ರನ್ನ ದುಡುಗುಣಿ ಚಿನ್ನದ ಕೊಂಡಿ
ಹೊನ್ನಿನಾ ಡಾಬಾ ಇಟ್ಟಿದಳಽ|
ಎಣಕೆನಿಲ್ಲದೆ ಮಾಣಿಕಸಽರ
ಎದಿಬದಿ ತಾನು ಹಾಕುವಳಽ|
ಕಡಿಯ ಕಂಕಣ ಕಮಳದ ಮುಖಿಯ
ಹೊಳಿವ ಮುತ್ತಿನ ವಾಲಿಗಳಽ|
ಜಯ ಜಯ ಮಂಗಳಽ| ಜಯ ಜಯ ಮಂಗಳಽ|
ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೧||
ಕಸೂತಿ ಕುಬಸಾ ಕೈಯಲಿ ಕನ್ನಡಿ
ನೆರಽಳ ನೋಡಿ ಹಿಗ್ಗುವಳಽ|
ಬಸವೇಸೂರನ ಎಡದಲಿ ಕುಂತು
ಹಸ್ಯಾಮಾಡಿ ತಾ ನಗುವಳಽ|
ಕಡಿಯ ಕಂಕಣ ಕಮಳದ ಮುಖಿಯ
ಹೊಳಿವ ಮುತ್ತಿನ ವಾಲಿಗಳಽ|
ಜಯ ಜಯ ಮಂಗಳಽ| ಜಯ ಜಯ ಮಂಗಳಽ|
ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೨||
ಮುಗಿನಾಗ ಹೊಳೆವ ಮುತ್ತಿನ ಮೂಗುತಿ
ಮಿಗಿಲಾದ ಆಭರಣಿಟ್ಟಿದಳಽ|
ಅಚ್ಚರಂಗದ ಶಾಲನುಟ್ಟು
ಅನಂತ ಕೋಟಿ ರೂಪವಳಽ|
ಕಡಿಯ ಕಂಕಣ ಕಮಳದ ಮುಖಿಯ
ಹೊಳಿವ ಮುತ್ತಿನ ವಾಲಿಗಳಽ|
ಜಯ ಜಯ ಮಂಗಳಽ| ಜಯ ಜಯ ಮಂಗಳಽ|
ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೩||
ದುಂಡಗೈಯವಳು ದಿಮಿದಿಮಿಗಾರಳು
ದುಂಡಮುತ್ತಿನ ವಾರಳಽ|
ಹಿಂಡ ಗೆಳದ್ಯಾರು ಕಂಡುಸಿ ಕರದರ
ಹೆಣೂಲ ಭಂಗಾರ ಹಾಕುವಳಽ
ಕಡಿಯ ಕಂಕಣ ಕಮಳದ ಮುಖಿಯ
ಹೊಳಿವ ಮುತ್ತಿನ ವಾಲಿಗಳಽ|
ಜಯ ಜಯ ಮಂಗಳಽ| ಜಯ ಜಯ ಮಂಗಳಽ|
ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೪||
ಧನೂರ ಬಣ್ಣಾ ಶಾಲ ಕೈಯಲಿ
ಐದು ಅಂಕುಶಾ ಹಿಡಿದವಳಽ
ಜಯ ಜಯ ಮಂಗಳಽ| ಜಯ ಜಯ ಮಂಗಳಽ|
ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೫||
*****
ಈ ಹಾಡಿನಲ್ಲಿ ಪಸ್ತ್ರಾಭರಣಗಳ ವರ್ಣನೆಯಿದೆ.
ಛಂದಸ್ಸು:- ಮಂದಾನಿಲ ರಗಳೆ
ಶಬ್ದಪ್ರಯೋಗಗಳು:- ಇಟ್ಟಿದಳ=ಇಟ್ಟದ್ದಾಳೆ. ಎಣಿಕಿನಿಲ್ಲದೆ=ಎಣಿಕೆ ಇಲ್ಲದೆ, ಹಸ್ಯಾ ಮಾಡಿ=ಹಾಸ್ಯ ಮಾಡಿ. ದಿಮಿದಿಮಿಗಾರಳ=ತುಂಬು ಮೈಯವಳು. ವಾರಳು=ಓರಣವುಳ್ಳವಳ. ಕಂಡುಸಿ=ಖಂಡಿತವಾಗಿ. ಧನೂರ ಬಣ್ಣ=ಧನ್ನೂರಿನ ಸೀರೆ.
“ಬಸವೇಸೂರನ ಮಡದಿ.” ಇಲ್ಲಿ ವರನನ್ನು ಬಸವೇಶ್ವರನಿಗೆ ಹೋಲಿಸಿದೆ. ಹೀಗೆ ಇಂತಹ ಹಾಡುಗಳಲ್ಲಿ ಗಂಡಹೆಂಡಿರನ್ನು ಶಿವಪಾರ್ವತಿಯರಿಗೂ ಹರಿಲಕ್ಷ್ಮಿಯರಿಗೂ ಹೋಲಿಸುವುದುಂಟು.