-ಹಸ್ತಿನಾಪುರದರಮನೆಯಲ್ಲಿ ಪಾಂಡುಪುತ್ರರಿಗೂ ಧೃತರಾಷ್ಟ್ರಸುತರಿಗೂ ಹೊಂದಿಕೆಯಾಗದೆ ಅವರಲ್ಲಿ ದ್ವೇಷದ ಭಾವನೆ ಬೆಳೆದು, ಬಲಿಯುತ್ತಲೇ ಇತ್ತು. ಇದಕ್ಕೆ ಇಂಬು ನೀಡುವಂತೆ ಶಕುನಿಯು ದ್ವೇಷದ ಬೆಂಕಿಗೆ ಇನ್ನಷ್ಟು ತುಪ್ಪವನ್ನು ಸುರಿಯುತ್ತಿದ್ದ. ಹಾಗಾಗಿ ಅವರಲ್ಲಿ ದ್ವೇಷವು ಇನ್ನಷ್ಟು ಹೆಚ್ಚಾಗಿ ಬೆಳೆಯಲಾರಂಭಿಸಿತು. ಹಿರಿಯರು ಮಕ್ಕಳಾಟವೆಂದು ನಿರ್ಲಕ್ಷಿಸಿದ್ದರು. ಈ ಸಂದರ್ಭದಲ್ಲಿ ಕುಲಗುರುವಾದ ಕೃಪಾಚಾರ್ಯರಿಗೆ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುವ ಜವಾಬ್ದಾರಿಯನ್ನು ವಹಿಸಲಾಯಿತು. ಕೃಪಾಚಾರ್ಯರು ಅವರಿಗೆ ವಂಚನೆಯಿಲ್ಲದೆ ಸಾಂಪ್ರದಾಯಿಕ ಶಿಕ್ಷಣ ನೀಡಲಾರಂಭಿಸಿದರು. ಆದರೆ ಅವರಿಗೆ ವಿಶೇಷ ಶಿಕ್ಷಣದ ಅವಶ್ಯಕತೆಯಿತ್ತು-
ಅರಸುಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯುತ್ತಿದ್ದಿತು ಮೊದಲಿಂದ
ಸಾಂಪ್ರದಾಯಿಕವೆನಿಸಿದ್ದ ಬೋಧನೆಯು ಅರಮನೆ ಕುಲಗುರು ಕೃಪನಿಂದ
ವಿಶೇಷ ನಿಪುಣತೆ ಶಿಕ್ಷಣ ಅವರಿಗೆ ಕೊಡಿಸುವ ಇಷ್ಟವು ಭೀಷ್ಮನಿಗೆ
ಉತ್ತಮ ಗುರುವಿನ ಹುಡುಕಾಟವನವ ನಡೆಸುತ್ತಿದ್ದನು ಪ್ರತಿಘಳಿಗೆ
ಮಕ್ಕಳೊಮ್ಮೆ ಉದ್ಯಾನದ ಬಯಲಲಿ ಆಟವನಾಡುತಲಿರುವಾಗ
ಚಿನ್ನಿದಾಂಡುಗಳ ಚೆನ್ನಾಟದಲ್ಲಿ ಓಡುತ ಆಡುತ ಮೆರೆವಾಗ
ಚಿನ್ನಿಯು ದೂರಕೆ ಚಿಮ್ಮಿದ ಸಮಯದಿ ಬಾವಿಯ ಒಳಗಡೆ ಬಿದ್ದಿತ್ತು
ಚಿನ್ನಿಯ ಮೇಲಕೆ ತರುವ ವಿಷಯದಲ್ಲಿ ವಾದವಿವಾದವು ನಡೆದಿತ್ತು!
ದ್ರೋಣನೆಂಬ ಬಡಬ್ರಾಹ್ಮಣನೊಬ್ಬನು ಓಜಗುಣವ ಹೊಂದಿದ್ದವನು
ಮಡಕೆಯ ಮಾಡುವ ಕಲೆಯ ತಾಯಿಯಲ್ಲಿ ಜನಿಸಿ ಇಳೆಗೆ ಬಂದಿದ್ದವನು
ಕುಂಭಸಂಭವನು ಎಂಬ ಹೆಸರಿನವ ಹಾದಿಯಲ್ಲಿ ತಾ ನಡೆದಿದ್ದ
ಅಶ್ವತ್ಥಾಮನು ಎನ್ನುವ ಮಗನನು ಜತೆಯಲ್ಲಿಯೆ ಕರೆತಂದಿದ್ದ
ಮಕ್ಕಳ ವಾದವಿವಾದವ ಕೇಳುತ ಅವರ ಹತ್ತಿರಕೆ ಬಂದಿದ್ದ
ದರ್ಭೆಯ ಮಂತ್ರಿಸಿ ಬಾವಿಯಲಿಳಿಸುತ ಚಿನ್ನಿಯನ್ನು ಹೊರತೆಗೆದಿದ್ದ!
