ಜೀನ್ ವಾಲ್ಜೀನನು ನಡೆದು ಹೋಗುತ್ತಿದ್ದ ನೆಲವು ಬಹಳ ವಾಗಿ ಜಾರುತ್ತಿದ್ದಿತು. ಹೋಗ ಹೋಗು ಅವನು ಕೆಸರಿ ನೊಳಕ್ಕೆ ಇಳಿದನು, ಮೇಲ್ ಡೆಯಲ್ಲಿ ನೀರೂ ತಳದಲ್ಲಿ ಕೆಸರೂ ತುಂಬಿತ್ತು. ಅವನು ಇದನ್ನು ದಾಟಿ ಹೋಗಲೇಬೇಕಾಯಿತು. ಹಿಂದಿರುಗಿ ಹೋಗುವುದು ಅಸಾಧ್ಯವಾಗಿದ್ದಿತು. ಮೇರಿಯಸ್ಸನ ಪ್ರಾಣವು ಹೋಗುವುದರಲ್ಲಿತು; ಜೀನ್ ವಾಲ್ಜೀನನಿಗೆ ಬಹಳ ದಣಿವಾಗಿತ್ತು. ಅವನು ಇನ್ನೆಲ್ಲಿ ತಾನೇ ಹೋದಾನು ! ಹಾಗೆಯೇ ಮುಂದೆ ಹೊರಟನು. ಸ್ವಲ್ಪ ದೂರ ಹೋಗುವವರೆಗೆ ಕೊಚ್ಚೆಯು ಬಹಳ ಆಳವಾಗಿದ್ದಂತೆ ತೋರಲಿಲ್ಲ. ಮುಂದಕ್ಕೆ ಹೋದ ಹಾಗೆಲ್ಲಾ ಅವನ ಹೆಜ್ಜೆಗಳು ಕೆಳಕ್ಕೆ ಇಳಿಯುತ್ತ ಬಂದವು. ಸ್ವಲ್ಪ ಹೊತ್ತಿನಲ್ಲಿಯೇ ಕೆಸರು ಮೊಣಕಾಲಿನ ಅರ್ಧದ ವರೆಗೂ ಬಂತು. ನೀರು ಮೊಣಕಾಲಿನ ಮೇಲಕ್ಕೆ ಬಂತು. ಮೇರಿಯಸ್ಸನನ್ನು ಎರಡು ತೋಳುಗಳಿಂದಲೂ ನೀರಿನ ಮೇಲ್ಗಡೆ ಸಾಧ್ಯವಾದಷ್ಟು ಎತ್ತರವಾಗಿ ಹಿಡಿದುಕೊಂಡು ಮುಂದಕ್ಕೆ ನಡೆದು ಹೋದನು. ಈ ವರೆಗೆ ಕೆಸರು ಮೊಣಕಾಲವರೆಗೂ, ನೀರು ಸೊಂಟದವರೆಗೂ ಬಂದುವು. ಇನ್ನು ಹಿಂದಿರುಗುವುದು ಅಸಾಧ್ಯವೇ ಆಯಿತು. ಹೋಗ ಹೋಗುತ್ತ ಹೆಚ್ಚು ಹೆಚ್ಚು ಆಳಕ್ಕೆ ಇಳಿಯು ತ್ತಲೇ ಇದ್ದನು. ಒಬ್ಬ ಮನುಷ್ಯನ ಭಾರವನ್ನು ತಡೆಯ ಬಹುದಾದ ಈ ಕೆಸರಿನಲ್ಲಿ ಇಬ್ಬರ ಭಾರವು ನಿಲ್ಲಲು ಸಾಧ್ಯವಾಗಿರ ಲಿಲ್ಲ. ಮೇರಿಯಸ್ಸನೂ ಜೀನ್ ವಾನನೂ ಬೇರೆ ಬೇರೆಯಾಗಿ ನಡೆದು ಹೋಗಲು ಇಷ್ಟು ಕಷ್ಟವಾಗುತ್ತಿರಲಿಲ್ಲ. ಆದರೂ ಜೇನ್ ವಾಲ್ಜೀನನು ಈ ಸಾಯುವ ಹೆಣವನ್ನು ಹೊತ್ತುಕೊಂಡು ಮುಂದುವರಿದು ಹೋಗುತ್ತಲೇ ಇದ್ದನು.
