ಮಿನುಗೆಲೆ, ಮಿನುಗೆಲೆ, ನಕ್ಷತ್ರ!
ನನಗಿದು ಚೋದ್ಯವು ಬಹು ಚಿತ್ರ!
ಘನ ಗಗನದಿ ಬಲು ದೂರದಲಿ
ಮಿನುಗುವೆ ವಜ್ರಾಕಾರದಲಿ.
ತೊಳಗುವ ಸೂರ್ಯನು ಮುಳುಗುತಲೆ,
ಬೆಳಕದು ಕಾಣದು ಕಳೆಯುತ್ತಲೆ,
ಹೊಳಪದು ಕೊಡುತಿಹೆ ನನಗಂದು;
ತಳತಳಿಸುವೆ ಇರುಳಲಿ ನಿಂದು,
ಅಂದಾ ದಾರಿಗ ಕೆಂಗಿಡಿಗೆ
ವಂದಿಸಿ, ಹೋಗುವನಡಿಗಡಿಗೆ
ಕುಂದಲು ನಿನ್ನಯ ಮಿಣುಕು ಲವಂ
ಮುಂದಿನ ಹಾದಿಯ ಕಾಣನವಂ.
ದೂರದ ಬಾನೊಳು ಹೊಂಚುತಿಹೆ;
ಬಾರಿಗೆ ಬಾರಿಗೆ ಮಿಂಚುತಿಹೆ.
ತೋರುತ ತೋರದೆ ಮೂಡುತಿಹೆ,
ದಾರಿಗೆ ಹೊಳಪನು ಮಾಡುತಿಹೆ.
ನನಗರಿಯದೊಡೇಂ? ಇದು ಚಿತ್ರ!
ಮಿನುಗೆಲೆ! ಮಿನುಗೆಲೆ! ನಕ್ಷತ್ರ!
*****
(ಕವಿಶಿಷ್ಯ)