ಸಮೂಹ ಸಾಧನೆ

ಸಮೂಹ ಸಾಧನೆ

ಸೀಫ್ಲ್‌ನಲ್ಲಿ ನಾನು ಕೆಲಸ ಮಾಡುತ್ತಿದ್ದಾಗ ಕೆಲವು ಸಹಚಿಂತಕರು ಜತೆಸೇರಿ ‘ಸ್ಪೀಕ್’ (Speak) ಎ೦ಬ ವೇದಿಕೆಯೊಂದನ್ನು ಸುರುಮಾಡಿದೆವು. ಇದು ಸಾಹಿತ್ಯ, ವಿಮರ್ಶೆ, ಭಾಷಾವಿಜ್ಞಾನ, ಫಿಲಾಸಫಿ ಮುಂತಾದ ವಿಷಯಗಳ ಕುರಿತಾಗಿ ವಿಚಾರ ವಿನಿಮಯ ಮಾಡಿಕೊಳ್ಳುವಂಥ ಒಂದು ವೇದಿಕೆಯಾಗಿತ್ತು. ಯಾರಾದರೊಬ್ಬರು ವಿಷಯ ಮಂಡನೆ ಮಾಡುತ್ತಿದ್ದರು; ಆಮೇಲೆ ಅದರ ಕುರಿತು ಚರ್ಚೆ ನಡೆಯುತ್ತಿತ್ತು. ಸೀಫ್ಲ್‌ನಲ್ಲಿ ವಿಚಾರ ಸಂಕಿರಣಗಳಿಗೆ, ಸೆಮಿನಾರುಗಳಿಗೆ ಕೊರತೆಯಿಲ್ಲ. ಆದರೂ ಅವೆಲ್ಲವೂ ಔಪಚಾರಿಕ ಮಟ್ಟದಲ್ಲಿ ನಡೆಯುತ್ತಿದ್ದಂಥವು. ಸ್ಪೀಕ್ ಎಷ್ಟು ಅನೌಪಚಾರಿಕವಾಗಿತ್ತೆಂದರೆ ಇದಕ್ಕೆ ಯಾವುದೇ ಕಾಗದ ಪತ್ರಗಳ ಕಾನೂನು ನಿಬಂಧನೆಗಳಿರಲಿಲ್ಲ. ಚಂದಾ ಹಣ, ಸದಸ್ಯತ್ವ ಮುಂತಾದ ಪ್ರಶ್ನೆಗಳೂ ಇರಲಿಲ್ಲ. ‘ಸೆಟ್ಟಿ ಬಿಟ್ಟಲ್ಲಿ ಪಟ್ಟಣ’ ಎಂಬಂತೆ ನಾವು ಸೇರಿ ವಿಚಾರ ಸಂಕಿರಣ ನಡೆಸುತ್ತಿದ್ದೆವು. ಅರ್ಥಾತ್ ಸ್ಪೀಕ್ ಕೇವಲ ಕೆಲವು ಮಂದಿ ಅಧ್ಯಾಪಕ ಮತ್ತು ವಿದ್ಯಾರ್ಥಿಗಳ ಉತ್ಸಾಹದ ಮೇಲೆ ನಿಂತಿತ್ತು. ಆದರೆ ಸೀಫ್ಲ್ ಸಂಸ್ಥೆ ನಮಗೊಂದು ನೋಟೀಸ್ ಬೋರ್ಡ್ ಒದಗಿಸಿತು; ಹಾಗೂ ನಮ್ಮ ಸಭೆಗಳಿಗೆ ಚಹಾಕ್ಕೆ ಹಣವನ್ನೂ ನೀಡುತ್ತಿತ್ತು.