ನೀರು ಕಂಕುಳವರೆಗೂ ಬಂತು. ಇನ್ನೇನು ! ತಾನು ಮುಳುಗಿಹೋದೆನೆಂದೇ ಅವನ ಮನಸ್ಸಿಗೆ ತೋರಿತು. ಅವನು ಆ ಕೆಸರಿನಲ್ಲಿ ಚಲಿಸುವುದೇ ಬಹು ಕಷ್ಟವಾಯಿತು. ಇಷ್ಟಾ ದರೂ, ಮೇರಿಯಸ್ಸನನ್ನು ಮೇಲಕ್ಕೆ ಹಿಡಿದುಕೊಂಡು ಅಸಾ ಧಾರಣವಾದ ಶಕ್ತಿಯನ್ನು ಪ್ರಯೋಗಿಸಿ, ಮುಂದಕ್ಕೆ ಹೋಗು ತ್ತಿರುವಲ್ಲಿ ಇನ್ನೂ ಆಳಕ್ಕೆ ಇಳಿದನು, ಈಗ ಅವನ ತಲೆಯು ಮಾತ್ರ ನೀರಿನ ಮೇಲೆ ಕಾಣುತ್ತಿದ್ದಿತು. ತೋಳುಗಳು ಮೇರಿ ಯಸ್ಸನನ್ನು ಎತ್ತಿ ಹಿಡಿದಿದ್ದುವು.
ಇನ್ನೂ ಆಳಕ್ಕೆ ಇಳಿದಳು, ನೀರಿನಿಂದ ತಪ್ಪಿಸಿಕೊಂಡು ಉಸಿರಾಡಲು ಅನುಕೂಲಿಸುವಂತೆ ಮುಖವನ್ನು ಮೇಲಕ್ಕೆ ಚಾಚಿದನು. ಇಂತಹ ಗಹನವಾದ ಕತ್ತಲೆಯಲ್ಲಿ ಯಾರಾದರೂ ಅವನನ್ನು ನೋಡಿದ್ದರೆ, ಅದು ಕತ್ತಲೆಯಲ್ಲಿ ತೇಲಾಡುವ ಮೊಗ ವಾಡವೆಂದು ಹೇಳುತ್ತಿದ್ದರು. ಜೀನ್ ವಾಲ್ಜೀನನು ಪ್ರಾಣದ ಮೇಲಿನ ಆಶೆಯನ್ನು ತೊರೆದು, ಕಟ್ಟ ಕಡೆಯ ಪ್ರಯತ್ನ ವನ್ನು ಮಾಡಿ, ತನ್ನ ಕಾಲನ್ನು ನೂಕಿದನು. ಯಾವುದೋ ಗಟ್ಟಿಯಾದ ಪದಾರ್ಥವು ಕಾಲಿಗೆ ಬಡಿಯಿತು. ಸ್ವಲ್ಪ ಆಧಾರ ಸಿಕ್ಕಿತು. ಅದು ಮತ್ತೆ ಪ್ರಾರಂಭ ವಾದ ನೆಲದ ಭಾಗವು, ಅವನು ಈ ಆಧಾರದಿಂದ ಮೇಲಕ್ಕೆ ಎದ್ದು, ಮೈನುಲಿದು ನುಗ್ಗಿ, ಆ ಗಟ್ಟಿ ನೆಲದ ಮೇಲೆ ಬೇರೂರಿದಂತೆ ನಿಂತನು. ಅದು ಅವನ ಜೀವಿತ ಪಾಸಾದವನ್ನು ಮತ್ತೆ ಹತ್ತುವ ಸೋಪಾನ ಪಙ್ಕ್ತಿಯ ಮೊದಲನೆಯ ಮೆಟ್ಟಿಲೆಂಬಂತೆ ಅವನ ಮನಸ್ಸಿಗೆ ತೋರಿತು.
