ಕಣ್ಣಂಚಿನಲ್ಲಿ
ಉಯ್ಯಾಲೆಯಾಡುತ್ತಿದ್ದ
ಹನಿಯಲ್ಲಿ
ಹೆಸರಿಲ್ಲದ
ಯಾವುದೋ ಉಸಿರು
ದೋಣಿಯಾಟವಾಡುತ್ತದೆ
ಯಾವುದು ಆ ಹೆಸರಿಲ್ಲದಾ ಉಸಿರು?
ಕಣ್ಣಂಚಿನಲ್ಲಿ
ಉಯ್ಯಾಲೆಯಾಡುತ್ತಿದ್ದ
ಹನಿಯಲ್ಲಿ
ನೆನಪು ರಂಗೋಲಿಯಿಡುತ್ತದೆ
ಹಕ್ಕಿಯೊಂದು ಮೊಟ್ಟೆಯಿಡುತ್ತದೆ
ಎಲ್ಲಿಯವು ಈ
ನೆನಪು, ಕನಸು, ಹಕ್ಕಿ?
ಕಣ್ಣಂಚಿನಲ್ಲಿ
ಉಯ್ಯಾಲೆಯಾಡುತ್ತಿದ್ದ
ಹನಿಯಲ್ಲಿ
ಗಝಲ್ ಒಂದು ಹುಟ್ಟಿಕೊಳ್ಳುತ್ತದೆ
ಕವಿತೆಯೊಂದು ಕಟ್ಟಿಕೊಳ್ಳುತ್ತದೆ
ಹಾಡೊಂದು ರಾಗ ನುಡಿಸುತ್ತದೆ
ಹನಿಗೂ ಗಝಲ್ಗೂ
ಕವಿತೆಗೂ ಹಾಡಿಗೂ
ಎಲ್ಲಿಂದೆಲ್ಲಿಯ ಸಂಬಂಧ?
ಕಣ್ಣಂಚಿನಲ್ಲಿ
ಉಯ್ಯಾಲೆಯಾಡುತ್ತಿದ್ದ
ಹನಿಯಲ್ಲಿ
ಹೂವೊಂದು ಅರಳುತ್ತದೆ
ಬೆಳಕು ಕುಡಿಯೊಡೆಯುತ್ತದೆ
ಮುಚ್ಚಿದ್ದ ಕದಗಳೆಲ್ಲಾ ತೆರೆದುಕೊಳ್ಳುತ್ತವೆ
ಕಣ್ಣಂಚಿನ ಚಿಕ್ಕ ಹನಿಯನ್ನು
ಆಕಾಶದೆತ್ತರ ಪ್ರೀತಿ
ಮೆಲ್ಲಮೆಲ್ಲಗೆ ಹೀರಿ
ಮುಗುಳು ನಗೆ ನಗುತ್ತದೆ.
ಎಂದಿಗೂ ಯಾರಿಗೂ
ಸೋಲದ ಕಣ್ಣಂಚಿನ ಹನಿ
ಪ್ರೀತಿಗೇಕೆ ಸೋಲುತ್ತದೆ?
*****