ನಾವು ಮೊದಲು ಚರ್ಚೆಗೆ ಎತ್ತಿಕೊಂಡ ವಿಷಯ ‘ಪನೋಪ್ಟಿಕಾನ್’ (Panopticon). ಪನೋಪ್ಟಿಕಾನ್ ಎಂದರೆ ‘ಸರ್ವ ದೃಷ್ಟಿ’; ಇದು ಹದಿನೆಂಟನೆಯ ಶತಮಾನದ ಇಂಗ್ಲಿಷ್ ತತ್ವಜ್ಞಾನಿ ಜೆರಿಮಿ ಬೆಂಥಮ್ ಯೋಜಿಸಿದ ಕಾರಾಗೃಹ ವಿನ್ಯಾಸದ ಹೆಸರು. ಸರಿಸುಮಾರು ನಮ್ಮ ಪಾರ್ಲಿಮೆಂಟ್ ಕಟ್ಟದ ವಿನ್ಯಾಸವಿರುವ ಈ ರಚನೆಯಲ್ಲಿ ಪ್ರತಿಯೊಂದು ಕೋಣೆಯೂ ‘ಪಾರದರ್ಶಕ’ವಾಗಿರುತ್ತದೆ; ಎಂದರೆ ಕೇಂದದಲ್ಲಿರುವ ವೀಕ್ಷಣಾ ಗೋಪುರದಿಂದ ಪ್ರತಿಯೊಬ್ಬ ಕೈದಿಯ ಚಲನವಲನಗಳನ್ನೂ ನಿರೀಕ್ಷಿಸುವುದು ಸಾಧ್ಯ. ಆದರೆ ಗೋಪುರದ ಕಾವಲುಗಾರ ಯಾರ ಕಣ್ಣಿಗೂ ಬೀಳಲಾರ; ಯಾಕೆಂದರೆ ಅವನು ಪರದೆಯ ಹಿ೦ದಿರುತ್ತಾನೆ. ಕಾವಲುಗಾರ ನೋಡುತ್ತಿದ್ದಾನೋ ಇಲ್ಲವೋ ಎನ್ನುವುದು ಕಾರಾಗೃಹವಾಸಿಗಳಿಗೆ ತಿಳಿಯುವಂತಿಲ್ಲ. ಆದ್ದರಿಂದ ತಾವು ಯಾವಾಗಲೂ ಕಾಯಲ್ಪಡುತ್ತಿದ್ದೇವೆ ಎಂದೇ ಕೈದಿಗಳು ತಿಳಿದುಕೊಂಡಿರಬೇಕಾಗುತ್ತದೆ!

ಇಂಥ ಸರ್ವದೃಷ್ಷಿಯ ಕಾರಾಗೃಹ ಭದ್ರತೆ ಮತ್ತು ಹಣಕಾಸಿನ ಎರಡೂ ದೃಷ್ಟಿಗಳಿಂದ ಅತ್ಯಂತ ಲಾಭದಾಯಕ ಎನ್ನುವುದು ಬೆಂಥಮಿನ ವಾದವಾಗಿತ್ತು. ಹಾಗೂ ತನ್ನೀ ವಿನ್ಯಾಸವನ್ನವನು ‘ಒಂದು ಅದೃಶ್ಶವಂತ ಸರ್ವಜ್ಞತೆಯ ಮನೋಭಾವ’ (the sentiment of an invisible omniscience) ಎ೦ದು ತನಗೆ ತಾನೇ ಹೊಗಳಿಕೊಂಡುದುಂಟು. ಆದರೆ ಬೆಂಥಮಿನ ಈ ವಿನ್ಯಾಸವನ್ನು ಇಪ್ಪತ್ತನೆಯ ಶತಮಾನದಲ್ಲಿ ವಿಮರ್ಶಾಪರಿಭಾಷೆಗೆ ತಂದವನು ಫ್ರೆಂಚ್ ಚಿಂತಕ ಮಿಚೆಲ್ ಫೂಕೋ- ಮುಖ್ಯವಾಗಿ Discipline and punish (ದಂಡಿಸು ಮತ್ತು ಶಿಕ್ಷಿಸು) ಎಂಬ ತನ್ನ ಪ್ರಸಿದ್ಧ ಕೃತಿಯಲ್ಲಿ, ಹಾಗೂ ಇನ್ನಿತರ ಲೇಖನಗಳಲ್ಲಿ. ‘ವೀಕ್ಷಿಸಲ್ಪಡದೆ ವೀಕ್ಷಿಸುವುದೇ ಅಧಿಕಾರದ ತಿರುಳು’ ಎಂಬುದು ಫೂಕೋನ ವ್ಯಾಖ್ಯಾನ. ಇಂಥ ಹಲವಾರು ವಿಷಯಗಳನ್ನು ನಾವು ಆಗಿಂದಾಗ್ಗೆ ಚರ್ಚೆಗೆ ತೆಗೆದುಕೊಂಡೆವು. ಆದರೆ ಒಂದೆರಡು ವರ್ಷಗಳಲ್ಲಿ ಸ್ಪೀಕ್ ಕೊನೆಗೊಂಡಿತು.