ನೀರಿನಿಂದ ಹೊರಗೆ ಬಂದಾಗ, ಕಾಲು ಕಲ್ಲಿಗೆ ಬಡಿದು, ಮೊಣಕಾಲು ನೆಲಕ್ಕೂರಿ ಅವನು ಬಿದ್ದುಬಿಟ್ಟನು. ಇದು ಉತ್ತಮ ವೇ ಆಯಿತೆಂದು ಅವನಿಗೆ ತೋರಿತು. ಅವನು ಸ್ವಲ್ಪ ಹಾಗೆಯೇ ಇರುವಲ್ಲಿ, ಅವನ ಆತ್ಮವು ಭಗವಂತನ ಧ್ಯಾನದಲ್ಲಿ ಲೀನ ವಾಯಿತು.
ಮತ್ತೆ ಅವನು ತನ್ನ ಪ್ರಯಾಣವನ್ನು ಮುಂದುವರಿಸಿದನು. ಈ ಜಲಾಶಯದಲ್ಲಿ ಅವನ ಪ್ರಾಣವು ಹೋಗದೆ ಉಳಿದಿದ್ದರೂ, ಅವನ ಶಕ್ತಿಯು ಮಾತು ಕುಂದಿಹೋ ತು, ಆಯಾಸವು ಮಿತಿ ಮೀರಿತ್ತು. ಸಲಸಲಕ್ಕೂ, ಮೂರು ನಾಲ್ಕು ಅಡಿಗಳಿಗೊಂದಾ ವೃತ್ತಿ, ಅವನು ಉಸಿರನ್ನೆಳೆದುಕೊಂಡು ಗೋಡೆಗೆ ಒರಗಿಕೊಳ್ಳ ಬೇಕಾಯಿತು. ಅವನು ಒಂದು ಸಲ, ಮೇರಿಯಸ್ಸನನ್ನು ತಿರುಗಿಸಿ ಬೇರೆ ರೀತಿಯಾಗಿ ಹಿಡಿದುಕೊಳ್ಳುವುದಕ್ಕಾಗಿ, ಆ ಕಾಲುವೆಯ ಅಂಚಿನ ಮೇಲೆ ಕುಳಿತುಕೊಳ್ಳಬೇಕಾಯಿತು. ಆಗ ಅಲ್ಲಿಯೇ ನಿಂತುಬಿಡೋಣವೆಂದಾಲೋಚಿಸಿದನು. ಆದರೆ, ಶಕ್ತಿ ಕುಂದಿದರೂ ಅವನ ಉತ್ಸಾಹವು ಕುಂದಿರಲಿಲ್ಲ. ಆದಕಾರಣ, ಮತ್ತೆ ಮೇಲಕ್ಕೆ ಎದ್ದು ಪ್ರಯಾಣದಲ್ಲಿ ಮುಂದುವರಿದನು.
ಸ್ವಲ್ಪ ಹೊತ್ತಿನಲ್ಲಿಯೇ, ಆ ಮಾರ್ಗದ ಕಡೆಯ ಭಾಗದಲ್ಲಿ, ಬಹು ದೂರದಲ್ಲಿದ್ದ ಬೆಳಕು ಅವನ ಕಣ್ಣಿಗೆ ಬಿತ್ತು. ಜೀನ್ ವಾಲ್ಜೀನನ ಆಯಾಸವೂ ಮಾಯವಾಯಿತು. ಮೇರಿಯಸ್ಕನ ಭಾರವೇ ತೋರಲಿಲ್ಲ. ಮತ್ತೆ, ಕಬ್ಬಿಣದಂತಿದ್ದ ಅವನ ಮೊಣ ಕಾಲುಗಳಲ್ಲಿ ಮೊದಲಿನ ಶಕ್ತಿಯೇ ಮೂಡಿತು. ಸಾಮಾನ್ಯವಾಗಿ ನಡೆದುಹೋಗದೆ, ಮುಂದಕ್ಕೆ ಓಡಿಹೋದನೆಂದೇ ಹೇಳಬಹುದು.
ಕಟ್ಟಕಡೆಗೆ ದ್ವಾರದ ಬಳಿಗೆ ಬಂದು, ಅಲ್ಲಿ ನಿಂತುಬಿಟ್ಟನು. ಅಲ್ಲಿ ಬಾಗಿಲಿದ್ದರೂ ಅವನು ಹೊರಗೆ ಹೋಗಲು ಆಸ್ಪದವಿರಲಿಲ್ಲ.
ಅಲ್ಲಿಯ ಕಮಾನಿಗೆ, ಸಲಾಕಿಗಳಿಂದ ಮಾಡಿದ ಒಂದು ಬಾಗಿಲಿದ್ದಿತು. ಆ ಬಾಗಿಲಿಗೂ ಕಲ್ಲಿನ ಕಮಾನಿಗೂ ಸೇರಿಸಿ ಒಂದು ಬಲವಾದ ದೊಡ್ಡ ಬೀಗವನ್ನು ಹಾಕಿದ್ದರು. ಈ ಬೀಗವು ತುಕ್ಕು ಹಿಡಿದು ಕೆಂಪಾಗಿ ಒಂದು ದೊಡ್ಡ ಇಟ್ಟಿಗೆಯಂತೆ ಕಾಣು ತಿತ್ತು. ಈಗ ಸಾಯಂಕಾಲ ಎಂಟೂವರೆ ಗಂಟೆಯ ಹೊತ್ತಾಗಿದ್ದಿರ ಬಹುದು.
– ಜೀನ್ ವಾಲ್ಜೀನನು, ಆ ಒಣಗಿದ ನೆಲದ ಮೇಲೆ ಮೇರಿ ಯಸ್ಸನನ್ನು ಗೋಡೆಗೆ ಒರಗಿಸಿ ಕೂರಿಸಿ, ತಾನು ಬಾಗಿಲ ಬಳಿಗೆ ಹೋಗಿ, ಸಲಾಕಿಗಳನ್ನು ತನ್ನ ಎರಡು ಕೈಗಳಿಂದಲೂ ಬಲವಾಗಿ ಹಿಡಿದು ಬಗ್ಗಿಸಲು ಪ್ರಯತ್ನಿಸಿದನು. ಅವನ ಪ್ರಯತ್ನವು ಸಾಗಲಿಲ್ಲ. ಬಾಗಿಲು ಅಲ್ಲಾಡಲಿಲ್ಲ. ಜೀನ್ ವಾಲ್ಜೀನನು ಆ ಸಲಾಕಿ ಗಳಲ್ಲಿ ಸುಲಭವಾಗಿದ್ದುದನ್ನು ಎಳೆದುಕೊಂಡು, ಬಾಗಿಲನ್ನು ಮೀಟಿ ಎತ್ತುವುದಕ್ಕಾಗಲಿ, ಅಥವಾ ಬೀಗವನ್ನು ಒಡೆಯು ವುದಕ್ಕಾಗಲಿ ಅದನ್ನು ಉಪಯೋಗಿಸಿಕೊಳ್ಳಬೇಕೆಂದು, ಪ್ರತಿ ಯೊಂದು ಸಲಾಕಿಯನ್ನೂ ಹಿಡಿದು ಜಗ್ಗಿದನು. ಒಂದಾ ದರೂ ಅಲುಗಲಿಲ್ಲ, ಹುಲಿಯ ದವಡೆಯಲ್ಲಿಯ ಹಲ್ಲುಗಳಿಗಿಂತಲೂ ಅವು ಬಿಗಿಯಾಗಿದ್ದುವು.
ಅನಂತರ ಬಾಗಿಲ ಕಡೆಗೆ ಬೆನ್ನನ್ನು ತಿರುಗಿಸಿ, ಇನ್ನೂ ಚಲಿಸದೆ ಬಿದ್ದಿದ್ದ ಮೇರಿಯಸ್ಸನ ಪಕ್ಕದಲ್ಲಿ ಉರುಳಿಕೊಂಡು, ಮೊಣಕಾಲು ಗಳ ನಡುವೆ ತಲೆಯನ್ನಿಟ್ಟುಕೊಂಡು ಬೋರಲಾಗಿ ಬಿದ್ದನು. ಹೊರಗೆ ಹೋಗಲು ಮಾರ್ಗವಿಲ್ಲ. ಇದೇ ಅವನ ಕಟ್ಟಕಡೆಯ ದುಃಖವು. ಉಕ್ಕಿ ಬರುತ್ತಿರುವ ಇಂತಹ ದುಃಖದಲ್ಲಿ, ಅವನು ಯಾರ ವಿಷಯವಾಗಿ ಆಲೋಚಿಸಿದುದು ? ತನ್ನ ವಿಷಯ ವಾಗಿಯೂ ಅಲ್ಲ ; ಮೇರಿಯಸ್ಸನ ವಿಷಯವಾಗಿಯೂ ಅಲ್ಲ. ಕೋಸೆಟ್ಟಳ ವಿಷಯವಾಗಿ.
