ವ್ಯೋಮ ಮಂಡಲದೊಳಗಿನ
ರಹಸ್ಯ ಲೋಕದಂತೆ
ನೂರುಗೂಢಗಳ ಗರ್ಭದೊಳಗೇ ಅಡಗಿಸಿ
ಕಣ್ ಮಿಟುಕಿಸಿ ಸೆಳೆವ
ತುಂಟ ಊರೊಳಗಿನ ಈ ಬೀದಿ.
ಬಣ್ಣಬಣ್ಣಗಳ ಕನಸು
ತುಂಬಿಟ್ಟುಕೊಂಡ
ಅಂಗಡಿ ಸಾಲು
ಎಂದಿಗೂ ಯಾರೂ ಕೊಳ್ಳದ
ಕೈಗೆಟುಕದ
ಸೂರ್ಯಚಂದ್ರತಾರೆ ಎಲ್ಲ
ಬಿಕರಿಗಿಟ್ಟ ಮಾಲು.
ಝಗಮಗಿಸುವ
ಬೆಳಕಿಗೆ ಕಣ್ಣು ಬಾಡಿ
ಯಾವುದೋ ಮೋಡಿ
ಎಲ್ಲಾ ಕೊಂಡೆ
ಎಲ್ಲಾ ಉಂಡೆ ಎನಿಸಿ
ಭ್ರಮೆಗೆ ಅದ್ದುದ ಖೋಡಿ.
ಕತ್ತಲು ಕವಿದಂತೆ
ಸಾಕಿನ್ನು ಸಾಕು
ಈ ಬೀದಿ ಸಹವಾಸ
ಮನೆ ಹೊಕ್ಕು ಕದವಿಕ್ಕಿ
ಈ ಹಾಳು ಬೀದಿಗೆ
ಮತ್ತೆಂದೂ ತೆಗೆಯದಿದ್ದರಾಯಿತು ಬಾಗಿಲು!
ಮತ್ತೆ ಬೆಳಗಾಯ್ತು
ಹೇಗಿದೆ ಬೀದಿಯಲಿ ಬೆಳಕು?
ಮೆಲ್ಲಗೆ ಹಣುಕು!
ಇಷ್ಟೇ ಸಾಕು!
ಮತ್ತೆ ಸೆಳೆದು
ಮಡಿಲೊಳಗೆಳೆದು
ಗಹಗಹಿಸುತ್ತದೀ
ಮಾಯಾವಿ ಬೀದಿ!
*****