ಆಮೇಲೆ ಕೆಲವು ವರ್ಷಗಳ ನ೦ತರ ‘ಡಯಲಾಗ್’ (Dialog) ಎಂಬ ಇನ್ನೊಂದು ವೇದಿಕೆಯನ್ನು ಹುಟ್ಟುಹಾಕಿದೆವು. ಹೆಸರು ಬೇರೆಯಾದರೂ ನಮ್ಮ ಕಾರ್ಯಕ್ರಮಗಳು ಮೊದಲಿನಂತೆಯೇ ಇದ್ದುವು. ಆದರೆ ಡಯಲಾಗ್ ಕೂಡಾ ಕೆಲವು ಕಾಲದ ನಂತರ ನಿಂತಿತು. ಆಮೇಲೆ ನಾವು ನಾಲ್ಕೈದು ಮಂದಿ ಸೇರಿ ವಾಚನ ವೃಂದವೊಂದನ್ನು (Reading group) ಕಟ್ಟಿಕೊಂಡೆವು. ಇದರಲ್ಲಿ ನಮ್ಮ ಸಂಸ್ಥೆಯವರಲ್ಲದೆ ಹೊರಗಿನ ಕೆಲವು ಗೆಳೆಯರೂ ಇದ್ದರು. ಪ್ರತಿ ವಾರಾಂತ್ಯದಲ್ಲಿ ನಾವು ಒಟ್ಟುಸೇರಿ ಯಾವುದಾದರೊಂದು-ಹೆಚ್ಚಾಗಿ ಕ್ಲಿಷ್ಟವೆಂದೆನಿಸುವ ಲೇಖಕರಾದ ನೀತ್ಲೆ, ಹೈಡೆಗ್ಗರ್, ಡೆರಿಡಾ, ಫೂಕೊ, ಪಾಲ್ ದ ಮನ್ ಮುಂತಾದವರ ಪಠ್ಯಗಳನ್ನು-ಎತ್ತಿಕೊಂಡು ಓದುತ್ತಿದ್ದೆವು. ಒಂದು ದಡ್ಡ ತಲೆಗಿಂತ ಎರಡು ದಡ್ಡ ತಲೆಗಳೇ ಒಳಿತು ಎಂಬ ನಂಬಿಕೆಯ ಮೇಲೆ ನಿ೦ತಿತ್ತು ನಮ್ಮ ಸಮೂಹವಾಚನ!

ನಮ್ಮ ಕ್ರಿಶ್ಚಿಯನ್ ಸಹೋದ್ಯೋಗಿಯೊಬ್ಬರು ತಮ್ಮ ಬಾಲ್ಯದಲ್ಲಿ ಕೆಲವು ಕಾಲ ಒಂದು ಸೆಮಿನರಿಯಲ್ಲಿದ್ದ ಕಾರಣ ಅವರಿಗೆ ಲ್ಯಾಟಿನ್ ಭಾಷೆ ಬರುತ್ತಿತ್ತು. ನಾವು ಕೆಲವರು ಸೇರಿ ಅವರಿಂದ ಒಂದು ವರ್ಷ ಪಾಠ ಹೇಳಿಸಿಕೊಂಡು ಅಲ್ಪ ಸ್ವಲ್ಪ ಲ್ಯಾಟಿನ್ ಕಲಿತೆವು. ಆಮೇಲೆ ಗ್ರೀಕ್ ಭಾಷೆಯ ಪರಿಚಯ ಮಾಡಿಕೊಳ್ಳಬೇಕು ಎಂದಾಯಿತು. ಹೈದರಾಬಾದಿನ ಕ್ರಿಶ್ಚಿಯನ್ ಥಿಯಾಸಫಿ ಕಾಲೇಜಿನಲ್ಲಿ ಗ್ರೀಕ್ ಪಾಠಮಾಡುತ್ತಿದ್ದ ಒಬ್ಬ ಅಧ್ಯಾಪಕರನ್ನು ಕರೆಸಿಕೊಂಡು ನಾವೇ ಅವರಿಗೆ ಗೌರವಧನ ತೆತ್ತು ಸುಮಾರು ನಾಲ್ಕು ತಿಂಗಳ ಕಾಲ ಪಾಠ ಹೇಳಿಸಿಕೊಂಡೆವು. ಈಗ ಈ ರೀತಿ ಸ್ಪೀಕ್‌ನಲ್ಲಿ ಅಥವಾ ಡಯಲಾಗ್‌ನಲ್ಲಿ ಎತ್ತಿಕೊಂಡ ಚರ್ಚಾವಿಷಯಗಳ ವಿವರಗಳಾಗಲಿ ಕಲಿತ ಭಾಷೆಗಳಾಗಲಿ ಮರೆತಿವೆಯಾದರೂ ಅವುಗಳ ಕುರಿತಾದ ರೂಪರೇಷೆಗಳು ಇನ್ನೂ ಮನಸ್ಸಿನಲ್ಲಿವೆ. ಇಂಥ ಸಾಹಸಗಳೆಲ್ಲ ಸಣ್ಣ ಪತ್ರಿಕೆಗಳಂತೆ ಅಲ್ಹಾಯುಷಿಗಳಾದರೂ ಅವು ನೀಡುವ ಅನುಭವಕ್ಕೆ ಆಯುಸ್ಸಿನ ಮಿತಿಯಿಲ್ಲ.

