ಬೇಸಿಗೆ ಕೊನೆಯ ಒಂದು ಸಂಜೆ ಹೊತ್ತು :
ನಿನ್ನಾಪ್ತ ಗೆಳತಿ, ಆ ಚೆಲುವೆ ಕೋಮಲೆ, ನಾನು ನೀನು ಕೂತು
ಮಾತಾಡಿದೆವು ಕವಿತೆಯನ್ನು ಕುರಿತು
ನಾನೆಂದೆ : “ಕವಿತ ಸಾಲೊಂದನ್ನು ಸಾಧಿಸಲು
ಗಂಟೆಗಟ್ಟಲೆ ನಾವು ಹೆಣಗಬೇಕು;
ಆದರೂ ಆ ಸಾಲು ಅಲ್ಲೆ, ಆ ಗಳಿಗೆಯೇ
ಚಿಮ್ಮಿ ಬಂದದ್ದೆಂದು ಅನ್ನಿಸದೆ ಇದ್ದಲ್ಲಿ
ಹೊಲಿದು ಬಿಟ್ಟಿದ್ದೆಲ್ಲ ಪೂರ ವ್ಯರ್‍ಥ.
ಬೆನ್ನು ಬಗ್ಗಿಸಿ ಮಂಡಿಯೂರಿ ಕೊಳೆಯಡಿಗೆ ಮನೆ ನೆಲವನ್ನುಜ್ಜುವುದೊ,
ಕಡು ಭಿಕಾರಿಯ ಹಾಗೆ ಬಿಸಿಲು ಚಳಿ ಎನ್ನದೆ ಕಲ್ಲನ್ನೊಡೆಯುವುದೊ
ಇದಕ್ಕಿಂತ ಉತ್ತಮ
ಮಧುರ ನಾದಗಳ ಹದವಾಗಿ ಹೆಣೆಯುವ ಕೆಲಸ
ಎಲ್ಲಕ್ಕೂ ಕಷ್ಟ ಅಷ್ಟೆಲ್ಲ ಮಾಡಿಯೂ ಕೂಡ
ಶಾಲೆ ಮತ ಬ್ಯಾಂಕುಗಳ ಗೊಂದಲದ ಮಂದಿಗೆ
ನಾವು ಕವಿಗಳು ಶುದ್ಧ ಕೆಲಸಗೇಡಿಗಳು”
ನಿನ್ನ ಪ್ರಿಯಗೆಳತಿ ಆ ಚೆಲುವೆ – ಎಂಥ ಪ್ರಶಾಂತೆ,
ಏನು ಸವಿ ಅವಳದನಿ, ಎಷ್ಟು ಮಿದು, ಅದಕಾಗಿ
ಏನೆಲ್ಲ ಹೃದಯವ್ಯಥೆ ಸಹಿಸಲೂ ಸಿದ್ದರು ಎಂಥೆಂಥ ಜನರೂ –
ಹೇಳಿದಳು : “ಕಲಿಸದಿದ್ದರು ಕೂಡ ಯಾವ ಸ್ಕೂಲೂ ಎಲ್ಲೂ,
ಹೆಣ್ಣು ಜೀವಕ್ಕೆಲ್ಲ ಗೊತ್ತಿರುವ ಗುಟ್ಟು ಇದು, ಚೆಲುವೆಯಾಗಿರಲು
ಶ್ರಮಿಸಬೇಕು ಸದಾ”. ನಾನಂದೆ : “ಹೌದು, ನಿಜ
ಆದಮನ ಪತನವಾದಂದಿನಿಂದ
ಕಷ್ಟಪಡದೇ ಗಳಿಸಬಲ್ಲ ಸುಂದರವಸ್ತು ಏನೊಂದೂ ಇಲ್ಲ.
ಪ್ರೇಮವೆಂದರೆ ತೀರ ಸೂಕ್ಷ್ಮ ಸೌಜನ್ಯಗಳ
ಪರಿಪಾಕವೆಂದೆ ಗ್ರಹಿಸಿದ್ದ ಪ್ರೇಮಿಗಳು ಇದ್ದರೆಷ್ಟೋ.
