ದಲಿತರು ಶೂದ್ರರು ಮೆರಿಟ್ ವಿದ್ಯಾರ್ಥಿಗಳಿಗೆ ಎಂದಿಗೂ ಸಮವಲ್ಲ ಬಿಡ್ರಿ. ಮೀಸಲಾತಿ ಬೆಂಬಲದಿಂದ ಸೀಟು ಗಿಟ್ಟಿಸಿ, ನೌಕರಿ ಗಿಟ್ಟಿಸಿದ ಪ್ರಾರಬ್ದ ಮುಂಡೇವು ಯಾವತ್ತಿಗೂ ಎಫೀಶಿಯಂಟ್ಸ್ ಅಲ್ಲ. ಎಂಜಿನೀರ್ ಗಳಾದರೆ ಧಡಾರಂತ ಸೇತುವೆಗಳು ಉರುಳಿಬಿದ್ದೇ ಹೋಕ್ತವೆ. ಡಾಕಟ್ಟುಗಳಾದ್ರಂತೂ ಪೇಶಂಟುಗಳು ಯಮನ ಪಾದಾರವಿಂದ ಸೇರ್ಕೋತವೆ. ಅಧಿಕಾರಿಗಳಾದ್ರೆ ತನಗಿಂತ ಕಡಿಮೆ ದರ್ಜೆ ಗುಮಾಸ್ತ ಹೇಳ್ದಂಗೆ ಕೇಳ್ತಾವ್ಯೆ ಹೊರ್ತು ಅಪ್ಪಂತ ಕಲಸಗಾರ್ರರಂತ ಅನ್ನಿಸಿಕೊಳ್ಳೋದಿಲ್ರಿ. ಹಿಂಗಂತ ಹಪಹಪಿಸುವ ಮೇಲ್ವರ್ಗದ ಮಂದಿ ಮಾತಿಗೆ ಯಾವ ಸಾಕ್ಷಾಧಾರನಾರ ಕೊಡ್ತಾರಂತ ತಿಳಿದಿರೇನ್ರಿ? ಅದು ಬರಿ ಬಾಯಿಬೊಗಳೆ. ಇವರು ಅನ್ನೋವಂಗೆ ದಲಿತ ಎಂಜಿನೀರ್ ಕಟ್ಟಿದ ಬಿಲ್ಡಿಂಗ್ ಉದುರಿ, ಡಾಕಟ್ರು ಆಪರೇಷನ್ ಮಾಡಿದ ಮಿನೀಟ್ನಾಗೆ ಪೇಶಂಟು ಡೆತ್ತಾಗಿದ್ದಿದ್ದರೆ ಪತ್ರಿಕೆಗಳು ಬರೀದೆ ಇದ್ದಾವಾ? ದಲಿತ ಅಧಿಕಾರಿಗಳು ನೆಟ್ಟಗೆ ಕೆಲ್ಸ ಮಾಡ್ದೆ ತಮ್ಮ ಅಸಾಮರ್ಥ್ಯ ತೋರಿದ್ದರೆ ಅದು ಸುದ್ದಿ ಗದ್ದಲವಾಗ್ದೆ ಇದ್ದೀತೆ? ಪತ್ರಿಕೆ ಇತರೆ ಮಾಧ್ಯಮಗಳಲ್ಲಿ ಇರೋರೆಲ್ಲಾ ಬಹಳಷ್ಟು ಜನಿವಾರಿ ಶಿವದಾರಿಗಳು, ಇದನ್ನೆಲ್ಲಾ ಬರ್ದು ಸೆನ್ಸೇಶನಲ್ ನ್ಯೂಸ್ ಮಾಡ್ದೆ ಅವರಪ್ಪನಾಣೆ ಕನ್ಸೇಶನ್ ತೋರಿಸ್ತಿರಲಿಲ್ಲ ಕಣ್ರಿ. ಮೇಲ್ವರ್ಗದ ಡಾಕಟ್ರುಗಳೆಲ್ಲಾ ಡಾಕ್ಟರ್ ಕೊಟ್ನೀಸು ಆಗಲು