ನಮ್ಮ ಓದು ಏಕಾಂತದಲ್ಲಿ ನಡೆಯಬೇಕಾದ ಕ್ರಿಯೆಯಲ್ಲವೇ, ಹಾಗಿರುತ್ತ ಸಮೂಹ ವಾಚನದ ಉದ್ದೇಶವೇನು ಎಂದು ಕೇಳಬಹುದು. ಅಥವಾ, ಇದಕ್ಕೆಲ್ಲ ಒಳ್ಳೆಯ ಗ್ರಂಥಾಲಯ ಮತ್ತು ಸಮಾನಾಸಕ್ತರ ಅಗತ್ಯವಿದೆ, ಎಲ್ಲ ಕಡೆಯೂ ಇದೆಲ್ಲ ನಡೆಯಲಾರದು. ಈ ಮೇಲೆ ಹೇಳಿದ ಸ್ಪೀಕ್ ಅಥವಾ ಡಯಲಾಗ್ ವೇದಿಕೆಗಳ ಮತ್ತು ಸಮೂಹ ವಾಚನಗಳ ಉದ್ದೇಶ ಯಾರ ಮೇಲೆಯೂ ಪೂರ್ವಸಿದ್ಧ ಐಡಿಯಾಲಜಿಗಳನ್ನು ಹೇರುವುದಾಗಿರಲಿಲ್ಲ; ಯಾವುದೇ ಗುಪ್ತ ಅಜೆಂಡಾ ಕೂಡಾ ಇದರಲ್ಲಿ ಇರಲಿಲ್ಲ; ಬದಲಿಗೆ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾಗಿರುವ ಲೇಖಕರ ವಿಚಾರಗಳ ಕುರಿತಾಗಿ ಪರಸ್ಪರ ಅರಿವು ಮೂಡಿಸಿಕೊಳ್ಳುವುದು ಮಾತ್ರವೇ ಉದ್ದೇಶವಾಗಿತ್ತು. ಗಂಥಾಲಯಗಳಾಗಲಿ, ಸಮಾನಾಸಕ್ತರಾಗಲಿ ಇರದಂಥ ಕಡೆ ಇದೆಲ್ಲ ಹೇಗೆ ಸಾಧ್ಯ ಎಂಬ ಪ್ರಶ್ನೆ ಇದ್ದೇ ಇದೆ. ಆದರೆ ಪ್ರಖ್ಯಾತ ಲೇಖಕರಿಗೆ ಕೂಡಾ ಆದರ್ಶ ಸನ್ನಿವೇಶವಾಗಲಿ ಅವಕಾಶವಾಗಲಿ ಇರುವುದಿಲ್ಲ ಎನ್ನುವುದು ಕೂಡಾ ಅಷ್ಟೇ ನಿಜ. ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯಲ್ಲಿ ಸುಪ್ರಸಿದ್ಧ ಕೃತಿಯಾದ ‘ಮಿಮೆಸಿಸ್’ನ್ನು (Mimesis) ಎರಿಕ್ ಅವ್ವರ್‌ಬಾಖ್ ಬರೆದದ್ದು ಜರ್ಮನಿಯಲ್ಲಿ ನಾಝಿಸಮಿನ ಕಾಟ ತಾಳಲಾರದೆ ಇಸ್ತಾಂಬುಲ್ನಲ್ಲಿ (ಟರ್ಕಿ) ಆಶ್ರಯ ಪಡೆದ ಕಾಲದಲ್ಲಿ. ಸಾಕಷ್ಟು ಆಕರ ಗಂಥಗಳಿಲ್ಲದಿದ್ದರೂ ಇದ್ದ ಗ್ರಂಥಗಳನ್ನೇ ಉಪಯೋಗಿಸಿಕೊಂಡು ಅವ್ವರ್‌ಬಾಖ್ ಈ ಕೃತಿಯನ್ನು ರಚಿಸಿದ. ಇಂದು ‘ಮಿಮೆಸಿಸ್’ ಓದದ ಸಾಹಿತ್ಯದ ಗಂಭೀರ ವಿದ್ಯಾರ್ಥಿಯೇ ಇಲ್ಲ ಎನ್ನಬಹುದು. ವಿಶ್ವದ ಹಲವು ಶ್ರೇಷ್ಠ ಕೃತಿಗಳು ಕಠಿಣ ಪರಿಸ್ಥಿತಿಗಳಲ್ಲೇ ರಚಿತವಾದುವು. ನಾವಿಲ್ಲಿ ಕೃತಿ ರಚನೆಯ ಕುರಿತು ಪಸ್ತಾಪಿಸುತ್ತಿಲ್ಲ, ಕೃತಿಗಳ ಓದಿನ ಕುರಿತು ಪ್ರಸ್ತಾಪಿಸುತ್ತಿದ್ದೇವೆ ಎನ್ನುವುದು ನಿಜವಾದರೂ, ‘ಮಿಮೆಸಿಸ್’ನಂಥ ಕೃತಿಯ ಹಿಂದಿರುವ ಓದನ್ನು ಅಲ್ಲಗಳೆಯುವಂತಿಲ್ಲ. ಇಲ್ಲಿ ನಾವು ಕಾಣುವುದು ಓದಿನ ವಿಸ್ತಾರಕ್ಕಿಂತ ಓದಿದ್ದರ ಆಳ ಎನ್ನುವುದು ಮುಖ್ಯ. ಪಾಶ್ಚಾತ್ಯ ಸಾಹಿತ್ಯದ ಬೆನ್ನು ಹತ್ತಿ ನಾವು ಹೋಗಬೇಕೇ ಎಂದು ಕೇಳಬಹುದು. ನಮಗೆ ಯಾವುದರಲ್ಲಿ ಆಸಕ್ತಿಯಿದೆಯೋ ಅದನ್ನು ಓದಿಕೊಂಡರೆ ಸಾಲದೇ? ಆದರೆ ವಿದ್ಯೆಯ ಹೊಸತನ್ನು ಕಲಿಯುವುದು. ಹೊಸತನ್ನು ಕಲಿಯುತ್ತ ಹೋದಂತೆ ಹಳತು ಮೂಲೆಗುಂಪಾಗುತ್ತದೆ ಎನ್ನುವ ಭಯ ಕೆಲವರಲ್ಲಿದೆ. ಆದರೆ ಹಾಗಾಗಬೇಕೆಂದೇನೂ ಇಲ್ಲ. ಬದಲಾಗಿ ಹಳತನ್ನು ಹೊಸದಾಗಿಸಿ ಜೀವಂತವಾಗಿರಿಸುವುದಕ್ಕೆ ಹೊಸ ಓದು ನೆರವಿಗೆ ಬರುತ್ತದೆ. ಅಲ್ಲದೆ ಆಸಕ್ತಿ ಕೂಡಾ ಅರಿವಿನ ಮೇಲೆ ಅವಲಂಬಿಸಿದ ಸ೦ಗತಿಯಾಗಿರುತ್ತ, ಅರಿವೇ ಇಲ್ಲದಿದ್ದರೆ ಆಸಕ್ತಿ ಮೂಡುವ ಸಂಭವವಾದರೂ ಹೇಗೆ? ಆದ್ದರಿಂದ ಓದಿನ ವಿಷಯದ ಕುರಿತು ಯಾವ ಗಡಿಯನ್ನೂ ಇರಿಸಿಕೊಳ್ಳುವುದು ಬೇಡ: ನಮ್ಮದೇ ವಿಷಯಗಳೆಂದು ನಾವು ಅಂದುಕೊಂಡಿರುವ ಸಂಗತಿಗಳ ಕುರಿತಾದರೂ ನಮ್ಮ ತಿಳುವಳಿಕೆ ಎಷ್ಟಿದೆ ಎಂದು ನಮಗೆ ನಾವೇ ಕೇಳಿಕೊಂಡಾಗ ನಮ್ಮ ಮಿತಿಯ ಅರಿವಾಗುತ್ತದೆ. ನಮಗೆ ನಮ್ಮದೇ ಆದ ಮರ, ಹೂವು, ಬೆಳೆ, ಭಾಷೆ ಇತ್ಯಾದಿಗಳ ಬಗ್ಗೆ ಎಷ್ಟು ತಿಳುವಳಿಕೆಯಿದೆ? ಕನ್ನಡದ ನಮ್ಮ ಮೊದಲ ನಿಘಂಟು ತಂದವರು ವಿದೇಶೀ ಮಿಶನರಿ ಕಿಟೆಲ್; ಮಲೆಯಾಳದಲ್ಲೂ ಮೊದಲ ವ್ಯಾಕರಣ ಬರೆದವರು ಇಂಥದೇ ಇನ್ನೊಬ್ಬ ಮಿಶನರಿ ಗುಂಡರ್ಟ್.