ಮಕ್ಕಳ ಅಟವ ನೋಡುತಲಿದ್ದವ ಭೀಷ್ಮನು ಇದನ್ನು ನೋಡಿದನು
ಅರಸುಮಕ್ಕಳಿಗೆ ವಿದ್ಯೆಯ ಕಲಿಸಲು ದ್ರೋಣನನ್ನು ತಾ ಬೇಡಿದನು
ದ್ರೋಣನಿಗೂ ಇದು ಬೇಕಾಗಿದ್ದಿತು ಹೊಟ್ಟೆಯ ಹೊರೆಯಲು ಆಶ್ರಯವು
ದ್ರುಪದನ ದುರಹಂಕಾರವ ಅಡಗಿಸಬೇಕೆನ್ನುವ ಮನಸಿನ ಛಲವು
ಭೀಷ್ಮನ ಮಾತಿಗೆ ಒಪ್ಪಿದ ದ್ರೋಣನು ಹಸ್ತಿನಾಪುರದಿ ನೆಲೆಸಿದನು
ಕುರುಸಾಮ್ರಾಜ್ಯದ ಅರಸು ಮಕ್ಕಳಿಗೆ ಪ್ರಾರಂಭಿಸಿದನು ಕಲಿಕೆಯನು!
ನೀರಿನ ನಡುವಲಿ ದಾರಿಯ ತಪ್ಪಿದ ನಾವೆಗೆ ದೊರೆತನು ನಾವಿಕನು
ತೋರಿ ತನ್ನ ಚಾಣಾಕ್ಷತೆಯನ್ನು ಬೀರುತ ತನ್ನ ಪ್ರಭಾವವನು
ಸಾರಾಸಾರ ವಿಚಾರವ ತಿಳಿದವ ಸಕಲವಿದ್ಯೆಗಳ ಬಲ್ಲವನು
ನಿರಾಯಾಸದಲಿ ನಿಬ್ಬೆರಗಾಗಿಸಿ ನಿಂತನು ಅರಮನೆಯಲ್ಲವನು
ವೀರಕುಮಾರರ ವಿದ್ಯಾಭ್ಯಾಸದ ಹೊಣೆಯನು ಹೊತ್ತನು ಹಾರುವನು
ಕುರುವಂಶದ ನೂರಾರು ಮಕ್ಕಳಿಗೆ ಉತ್ತಮ ಮಾರ್ಗವ ತೋರುವನು
ಸಕಲ ವಿದ್ಯೆಗಳ ಧಾರೆಯನೆರೆದನು ತನ್ನ ನೆಚ್ಚಿನ ಶಿಷ್ಯರಿಗೆ
ವಂಚನೆಯಿಲ್ಲದೆ ಕಲಿಸತೊಡಗಿದನು ಕೌರವ ಪಾಂಡವರೆಲ್ಲರಿಗೆ
ನೂರಾರು ಮಂದಿಯು ಶಿಷ್ಯರು ಅವನಿಗೆ ಒಟ್ಟಿಗೆ ಕಲಿತರು ಅವನಲ್ಲಿ
ಬೇರಾರಿಗಿಲ್ಲದ ಭಾಗ್ಯವು ಅವರಿಗೆ ದೊರಕಿತು ಅರಮನೆ ಬದುಕಲ್ಲಿ
ಕತ್ತಿಯ ವರಸೆಯು ಕುಸ್ತಿಪಟ್ಟುಗಳು ಗದಾಯುದ್ಧಗಳ ಕಲಿಕೆಯನು
ಕಲಿತರೆಲ್ಲರೂ ಕೈಲಾದಷ್ಟು ಪ್ರಯತ್ನವ ಮಾಡುತ ಎಲ್ಲವನು
ಅಶ್ವತ್ಥಾಮನು ತಾನೂ ಕಲಿತನು ಅವರೊಂದಿಗೆ ಸಮರಕಲೆಯನ್ನು
ಕೆಲವರು ಮಾತ್ರವೆ ಸಕಲವಿದ್ಯೆಯಲಿ ಪಡೆದರು ಪ್ರಾವೀಣ್ಯತೆಯನ್ನು!