ಸಾಧ್ಯವಿಲ್ಲ. ಮೇಲ್ವರ್ಗದ ಎಂಜಿನಿಯರ್ ಗಳೆಲ್ಲಾ. ಸರ್. ಎಂ. ವಿಶ್ವೇಶ್ವರಯ್ಯ ಆಗಲಿಕ್ಕಿಲ್ಲ. ಈವತ್ತಿಗೂ ರಾಜಕಾರಣಿಗಳು ಲೈಫ್ ಅಂಡ್ ಡೆತ್ ಕೊಶ್ಚನ್ನಾಗೆ ಸಾಯ್ತ ಬೆಡ್ ಮೇಲೆ ಬಿದ್ದಾಗ ಬರೋರೆಲ್ಲಾ ವಿದೇಶಿ ವೈದ್ಯರೆ. ಅದರಲ್ಲೂ ಸಾಬರೆಯಾ. ಮೊನ್ನೆ ಮುಸ್ಲಿಂ ವಿರೋಧಿ ಮಹಾಜನ್ ಜೀವ ಉಳಿಸಲು ಬಂದೋನು ಸಾಬಿ. ನಾಲಿಗೆಗೆಲ್ಲಿಯ ಲಂಗು ಲಗಾಮು? ಹಿಂದೆ ಮಂಡಲ ವರದಿ ಟೀಂನಾಗೂ ದೇಶಂಬೋ ದೇಶಾನೇ ಹತ್ತಿ ಉರಿಯೋ ಹಂಗೆ ಮಾಡಿದ ರಾಜಕಾರಣಿಗಳ ಮಸಲತ್ತು ಅರಿದೇ ಅನೇಕ ಓದೋ ಮಕ್ಳು ಸುಟ್ಟುಕೊಂಡ್ರು ಅಥವಾ ಸುಟ್ಟರೋ! ಪುರೋಹಿತಶಾಹಿಗಳ ಒಳ ಸಂಚಿಗೆ ಈಗಲೂ ಆಹುತಿಯಾಗೋದು ಅಮಾಯಕ ಸ್ಟೂಡೆಂಟ್ಸೇಯಾ. ಮೀಸಲಾತಿ ಅನ್ನೋದು ಭಿಕ್ಷೆಯಲ್ಲ ಸಂವಿಧಾನಬದ್ಧ ಹಕ್ಕು ಅನ್ನೋದನ್ನ ಇವರೆಲ್ಲಾ ಅರಿಯಬೇಕಾಗೇತ್ರಿ. ಇವರು ನಿಜವಾದ ಶತ್ರುಗಳು ಹಿಂದುಳಿದೋರಲ್ಲ. ಪೇಮೆಂಟ್ ಸೀಟ್ ಹೊಡೆಯೋವ ರೊಕ್ಕಸ್ಥರು. ಬೇರೆ ರಾಜ್ಯಗಳಿಂದ ಬರೋ ಸೂಟ್ ಕೇಸ್ ಭ್ರಷ್ಟರನ್ನು ಈ ವಿದ್ಯಾರ್ಥಿಗಳೇಕೆ ಬಾಯ್ಕಟ್ ಮಾಡಲಾರರು. ಆ ತಾಕತ್ತು ಇವರಿಗೈತಾ? ಅಲ್ಲೆ, ಮುಂದಯವರೆದು ಜಾತಿ ಹೈಕ್ಳು ಸಂವಿಧಾನಬದ್ಧ ಹಕ್ಕುಗಳ ಎಗೆನೆಸ್ಟ್ ಎಗರ್ಲಾಡೋದು ತಪ್ಪು ಕಣ್ರಲಾ ಅಂತ ಯಾವ ಒಬ್ಬ ಪಕ್ಷದ ರಾಜಕಾರಣಿನೂ ಗಟ್ಟಿಯಾಗಿ ಹೇಳವಲ್ಲ. ಎಲ್ಲರಿಗೂ ಸಿಗೋ ಓಟುಗಳೆಲ್ಲಿ ಗೋತಾ ಹೊಡೆತವೋ ಅಂಬೋ ಭಯ. ಬಿಜೆಪಿಗಳು ಈಗ ಒಳಗೇ ಕುದಿಯುತ್ತಲೇ ಜಾಣ ಮೌನ ವಹಿಸಿವೆ. ಕಾಂಗ್ರಸ್ನ ಅರ್ಜುನಸಿಂಗನಿಗೆ ಮನಮೋಹನಸಿಂಗನ ಮೇಲೆ ಗೂಬೆ ಕೂರಿಸೋ ಚಪಲವೋ ದಲಿತಪರ ನಿಜ ಕಾಳಜಿಯೋ ಸೋನಿಯಾ ಮೇಡಂ ಕೂಡ ಅರಿಯಲಾರಳೇನೋ. ಯಾರಿಗೂ ಅನ್ಯಾಯ ಆಗೋದು ಬ್ಯಾಡ ಐಐಟಿ, ಬಿಬಿಎಂ ಸೀಟುಗುಳ್ಳ ಹೆಟ್ಟಿಸಿಸೋಣ ಅಂಬೋ ಪಪೆಟ್ ಮನಮೋಹನಸಿಂಗ್ ರ ಮಾತು ವಿದ್ಯಾರ್ಥಿಗಳಿಗೆ ಹಿಡಿಸಂಗಿಲ್ಲ. ಹೋರಾಟ ಮುಂದುವರಿಸವ್ರೆ. ಈಗಂತೂ ಉನ್ನತ ಶಿಕ್ಷಣದಾಗೆ ಮೀಸಲಾತಿ ನೀಡುವ ಪರವಾಗಿಯೂ ಹೋರಾಟ ನೆಡಿಲಿಕತ್ತದೆ. ನಮ್ಮ ಗ್ಯಾನ ಪೀಠಿ ಅನಂತುವೇ ಖುದ್ ಸಪೋಲ್ಪಿಗೆ ನಿಂತವರೆ ಅಂದಮ್ಯಾಗೆ ಹಿಂದುಳಿದೋರ್ಗೆ ಇನ್ನೆಂತ ಸಪೋಲ್ಟು ಬೇಕ್ರಿ? ದಲಿತರು ಹಿಂದುಳಿದೋರೇ ಹೆಚ್ಚಿಗೆ ಇರೋ ಈ ದೇಶದಾಗೆ ಹೆಚ್ಚು ಮೀಸಲಾತಿ ಕೊಡೋ ಅಗತ್ಯ ಐತಿ. ಒಂದೇ ತಾಯಿ ಹೊಟ್ಟಿನಾಗ ಹುಟ್ಟಿದ ನಾಕು ಮಕ್ಕಳ್ದಾಗೆ ಒಬ್ಬ ಭಾಳ ವೀಕಿದ್ಹಾಗ ಹೆತ್ತೋರು ಉಳಿದ ಮಕ್ಕಳಿಗಿಂತ ನರಪೇತಲ ಮಗುವಿಗೆ ಹೆಚ್ಚು ಕಾಳಜಿ ವಹಿಸಿ ಪೌಷ್ಟಿಕ ಆಹಾರ ಟಾನಿಕು ಕೊಡಸ್ತಾರೆ. ಉಳಿದವರಿಗಿಂತ ದಡ್ಡನಾಗಿದ್ರೆ ಪಾಠ ಹೇಳ್ತಾರೆ. ಟ್ಯೂಶನ್ಗೆ ಹಾತ್ತಾರೆ ಇದು ಸಹಜ ನಡಾವಳಿ. ಸರ್ಕಾರದ್ದು ಕೂಡ ಇದೇ ಪಾಲಿಸಿ. ಅದಕ್ಕೇ ಮೀಸಲಾತಿ ನೀಡ್ತಾ ಬಂದದೆ. ಹಿಂದೆಲ್ಲಾ ರಾಜ ಮಹಾರಾಜರ ಜಮಾನ್ದಾಗೆ ಬ್ರಾಂಬ್ರಿಗೆ ಇತ್ತು ಮೀಸಲಾತಿ. ಅರಮನೆಗಳಲ್ಲಿ ಆಸ್ಥಾನ ವಿದ್ವಾಂಸರಾಗಿ ದೊರೆಗಳನು