗೆ ಬೆಳಗಿದೆ, ಮನಕಾಗಿದೆ-
ಅಂದಿನ ದಿನದಂತೆ,
ಮೋಹನನೆನ್ನ೦ ಮೋಹಿಸಿ
ರಾಸಕೆ ಕರೆದಂತೆ.
*****