ಬರ್‍ರಿ, ಬರ್‍ರಿ ಗೋಪಾಳರಾವ ನಮ್ಮನ್ನಗ್ದಿ ಮರೇತ್ರಂತ ತಿಳಕೂಂಡಿದ್ದಿವಿ. ಬರ್ರಿ ಇಲ್ಲೆ ಕೂಡಬರ್ರಿ. ಅಕಡೆ ಕೂಡಬಾಡ್ರಿ ನಿಮ್ಮ ಕೂಡುವ ಸ್ಥಾನ ಈ ಗಾದಿಯ ಮೇಲೆ ಅದೆ. ನಿಮ್ಮನ್ನ ತೆಳಗ ಕೂಡ್ರಿಸಿ ನಾವೆಲ್ಲಿ ಕೂಡ್ರ ಬೇಕು. ಗಾದಿಯ ಮ್ಕಾಲಿ ಕೂಡ್ರಿ ರಾಯರೆ.

ಎಲಾ, ಅಲ್ಲಿ ಯಾರಿದೀರಿ ಎರಡು ಕಪ್ಪು ಉತ್ತಮ ಚಹಾ ಮಾಡಂತ ಹೇಳ್ರಿ. ಗೋಪಾಳರಾಯರಿಗೆ ಸ್ಟ್ರಾಂಗ ಚಹಾ ಬೇಕು ಗೊತ್ತದ ಇಲ್ಲೊ. ತಾಜಾ ಹಾಲು ಹಾಕಲಿಕ್ಕೆ ಹೇಳು.

ಇದ್ನೋಡ್ರಿ ಆನಂದರಾವ, ಗೋಪಾಳಾರಾವ ಅಂದ್ರ ಒಂದು ವ್ಯಕ್ತಿ ಅದ, ವ್ಯಕ್ತಿ. ಒಬ್ಬ ಮನುಷ್ಯ ತಮ್ಮವ ಅಂತ ಅಂದ್ರ ಜೀವ ಹೋದರು ಅವನ ಕೈ ಬಿಡುವದಿಲ್ಲ. ಬಹಳ ದಿವಸದಾಗ ಅವರ ಭೆಟ್ಟಿಯಾಗಿದ್ದಿಲ್ಲ ಎಂದು ತಿಳಿದು ನಿನ್ನೆ ಅವರ ಮನಿಗೆ ಹೋಗಿದ್ದೆ. ಗೋಪಾಳ್ರಾಯರು ಮನೆಯಾಗದ್ದಿಲ್ಲಂತ ಅವರ ಮನ್ಯಾಗ ಹೇಳಿಬಂದೆ. ಇಂದು ಬೆಳಗಾಗುವದರೂಳಗೆ ಗೋಪಾಳಾರಾವ ಇಲ್ಲಿ ಹಜರರಿದ್ದಾರ. ಋಣಾನಬಂಧ? ಅಂದ್ರ ಹೀಂಗ ಇರಬೇಕು. ನಮ್ಮದು ಅವರದು ಗೆಳತನ ಅಂತ ಅಂದ್ರ ನಮ್ಮ ಪೂರ್‍ತೆಕ್ಕ ಇಲ್ಲ ಅದು. ವಂಶಪರಂಪರಾಗಿದ್ದು ಅದು ಅವರ ತಂದಿ ನಮ್ಮ ತಂದಿ ಮನೂಗಳಿಯೊಳಗ ಸಾಲಿ ಕಲಿಯುವ ಮುಂದೆ ಇಬ್ಬರೂ ಕೂಡಿ ಸಾಲಿ ತಪ್ಪಿಸಿ ಗಿಡ ಮಂಗ್ಯಾನ ಆಟಾ ಆಡಲಿಕ್ಕೆ ಹೋಗುತ್ತಿದ್ದರು. ಅಂದಿನಿಂದ ಅವರದು ನಮ್ಮದು ಗೆಳೆತನ.

ಯಾಕ್ರೀ ಗೋಪಾಳ ರಾವ, ಆಗಿನ ಗಿಡಮಾಗ್ಯಾನ ಆಟದ ದಿವಸ ಹೋದವು. ಈಗಿನ ಹುಡುಗರು ಖೋಡಿಗಳು ಕೆರಿಕೆಟ, ಹಾಕಿ, ಅಂತಾವ ದುಡ್ಡಿನ ಹೊರ್‍ತು ಕೆಲಸಿಲ್ಲ. ನಮ್ಮ ಆಟಗಳಿಗೆ ಒಂದು ದುಡ್ಡು ಸಹ ಖರ್‍ಚು ಹತ್ತುದಿಲ್ಲ.

ಎಲಾ, ಚಹ ಆಗಿದ್ದರ ತರ್‍ಯೋ ಸಂಗಡ ಎನರೆ ಖಾರ ತೊಗೊಂಬರ್‍ಯೋ ಆದರ ಹೊರ್‍ತಾಗಿ ಚಹಕ್ಕ ರುಚಿನೇ ಬರುವದಿಲ್ಲ. ಗೋಪಾಳ್ರಾವ ಅಂದರ ಚಹೆದ ಪಕ್ಕಾ ಸವಿಗಾರರು, ಹಳದೀ ಡಬ್ಬಿಯ ಹೊರ್‍ತು ಗೊತ್ತಿಲ್ಲ ಅವರಿಗೆ.

ನಾನು ಮ್ಯುನಿಸಿಪಾಲ್ಟಿಯ ಚುನಾವಣಿಗೆ ನಿಂತದ್ದು ಅರರಿಗೆ ಹೇಳಲಿಕ್ಕ ಬೇಡ, ನನ್ನ ಚುನಾವಣೆ ಅಂದ್ರ ಅನರ ಚುನಾವಣೆ ಇದ್ದಂಗ. ಗೋಪಾಳ್ರಾಯರಷ್ಟು ಆತ್ಮೀಯ ಭಾವನೆಯಿಂದ ಕಲಸ ಮಾಡನವರೆಂದರೆ ಕ್ವಚಿತ್‌ ಸಿಗುವರು. ಎಲಾ, ಎಲಿ ಅಡಕಿ ಡಬ್ಬಿ ತಗೊಳ್ಳಿರೋ, ವಿಳೇದೆಲಿ ಕೂಡಿಗಿವು ಅವ ಕೂಡಗಿವು, ಇನ್ನೇನು ಕೇಳಬೇಕ ನಿಮಗ, ಎಲ್ಲ ನೆನಪಿನಲ್ಲರಿಲ್ಲಿರಲಿ, ಅಂದ್ರ ಆತು ೨೮ ನೇ ತಾರೀಖು ಮಾತ್ರ ನೆನಪಿನಲ್ಲಿರಿಲಿ.

ಸ್ನಾನದ ವಾಳ್ಯಾ ಆದಂತೆ ತೋರತದ. ವಿನಾಕಾರಣ ನಿಮ್ಮ ಅನ್ಬೇಕಕ್ಕ ಯಾಕ ಹರಕತ್ತು ಮಾಡಬೇಕು ಹೋಗಿಬರ್ರಿ. ನಮಸ್ಕಾರ (ಹೊರಗೆ ಬಂದ ಮೇಲೆ ಗೋಪಾಳರಾಯರ) ೬ ತಿಂಗಳಿಗೊಮ್ಮೆ ಮ್ಯುನಸಿಪಾಲ್ಟಿಯ ಚುನಾವಣಿ ಇದ್ದರೆ ಎಷ್ಟು ಮಜಾ ಆಗುತ್ತಿತ್ತು ಎಂದರು!
*****