‘ನಮ್ಮ ಲೈಬ್ರರಿಯಲ್ಲಿ ಲೇಟೆಸ್ಟ್ ಮೆಟೀರಿಯಲ್ಸ್ ದೊರಕುವುದಿಲ್ಲ; ಹೇಗೆ ರಿಸರ್ಚ್ ಮಾಡಲಿ?’ ಎಂದು ಹಲವರು ಕೇಳುತ್ತಾರೆ. ಅವರ ಆತಂಕ ಅರ್ಥವಾಗುವಂಥದು. ಆದರೂ ಆಳವಾದ ಅಧ್ಯಯನಕ್ಕೆ ಸದ್ಯೋಜಾತ ವಸ್ತುಗಳ ಅಗತ್ಯವಿಲ್ಲ. ಉದಾಹರಣೆಗೆ, ಶೇಕ್‌ಸ್ಪಿಯರನ ಕೆಲವೊಂದು ನಾಟಕಗಳ ಕನ್ನಡಾನುವಾದವಾಗಿದೆ. ಈ ವಿವಿಧ ಅನುವಾದಗಳ ಆಳವಾದ ತೌಲನಿಕ ಅಧ್ಯಯನಕ್ಕೆ ಹೆಚ್ಚಿನ ವಸ್ತುಗಳೇನೂ ಅಗತ್ಯವಿಲ್ಲ. ಆದರೆ ಉತ್ಸಾಹ ಮತ್ತು ವಾತಾವರಣದ ಅಗತ್ಯವಿದೆ. ಒಮ್ಮೆ ಅಯೋವಾದಲ್ಲಿ ನಾನು ವಿದ್ಯಾರ್ಥಿ ಮಿತ್ರರೊಬ್ಬರ ಜತೆ ಮನೆಗೆ ಮರಳುತ್ತಿದ್ದೆ. ಪಾರ್ಕಿನ ಬದಿಯೊಂದರಲ್ಲಿ ತುಂಬಾ ಗಿಡ ಮರಗಳು. ಸ೦ಜೆ ಹಕ್ಕಿಗಳು ಗೂಡು ಸೇರುವ ಸಮಯ ಅದು. ಉಳಿದೆಲ್ಲಾ ಮರಗಳನ್ನು ಬಿಟ್ಟು ಒಂದರ ಮೇಲೆ ಮಾತ್ರ ಅದೆಷ್ಟೋ ಹಕ್ಕಿಗಳು ಬ೦ದು ಸೇರಿ ಚಿಲಿಪಿಲಿಗುಟ್ಟುತ್ತಿದ್ದುವು. ಯಾಕೆ ಇವು ಈ ಒಂದು ಮರದ ಮೇಲೆ ಮಾತ್ರ ಬಂದು ಸೇರುತ್ತಿವೆ. ಎನ್ನುವ ಬಗ್ಗೆ ನಮ್ಮ ಮಾತು ಹರಿಯಿತು. ನಾನಂದೆ: ಮೊತ್ತ ಮೊದಲು ಒಂದು ಹಕ್ಕಿ ಬಂದು ಇಲ್ಲಿ ಮನೆಮಾಡಿರಬೇಕು; ಆಮೇಲೆ ಇನ್ನೊಂದು; ಹೀಗೆ ಹಕ್ಕಿಗಳು ಬಂದು ಸೇರಿದುವು-ಅಷ್ಟೆ. ನಾನೀ ಮಾತನ್ನು ತಮಾಷೆಗೆ ಹೇಳಿದ್ದೆನಾದರೂ ಇದು ಕೇವಲ ತಮಾಷೆಯಾಗಿರಬೇಕಾಗಿಲ್ಲ ಎಂದು ಕೂಡಾ ನನಗನಿಸಿದೆ. ಉತ್ಸಾಹ, ವಾತಾವರಣ ಎಂದರೂ ಇದೇ: ಒಂದು ಊರಿನಲ್ಲಿ ಒಬ್ಬ ವಿದ್ಯಾವಂತ, ಒಬ್ಬ ಕವಿ, ಒಬ್ಬ ಕಲಾವಿದ ಇದ್ದ ತಕ್ಷಣ ಅವರು ಒಬ್ಬೊಬ್ಬರಾಗಿ ಉಳಿಯುವುದಿಲ್ಲ; ಇತರ ಆಸಕ್ತರು ಹುಟ್ಟಿಕೊಳ್ಳುತ್ತಾರೆ. ಸಾಮೂಹಿಕ ಚರ್ಚೆ, ಓದು ಮುಂತಾದುವಕ್ಕೆ ಇದಕ್ಕಿಂತ ಹೆಚ್ಚಿನ ಕಾರಣ ಬೇಕಾಗಿಲ್ಲ.

ಲ್ಯಾಟಿನ್, ಗ್ರೀಕ್ ಭಾಷೆಗಳನ್ನು ಕಲಿಯುವ ನಮ್ಮ ‘ಅಲ್ಪಾಯುಷಿ’ ಸಾಹಸದ ಬಗ್ಗೆ ಹೇಳಿದೆ. ಇಂಥ ಯತ್ನಗಳನ್ನು ಸಮಾನಾಸಕ್ತರು ಎಲ್ಲಿಬೇಕಾದರೂ ಕೈಗೊಳ್ಳಬಹುದು. ಬಹುಶಃ ಫ್ರೆಂಚೇ ಬೇಕು, ಜರ್ಮನೇ ಬೇಕು ಎಂದರೆ ಸಂಪನ್ಮೂಲಗಳು ತತ್ಕಾಲಕ್ಕೆ ಸಿಗದೆಯೂ ಇರಬಹುದು. ನಮ್ಮ ಬಯಕೆಗಳನ್ನು ಅವಕಾಶಗಳಿಗೆ ಹೊಂದಿಸಿಕೊಳ್ಳುವುದು, ಅವಕಾಶಗಳಿಗೆ ಅನುಗುಣವಾಗಿ ಬಯಕೆಗಳನ್ನು ರೂಢಿಸಿಕೊಳ್ಳುವುದು ಕೂಡಾ ಅಗತ್ಯವಾಗುತ್ತದೆ. ಸಂಸ್ಕೃತ, ಅರೆಬಿಕ್, ಉರ್ದು, ಮರಾಠಿ, ತಮಿಳು, ಮಲೆಯಾಳಂ ಮುಂತಾದವನ್ನು ಕಲಿಸುವುದಕ್ಕೆ ಜನ ಸಿಗಬಹುದು. ಆದರೆ ನಮ್ಮ ಕಲಿಕೆ ಭಾಷೆಗೆ ಸೀಮಿತವಾಗಬೇಕೆಂದೂ ಇಲ್ಲ. ನಮಗೆ ಯಾವುದು ಗೊತಿಲ್ತವೋ ಅದು ಕಲಿಕೆಗೆ ಅರ್ಹವಾದುದು. ಅವು ಕ್ರಿಕೆಟ್, ಟೆನಿಸ್, ಚೆಸ್, ಬ್ಯಾಡ್ಮಿಂಟನ್ ಮುಂತಾದ ಕ್ರೀಡೆಗಳು ಕೂಡಾ ಆಗಿರಬಹುದು; ಸಂಗೀತ, ಚಿತ್ರಕಲೆ, ನೃತ್ಯ, ವೈದ್ಯಕೀಯ ಕೂಡಾ ಆಗಿರಬಹುದು. ಯಾರಲ್ಲಿ ಯಾವ ಸಂಪನ್ಮೂಲವಿದೆ ಎಂದು ಕಂಡುಹುಡುಕಿ ಅವರಿಂದ ಕಲಿತುಕೊಳ್ಳುವುದಕ್ಕೆ ಬೇಕಾದುದು ಸ್ವಲ್ಪ ಹಣ, ಅಪಾರವಾದ ಉತ್ಸಾಹ. ಹಣವನ್ನಾದರೂ ಎಲ್ಲಿಂದಾದರೂ ತರಬಹುದು; ಆದರೆ ಉತ್ಸಾಹ, ಕ್ರತುಶಕ್ತಿಗಳನ್ನು ಎಲ್ಲಿಂದ ತರುವುದು? ಅದಕ್ಕೇ ವಾತಾವರಣದ ಸೃಷ್ಟಿ ಅಗತ್ಯವೆನಿಸುವುದು.

