ದೇವ ದೇವರೆಣ್ಣಿ ಯಾವ ದೇವರೆಣ್ಣಿ|
ಮನಿಯ ದೇವಽರ ಮೊದಲೆಣ್ಣಿ|
ಹರಹರ ನಮ ಸಿವಗ ನೆಯ್ಯೆಣೆ ||೧||
ಬಾಲಽಗೆಣ್ಣಿ ಹಚ್ಚೊಟಿಗೆ ಬಾಗಿಲಿಗೆ ಬಿಸಿಲ್ಬಂದ|
ನಾಲ್ವತ್ತ್ವಾಟಽದ ಎಲಿ ಬಂದ| ಹರಹರ…. ||೨||
ಕಂದಽಗೆಣ್ಣಿ ಹೆಚ್ಚೊಟಿಗೆ ಅಂಗಳಕ ಬಿಸಿಲ್ಬಂದ|
ಐವತ್ತ್ವಾಟಽದ ಎಲಿ ಬಂದ| ಹರಹರ…. ||೩||
ನೀರಿಲ್ಲಽದಂಗಳಾಗ ನೀರ್‍ಯಾಕನಾಗ್ಯಾವ|
ಊರಿಗಿ ದೊಡ್ಡವರ ಮಗ ಮಿಂದ| ಹರಹರ…. ||೪||
ಕೆಸರಿಲ್ಲದಂಗಳಾಗ ಕೆಸರ್‍ಯಾಕನಾಗ್ಯಾವ|
ಹೆಸರಿಗಿ ದೊಡ್ಡವರ ಮಗ ಮಿಂದ| ಹರಹರ…. ||೫||
ಹೆಸರಿಽಗಿ ದೊಡ್ಡವರ ಮಗ ಮಿಂದ ತಮ್ಮಗ।
ಹಸರ ಪಲ್ಲಕ್ಕಿ ನೆರಳಾಗಿ| ಹೆರಹರ…. ||೬||
*****
ಅರಿಸಿಣ ಹಚ್ಚುವುದು ಲಗ್ನದ ಕಾಲದಲ್ಲಿ ಪ್ರಥಮದೀಕ್ಷೆಯುತಿರುವುದು. ವರನಿಗೆ ಅರಿಷಿಣ ಹಚ್ಚುವಾಗ ಇದನ್ನು ಹಾಡುತ್ತಾರೆ. ಆಗ ಮುತ್ತೈದೆಯರು ನೆರೆದು ಹಾಡುತ್ತ, ವರನ ತಲೆಗೆ ವೀಳ್ಯದ ಎಲೆಯಿಂದ ಎಣ್ಣೆಯನ್ನು ಹಚ್ಚಿ, ಮೈಗೆ ಅರಿಸಿಣವನ್ನು ಬಳಿದು, ಸ್ನಾನ ಮಾಡಿಸುವರು.
ಛಂದಸ್ಸು:- ತ್ರಿಪದಿಯ ಪೂರ್ವಾರ್ಧ.
ಶಬ್ದಪ್ರಯೋಗಗಳು:- ನಮ ಶಿವರ್=ನಮ್ಮ ಮದುಮಗನಿಗೆ. ನೆಯ್ಯೆಣ್ಣೆ=ಸ್ನಿಗ್ಧವಾದ ಎಣ್ಣೆ. ಹೆಚ್ಚೊಟಿಗೆ=ಹಚ್ಚುವಷ್ಟರಲ್ಲಿ. ತ್ವಾಟ=ತೋಟ.ಎಲಿ=ವೀಳ್ಯದ ಎಲೆ. ನೀರ್ಯಾಕನಾಗ್ಯಾವ=ನೀರೇಕೆ ಆಗಿವೆ.