ಹಾಡಿ ಹೊಗಳಿ ಕಾವ್ಯ ಬರ್ದು ಮೋಡಿ ಮಾಡಿ, ಮೈ ಬಗ್ಗಿಸಿ ದುಡೀದೇ ಗಂಟೆ ಅಲ್ಲಾಡಿಸಿ ರಾಜಾಶೀರ್ವಾದ ಪದಹಾಡಿ ಪೂರ್ಣಕುಂಭ ಸ್ವಾಗತ ನೀಡಿ ಕೈ ತುಂಬಾ ಕಾಣಿಕೆಗಳನ್ನು ದತ್ತಿ ದಾನ ಭೂದಾನ ಗೋದಾನ ಪಡೆಯುತ್ತಿದ್ದದುಂಟಲ್ರಿ. ಅದನ್ನೇ ಸರ್ಕಾರ ಪ್ರೆಸೆಂಟ್ ಟೈಮಿಗೆ ಸರಿಯಾಗಿ ಸ್ಟಡಿ ಮಾಡಿ ಸ್ವಾತಂತ್ರ್ಯ ಬಂದ ಮ್ಯಾಲೆ ರಾಜರನ್ನು ಮೂಲೆಗೆ ತಳ್ಳಿ ದೀನದಲಿತರಿಗಾಗಿ ನೀಡೋ ಅನುಕೂಲಗಳಿಗೆ ಮೀಸಲಾತಿ ಅಂಬೋ ಹೊಸಾ ಹೆಸರು ಮಡಗಿತು. ಇಲ್ಲದೆ ಹೋಗಿದ್ರೆ ದೊಡ್ಡ ದೊಡ್ಡ ಪದವಿ ಪಟ್ಟಗಳಲ್ಲಿ ಬರಿ ಜುಟ್ಟು, ನಾಮ ಮುದ್ರೆ ಗಂಧ ಈಬತ್ತಿಗಳನೆಲ್ಲ ನೋಡುವ ದೌರ್ಭಾಗ್ಯ ನಮ್ಮದಾಗುತ್ತಿತ್ತು.
ಬುದ್ಧಿಮತ್ತೆ ಬ್ರಾಂಬ್ರ ಪಿತ್ರಾರ್ಜಿತ ಆಸ್ತಿಯೇನಲ್ಲ. ಐಟಿಬಿಟಿಗಳಲ್ಲಿ ದಲಿತರ ಮೋರೆ ನೋಡಲಾಗದ ಬೊಮ್ಮನ್ ಲಾಬಿಗಳ ಕುತರ್ಕ ನೆಡದೈತ್ರಿ. ಕೊಳಕು ಮನಸ್ಸುಗಳು ಬೀದಿಗಿಳಿದೈತ್ರಿ. ಒಳಮೀಸಲಾತಿ ಬಗ್ಗೆ ಲೀಟರ್ ಗಟ್ಟಲೆ ಕಣ್ಣೀರು ಸುರಿಸುವ ಮಾಜಿ ಪರದಾನಿ ದೊಡ್ಡಗೋಡ್ರು ಗಪ್‍ಕುಂತಾರೆ. ಅರ್ಜುನಸಿಂಗ್ ಗೆ ಯಾಕೆ ಸಫೋರ್ಟ್ ಮಾಡಿ ಸ್ಟೇಟ್ಮೆಂಟ್ ಕೊಡಬಾರ್ದು? ಮಾಜಿ ಪರದಾನಿ ವಾಜಪೇಯಿ ಯಾಕೆ ಬಾಯಿ ಹೊಲ್ಕಂಡೈತಿ? ಯಾವ ಯಾವ ಸಂಗತಿಗೋ ಗಂಟ್ಲನರ ಹರ್ಕಳ್ಳೋ ಅಡ್ವಾಣಿ ಯಾಕೆ ಹುಂಬ ವಿದ್ಯಾರ್ಥಿಗಳಿಗೆ ಚಳುವಳಿ ನಿಲ್ಲಸ್ರಲಾ ಅಂತ ಅಡ್ವೈಸ್ ಮಾಡವಲ್ಲ? ಅಂದಿನ ಪ್ರಧಾನಿ ವಿ.ಪಿ.