ಈ ಪ್ರಾಣಾಪಾಯ ಸಮಯದಲ್ಲಿ, ಅವನ ಭುಜದ ಮೇಲೆ ಯಾರೋ ಕೈಯನ್ನಿಟ್ಟು, ‘ ಅರ್ಧ ಪಾಲನ್ನು ಹಂಚಿ ಕೊಡು,’ ಎಂದ, ಮೆಲ್ಲನೆಯ ಶಬ್ದವು ಕೇಳಿಸಿತು.
ಅವನ ಮುಂದೆ ಒಬ್ಬ ಪುರುಷನು ನಿಂತಿದ್ದನು. ಇವನು ಒಂದು ದೊಡ್ಡ ಮೇಲಂಗಿಯನ್ನು ಹಾಕಿಕೊಂಡು, ತನ್ನ ಪಾದ ರಕ್ಷೆಗಳನ್ನು ಎಡಗೈಯಲ್ಲಿ ಹಿಡಿದು, ಬರಿಗಾಲಲ್ಲಿದ್ದನು. ಅವನು ಶಬ್ದ ವಾಗದಂತೆ ಜೀನ್ ವಾನನ ಬಳಿಗೆ ಬರಬೇಕೆಂಬ ಉದ್ದೇಶ ದಿಂದ ಆ ಪಾದರಕ್ಷೆಗಳನ್ನು ತೆಗೆದು ಬಂದಿದ್ದನೆಂಬುದು ಪ್ರತ್ಯಕ್ಷ ವಾಗಿತ್ತು,
– ಅವನು ಥೆನಾರ್ಡಿಯರನು, ತನ್ನ ಗುರುತನ್ನು ಈ ಥೆನಾರ್ಡಿ ಯರನ್ನು ಹಿಡಿಯಲಿಲ್ಲವೆಂಬುದು ಜೀನ್ ವಾಲ್ಜೀನನಿಗೆ ಆಗಲೇ ಗೊತ್ತಾಯಿತು. ಜೀನ್ ವಾಲ್ಜೀನ್-ನೀನು ಹೇಳುವುದೇನು ? ಥೆನಾರ್ಡಿಯರ್-ಆ ಮನುಷ್ಯನನ್ನು ಕೊಂದಿರುವೆಯಷ್ಟೆ ! ಒಳ್ಳೆಯದಾಯಿತು, ಇದೋ, ನನ್ನ ಭಾಗಕ್ಕೆ, ಈ ಬಾಗಿಲ ಬೇಗದ ಕೈಯು ನನ್ನಲ್ಲಿರುವುದು.
ಜೀನ್ ವಾಲ್ಜೀನನಿಗೆ ವಿಷಯವೇನೆಂಬುದು ಗೊತ್ತಾಗುತ್ತ ಬಂತು. ಥೆನಾರ್ಡಿಯರನು ಇವನನ್ನು ಕೊಲೆಗಾರನೆಂದು ಊಹಿಸಿದ್ದನು.
ಥೆನಾರ್ಡಿಯರ್ ಅಯ್ಯಾ ! ಅವನ ಜೇಬುಗಳಲ್ಲಿ ಏನಿತ್ತೆಂಬು ದನ್ನು ಹುಡುಕಿ ನೋಡದೆಯೇ ನೀನು ಆ ಮನುಷ್ಯನನ್ನು ಕೊಂದಿರಲಾರೆ. ಸಲ್ಲಬೇಕಾದ ನನ್ನ ಅರ್ಧ ಭಾಗವನ್ನು ನನಗೆ ಕೊಟ್ಟುಬಿಡು, ನಿನಗೆ ಬಾಗಿಲನ್ನು ತೆರೆಯುವೆನು.
ಜೇನ್ ವಾಲ್ಜೀನನು ಮೇರಿಯಸ್ಸನ ಅಂಗಿಯ ಜೇಬುಗಳಲ್ಲಿ ಹುಡುಕಿ ಒಂದು ಚಿನ್ನದ ನಾಣ್ಯವನ್ನೂ ಎರಡು ಬೆಳ್ಳಿಯ ನಾಣ್ಯ ಗಳನ್ನೂ ತೆಗೆದನು.