ಧರ್ಮನು ಕಲಿತನು ಎಲ್ಲ ವಿದ್ಯೆಗಳ ಆದನವನು ಮಹಾರಥಿಕ
ಧರ್ಮಸೂತ್ರಗಳ ಕಲಿಯುವುದೆಂದರೆ ಆಸಕ್ತಿಯು ಅವನಲಿ ಅಧಿಕ
ತಾಳ್ಮೆಯಲವನನು ಮೀರುವವರಿಲ್ಲ ಶಾಂತಮೂರ್ತಿಯೇ ತಾನಾದ
ಅಜಾತಶತ್ರುವು ಎಂಬುವ ಹೆಸರನು ಪಡೆದು ಎಲ್ಲರಿಗೆ ಬೇಕಾದ!
ಭೀಮಸೇನನೋ ಗದಾಯುದ್ಧವನು ಕಲಿತನು ಬಲು ಆಸಕ್ತಿಯಲಿ
ದುರ್ಯೋಧನನೂ ಪ್ರವೀಣನಾದನು ಕಾದಾಡುವುದನು ಗದೆಯಲ್ಲಿ
ಭೀಮ ಸುಯೋಧನರಿಬ್ಬರೂ ಸೆಣಸಿ ಮುಂದಾಗಿದ್ದರು ಸ್ಪರ್ಧೆಯಲಿ
ಸ್ಪರ್ಧೆಗೆ ನಿಂತರೆ ಸೋಲರು ಯಾರೂ, ಈರ್ವರು ಸರಿಸಮಬಲರಲ್ಲಿ
ದುಶ್ಯಾಸನನಿಗೆ ದುಸ್ಸಾಹಸದಲಿ ಇದ್ದಿತು ಹೆಚ್ಚಿನ ಆಸಕ್ತಿ
ಉಳಿದ ಕೌರವರು ಹಿಂದುಳಿದಿದ್ದರು ಅವರಲಿ ಇತ್ತು ನಿರಾಸಕ್ತಿ
ಕಾಟಾಚಾರಕೆ ವಿದ್ಯೆಯ ಕಲಿತರು ಕಲಿಯದೆಹೋದರೆ ಬಿಡರೆಂದು
ಯುಯುತ್ಸುವೆನ್ನುವನೊಬ್ಬನು ಮಾತ್ರವೆ ಉಳಿದನು ಉತ್ತಮನವನೆಂದು!
ಅರ್ಜುನ ಎಲ್ಲಾ ವಿದ್ಯೆ ಕಲಿತರೂ ಧನುರ್ವಿದ್ಯೆಯಲಿ ಮೊದಲಿಗನು
ಬಿಲ್ಲಿನ ಯುದ್ಧದ ಕಲೆಯಲ್ಲಿ ಯಾರೂ ಸೋಲಿಸಲಾರರು ಅವನನ್ನು
ಕತ್ತಲಲ್ಲಿಯೂ ಕೈಗಳು ಬಾಯಿಗೆ ತಪ್ಪಿಲ್ಲದೆ ಬರುವುದ ಕಂಡು
ಅಭ್ಯಾಸದ ಬಲ ಎಂಬುದನರಿತನು ನಿತ್ಯವು ಅಭ್ಯಸಿಸುತ ಗಂಡು
ಧನುರ್ವಿದ್ಯೆಯನ್ನು ಕಲಿತರು ಹಲವರು ಹೆಚ್ಚಿನ ಆಸಕ್ತಿಯ ತೋರಿ
ಅರ್ಜುನನೊಬ್ಬನೆ ಮಹಾಪರಾಕ್ರಮಿ ಎನಿಸಿದ ಅವರೆಲ್ಲರ ಮೀರಿ
ಶ್ರದ್ಧೆ, ಭಕ್ತಿಯಲಿ ವಿದ್ಯೆಯ ಕಲಿತನು, ಗುರುವಿನ ಪ್ರೀತಿಯ ಗಳಿಸಿದನು
ಎರಡೂ ಕೈಯಲಿ ಬಾಣ ಪ್ರಯೋಗಿಸಿ ಸವ್ಯಸಾಚಿ ತಾನೆನಿಸಿದನು
ದ್ರೋಣನೊಮ್ಮೆ ಹಕ್ಕಿಯ ಪ್ರತಿಕೃತಿಯನ್ನು ಇಟ್ಟನು ಎತ್ತರ ಮರದಲ್ಲಿ
ಕವಲು ಕವಲಿರುವ ರೆಂಬೆ ಕೊಂಬೆಗಳ ಹಸುರಿನ ಎಲೆಗಳ ನಡುವಿನಲಿ
ಬಿಲ್ಲು ಬಾಣಗಳ ಕೊಟ್ಟು ಎಲ್ಲರಿಗೆ ಕೇಳಿದ ಹಕ್ಕಿಗೆ ಗುರಿಯಿಡಲು
ದ್ರೋಣನು ಹೇಳಿದ ಹಾಗೆಯೆ ಎಲ್ಲರು, ಹಕ್ಕಿಗೆ ಗುರಿಯನ್ನಿಟ್ಟಿರಲು
ಕೇಳಿದ- “ಹಕ್ಕಿಯ ಸಂಗಡ ಏನನು ಕಾಣುತಲಿರುವಿರಿ ನೀವಲ್ಲಿ?”
