ಬಲ್ಗೇರಿಯಾ ದೇಶದಲ್ಲಿ ಶತಾಯುಷಿಗಳ ಆಯುಷ್ಯದ ಗುಟ್ಟೇನು? ಎಂದು ತಿಳಿಯಲು ವಯೋವೃದ್ದರನ್ನು (ನೂರಾರುಜನ) ಬೇಟಿ ಮಾಡಿ ಪರೀಕ್ಷಿಸಿದಾಗ ಅದರಲ್ಲಿ ಸೆ. ೯೦ ಭಾಗ ಮೊಸರನ್ನೇ ಹೇರಳವಾಗಿ ಉಪಯೋಗಿಸುತ್ತಿದ್ದರೆಂದು ತಿಳಿದು ಬಂದಿತು. ಇದರಿಂದಾಗಿ ಸರಳವಾಗಿ ಮೊಸರಿನಲ್ಲಿರುವ ಆಯುಷ್ಯವರ್‍ಧಕದ ಸತ್ಯ ಬೆಳಕಿಗೆ ಬಂದಿತು. ಇದರಂತೆ ರಷಿಯಾದ ಪ್ರಖ್ಯಾತ ಆಹಾರ ತಜ್ಞ ಹಾಗೂ ಸಂಶೋಧಕರೂ ಆದ ಡಾ|| ಮೆಜ್‌ನಿಕೋಫ್‌ರವರು ಮೊಸರಿನಿಂದ ಅಕಾಲ ಮುಪ್ಪನ್ನು ತಡೆಗಟ್ಟಬಹುದಲ್ಲದೇ ಕರುಳಿಗೆ ಸಂಬಂಧಿಸಿದ ರೋಗಗಳನ್ನು ನಿವಾರಿಸಬಹುದೆಂದು ವೈಜ್ಞಾನಿಕವಾಗಿ ಸಾಬೀತುಪಡಿಸಿದರು. ಮೊಸರಿಗೆ ಪ್ರಸಿದ್ಧಿ ಪಡೆದಿದ್ದ ಬಲ್ಗೇರಿಯಾ ನಂತರ ಇರಾನ್, ಇರಾಕ್ ರಷಿಯಾ, ಮತ್ತು ಯುರೋಪಿಗಳಿಗೆ ಈ ಪ್ರಸಿದ್ಧಿಯನ್ನು ಬಿಟ್ಟುಕೊಟ್ಟಿತು. ಸ್ವಾರಸ್ಯವೆಂದರೆ ರಷಿಯಾದಲ್ಲಿ ಹಸು, ಎಮ್ಮೆಗಳ ಹಾಲಿನಿಂದಲ್ಲದೇ ಕುರಿ, ಕತ್ತೆ ಮತ್ತು ಆಡುಗಳ ಹಾಲಿನಿಂದಲೂ ಈ ಮೊಸರನು ಹೇರಳವಾಗಿ ತಯಾರಿಸಲಾಗುತ್ತದೆ.