ಥೆನಾರ್ಡಿಯರನು ಮೇಲಣ ತುಟಿಯನ್ನು ಮುಂದಕ್ಕೆ ಚಾಚಿ, ‘ ನೀನು ಅವನನ್ನು ಕೊಂದುದರಿಂದ ಹೆಚ್ಚಾದ ಪ್ರಯೋಜನವು ದೊರೆತಂತಾಗಲಿಲ್ಲ,’ ಎಂದನು.
ಅನಂತರ ಅವನು ಕೇವಲ ಸಲಿಗೆಯಿಂದ ಜೀನ್ ವಾಲ್ಜೀನನ ಜೇಬುಗಳನ್ನೂ ಮೇರಿಯಸ್ಸನ ಜೇಬುಗಳನ್ನೂ ಹುಡುಕಿ ನೋಡಿ ದನು.
ಥೆನಾರ್ಡಿಯರನ್ನು ಮೇರಿಯಸ್ಸನ ಅಂಗಿಯಲ್ಲಿ ಹುಡುಕು ತ್ತಿದ್ದಾಗ, ಜೀನ್ ವಾಲ್ಜೀನನಿಗೆ ಗೋಚರವಿಲ್ಲದಂತೆ, ಆ ಅಂಗಿಯ ಕೊನೆಯಲ್ಲಿ ಒಂದು ಚೂರು ಬಟ್ಟೆಯನ್ನು ಹರಿದುಕೊಳ್ಳಲು ಅವನಿಗೆ ಅವಕಾಶ ಸಿಕ್ಕಿತು.
ಇದಾದ ಮೇಲೆ ಅವನು ತನ್ನ ಅಂಗಿಯೊಳಗಿನಿಂದ ಬೀಗದ ಕೈಯನ್ನು ತೆಗೆದು, ಮೇರಿಯಸ್ಸನನ್ನು ಜೀನ್ ವಾಲ್ಜೀನನ ಬೆನ್ನಿನ ಮೇಲಕ್ಕೆ ಎತ್ತಿ, ಅವನನ್ನು ತನ್ನ ಹಿಂದೆ ಬರುವಂತೆ ಸನ್ನೆಮಾಡುತ್ತ ಬರಿಯ ಕಾಲಿನಿಂದಲೇ ಬಾಗಿಲ ಕಡೆಗೆ ಹೋದನು. ಅನಂತರ ಹೊರಗೆ ನೋಡಿ, ಬಾಯಮೇಲೆ ಬೆರಳನ್ನಿಟ್ಟುಕೊಂಡು ಸಂದೇಹ ಗ್ರಸ್ತನಾದಂತೆ ಒಂದೆರಡು ಕ್ಷಣಗಳ ಕಾಲ ಸುಮ್ಮನೆ ನಿಂತನು. ಹೀಗೆ ಪರೀಕ್ಷಿಸಿ ನೋಡಿದ ಮೇಲೆ, ಬೀಗದ ಕೈಯನ್ನು ಬೀಗದೊಳಗಿಟ್ಟು ತಿರುಗಿಸಲು, ಅಗುಳಿಯು ಬಿಚ್ಚಿಕೊಂಡು ಬಾಗಿಲು ತೆರೆಯಿತು. ಬಾಗಿಲ ಬಡಿತವಾಗಲಿ, ಜರುಗುವ ಶಬ್ದ ವಾಗಲಿ ಇರಲಿಲ್ಲ. ಎಲ್ಲವೂ ಬಹಳ ನಿಶ್ಯಬ್ದವಾಗಿ ನಡೆಯಿತು. ಈ ಬಾಗಿಲಿನ ಕೀಲುಗಳಿಗೆ, ಬಹಳ ಎಚ್ಚರಿಕೆಯಿಂದ, ಎಣ್ಣೆ ಹಾಕಿ ದ್ದರು. ಇದನ್ನು ಅನೇಕಾವೃತ್ತಿ ತೆರೆದು ಮುಚ್ಚುತ್ತಿದ್ದರೆಂಬುದು ಸ್ವಷ್ಟವಾಗಿತ್ತು. ಇದರಿಂದ, ಇಲ್ಲಿ ನಿಶಾಚರರಾದ ಕಳ್ಳರು ಗೋ ಪ್ಯವಾಗಿ ಬಂದು ಹೋಗುತ್ತಲೂ ತೋಳಗಳಂತೆ ಭಯಂಕರ ದುಷ್ಕಾರ್ಯಗಳನ್ನು ಮಾಡುತ್ತಲೂ ಇದ್ದರೆಂದು ಕಂಡಿತು. ಈ ಗ್ರಾಮಸಾರದ ಬಚ್ಚಲು ಕೆಲವು ಮಂದಿ ಗುಪ್ತ ಜನರ ಗುಂಪಿನ ದುಷ್ಕಾರ್ಯಗಳಿಗೆ ಬಹಳ ಸಹಾಯವಾಗಿದ್ದಿತೆಂಬುದು ಪ್ರತ್ಯಕ್ಷ ವಾಗಿತ್ತು.