ಹೇಳಿದರೆಲ್ಲರೂ “ಹಕ್ಕಿಯು ಕುಳಿತಿದೆ ಮರದಲಿ ಹಸುರಿನ ನಡುವಿನಲಿ”
ಆದರೆ ಅರ್ಜುನ ಕೂಡಲೆ ಹೇಳಿದ “ಕಾಣುತಲಿದೆ ಹಕ್ಕಿಯ ಕಣ್ಣು
ಹಕ್ಕಿಯ ಕಣ್ಣೊಂದಲ್ಲದೆ ದೃಷ್ಟಿಗೆ ಕಾಣುಸುತ್ತಿಲ್ಲ ಬೇರೇನೂ”
ದ್ರೋಣನು ಕೂಡಲೆ ಹೇಳಿದನವರಿಗೆ ಮುಗುಳುನಗುತ್ತಲಿ ಆಗಲ್ಲಿ-
“ಒಬ್ಬರ ನಂತರ ಒಬ್ಬರು ಹಕ್ಕಿಗೆ ಹೂಡಿರಿ ಬಾಣವ ಸರದಿಯಲಿ”
ರಾಜಕುಮಾರರು ಬಾಣವ ಹೂಡಲು ಯಾವುದೂ ಗುರಿಯ ತಲುಪಿಲ್ಲ
ಅರ್ಜುನ ಹೂಡಿದ ಬಾಣವು ಫಕ್ಕನೆ ಹಕ್ಕಿಯ ಕೆಡವದೆ ಬಿಡಲಿಲ್ಲ
ಅರ್ಜುನ ತೋರಿದ ಏಕಾಗ್ರತೆಯನ್ನು ನೋಡಿ ದ್ರೋಣ ಆನಂದಿಸಿದ
ಒಳ್ಳೆಯ ಕೀರ್ತಿಯ ತರುವನು ಎನ್ನುತ ಬೆನ್ನು ತಟ್ಟಿ ಅಭಿನಂದಿಸಿದ!
ಕತ್ತಿವರಸೆಯಲಿ ಕಲಿ ತಾನಾದನು ನಕುಲನು ಎಲ್ಲರಿಗೂ ಮೊದಲು
ತ್ರಿಕಾಲಜ್ಞಾನದ ಅಧ್ಯಯನದಲ್ಲಿ ಸಹದೇವನು ತಾನೇ ಮಿಗಿಲು
ಪಾಂಡವರೆಲ್ಲರು ಕಲಿತು ನಿಷ್ಠೆಯಲ್ಲಿ ಹಲವು ಕಲೆಗಳಲ್ಲಿ ಮೊದಲಿರಲು
ಕೌರವ ಪಕ್ಷದಿ ನೂರ್ವರಿದ್ದರೂ ಅವರೆಲ್ಲರು ಹಿಂದುಳಿದಿರಲು
ದುರ್ಯೋಧನ ದುಶ್ಯಾಸನರಲ್ಲದೆ ಉಳಿದವರಾರೂ ಮೊದಲಿಲ್ಲ
ಎರಡನೆ ಮೂರನೆ ದರ್ಜೆಯಲುಳಿದರು ಕಲಿಕೆಯಲ್ಲಿ ಅವರುಗಳೆಲ್ಲ
ದುರ್ಯೋಧನನಿಗೆ ಪಾಂಡವರೇಳಿಗೆ ಸಹಿಸದೆ ಕುದಿದನು ಮನದಲ್ಲಿ
ಶಕುನಿಯು ಅವನನು ಸಂತೈಸುತ್ತಲಿ ಮತ್ಸರ ಬೆಳೆಸಿದ ಅವನಲ್ಲಿ
ಅರಸುಮಕ್ಕಳಿಗೆ ವಿದ್ಯಾಭ್ಯಾಸವು ಈ ತೆರನಾಗಿಯೆ ನಡೆದಿತ್ತು
ಇತ್ತಂಡಗಳಲಿ ದ್ವೇಷದ ಭಾವನೆ ಹೆಚ್ಚಾಗುತ್ತಲೆ ಉಳಿದಿತ್ತು!
*****