ನಿಟ್ಟುಸಿರ ಚೆಲ್ಲುತ್ತ, ಜ್ಞಾನ ತುಂಬಿದ ದೃಷ್ಟಿ ಹರಿಸಿ ಉದ್ಗರಿಸುತ್ತ.
ಪ್ರಾಚೀನ ಸುಂದರ ಕೃತಿಗಳಿಂದಾಯ್ದ ಸಂಗತಿಯ ಉದ್ದರಿಸುತ್ತ
ತೋಡಿಕೊಳ್ಳುತ್ತಿದ್ದರವರ ಅನುರಾಗ,
ವ್ಯರ್‍ಥವೆನಿಸುತ್ತದೆ ಅಂಥ ಉದ್ಯಮ ಈಗ.”
ಪ್ರೇಮವೆಂದದ್ದೆ ತಡ, ಮೌನ ನೆಲೆಸಿತು ಸುತ್ತ
ಹಗಲ ಬೆಳಕಿನ ಕಡೆಯ ಕಿಡಿಗಳೂ ಆರುತ್ತ
ಪಚ್ಚಿನೀಲಿಗಳು ಕಂಪಿಸುವ ನಭದೆದೆಯಲ್ಲಿ ಕಂಡ ಚಿತ್ರ :
ಅಲೆಯೆದ್ದು ಬಿದ್ದು ಸಾಗುತ್ತಿರುವ ಕಾಲಜಲ
ದಿನ ವತ್ಸರಗಳಾಗಿ ಒಡೆಯುತ್ತ, ಕಡೆಯುತ್ತ,
ಚಿಕ್ಕೆಗಳ ನಡುವೆ ತಳದಲ್ಲೆಲ್ಲೊ ತೊಳೆಯುತ್ತ
ಸವೆದಿದ್ದ ಚಿಪ್ಪಿನಂತಿದ್ದ ಚಂದ್ರ.
ನಿನ್ನ ಕಿವಿಯೊಳಗಷ್ಟೆ ಉಸಿರಬಹುದಾದೊಂದು ವಿಚಾರ ಬಂತು
ನೀ ಚೆಲುವೆಯಾಗಿದ್ದೆ,
ಹಿಂದಿನವರು ಪ್ರೇಮದ ಉಚ್ಚ ನೆಲೆಯಲ್ಲಿ
ನಿನ್ನನ್ನೊಲಿಸಲು ನಾನು ಹೆಣಗಿದ್ದೆ, ಆಗೆಲ್ಲ
ಸುಖವಾಗಿಯೇ ಇತ್ತು. ಆದರೆ ಈಗ
ಅನಿಸುವುದು ನಮ್ಮ ಎದೆ ಬಳಲಿದಂತೆ
ಸಮೆದು ತೆಳುವಾದ ಆ ಚಂದ್ರನಂತೆ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್
ಏಟ್ಸನ ಆವರೆಗಿನ ಕವನಗಳಲ್ಲೆಲ್ಲ ಮುಖ್ಯವಾದದ್ದು ಎಲಿಯಟ್ ಇದನ್ನು ಮೆಚ್ಚಿ ಮಾತಾಡಿದ್ದಾನೆ.
ದೇವರು ತನ್ನ ಅಪ್ಪಣೆಗೆ ವಿರುದ್ಧವಾಗಿ ನಡೆದ ಆದಮನನ್ನು ಈಡನ್ ತೋಟದಿಂದ ಹೊರಕಳಿಸಿದ. ಮುಂದೆ ಶ್ರಮದ ದುಡಿಮೆಯಿಂದ ಜೀವಿಸುವಂತೆ ಶಾಪವಿತ್ತ.
ಕವನದಲ್ಲಿ ಕವಿಯ ಜೊತೆ ಮಾತಿಗೆ ಕುಳಿತಿರುವವರು ಮಾಡಗಾನ್ ಮತ್ತು ಅವಳ ತಂಗಿ ಕ್ಯಾಥಲೀನ್.