ತಾಯಿ ಹೇಳುತಲಿದ್ದಳೆನ್ನ ಬಾಲ್ಯದ ಕತೆಯ :-
ಮಂಜಾವದಿಂದ ಮುಂಗಾಳು ಕವಿಯುವ ವರೆಗೆ
ಓರಿಗೆಯ ಹಸುಳರೊಡನಾಡಿ, ಬಿಸಿಲಿನ ಬೇಗೆ
ಬೆಳದಿಂಗಳೆನೆ ಕಳೆಯುತಿದ್ದೆ. ಹಸಿವೆಯ ವ್ಯಥೆಯ
ನಾನು ಅರಿತಿರಲಿಲ್ಲ. ಆಟನೋಟಕೆ ಹೀಗೆ
ಮೆಚ್ಚಿಯೂಟವ ಮರೆಯೆ, ಕಿರುಮನೆಯ ಕತ್ತಲೆಯ-
ಲೆನಗೆ ಉಣಿಸಲು, ಕೇಳುತಿದ್ದೆ ಹಿರಿಯರ ಶ್ರುತಿಯ-
“ಬೆಳಕೆ ಬೆಳಕಿದ್ದು ಕತ್ತಲೆಯು ತುಂಬಿತು ಹೇಗೆ?”
ವೇದಕಾಲದಗಾಧದಿವ್ಯಮಾನವಹೃದಯ-
ದಾಳದಿಂದಲಿ, ಸುಖದ ಸಾಮ್ರಾಜ್ಯ ನೆಲೆಗೊಳಿಸೆ,
ಸೋಲು ಗೆಲುವಿನ ತಕ್ಕೆಯಲ್ಲಿ ನುಗ್ಗಾದ ಭಯ-
ಭೀತ ಜಿಹ್ವೆಗಳಲ್ಲಿ, ಮೀಸಲೊಲುಮೆಗೆ ಆಸೆ
ಒಟ್ಟು ಕಣ್ಣೀರಿನಲಿ ಮುಳುಗುತಿಹ ಸತಿಪತಿಯ
ಕಂಠದಲಿ, ವಡುತಿದೆ ಅಂದಿನೊಂದೆ ಸಮಸ್ಯೆ.
*****