ಮೊಸರಿನ ಸೇವನೆಯಿಂದ ಕರುಳಿನಲ್ಲಿನ ಬಹು ಅವಶ್ಯಕ ಜೀವಾಣುಗಳಾದ ಲೆಕ್ಟೋಬೆಸಿಲಿಸ್ ಹಾಗೂ ಎಫಿಡೋಫಿಲಸ್ ಬಲಗೊಳ್ಳುತ್ತವೆ. ಇವು ಕರುಳಿಗೆ ಬಂದು ತಲುಪುವ ಆಹಾರವನ್ನು ದೀರ್‍ಘಕಾಲ ಕೊಳೆಯದಂತೆ ಕಾಪಾಡುವುದಲ್ಲದೇ ಆಹಾರದಲ್ಲಿರಬಹುದಾದ ಮಾರಕ ಸೂಕ್ಷ್ಮ ಜೀವಿಗಳನ್ನು ನಾಶಪಡಿಸುವ ಗುಣ ಈ ಮೊಸರಿಗಿದೆ. ಪ್ರೊ. ಮೆಜ್‌ನಿಕೊಫ್‌ರವರ ಅಭಿಪ್ರಾಯದಂತೆ ಮನುಷ್ಯನ ದೊಡ್ಡ ಕರುಳಿನಲ್ಲಿರುವ ಕೆಲ ಜೀವಾಣುಗಳೇ ಅಕಾಲಮುಪ್ಪಿಗೆ ಹಾಗೂ ನಿಯಂತ್ರಣಕ್ಕೆ ಮೂಲ ಕಾರಣವಾಗುತ್ತವೆ. ಅದನ್ನು ಮೊಸರಿನ ಸೇವನೆಯಿಂದ ನಾಶಪಡಿಸಬಹುದು. ಕ್ಷಯರೋಗ, ಕಾಲರ, ವಿಷಮಸೀತಜ್ವರಗಳಿಗೆ ಕಾರಣವಾಗುವ ಅಂತಹ ಬ್ಯಾಕ್ಟಿರಿಯಾಗಳನ್ನು ಮೊಸರಿನಲ್ಲಿರಿಸಿದರೆ ಅವು ಸಾಯುತ್ತವೆ ಎಂಬುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಇದು ಪೌಷ್ಟಿಕಾಂಶಗಳ ಆಹಾರ ಶುದ್ಧಮೊಸರಿನಲ್ಲಿ ಶೇ.೭ ರಷ್ಟು ಕೊಬ್ಬು ೩-೨ರಿಂದ ೩-೪ ರಷ್ಟು ಪ್ರೋಟಿನ್, ೫ ರಷ್ಟು ಲಾಕ್ಟಿಕ್ ಆಸಿಡ್, ೦.೧೪ ರಷ್ಟು ಕ್ಯಾಲ್ಸಿಯಂ, ೦.೦೯ ದಷ್ಟು ರಂಜಕ, ೦.೩ ರಷ್ಟು ಕಬ್ಬಿಣ ೫ ರಷ್ಟು ಲೆಕ್ಟೋಸ್ ಹಾಗೂ ೮೨ ರಿಂದ ೮೮ ಭಾಗ ನೀರು ಇರುತ್ತದೆ. ಡಾ || ವಿಲಿಯಂ ಮೈಕಿನ್ ಎಂಬ ಆಹಾರ ವಿಜ್ಞಾನಿಯು ಹಾಲಿಗಿಂತಲೂ ಮೊಸರಿನ ಸೇವನೆಯಿಂದ ಹೆಚ್ಚಿನ ಪಚನಶಕ್ತಿಯಾಗುತ್ತದೆಂದು ಹೇಳುತ್ತಾರೆ. ಇದು ಮೂತ್ರಪಿಂಡವು ಸಮರ್ಪಕವಾಗಿ ಕಾರ್‍ಯ ನಿರ್ವಹಿಸುವಂತೆಯೂ ನೋಡಿಕೊಳ್ಳುತ್ತದೆ.
ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ಮೊಸರುಬೇಗನೇ ಹೆಪ್ಪು ಗಟ್ಟುತ್ತದೆ. ಚಾಳಿಗಾಲದಲ್ಲಿ ಮೊಸರನ್ನು ಪಾತ್ರೆಯೊಳಗೆ ಚನ್ನಾಗಿ ಲೇಪಿಸಿ ನಂತರ ಉಗುರುಬೆಚ್ಚಿಗಿನ ಹಾಲನ್ನು ಅದರೊಳಗೆ ಸುರಿದು ಸ್ವಲ್ಪ ಮೊಸರನ್ನು ಅದರ ಮೇಲೆ ಬೆರಸಬೇಕು. ಆ ನಂತರ ಪಾತ್ರೆಯ ಬಾಯಿಗೆ ಬಟ್ಟೆಯನ್ನು ಬಿಗಿಯಾಗಿಕಟ್ಟಿ ಬಿಸಿಲಿನಲ್ಲಿಡಬೇಕು. ಈ ಸುಧಾರಿತ ವಿಧಾನದಲ್ಲಿ ೨-೩ ತಾಸುಗಳಲ್ಲಿಯೇ ಹಾಲು ಹೆಪ್ಪುಗಟ್ಟಿ ಮೊಸರಾಗುತ್ತದೆ.
*****