ಮೆದುಭೂಮಿ
ಹದ ಗಾಳಿ
ಬೇಕಷ್ಟು ಬೆಳಕು
ಸಾಕಷ್ಟು ನೀರು
ಎಲ್ಲಾ ಇದ್ದೂ
ಮೊಳಕೆಯೊಡೆಯಲೋ
ಬೇಡವೋ?
ಈಗಲೋ ಆಗಲೋ
ಅನುಮಾನದಲ್ಲೇ
ಸ್ತಬ್ದಗೊಂಡ ನುಗ್ಗೆಬೀಜ.
ಯಾವ ಪರುಷಸ್ಪರ್ಶವೋ
ಆಳಕ್ಕೆ ಬೇರನಿಳಿಸಿ
ನೆಲಒಡಲು ಸೀಳಿ
ಮೊಳಕೆಯೊಡೆಸಿ
ಬುರಬುರನೆ ಎತ್ತರಕ್ಕೇರಿ
ಆಕಾಶವನ್ನೇ ಮುಟ್ಟುವ ಚಪಲ
ನೆಲವನೊದ್ದು ಬಾನನಪ್ಪುವ ಹಂಬಲ
ಆಸೆಬುರುಕ, ನುಗ್ಗೆ ಮರದ ಕಾಂಡಕ್ಕೆ
ಮಣ್ಣಿನಾಳಕೆ ಹೂತು
ತಣ್ಣಗೆ ಕಲೆತು
ನೆಲದ ಸಾರವ ಹೀರಿ
ಮೇಲಿನ ಮರಕ್ಕೆ ತೂರಿ
ನೇಪಥ್ಯದಲ್ಲೇ ಧನ್ಯತೆಯಲಿ
ಬೀಗುತ್ತಾ ಬಾಗುವ
ಸಂತ, ನುಗ್ಗೆಯ ಬೇರು.
ಕುಡಿಯೆಡೆಯಲ್ಲೆಲ್ಲಾ
ಮೊಗ್ಗೊಡೆಸಿ ಹೂವರಳಿಸಿ
ಕಣಕಣವೇ ಆರಳಿ ನಿಂತರೂ
ಒಂದೊಂದು ತೊಟ್ಟಿನಲೂ
ಕಾಯಿ ಮೂಡಿಸುವ ಬಯಕೆಯಿಲ್ಲ
ಬಯಕೆ ಫಲಿಸಲು ಹರಕೆಯಿಲ್ಲ
ಜೀವವಿದ್ದುದು ಕಾಯಾಗಲಿಬಿಡೆಂಬ
ನಿರ್ಲಿಪ್ತ, ನುಗ್ಗೆ ಹೂವು.
ಕೊಂಬೆರೆಂಬೆಗಳ ತುಂಬ
ಹಸಿರು ಹಾಸಿ
ಗಾಳಿ ಬೀಸಿದಾಗ ತೊನೆದು
ಮಳೆ ಬಿದ್ದಾಗ ನೆನೆದು
ಎಲ್ಲ ಅನುಭವಿಸುವ ಹಿಗ್ಗು
ಗಾಳಿ ಮಳೆ ನಿಂತಾಗ.
ಅನುಭವಿಸಿದ್ದ ನೆನಸಿ ಮೆಲುನಗುವ
ರಸಿಕ, ಹರಡಿ ನಿಂತ ನುಗ್ಗೆ ಎಲೆ.
ಬೆಳಕು, ಬಾನು ಗಾಳಿ ಮಳೆ
ಎಲ್ಲ ಬರಿಯ ಸುಳ್ಳು ,
ಬಾಹ್ಯವೆಲ್ಲ ಪೊಳ್ಳು
ಇನ್ನೇನೂ ಬೇಡೆಂಬ ನಿರಾಕರಣದಲಿ
ನೆಲದಾಯಿಯ ಅಂತರಂಗದ
ಮಡಿಲಿಗಿಳಿದೇ ಬಿಡುವ ಉಮೇದಿನಲಿ
ಉದ್ದುದ್ದ ದಾಪುಗಾಲಿಡುವ ಆತುರ
ನಿರಾಶಾವಾದಿ ನುಗ್ಗೆ ಕಾಯಿಗೆ.
ಈ ಬಗೆಯ
ಬಗೆಗಳನೆಲ್ಲ
ಹಿಡಿದಿಟ್ಟ ಬಗೆಯೇ ದಿವ್ಯ!
*****