ಒಂದು ಗಂಡು ಒಂದು ಹೆಣ್ಣು ಭೂಮಿಯ ಮೇಲೆ ಮೊದಲು ಹುಟ್ಟಿದರು. ಅವರಿಂದ ಆರಂಭವಾಯಿತು ಮಾನವ ಸಂತಾನ ಬೆಳೆಯಲಿಕ್ಕೆ. ಹೆಣ್ಣು-ಗಂಡು
ಮಕ್ಕಳು ಹುಟ್ಟಿದರು. ಮಕ್ಕಳಿಂದ ಮಕ್ಕಳಾದರು. ಮೊಮ್ಮಕ್ಕಳು ಮರಿಮಕ್ಕಳು ಆದರು. ಮೊಮ್ಮಕ್ಕಳ ಮರಿಮಕ್ಕಳೂ ಹುಟ್ಟಿಕೊಂಡರು. ಹುಟ್ಟಿದವರೆಲ್ಲ ಬೆಳೆದು ದೊಡ್ಡವರಾದರು; ದೊಡ್ಡವರು ಮುದುಕರಾದರು. ಮನುಷ್ಯಕೋಟಿ ಬೆಳೆದೇ ಬೆಳೆಯಿತು. ಎಲ್ಲಿ ನೋಡಿದರೂ ಹುಟ್ಟಿದ ಒಸಗೆಯೇ. ಏನು ಕೇಳಿದರೂ ಹುಟ್ಟಿದ ಸುದ್ದಿಯೇ. ಸುಖ ಸಂತೋಷಗಳಲ್ಲಿಯೇ ಮಾನವ ಸಂತಾನವು ವಾಸಿಸತೊಡಗಿತು.
ವಿಶಾಲವಾದ ಮನೆತನ. ಮನೆತನದಲ್ಲಿ ಎಣಿಸಲಿಕ್ಕಾಗದಷ್ಟು ಜನ. ಹಗಲು ಹೊತ್ತಿನಲ್ಲಿ ಹೆಣ್ಣು ಗಂಡು ಎನ್ನದೆ, ಹುಡುಗ ಬಾಲಿಕೆ ಎನ್ನದೆ ಎಲ್ಲರೂ ಅಡವಿ ಸೇರಿ ತಂತಮ್ಮ ಕೆಲಸದಲ್ಲಿ ತೊಡಗುವರು. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳನ್ನು ಆಡಿಸುತ್ತ ಒಬ್ಬ ಅಜ್ಜಿ ಮನೆಯಲ್ಲಿ ಉಳಕೊಳ್ಳುವಳು.
ಸುಖಸಂತೋಷಗಳನ್ನೇ ಉಣ್ಣುತ್ತ ಬಂದ ಅಜ್ಜಿಗೆ ಏಕೋ ಬೇಸರವೆನಿಸಿತು. ಎದೆ ಜಡವಾಯಿತು. ಮನಸ್ಸು ಹಗುರಾಗುವುದಕ್ಕೆ ಉಪಾಯವೇನೆಂದು ಚಿಂತಿಸತೊಡಗಿದಳು. ಬಾಲಕರೆಲ್ಲ ಆಡುತ್ತ ಎಲ್ಲಿಲ್ಲಿಯೋ ಹೋಗಿದ್ದರು. ಅಜ್ಜಿಗೊಂದು ಯುಕ್ತಿ ಹೊಳೆಯಿತು. ಹಿಟ್ಟಿನಿಂದ ಒಂದು ಕೂಸು ಮಾಡಿ, ಅದು
ಸತ್ತುಹೋಯಿತೆಂದು ಬಗೆದು, ಕ್ಷಣ ಹೊತ್ತು ಅತ್ತುಬಿಟ್ಟರೆ ಮನಸ್ಸು ಹಗುರಾಗುವದೆಂದು ಯೋಚಿಸಿದಳು.
