ಅಷ್ಟಷಟ್ಟದಿಯಲ್ಲಿ ಉಯ್ಯಾಲೆಯಾಡುತಿದೆ
ಕೌತುಕದ ಬಗೆ; ಹಾಗೆ ಇದು, ಹೀಗೆ ಇದು, ಎನುತ
ಜೀಕುಜೀಕಿನ ವಿಲಾಸದಲಿ ತನ್ಮಯವಾಗಿ,
ಸಂಶಯವೆ ಸಿಂಗಾರವಡೆದು ಸ್ವಚ್ಛಂದದಲಿ
ಬೀರಿದುದೆ ನೋಟ, ಹಾರಿದುದೆ ಹುಬ್ಬೆನುವಂತೆ
ಕುಣಿಸುತಿದೆ ಅಂಗಾಂಗ; ಹೃದ್ಯ ಚಿತ್ತತರಂಗ
ಮಿಂಚಿನಂತುಲ್ಲಟಿಸಿ ಅಟಮಟಿಸಿ ತಾನು ಮಣಿ-
ದುದೆ ಭಂಗಿ ಎಂಬ ಸಡಗರದೊಳಿದೆ ತೊಳತೊಳಗಿ
ಮಿಣಿಯಲ್ಲಿ ಮಣಿವ ಕೊಲ್ಲಟಗಿತ್ತಿ ತನ್ನ ಜೋ-
ಕೆಯ ತೂಕದಲ್ಲಿ ತೂಗಾಡುವಳು. ಮೈಯ ಹವ-
ಣಿಕೆ ಮಿಗಿಲು. ನಿದ್ದೆ ಎಚ್ಚರಗಳಲಿ ಒಂದೆ ಬಾ-
ಳಿನ ಬಿಂಬ ತೇಂಕಾಡುವದು. ಉಸಿರ ಬೀಳೇಳಿ-
ನಲಿ ಡೊಂಕೆ ಪ್ರಾಣಗತಿ? ಒಗೆಯ ಇಬ್ಬಗೆಯಲ್ಲಿ
ಹುರುಳ ತಿರುಳೊಂದು. ಕಣ್ಣೆರಡು, ಕಾಣಿಕೆ ಎರಡೆ?
*****