ಹಗಲ ಕಣ್ಣನು ಮಂಕು ಕವಿಯಿತು,
ಮುಗಿಲ ಬಾಣದ ಬಿರುಸು ಹೆಚ್ಚಿತು,
ನೆಗೆದು ನೊರೆಯನು ಕೀಳುತೋಡಿತು
ಮಲೆಯನಾಡಿನ ಹೇಮೆಯು.
ಕರೆಯ ಮಂಟಪದೊಳಗೆ ಕುಳಿತು,
ಬೆರಗುಮಾಡುವ ಪ್ರಕೃತಿಯಂದಿನ
ಇರವ ನೋಡುತ ಮೂಕರಾದೆವು
ನಾನು ರಾಮ ಇಬ್ಬರೂ.
ಮುಗಿಲಿನಾರ್‍ಭಟ, ಗಾಳಿಯುಲುಹು,
ಹಗಲ ಕಂಬನಿಯಂತೆ ಸೋನೆಯು,
ನೆಗೆದು ಮೊರೆಯುವ ಹೇಮೆಯಬ್ಬರ-
ಏನು ಭೀಕರ ಪ್ರಕೃತಿಯು!
ಬಾನ ನೀಲವನಲೆಯೊಳಿಟ್ಟು,
ತಾನದೊಂದಿಗೆ ಹಾಡಿ ತೂಗಿದ
ಮಾನವತಿ ಮೃದುಗಮನೆ ಹೇಮೆಯೆ
ಕನಲಿ ಮೊರೆವೀ ಹೇಮೆಯು!
ಹಗಲಿನಂದಿನ ರೂಪು ತಂದಿತು
ಬಗೆಗೆ ಸಾವಿನ ಚಿಂತೆಗಳನು,
ನಗೆಯನಣಕಿಸಿ ಸೊಗವ ಜರೆಯುತ
ಬವಣೆಗೊಳ್ಳುವ ಭಾವವ.
ಏನು ಸೋಜಿಗ ಇಂಥ ದಿನದೊಳು
ಸ್ನಾನಮಾಡಲು ಪುಣ್ಯ ಕೆಳಸಿ
ಸಾನುರಾಗದಿ ಬಂದ ಬಾಲೆಯ-
ರಸುವ ನುಂಗಲು ಹೇಮೆಯು!
ಇರಲಿ ರೂಪವು, ಇರಲಿ ಬೆಡಗು,
ಸುರರ ಕನ್ಯೆಯ ಜರೆವ ಕೊರಲು,
ಇರಲಿ ಸ್ವರ್ಗದ ಮೌಗ್ಧ್ಯ-ಕನ್ನೆಯು
ಹೊನಲ ಮುನಿಸನು ತಡೆವಳೆ?
“ಇರುಳನೆಲ್ಲಾ ಹಾಡಿ ದಣಿದು
ಕೊರಲು ಕಟ್ಟಿದೆ, ಮೊಗವು ಸೊರಗಿದೆ.
ಬರಿಯ ಛಲವೇಕಿಂದು ಮೀವರೆ,
ಸೋನೆ ಹಗಲೊಳು, ಹೊಳೆಯೊಳು?”
ಕೆಳದಿಯರ ಜೊತೆ ಕೂಡಿ ಸರಸದಿ
ಹೊಳೆಯೊಳಲೆಯುತ ನಲಿವ ಕೌತುಕ-
ಕೆಳಸಿ, ತುಡಿಯುವ ಬಾಲೆ ಕೇಳ್ವಳೆ
ತಾಯಿ ನುಡಿದಾ ಹಿತವನು?
“ಬಾರೆ ಕಮಲೆ, ಬಾರೆ ಗೌರಿ,
ಬಾರೆ ಶಾರದೆ, ಪುಣ್ಯದಿನದೊಳು
ಕಾರ ಮುಗಿಲಿನ ಮೊಳಗಿಗಂಜುತ
ಹೊಳೆಗೆ ಹೋಗದೆ ನಿಲ್ವರೆ?”
ಏನು ಸಡಗರ! ಏನು ನಗೆಯು!
ಏನು ಉಲ್ಲಸವವರಿಗಂದು!
ಹೊನಲೊಳಡಗಿದ ಜವನ ಮೊಗದೊಳು
ನಗೆಯ ಹರಡುವ ಸರಸವು!
ಅವರ ಮೋದಕೆ, ಆದೊಡಯ್ಯೋ,
ಬುವಿಯೊಳಂದೇ ಚರಮದಿನವು.
ಅವರ ಜೀವದ ಹಣತೆ ಕ್ಷಣದೊಳು
ನಂದಿಹೋಯಿತು ಹೊನಲೊಳು.
ಹೊಳೆಯ ಮಂಟಪದೊಳಗೆ ಕುಳಿತು
ಹಳೆಯ ನೆನಪನು ಮನಕೆ ತಂದೆನು:
ಹಳುವ ತುಂಬಿದ ಗೋಳ ಹೊಳಲನು,
ಹರಿದ ಕಂಬನಿಕಾಲ್ವೆಯ;
ಆರ ಗಾನದ ಲಹರಿ ಹೃದಯಕೆ
ತೂರಿ ತೋರಿದ ಆತ್ಮದರಕೆಯ-
ನಾರ ಪ್ರೇಮವೆ ಪೂರ್‍ಣಮಾಡಿತೊ,
ಅಂಥ ತಂಗಿಯ ಸಾವನು.
ತಿಳಿವು ಮರಳಿತು, ಮನದ ದುಗುಡವ-
ನಳೆದು ಮರುಕವನೆರೆವ ತೆರದೊಳು
ತಲೆಯ ತಡಹುತ ರಾಮುವಿದ್ದನು-
ನುಡಿದೇನೀಪರಿ ಕೆಳೆಯಗೆ:
“ಏನು ದಿನವಿದು, ಕೆಳೆಯ, ಹೇಮೆಗೆ
ಏನಿದಬ್ಬರ!- ಇಂಥ ಹಗಲೊಳು
ಹೊನಳೊಳಳಿದಳು ತಂಗಿ ಜಾನಕಿ;
ತೋರಬಲ್ಲೆಯ ಮಸಣವ?”
ಎನ್ನ ಮಾತಿಗೆ, ರಾಮು ಸುಯ್ಯುತ,
“ಚಿನ್ನ, ನೆರೆಯೊಳು ಕಾಣದೆ”ಂದನು-
ಎನ್ನ ಕಂಬನಿಕೋಡಿ ಬೆರೆಯಿತು
ಮೊರೆವ ಹೇಮೆಯ ತೆರೆಯೊಳು.
ಸಾವು ಸೋಕುವುದೆಲ್ಲರನು, ದಿಟ-
ಸಾವಿಗಂಜುತ ಗೋಳ ಕರೆವುದು
ಸಾವು ಒಯ್ಯುವ ಜೀವಕಲ್ಲವು-
ಹಿಂದೆ ಉಳಿಸುವ ಅರಕೆಗೆ!
*****