ಮೆತ್ತಿಗೆಯೊಳಗಿಂದ ಬೊಗಸೆ ಕಡೆಲೆತೆಗೆದು ಬೀಸಿ ಹಿಟ್ಟುಮಾಡಿದಳು. ಆ ಹಿಟ್ಟನ್ನು ನೀರಲ್ಲಿ ಕಲೆಸಿ ಕಣಕಮಾಡಿದಳು. ಆ ಕಣಕದಿಂದ ಒಂದು ಗೊಂಬೆ ಮಾಡಿ ಮುಗಿಸುವುದರಲ್ಲಿದ್ದಳು. ಅಷ್ಟರಲ್ಲಿ ಆಡಹೋದ ಬಾಲಕರೆಲ್ಲರೂ ಒಬ್ಬೊಬ್ಬರಾಗಿ ಬಂದರು. “ಅಜ್ಜೀ, ನನಗೆ ತಿನ್ನಲು ಬೆಲ್ಲ” ಎಂದು ಒಂದು ಹುಡುಗ ಕೇಳಿದರೆ, ಇನ್ನೊಂದು – “ಅಜ್ಜೀ ನನಗೆ ಉಣ್ಣಲು ರೊಟ್ಟಿ” ಬೇಡುತ್ತದೆ. ಒಂದು ನೀರು ಕೇಳುತ್ತದೆ. ಇನ್ನೊಂದು ಮಮ್ಮ ಅನ್ನುತ್ತದೆ. “ರೊಟ್ಟಿಗೆ ಬೆಣ್ಣೆ ಸವರು,” “ಅನ್ನಕ್ಕೆ ಮೊಸರು ಕಲೆಸು” ಎನ್ನುತ್ತ ಅಜ್ಜಿಯನ್ನು ಜಗ್ಗಾಡಿ ಎಬ್ಬಿಸಿದವು. ಆಕೆಯ ಸೆರಗು ಒಂದು ಹಿಡಿದಿದೆ, ಕೈ ಮತ್ತೊಂದು ಹಿಡಿದಿದೆ. ಹಿಂದೆ ನೂಕುವುದು ಒಂದು, ಮುಂದೆ ಎಳೆಯುವುದು ಬೇರೊಂದು. ಎಲ್ಲ ಕೂಡಿ ಅಜ್ಜಿಯನ್ನು ಅಡಿಗೆ ಮನೆಗೆ ಕರೆದೊಯ್ದವು.
“ನಂಗೂ ಅಜ್ಜಿ, ಉಪ್ಪಿನಕಾಯಿ” ಎಂದು ತೊದಲುತ್ತ ಇನ್ನೊಂದು ಕೂಸು ತಪ್ಪುಹೆಜ್ಜೆ ಹಾಕುತ್ತ ಅಜ್ಜಿಯ ಬಳಿಗೆ ಬಂದಿತು. “ಇದಾವ ಹೊಸದನಿ” ಎಂದು ಅಜ್ಜಿ ನೋಡಿದರೆ, ಕಡಲೆ ಹಿಟ್ಟಿನ ಗೊಂಬೆ, ಜೀವತಳೆದು ಎದ್ದು ಬಂದಿದೆ! ಆಶ್ಚರ್ಯವೆನಿಸಿತು ಅಜ್ಜಿಗೆ.
“ಗೊಂಬೆಯ ಹೆಣವನ್ನು ಮುಂದಿರಿಸಿಕೊಂಡು ಅತ್ತು ಕಣ್ಣೀರು ಸುರಿದು ಮನಸ್ಸು ಹಗುರಮಾಡಿಕೊಳ್ಳಬೇಕೆಂದರೆ ಹಿಟ್ಟಿನ ಗೊಂಬೆಯೂ ಜೀವಂತವಾಗಬೇಕೆ? ಅಳುವುದು ನನ್ನ ದೈವದಲ್ಲಿಲ್ಲ” ಎಂದುಕೊಂಡಳು.
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು