ಈಗ-
ಎಲ್ಲೆಲ್ಲೂ ದೀಪಾವಳಿ
ಭೂಮಿಯ ಮೇಲೆ ಬಣ್ಣ ಬಣ್ಣದ
ನಕ್ಷತ್ರಗಳ ಜಾತ್ರೆ
ಹಸಿರು ಕೆಂಪು ನೀಲಿ ಹಳದಿ ಗುಲಾಬಿ
ದೀಪ ದೀಪಗಳ ಸ್ಪರ್ಧೆ
ದೀಪ ದೀಪಿಕೆಯರು ಕಣ್ಣು ಮುಚ್ಚಿ ತೆರೆದು
ಮುಚ್ಚಿ ತೆರೆದು ಕಚಗುಳಿಯಾಟಕ್ಕೆ
ಓಡಾಡುವ ಸಂಭ್ರಮ.
ಹರೆಹೊತ್ತ ದೀಪ ಸಾಲಿನ ದೀಪಾಲಿಯರ
ತುಂಬಿದ ಸಿಹಿತಟ್ಟೆ ಕಣ್ಣಂಚಿನ ನಗು
ಮನದಾಳದ ತುಂಬೆಲ್ಲ ಕನಸುಗಳು
ಕಟ್ಟಿಕೊಳ್ಳುತ ಗೊಳ್ಳನೆ ನಕ್ಕು
ಕುಣಿದು ಕುಪ್ಪಳಿಸುವ ತರಾತುರಿ.
ಪಟಾಕಿ ಹೊಡೆದು ಗುಲ್ಲೆಬ್ಬಿಸುವ
ಚಿಗುರು ಮೀಸೆ ಹುಡುಗರ ತುಂಟಾಟ
ತಾವೇ ಆಕಾಶಕೆ ಚಿಮ್ಮುತ್ತಿರುವೆವೆನ್ನುವ
ಕೇಕೆ ಹಾರಾಟ ಶೌರ್ಯದ ಪ್ರದರ್ಶನ
ಹುಡುಗಿಯರ ಮುಂದೆ
ಕಣ್ಣು ಪಟಾಕಿ ಹೊಡೆಯುವ ಸಂಭ್ರಮ
ಯೌವನದ ದೀಪೋನ್ಮಾದ.
ದೀಪಾವಳಿ ನೆನಪಿನ ದಾಂಗುಡಿ ಹಿರಿಯರಿಗೆ
ಎಣ್ಣೆಸ್ನಾನ ಹೊಸಬಟ್ಟೆ ಉಡುಗೊರೆ
ಕರಳುಬಳ್ಳಿಗಳ ತೊನೆದಾಟ
ಚೆಷ್ಮದ ಬೆಳ್ಳಿ ಚೌಕಟ್ಟಿನೊಳಗೆ
ಏನೆಲ್ಲ ಅನುಭವಗಳ ಪ್ರತಿಫಲನ
ಚಳಿಗಾಲದ ಹೆಜ್ಜೆಗೆ ಬೆಚ್ಚಗಿನ ಅನುಭವ
ಬೊಚ್ಚುಬಾಯಿ ಮುಖದಗಲ
ಬಿಚ್ಚಿಕೊಳ್ಳುತ ಮೊಮ್ಮಕ್ಕಳ ಆಲಿಂಗನಕೆ
ಹೃದಯ ಬಿರಿದ ಆರ್ದ್ರತೆ
ಕಣ್ಣಿನೊಡ್ಡು ತುಂಬಿಹರಿವ ಮನೋಲ್ಲಾಸ.
*****
ಪುಸ್ತಕ: ಇರುವಿಕೆ