ಸಿಂಗ್ ಗಿದ್ದ ತಾಕತ್ತು ಇವರಿಗ್ಯಾಕಿಲ್ಲ! ನಾವು ಬೀದಿ ಗುಡಿಸ್ತೀವಿ ಕಕ್ಕಸು ತೊಳಿತಿವಿ ಬೂಟ್ ಪಾಲಿಶ್ ಮಾಡ್ತೀವಿ ಅಂತ ಆಕ್ಟ್ ಮಾಡ್ಲಿಕತ್ತಾವಲ್ರಿ ಈ ಸ್ಟುಡೆಂಟ್ಸು! ಪರಮನೆಂಟಾಗಿ ಅದ್ನೆ ಮಾಡಿದ್ರಾತಪಾ ಅದ್ರಾಗೇನ್ ತಪ್ಪು ಐತಿ? ಕಾಯಕವೇ ಕೈಲಾಸ. ಅದು ಬಿಟ್ಟು ಅಸ್ಪತ್ರೆನಾಗಿಂದ ಹೊರಾಗ್ ಬಂದು ಚೀರಾಡ್ತಾ ಲಾಠಿ ಏಟು ತಿಂತಾ, ಟಿಯರ‍್ಗ್ಯಾಸ್ ಕುಡಿತಾ ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡೋದು ಖರೆ ಅಂದ್ರೂ ಚೆಂದಲ್ಲ ಬಿಡ್ರಿ. ಹುಟ್ಟಿಗೂ ಪ್ರತಿಭೆಗೂ ಜಾತಿಗೂ ಪ್ರತಿಭೆಗೂ ಸಂಬಂಧವಿಲ್ಲ ಅಂಬೋದ್ನ ಕಾಣುವಷ್ಟಾರ “ಪ್ರತಿಭೆ” ಭಾರತಕ್ಕೆ ಇನ್ನೂ ಬರ್ನಿಲ್ಲ. ದಲಿತರು ಒಬಿಸಿ ಹಳ್ಳಿಗರು ಕಾರ್ಮಿಕರನ್ನು ವಂಚಿಸುವ ಬುದ್ಧಿನೇ ಭಾರತ್ದಾಗೆ ಪ್ರತಿಭೆ ಅನಿಸ್ಕಂಬಿಟ್ಟೈತೆ ಅಂತ ಎಂಥ ಚೆಂದ ಹೇಳ್ಯಾರ್ರಿ ದೇವನೂರು ಮಹಾದೇವ! ಒಟ್ನಾಗೆ ಕೂರೆಗೆ ಹೆದರಿ ಕಂಬಳಿ ಯಾರಾನ ಬಿಸಾಕ್ತಾರೇನ್ರಿ? ಖಾಸಗಿ ಕಂಪನಿಗಳ ಭಂಡಾಟ ಬ್ರಾಂಬ್ರ ಲಾಬಿಗಳ ಮೊಂಡಾಟಕ್ಕೆ ಸರ್ಕಾರ ಅಂಜಿ ಸಾಮಾಜಿಕ ನ್ಯಾಯಕ್ಕೆ ಎಳ್ಳುನೀರು ಬಿಡ್ದಂಗೆ, ಕಠಿಣ ಕ್ರಮ ಜಾರಿಗೊಳಿಸಿ ದಮನಿತರ ಪರವಾಗಿ ನಿಲ್ಲೋ ತಾಕತ್ತು ತೋರದೆ ಹೋಯ್ತೋ ಇತಿಹಾಸ ತಕ್ಕ ಪಾಠ ಕಲಿಸೀತೆಂಬ ಗ್ಯಾನ ಆಳೋ ಸರ್ಕಾರಕ್ಕಿರ್ಲಿ. ಹೌದಂತಿರೋ ಅಲ್ಲಂತಿರೋ?
*****
( ದಿ. ೦೮-೦೬-೨೦೦೬)