ದಂಡೆಗೆ ಅಪ್ಪಳಿಸುವ ಅಲೆಗಳಲಿ
ನಿನ್ನ ನೆರಳು ಹರಡಿ ಗಾಳಿಯಲಿ,
ರಹಸ್ಯದ ಅಮಲೇರಿಸುವ ಘಮ.
ಬದುಕಿನ ಕನಸುಗಳೆಲ್ಲಾ ಖಾಸಗೀ
ಮೂಲೆಯಲ್ಲಿ ಅರಳಿ, ತುಯ್ಯುತ್ತಿರುವ
ಹಡಗುಗಳ ಪುಟಗಳು.
ನನ್ನ ಕೋಣೆಯಲಿ ಸುಮ್ಮನೇ ಒಬ್ಬಳೆ
ಕುಳಿತು ನಿನ್ನ ಬಗ್ಗೆ ಧ್ಯಾನಿಸುವುದು ದೊಡ್ಡ ದೈವ.
ಹಾದಿ ತಪ್ಪಿದ ದಾರಿಗಳೆಲ್ಲಾ ಅಲೆದು ಸುಸ್ತಾಗಿ
ಒಂದು ಒಳಿತಿಗಾಗಿ ಬೆಳಕಿನ ಕಿರಣಗಳ
ಗುಂಗಿನಲಿ, ಸಮಾಧಿಯಲ್ಲಿ ಹುಡುಕುವ ಗಾಳಿಪಟಗಳು.
ಎಲ್ಲಾ ಸಂತೆ ಜಾತ್ರೆಯ ಗದ್ದಲಗಳು ತರಂಗಗಳು,
ಆತ್ಮ ನಿವೇದನೆಯ ಏಕಾಂತದಲಿ, ಆಲಾಪಗಳಾಗಿ
ಅವನ ಬಿಟ್ಟು ಇವನ್ಯಾರು ಎನ್ನುವ ಭ್ರಮೆಯಲಿ,
ತೇಲುವ ಮೋಡಗಳು, ಕಂಪನಗಳು ಅಂಚಿನಲಿ
ಇಂದ್ರೀಯ ಸುಖದ ತರ್ಕವಿಲ್ಲದ ದೃಶ್ಯಗಳ ಸಂಪುಟಗಳು.
ವೇದನೆಗಳಲಿ ಖುಷಿಯಲಿ ಮುಪ್ಪುರಿಗೊಂಡ
ನರಗಳು ಆಕಾಶದ ನೀಲಿಯಲಿ ತೀಷ್ಟವಾಗಿ
ಮಿಳಿತಗೊಂಡು ಬೆಳಕಿನ ಶ್ವೇತ ಕಿರಣಗಳು,
ಪೀಡಿಸಿ ರೇಗಿಸಿ, ದುಃಖಿಸಿ ಕರುಣೆಯಿಲ್ಲದ
ಮಾಟಗಾತಿಯ ಒಳಸುಳಿಯಲಿ ಸಾವಿರ ಬಂಡಿಯ
ಸಾಲುಗಳು.
*****