ಗುಮ್ಮ ಬಂದನು ಸುಮ್ಮನಿರು ಕಂದ, ಅಬ್ಬಬ್ಬ,
ಏನವನ ಕಣ್ಣು? ನಾಲಿಗೆಯೇನು ಕೆಂಪಗಿದೆ,
ಕತ್ತಲಲಿ ಕೆಂಡ ಕಂಡಂತೆ ! ಮೆಲ್ಲಗೆ ಬರುವ,
ಸದ್ದು ಸದ್ದೆಲೆ ಕಂದ, ಸುಮ್ಮನಿರು, ಅಳಬೇಡ !
ಕೇಳಿ ಇತ್ತಲೆ ಬರುವನೇನೊ ಗುಮ್ಮ; ನಮ್ಮಮ್ಮ
ಮುಚ್ಚು ಕಣ್ಣನು, ಮಲಗು, ಕಾಣದಿರಲವನ ಸುಡು-
ಗಾಡು ಮೋರೆಯು; ಅವನು ಹುಮ್ಮೆನುವ, ಗುಮ್ಮೆನುವ,
ಬಿಮ್ಮನಿರು, ಕಣ್ತೆರೆಯದಿರು ಗುಮ್ಮ ಬಂದಾನು.
ಬರದಿರೆಲೊ ಗುಮ್ಮ, ಕಂದನು ನಿದ್ದೆ ಹೋದ, ಸೋ
ಜಿಗವು ! ಸುಳಿವಿಗೆ ಮೀನ ನಡುನೀರ ಹೊಗುವಂತೆ
ಸ್ತಬ್ಧ ಚೇತನೆ; ಉಸಿರು ಎಳೆಗಾಳಿ ಎಲೆಗಳೊಳು
ಸುಳಿದಾಡುವಂತೆ. ಇಗೊ ಮರುಳಾಡುತಿದೆ, ಎಲ್ಲೊ
ಯಾವ ಕನಸಿನ ಕೆಳದಿಯೊಡಗೂಡಿ ಆಡುತಿದೆ-
ಯೋ ; ಗುಮ್ಮ, ಅಲ್ಲಿಯ ಕಂದನಂಜಿಸದಿರೆಲೆ.
*****