ಬಲ್ಲುದೆ ಲತೆ ಫಲಂ ತನ್ನ
ಸಿಹಿಯೊ ಕಹಿಯೊ ಎಂಬುದನ್ನ?
ಒಗೆದಂತೊದಗಿಸಲು ಬನ್ನ
ಮೇನೊ? ಬಳ್ಳಿಯಾ ೪
ಹಲವೊ ಕೆಲವೊ ಸವಿದು ಹಣ್ಣ,
ಸಿಹಿಯಾದಡೆ ಕೊಳುವುದುಣ್ಣ
ಕಹಿಯಾದಡೆ ಕಳೆವುದಣ್ಣ
ಲತೆಯ ತಳ್ಳಿಯಾ ೮
ಪ್ರಕೃತಿವಶಮೆ ಫಲಿಸ ಬಲ್ಲ
ಲತೆಗೆ ರುಚಿಯ ಗೊಡವೆ ಸಲ್ಲ-
ರುಚಿಯರಿಯದೆ ಸಸ್ಯಮೆಲ್ಲ
ಫಲಿಸಲಾರವೆ? ೧೨
ರುಚಿಯೊ? ರಸಿಕರೊಡವೆ! ಮುನ್ನ
ಸವಿದೆ ಪೊಗಳಿ ತೆಗಳಿದನ್ನ,
ಸವಿದೊಲ್ಲಡೆ ಲತೆಗೆ ತನ್ನ
ಫಲಂ ಭಾರವೆ? ೧೬
ತಾನೆ ತನ್ನ ಫಲಮನುಂಬ
ಬಳ್ಳಿ ಫಲಿಸಲುಂಟೆ? ಕೊಂಬ
ರಿಲ್ಲದಂತೆನಿತೊ ಫಲಂ ಬ
ಳುಂಕಲಡಿಯಲಿ, ೨೦
ಬಗೆಯ ಬಳ್ಳಿಗದುವೆ ಗೊಬ್ಬ
ರಾಗದೆ? ಮರುವೆಳಸು ಕೊಬ್ಬ
ದಿಹುದೆ? ಹೊಸತೆ ಬಳ್ಳಿ ಹಬ್ಬ
ವೆನಿತೊ ಮಡಿಯಲಿ? ೨೪
ಇಂದಿಗರಿದನೊಲ್ಲಡೆಂದೊ
ಬರುವರಾರೊ ಸವಿವರೆಂದೊ
ಕಾವ ಲತೆಯೊಳಾವ ಕುಂದೊ?
ನಾಳೆಯ ನಂಬೆ, ೨೮
ಇಂದಿನೇಕೆ ವೃಥಾ ತಂಟೆ?
ನಂಬಿಕೆ ಬರಡಾಗಲುಂಟೆ?
ಬರಿಯ ನಿರಾಶೆಗೆ ಮುರುಂಟೆ
ಫಲಿಸುವ ಹಂಬೆ? ೩೨
ಮುಂಬಿಗರಿದನಂತೆ ನೂಕೆ,
ಬಳ್ಳಿ ಬರಿದೆ ಕೊರಗಲೇಕೆ?
ಹೆತ್ತಳೈಸೆ ಫಲಮನಾಕೆ
ಕಡು ಸಾಜತೆಗೆ? ೩೬
ಯಾರೊಲ್ಲಡೆ ಗಾಳಿ ಬೀಸೆ
ತನ್ನುದುರಿದ ಫಲದ ಸೇಸೆ
ಭೂಮಾತೆಯ ಮುಡಿಗೆ ಸೂಸೆ
ಸಾಲದೆ ಲತೆಗೆ? ೪೦
ಅಥವಾ ಪೊಗಳಿಕೆಗೆ ಹಿಗ್ಗ
ಲೊಲ್ಲಡೆ, ತೆಗಳಿಕೆಗೆ ಕುಗ್ಗ
ಲಾರದೆ, ಲತೆ ಫಲಕೆ ಸಿಗ್ಗ
ಲೇಕೆ? ಕಾಲದೆ ೪೪
ಫಲಿಸುವಂತೆ ಫಲಿಸಿ ಹೆಚ್ಚೆ-
ಕೊಳುವುದುಳಿವುದನ್ಯರಿಚ್ಚೆ-
ತನ್ನ ಗೆಯ್ಮೆ ಗೆಯ್ದ ನಚ್ಚೆ
ಲತೆಗೆ ಸಾಲದೆ? ೪೮
ಮೆಚ್ಚಿಸದೊಡಿದಾರನೆಂದಿ
ಗೀ ಲತೆಗೀ ಫಲಮನೊಂದಿ
ಸಿದ ಸೃಷ್ಟಿಯ ಕರ್ಮಬಂದಿ
ಗಿದೇನೊಪ್ಪದೆ?
ಲತೆಯಿದನನ್ಯಥಾ ಫಲಿಸೆ,
ಫಲಮಿದನನ್ಯಥಾ ಮೆಲಿಸೆ-
ಪ್ರಕೃತಿಯನನ್ಯಥಾ ಸಲಿಸೆ
ಅವನಿಗಪ್ಪುದೆ? ೫೬
*****