ಗ್ರಾಮಾಂತರದ ಜನರ ಸಾಧನೆಗಳು ಬಹುಮುಖ್ಯವೆನಿಸುತ್ತವೆ. ಕೇವಲ ಕೃಷಿಯಲ್ಲದೆ ಶಾಲೆ ಕಾಲೇಜು, ಕೃಷಿಕ ಸಂಘ, ಆರೋಗ್ಯ ಕೇಂದ್ರ, ಪತ್ರಿಕೆ, ಸಾಹಿತ್ಯ ಸಂಘ, ಸ೦ಗೀತ, ಕಲೆ, ಜೇನು, ಹಾಲು ಹೈನು ಮುಂತಾದವುಗಳಲ್ಲಿ ನಿರತರಾದವರು ಈಗಲೂ ಇದ್ದಾರೆ. ಸಣ್ಣಸಣ್ಣ ಊರುಗಳಲ್ಲಿದ್ದುಕೊಂಡು ದೊಡ್ಡ ಕಾರ್ಯಗಳನ್ನು ಮಾಡಿದ ಪಂಡಿತರೂ ಈಚಿಚಿನವರೆಗೆ ಇದ್ದರು. ಹೀಗೆ ಸಂಸ್ಕೃತ-ಕನ್ನಡ ನಿಘಂಟು, ಕೌಟಿಲ್ಯನ ಅರ್ಥಶಾಸ್ತ್ರದ ಕನ್ನಡ ಭಾಷಾಂತರ, ಧರ್ಮಶಾಸ್ತ್ರವೊ೦ದರ ಅನುವಾದ ಮುಂತಾದ ಸಾಧನೆಗಳನ್ನು ಮಾಡಿದ ಪಂಡಿತರೊಬ್ಬರ ಬಗ್ಗೆ ನನಗೆ ವೈಯಕ್ತಿಕವಾಗಿ ಗೊತ್ತಿದೆ. ಸಂಸ್ಕೃತ ಮತ್ತು ಕನ್ನಡ ವಿದ್ವಾಂಸರಾಗಿದ್ದ ಇವರು ಪಂಡಿತ ಪರಂಪರೆಗೆ ಸೇರಿದವರಾಗಿದ್ದರು. ತಾವಿದ್ದ ವಾತಾವರಣದಿಂದ ಬೇಕಾದ್ದನ್ನು ಸ್ವೀಕರಿಸಿಕೊಂಡು ಅದಕ್ಕೆ ಇನ್ನಷ್ಟನ್ನು ಮರಳಿಸಿದವರು. ಆದರೆ ಈಗ ಅಂಥ ಪಂಡಿತ ಪರಂಪರೆ ಕ್ಷೀಣವಾಗಿದೆ; ಅದರ ಸ್ಥಾನದಲ್ಲಿ ಏನಿದೆ? ಏನೂ ಇಲ್ಲ. ಅದರ ಶೂನ್ಯತೆ ಕಣ್ಣಿಗೆ ಕಟ್ಟುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಗ್ಗಿನಿಂತ ಮೇಲೆ ಹೇಳುವ ಪದ
Next post ಗಾಯದ ಮೇಲೆ ಬರೆ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…