ಅವನು ಬಾಗಿಲನ್ನು ಅರ್ಧಮಟ್ಟಿಗೆ ತೆರೆದು, ಚೀನ್ ವಾಲ್ಮೀ ನನು ಹೊರಗೆ ಬರುವುದಕ್ಕೆ ಮಾತ್ರವೇ ತಕ್ಕಷ್ಟು ಮಾರ್ಗವನ್ನು ಬಿಟ್ಟು, ಮತ್ತೆ ಬಾಗಿಲನ್ನು ಮುಚ್ಚಿ, ಬೀಗದ ಕೈಯನ್ನು ಬೀಗ ದೊಳಗೆ ಎರಡಾ ವೃತ್ತಿ ತಿರುಗಿಸಿ, ಮೆಲ್ಲನೆ ಹಿಂದಕ್ಕೆ ಸರಿದು ಅಂಧ ಕಾರದಲ್ಲಿ ಮಾಯವಾದನು. ಅವನ ನಡಿಗೆಯು ಮೃದುವಾದ ಅಂಗಾಲಿನ, ಹುಲಿಯ ನಡಿಗೆಯಂತೆ ನಿಶ್ಯಬ್ದವಾಗಿತ್ತು.
ಜೀನ್ ವಾಲ್ಜೀನನು ಹೊರಕ್ಕೆ ಬಂದು ಮೇರಿಯಸ್ಸನನ್ನು ಬೆನ್ನಿ ನಿಂದ ಮೆಲ್ಲನೆ ಜಾರಿಸಿ ನದಿಯ ದಡದಲ್ಲಿ ಇಳಿಸಿದನು.
ಅವರು ಹೊರಕ್ಕೆ ಬಂದುಬಿಟ್ಟರು. ವಿಷದ ಗಾಳಿಯೂ, ಅಂಧಕಾರವೂ ಭಯಂಕರ ಕಷ್ಟವೂ ಅವರ ಹಿಂದೆ ಉಳಿದವು. ಶುದ್ಧವಾಗಿಯ, ಆನಂದಕರವಾಗಿಯ, ಧಾರಾಳವಾಗಿ ಉಚ್ಛ್ವಾಸಿಸಲು ಯೋಗ್ಯವಾಗಿಯೂ, ಇರುವ ಸುಗಂಧವಾಯುವು ಅವನ ಸುತ್ತಲೂ ಸುಳಿಯುತ್ತಿದ್ದಿತು. ಸುತ್ತ ಮುತ್ತ, ಎಲ್ಲೆಲ್ಲಿಯ ನಿಶ್ಯಬ್ದವಾಗಿತ್ತು. ಶುದ್ಧವಾದ ಆಕಾಶ ದಲ್ಲಿ, ಸೂರಾಸ್ತಮಯವು ಮನೋಹರವಾಗಿ ಕಂಗೊಳಿಸು ತಿತ್ತು. ಅನಂತರ ಮಬ್ಬಾಗುತ್ತ ಬಂತು. ಭೀತಿಯಿಂದ ಅವಿತು ಕೊಳ್ಳಲು ಕತ್ತಲೆಯ ಆಚ್ಛಾದನವನ್ನಪೇಕ್ಷಿಸುವವರಿಗೆ ಹಿತಕರ ವಾಗಿರುವ ರಾತ್ರಿಯು ಕವಿಯಿತು.
*****
ಮುಂದುವರೆಯುವುದು
ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